ಲಾಕ್‌ಡೌನ್ ಹಂತಹಂತವಾಗಿ ತೆರವಾಗಿ ಜನಜೀವನ ಸಹಜಸ್ಥಿತಿಗೆ ಬಂತು ಎಂದುಕೊಳ್ಳುವಾಗ, ಹಲವು ಅಗತ್ಯವಸ್ತುಗಳ ಬೆಲೆ ಗಗನಮುಖಿಯಾಗಿ ಜನಸಾಮಾನ್ಯರು ತತ್ತರಿಸಿದ್ದಾರೆ. ಇದೀಗ ಈ ಗಾಯದ ಮೇಲೆ ಬರೆ ಎಳೆದಂತೆ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) ವಿದ್ಯುತ್ ದರ ಏರಿಸಿದೆ. ಪರಿಷ್ಕೃತ ದರಗಳನ್ನು ಕೋವಿಡ್ ಸಂಕಷ್ಟದ ಕಾರಣದಿಂದ ಏಪ್ರಿಲ್ ಬದಲಿಗೆ ನವೆಂಬರ್ ತಿಂಗಳಿನಿಂದ ಅನ್ವಯವಾಗುವಂತೆ ಹೆಚ್ಚಿಸಿರುವುದಾಗಿ ಆಯೋಗ ಹೇಳಿದೆ. ವಿದ್ಯುತ್ ಉತ್ಪಾದನೆ ಮತ್ತು ವಿತರಣಾ ವೆಚ್ಚಕ್ಕೆ ಅನುಗುಣವಾಗಿ ಪ್ರತಿವರ್ಷ ವಿದ್ಯುತ್ ದರ ಪರಿಷ್ಕರಿಸುವುದು ಆಯೋಗಕ್ಕೆ ಅನಿವಾರ್ಯವಾದ ಕ್ರಮ. ಈ ಬಾರಿ ಪ್ರತೀ ಯೂನಿಟ್‌ಗೆ ಸರಾಸರಿ ₹ 1.26ರಂತೆ ದರ ಏರಿಸುವಂತೆ ‘ಎಸ್ಕಾಂ’ಗಳು ಆಯೋಗಕ್ಕೆ ಬೇಡಿಕೆ ಸಲ್ಲಿಸಿದ್ದವು. ಕೆಇಆರ್‌ಸಿ ಪ್ರತೀ ಯೂನಿಟ್‌ಗೆ ಸರಾಸರಿ 40 ಪೈಸೆ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಆದರೆ, ಈ ಹೆಚ್ಚಳವನ್ನು ಭರಿಸುವ ಶಕ್ತಿ ಗ್ರಾಹಕರಿಗೆ ಇದೆಯೇ ಎಂಬ ಪ್ರಶ್ನೆಯೂ ಈ ಸಂದರ್ಭದಲ್ಲಿ ಏಳುತ್ತದೆ. ಕೋವಿಡ್–19 ಕಾರಣದಿಂದ ಉದ್ಭವಿಸಿರುವ ಅಸಾಮಾನ್ಯವಾದ ಈ ಪರಿಸ್ಥಿತಿಯಲ್ಲಿ ಈ ಪ್ರಶ್ನೆಯನ್ನು ಸಹಾನುಭೂತಿಯ ನೆಲೆಯಿಂದಲೇ ನೋಡಬೇಕಾಗುತ್ತದೆ. ಲಾಕ್‌ಡೌನ್‌ನಿಂದಾಗಿ ವಿವಿಧ ಉದ್ಯಮ ವಲಯಗಳು ಸಂಕಷ್ಟಕ್ಕೆ ಸಿಲುಕಿದ್ದವು. ಕೆಲವು ಉದ್ಯಮಗಳು ಈಗ ಚೇತರಿಕೆಯ ಹಾದಿಗೆ ಹೊರಳಿವೆ, ಇನ್ನು ಕೆಲವು ಬಿಕ್ಕಟ್ಟಿನಿಂದ ಇನ್ನೂ ಹೊರಬಂದಿಲ್ಲ. ಉದ್ಯಮ ವಲಯ ಅನುಭವಿಸಿದ ಆಘಾತದಿಂದಾಗಿ ನೌಕರರ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಹಲವರಿಗೆ ಸಂಬಳ ಕಡಿತವಾಗಿದೆ. ಇನ್ನೊಂದಷ್ಟು ಮಂದಿ ಕೆಲಸವನ್ನೇ ಕಳೆದು ಕೊಂಡಿದ್ದಾರೆ. ವ್ಯಾಪಾರ– ವಹಿವಾಟಿಗೆ ತೀವ್ರ ಪೆಟ್ಟು ಬಿದ್ದಿದೆ. ಇಂತಹ ಕಷ್ಟಕಾಲದಲ್ಲಿ ವಿವಿಧ ವಸ್ತುಗಳ ಬೆಲೆ ಏರಿಕೆಯ ಬಿಸಿಯೂ ತಟ್ಟಿದೆ. ಈ ಎಲ್ಲದರ ಪರಿಣಾಮವಾಗಿ ಜನಸಾಮಾನ್ಯರ ಬದುಕು ಅಡಕತ್ತರಿಗೆ ಸಿಕ್ಕಂತಾಗಿದೆ. ಹೀಗಿರುವಾಗ ನಿತ್ಯಬಳಕೆಯ ವಿದ್ಯುತ್ ದರವನ್ನೂ ಏರಿಸಿರುವುದು ಸಮಂಜಸವಲ್ಲ.
ವಿದ್ಯುತ್ ಎಂಬುದು ಎಲ್ಲ ವರ್ಗಗಳ ಜನರ ಬದುಕಿಗೆ ಅತ್ಯಗತ್ಯ. ದರ ಏರಿಕೆಯಿಂದಾಗಿ ಬೇರೆ ಬೇರೆ ಸೇವೆ ಮತ್ತು ಉತ್ಪನ್ನಗಳ ದರ ಕೂಡ ಹೆಚ್ಚಾಗುತ್ತದೆ. ನೀರಿನ ಶುಲ್ಕ ಹೆಚ್ಚಳಕ್ಕೂ ಇದು ದಾರಿಯಾಗುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ, ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯಲ್ಲಿನ ಖರ್ಚುವೆಚ್ಚದ ಹೊರೆಯನ್ನು, ಕಂಡುಕೇಳರಿಯದ ಇಂತಹ ಅಸಾಮಾನ್ಯ ಸನ್ನಿವೇಶದಲ್ಲಿ ಸಂಪೂರ್ಣವಾಗಿ ಗ್ರಾಹಕರ ಮೇಲೆ ಹೇರುವುದು ಸರಿಯಲ್ಲ. ವಿದ್ಯುತ್ ಸರಬರಾಜು ಕಂಪನಿಗಳು ನಷ್ಟ ಅನುಭವಿಸುವುದಕ್ಕೆ ನಾನಾ ಕಾರಣಗಳಿವೆ. ರಾಜ್ಯದ ವಿವಿಧ ಗ್ರಾಮ ಪಂಚಾಯಿತಿಗಳು ಕುಡಿಯುವ ನೀರು ಸರಬರಾಜು ಮತ್ತು ಬೀದಿದೀಪಗಳಿಗೆ ಸಂಬಂಧಿಸಿದಂತೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ₹3,139 ಕೋಟಿ ಬಾಕಿ ಉಳಿಸಿಕೊಂಡಿರುವುದು ಜುಲೈ ತಿಂಗಳಿನಲ್ಲಿ ಬೆಳಕಿಗೆ ಬಂದಿತ್ತು. ಈ ಮೊತ್ತ ಕಾಲಕಾಲಕ್ಕೆ ಪಾವತಿಯಾದರೆ ವಿದ್ಯುತ್ ಕಂಪನಿಗಳ ಮೇಲಿನ ಹೊರೆ ಇಳಿಯುತ್ತದೆ. ಇನ್ನು ಹಲವೆಡೆ ವಿದ್ಯುತ್ ಸೋರಿಕೆ, ವಿದ್ಯುತ್ ದುರ್ಬಳಕೆಯ ತೀವ್ರಗಾಮಿ ಪರಿಣಾಮದ ಸವಾಲು ವಿದ್ಯುತ್ ವಿತರಣಾ ಕಂಪನಿಗಳ ಮುಂದೆ ಲಾಗಾಯ್ತಿನಿಂದಲೂ ಇದೆ. ಈ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಆಗಬೇಕಾಗಿದೆ. ಸೇವೆಯ ಗುಣಮಟ್ಟವನ್ನು ಹೆಚ್ಚಿಸುವುದು ಹಾಗೂ ಸೋರಿಕೆಯನ್ನು ತಡೆಗಟ್ಟುವುದು ಆದ್ಯತೆಯಾಗಬೇಕು. ಜೊತೆಗೆ ಸೌರಶಕ್ತಿ ಅಳವಡಿಕೆಯನ್ನು ಇನ್ನಷ್ಟು ಉತ್ತೇಜಿಸಿ ಅದನ್ನು ಸಂಪೂರ್ಣ ಬಳಕೆಸ್ನೇಹಿ ಆಗಿಸುವಂತಹ ಪರ್ಯಾಯ ಮಾರ್ಗೋಪಾಯಗಳತ್ತ ಕೂಡ ಇನ್ನೂ ಹೆಚ್ಚಿನ ಗಮನ ಹರಿಸಬೇಕು. ಪ್ರತಿಯೊಬ್ಬರೂ ಬಳಸುವ ವಿದ್ಯುತ್‌ಗೆ ನಿಯಮಿತವಾಗಿ ದರ ಏರಿಸುವ ಅನಿವಾರ್ಯ ತಂದುಕೊಳ್ಳುವುದು ಸರಿಯಲ್ಲ. ದರ ದುಬಾರಿಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯೂ ಸರ್ಕಾರದ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.