ADVERTISEMENT

ಸಂಪಾದಕೀಯ: ಹುಸಿ ಭರವಸೆಗಳು ಬೇಡ- ಕಾಶ್ಮೀರದಲ್ಲಿ ಹಿಂಸೆ ನಿಲ್ಲಲಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2021, 20:41 IST
Last Updated 8 ಅಕ್ಟೋಬರ್ 2021, 20:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಳ್ಳುತ್ತಿದ್ದ ಕಾಶ್ಮೀರದಲ್ಲಿ ಮತ್ತೆ ಉಗ್ರರ ಹಿಂಸಾ ಪ್ರವೃತ್ತಿ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿ ನೀಡಲಾಗಿದ್ದ ವಿಶೇಷ ಸ್ಥಾನವನ್ನು 2019ರ ಆಗಸ್ಟ್‌ನಲ್ಲಿ ರದ್ದುಗೊಳಿಸಿದ ಬಳಿಕ ‘ಕಾಶ್ಮೀರದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ’ ಎಂದು ಕೇಂದ್ರ ಸರ್ಕಾರ ನೀಡಿದ್ದ ಭರವಸೆ ಹುಸಿಯಾಗಿದೆ. ಎಲ್ಲ ರೀತಿಯ ಉಗ್ರ ಚಟುವಟಿಕೆ ಗಳನ್ನು ಮಟ್ಟ ಹಾಕುವ ಭರವಸೆ ನೀಡಿದ್ದ ಸರ್ಕಾರ, ಅದನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಕಾಶ್ಮೀರ ಕಣಿವೆಯಲ್ಲಿ ನಾಗರಿಕರ ಹತ್ಯೆ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇವೆ. ಈ ವರ್ಷ ಉಗ್ರರ ಗುಂಡಿಗೆ ಬಲಿಯಾದ ನಾಗರಿಕರ ಸಂಖ್ಯೆ 25ಕ್ಕೂ ಹೆಚ್ಚು ಎನ್ನುವುದು ಅಲ್ಲಿ ನಡೆದಿರುವ ಹಿಂಸಾಚಾರಕ್ಕೆ, ಅದನ್ನು ತಡೆಯಲು ಸರ್ಕಾರ ವಿಫಲವಾದುದಕ್ಕೆ ಸಾಕ್ಷಿ. ಐದು ದಿನಗಳಲ್ಲಿ ಏಳು ಮಂದಿ ನಾಗರಿಕರ ಹತ್ಯೆಯಾಗಿದೆ. ಅದರಲ್ಲೂ ಶ್ರೀನಗರ ಮತ್ತು ಬಂಡಿಪೊರಾ ಪ್ರದೇಶಗಳಲ್ಲಿ 48 ಗಂಟೆಗಳಲ್ಲಿ ಮೂವರು ನಾಗರಿಕರನ್ನು ಹತ್ಯೆ ಮಾಡಲಾಗಿದೆ. ನಾಗರಿಕರ ಜೊತೆಗೆ ಈ ವರ್ಷ ಭದ್ರತಾ ಪಡೆಯ 20 ಸಿಬ್ಬಂದಿ ಸಹ ಹತ್ಯೆಗೀಡಾಗಿದ್ದಾರೆ. ಈ ಎಲ್ಲ ಘಟನೆಗಳು, ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿರುವಂತೆ ಅಲ್ಲಿನ ಪರಿಸ್ಥಿತಿಯಲ್ಲಿ ಮಹತ್ವದ ಬದಲಾವಣೆ ಆಗಿಲ್ಲ ಎಂಬುದನ್ನು ಹೇಳುತ್ತವೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ಈ ರಾಜ್ಯವನ್ನು ವಿಭಾಗಿಸಿ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ ಬಳಿಕ ಅಭಿವೃದ್ಧಿಯ ಮಹಾಪರ್ವವನ್ನೇ ನಡೆಸಲಾಗಿದೆ, ಶಾಂತಿ ನೆಲೆಸುವಂತೆ ನೋಡಿಕೊಳ್ಳಲಾಗಿದೆ ಎಂಬ ಕೇಂದ್ರ ಸರ್ಕಾರದ ಮಾತು ಸಂಪೂರ್ಣ ಸತ್ಯವಲ್ಲ ಎನ್ನುವುದು ಎದ್ದು ಕಾಣುತ್ತದೆ.

ಕೇಂದ್ರ ಸಚಿವರು ನಿರಂತರವಾಗಿ ಕಾಶ್ಮೀರಕ್ಕೆ ಭೇಟಿ ನೀಡುತ್ತಲೇ ಇದ್ದಾರೆ. ಜೊತೆಗೆ ಭದ್ರತೆಯನ್ನೂ ವಿಪರೀತ ಎನ್ನುವಷ್ಟರ ಮಟ್ಟಿಗೆ ಹೆಚ್ಚಿಸಲಾಗಿದೆ. ಆದರೂ ನಾಗರಿಕರ ಹತ್ಯೆ ನಡೆಯುತ್ತಿರುವುದನ್ನು ಭದ್ರತೆಯ ಲೋಪ ಎನ್ನದೇ ವಿಧಿ ಇಲ್ಲ. ದಾಳಿಯನ್ನು ಮುಂಚಿತವಾಗಿ ಗ್ರಹಿಸುವಷ್ಟು ಬೇಹುಗಾರಿಕೆ ಕೂಡ ಚುರುಕಿನಿಂದ ಕೂಡಿಲ್ಲ ಎನ್ನುವುದನ್ನೂ ಇದು ತೋರಿಸುತ್ತದೆ. 2019ರಲ್ಲಿ 36 ನಾಗರಿಕರು, 78 ಭದ್ರತಾ ಸಿಬ್ಬಂದಿ, 2020ರಲ್ಲಿ 33 ನಾಗರಿಕರು, 46 ಭದ್ರತಾ ಸಿಬ್ಬಂದಿ ಉಗ್ರರಿಂದ ಹತ್ಯೆಗೀಡಾಗಿದ್ದಾರೆ. ಕಾಶ್ಮೀರ ಬೂದಿ ಮುಚ್ಚಿದ ಕೆಂಡದಂತೆ ಇದೆಯೇ ವಿನಾ ಅಲ್ಲಿ ನಿಜವಾದ ಶಾಂತಿ ಸ್ಥಾಪನೆಯಾಗಿಲ್ಲ ಎನ್ನುವುದಕ್ಕೆ ಬೇರೆ ಯಾವ ಪುರಾವೆ ಬೇಕು? ಕಾಶ್ಮೀರಕ್ಕೆ ಬರುವ ಪ್ರವಾಸಿಗರು ಹಾಗೂ ನಾಗರಿಕರಿಗೆ ಉಗ್ರರು ತೊಂದರೆ ಕೊಡುವುದಿಲ್ಲ ಎಂದೇ ಭಾವಿಸಲಾಗಿತ್ತು. ಈಗ ಆ ನಂಬಿಕೆಯೂ ಸುಳ್ಳಾಗಿದೆ. ಪಾಕಿಸ್ತಾನ ಕೇಂದ್ರಿತವಾಗಿ ಕಾರ್ಯಾಚರಣೆ ನಡೆಸುವ ಲಷ್ಕರ್ ಎ ತಯಬಾ ಉಗ್ರಗಾಮಿ ಸಂಘಟನೆಯ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಎಂಬ ಗುಂಪು ಈ ವರ್ಷ ಕಾಶ್ಮೀರದಲ್ಲಿ ನಡೆದ ನಾಗರಿಕರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ. ‘ಟಿಆರ್‌ಎಫ್ ಕರಾಚಿಯಿಂದ ಕಾರ್ಯನಿರ್ವಹಿಸುತ್ತಿದೆ. ಅದನ್ನು ಮಟ್ಟ ಹಾಕಲಾಗುವುದು’ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಪಡೆ ಮುಖ್ಯಸ್ಥ ದಿಲ್‌ಬಾಗ್ ಸಿಂಗ್ ಹೇಳಿದ್ದಾರೆ. ನಾಗರಿಕರ ಹತ್ಯೆ ನಡೆದಾಗಲೆಲ್ಲಾ ಪೊಲೀಸರು ಮತ್ತು ಭದ್ರತಾ ಪಡೆಗಳು ಇಂತಹ ಹೇಳಿಕೆ ನೀಡುವುದು ಮಾಮೂಲಾಗಿದೆ. ಕಣಿವೆಯ ನಾಗರಿಕರು ಮಾತ್ರ ಉಗ್ರರ ಗುಂಡಿಗೆ ಬಲಿಯಾಗುತ್ತಲೇ ಇದ್ದಾರೆ. ಉಗ್ರರನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ನಾಗರಿಕರಿಗೆ ಭದ್ರತೆ ಒದಗಿಸುವುದು ಸರ್ಕಾರದ ಪಾಲಿಗೆ ಬಾಯಿ ಉಪಚಾರದ ಮಾತಾಗದೆ ತಳಮಟ್ಟದಲ್ಲಿ ಕ್ರಿಯೆಯಲ್ಲಿ ಕಾಣಬೇಕು. ಕಾಶ್ಮೀರದ ಜನತೆಯಲ್ಲಿ ವಿಶ್ವಾಸವನ್ನು ಮೂಡಿಸುವ ಕೆಲಸವನ್ನೂ ಮಾಡಬೇಕು. ಈ ಪ್ರದೇಶದಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ನಡೆಯುವಂತೆಯೂ ನೋಡಿಕೊಳ್ಳಬೇಕು. ಜಮ್ಮು, ಕಾಶ್ಮೀರವನ್ನು ಕಟ್ಟುವ ಕೆಲಸದಲ್ಲಿ ನಾಗರಿಕರನ್ನೂ ಬಳಸಿಕೊಳ್ಳಬೇಕು. ಮಿಲಿಟರಿ ಪ್ರಯೋಗದಿಂದಲೇ ಅಲ್ಲಿ ಶಾಂತಿ ಸ್ಥಾಪನೆ ಮಾಡಲಾಗುವುದು ಎಂಬ ಭ್ರಮೆಯನ್ನು ಬಿಡಬೇಕು. ಸೌಹಾರ್ದ ನಡೆಗಳ ಮೂಲಕ ಹೊಸ ಬೆಳಕು ಮೂಡುವಂತೆ ಮಾಡಬೇಕು. ಅಂದಾಗಲಷ್ಟೇ ಅಲ್ಲಿ ಶಾಂತಿ ನೆಲೆಸಲು ಸಾಧ್ಯ.

ಕಾಶ್ಮೀರಿ ಪಂಡಿತರು ಮತ್ತೆ ಕಾಶ್ಮೀರಕ್ಕೆ ಬರುತ್ತಿರುವುದರಿಂದ ನಾಗರಿಕರ ಹತ್ಯೆ ನಡೆಯುತ್ತಿದೆ, ಈ ಪ್ರದೇಶದಲ್ಲಿ ಕೋಮು ಸೌಹಾರ್ದ ಹಾಳುಗೆಡಹುವುದಕ್ಕಾಗಿಯೂ ಇಂತಹ ಕೃತ್ಯಗಳು ನಡೆಯುತ್ತಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಇವುಗಳ ಸತ್ಯಾಸತ್ಯತೆಯನ್ನು ಮನಗಾಣಬೇಕು. ನಮ್ಮ ಪಕ್ಕದ ದೇಶವಾದ ಅಫ್ಗಾನಿಸ್ತಾನದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ವಿದ್ಯಮಾನಗಳೂ ಕಾಶ್ಮೀರದ ಈಗಿನ ಅವಘಡಗಳಿಗೆ ಕಾರಣ ಎಂದೂ ಹೇಳಲಾಗುತ್ತಿದೆ. ಇಂತಹ ಘಟನೆಗಳನ್ನು ಎಲ್ಲ ನೆಲೆಗಳಿಂದಲೂ ವಿಶ್ಲೇಷಣೆಗೆ ಒಳಪಡಿಸಬೇಕು. ಜಮ್ಮು ಮತ್ತು ಕಾಶ್ಮೀರದ ಜನರಿಗೆ ಹಿಂಸೆ ಬೇಕಾಗಿಲ್ಲ. ಶಾಂತಿ ಬೇಕು. ಕಣಿವೆಯಲ್ಲಿ ಶಾಂತಿ ಸ್ಥಾಪನೆ ಮಾಡುವುದು ಅತ್ಯಂತ ಜರೂರಿನ ಕೆಲಸ. ಅದನ್ನು ಕೇಂದ್ರ ಸರ್ಕಾರ ಆದ್ಯತೆಯ ಮೇಲೆ ಮಾಡಬೇಕು. ಎಲ್ಲ ರೀತಿಯ ರಾಜತಾಂತ್ರಿಕ ಕಸರತ್ತುಗಳನ್ನು ನಡೆಸಿ ಈ ಗುರಿ ತಲುಪ ಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.