ADVERTISEMENT

ಜನರನ್ನು ಸಂಕಷ್ಟಕ್ಕೆ ತಳ್ಳಿದ ಬೆಲೆ ಏರಿಕೆ: ಮಾನವೀಯತೆ ಮರೆತ ಸರ್ಕಾರದ ನಡೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 19:30 IST
Last Updated 5 ಏಪ್ರಿಲ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಪೈಪೋಟಿಗೆ ಬಿದ್ದಂತೆ ಬೆಲೆ ಏರಿಸುತ್ತಿರುವ ಪರಿಣಾಮ ಜನಸಾಮಾನ್ಯರು ಸುಲಭವಾಗಿ ಜೀವನ ನಿರ್ವಹಣೆ ಮಾಡಲಾಗದಂತಹ ವಾತಾವರಣ ಸೃಷ್ಟಿಯಾಗಿದೆ. ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲ ಸಿಲಿಂಡರ್‌ ಬೆಲೆ ಹೆಚ್ಚಿಸಿದ ಬೆನ್ನಹಿಂದೆಯೇ ವಿದ್ಯುತ್‌ ದರವನ್ನೂ ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯಲಾಗಿದೆ. ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಲಾಗದೆ, ಹಣದುಬ್ಬರವನ್ನೂ ನಿಯಂತ್ರಿಸಲಾಗದೆ ಕೈಚೆಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರನ್ನು ಸಂಪೂರ್ಣವಾಗಿ ಅಸಹಾಯಕ ಸ್ಥಿತಿಗೆ ತಳ್ಳಿ ತಮಾಷೆ ನೋಡುತ್ತಿವೆ. ಹೋಟೆಲ್‌ಗಳು ಸಹ ಆಹಾರ ದರವನ್ನು ಶೇ 10ರಷ್ಟು ಹೆಚ್ಚಿಸಿವೆ. ಕೋವಿಡ್‌ ನಂತರದ ಕಾಲಘಟ್ಟದಲ್ಲಿ ಉದ್ಯೋಗ ನಷ್ಟ, ಸಂಬಳ ಕಡಿತ, ವಹಿವಾಟು ಕುಸಿತ ಮೊದಲಾದ ಸಂಕಷ್ಟಗಳಿಗೆ ಸಿಲುಕಿರುವ ಜನರ ಬದುಕು ಈಗಿನ ಬೆಲೆ ಏರಿಕೆಯ ಹೊಡೆತದಿಂದ ಮತ್ತಷ್ಟು ದುಸ್ತರವಾಗಿದೆ. 2021ರ ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ತನ್ನ ಪ್ರಜೆಗಳ ಮೇಲೆ ಇದ್ದಕ್ಕಿದ್ದಂತೆಯೇ ಮಮತೆ ಉಕ್ಕಿ ಬಂತು. ಅದುವರೆಗೆ, ತೈಲೋತ್ಪನ್ನಗಳ ಬೆಲೆ ಏರಿಕೆಗೂ ತನಗೂ ಸಂಬಂಧವೇ ಇಲ್ಲ ಎನ್ನುತ್ತಿದ್ದ ಸರ್ಕಾರ, ‘ಹಬ್ಬದ ಕೊಡುಗೆ’ಯಾಗಿ ಪೆಟ್ರೋಲ್‌, ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕದಲ್ಲಿ ಕಡಿತ ಮಾಡಿತು. ದೇಶದ ಜನ ಈಗಷ್ಟೇ ಯುಗಾದಿ ಹಬ್ಬ ಮುಗಿಸಿದ್ದಾರೆ. ಅಷ್ಟರಲ್ಲಿ ತೈಲೋತ್ಪನ್ನಗಳ ದರ ಮತ್ತೆ ಗಗನಮುಖಿಯಾಗಿದೆ.
ಎರಡೂ ಹಬ್ಬಗಳ ನಡುವಿನ ನಾಲ್ಕು ತಿಂಗಳ ಅವಧಿಯವರೆಗೆ ದೇಶದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್ ಬೆಲೆ ಸ್ಥಿರವಾಗಿದ್ದರ ಮರ್ಮದ ಹಿಂದೆ ಈಗ ಯಾವ ಗುಟ್ಟೂ ಉಳಿದಿಲ್ಲ. ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಕಾರಣಕ್ಕಾಗಿ 137 ದಿನಗಳ ಕಾಲ ಸ್ಥಿರವಾಗಿದ್ದ ತೈಲ ಬೆಲೆಯು ಸರ್ಕಾರದ ಆಣತಿಯಂತೆ ಈಗ ಮತ್ತೆ ರೆಕ್ಕೆ ಬಿಚ್ಚಿದೆ ಅಷ್ಟೆ.

ಜನಸಾಮಾನ್ಯರ ಹಿತಾಸಕ್ತಿ ರಕ್ಷಿಸುವ ಉದ್ದೇಶವೇ ತನಗೆ ಮುಖ್ಯ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿದೆ. ತೈಲ ಬೆಲೆ ಏರಿಕೆಯ ಪರಿಣಾಮವು ಜನರ ಬದುಕಿಗೆ ಅಗತ್ಯವಾದ ಎಲ್ಲ ವಸ್ತುಗಳ ದರದ ಮೇಲೂ ಆಗುತ್ತದೆ ಎನ್ನುವುದು ಸರ್ಕಾರದ ಹೊಣೆ ಹೊತ್ತವರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ. ನಾಲ್ಕು ತಿಂಗಳ ಅವಧಿಯಲ್ಲಿ ಜನರ ವರಮಾನದಲ್ಲಿ ಹೇಳಿಕೊಳ್ಳುವಂತಹ ಬದಲಾವಣೆ ಏನಾದರೂ ಆಗಿದೆಯೇ? ‘ಇಲ್ಲ’ ಎನ್ನುವುದು ಸ್ಫಟಿಕಸ್ಪಷ್ಟ ಆಗಿರುವಾಗ ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲ ಸಿಲಿಂಡರ್‌ ಬೆಲೆ ಏರಿಕೆ ಮಾಡಿದ್ದರಲ್ಲಿ ಜನರ ಹಿತಾಸಕ್ತಿ ರಕ್ಷಿಸುವಂತಹ ಯಾವ ಘನ ಉದ್ದೇಶ ಅಡಗಿದೆ? ಇವುಗಳೊಂದಿಗೆ ಈಗ ವಿದ್ಯುತ್ ದರಹೆಚ್ಚಳದ ಆಘಾತವನ್ನೂ ರಾಜ್ಯದ ಜನ ಅನುಭವಿಸಬೇಕಿದೆ. ಜನರ ಬವಣೆಗೆ ಕಾರಣವಾದ ಸರ್ಕಾರಗಳ ಈ ಕಣ್ಣಾಮುಚ್ಚಾಲೆ ಆಟವನ್ನು ಬಟಾಬಯಲು ಮಾಡಿ, ಅವುಗಳ ಧೋರಣೆಯ ವಿರುದ್ಧ ದೊಡ್ಡದಾಗಿ ಧ್ವನಿ ಎತ್ತಬೇಕಾಗಿದ್ದ, ಬೆಲೆ ಏರಿಕೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಬೇಕಿದ್ದ ವಿರೋಧಪಕ್ಷಗಳು ತಮ್ಮ ವಿರೋಧವನ್ನು ಕೇವಲ ಟ್ವೀಟ್‌ ಮಾಡುವುದಕ್ಕೆ ಸೀಮಿತಗೊಳಿಸಿವೆ. ಜನರ ನೋವಿಗೆ ಸ್ಪಂದಿಸುವಲ್ಲಿ, ಅವರೊಂದಿಗೆ ಒಟ್ಟಾಗಿ ನಿಂತು ಸರ್ಕಾರವನ್ನು ಪ್ರಶ್ನಿಸುವಲ್ಲಿ ಅವು ಸಂಪೂರ್ಣ ವಿಫಲವಾಗಿವೆ.

ತೈಲ, ವಿದ್ಯುತ್‌ ದರ ಏರಿಕೆಯು ಕಡಿಮೆ ಆದಾಯ ಇರುವ ವರ್ಗಗಳ ತಿಂಗಳ ಖರ್ಚಿನ ಮೇಲೆ ವಿಪರೀತ ಒತ್ತಡ ಉಂಟುಮಾಡುತ್ತದೆ ಎಂಬುದರಲ್ಲಿ ಅನುಮಾನ ಇಲ್ಲ. ಚುನಾವಣೆ ಬಂದಾಗ ಬೆಲೆ ಇಳಿಸಿದಂತೆ ಮಾಡಿ, ಫಲಿತಾಂಶ ಬಂದ ಬಳಿಕ ಕೊಟ್ಟದ್ದನ್ನೆಲ್ಲ ಕಸಿಯುವ ಇಂತಹ ಪ್ರವೃತ್ತಿ ಸಲ್ಲ. ವಿದ್ಯುತ್‌ ಸರಬರಾಜು ಕಂಪನಿಗಳು (ಎಸ್ಕಾಂ) ತುಳಿದ ಹಾದಿಯನ್ನೇ ಜನರಿಗೆ ಸೇವೆ ಒದಗಿಸುವ ಸರ್ಕಾರದ ಇತರ ಸಂಸ್ಥೆಗಳೂ ಹಿಡಿದರೆ ಜನ ಇನ್ನಷ್ಟು ಸಂಕಷ್ಟದ ದವಡೆಗೆ ಸಿಲುಕುತ್ತಾರೆ. ವಿದ್ಯುತ್‌ ಪೂರೈಕೆ ಜಾಲದಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಗಟ್ಟಿದರೆ ಎಸ್ಕಾಂಗಳು ಜನರ ಮೇಲೆ ಹೆಚ್ಚಿನ ಹೊರೆ ಹಾಕುವ ಪ್ರಮೇಯವೇ ಬರುವುದಿಲ್ಲ. ಆದರೆ, ಎಸ್ಕಾಂಗಳ ಚುಕ್ಕಾಣಿ ಹಿಡಿದವರಿಗೆ ಸೋರಿಕೆ ತಡೆಗಟ್ಟುವುದಕ್ಕಿಂತ ಬೆಲೆ ಏರಿಕೆಯೇ ಸುಲಭದ ದಾರಿಯಾಗಿ ಸಿಕ್ಕಿದೆ. ದರ ಏರಿಕೆಗೆ ತಡೆಯೊಡ್ಡಿ ಜನಸಾಮಾನ್ಯರ ನೋವಿಗೆ ಸ್ಪಂದಿಸಬೇಕಾದುದು ಪ್ರಜೆಗಳ ಹಿತ ಬಯಸುವ ಯಾವುದೇ ಸರ್ಕಾರದ ಮುಖ್ಯ ಹೊಣೆ. ಜನರ ಸಂಕಷ್ಟದ ಸಮಯದಲ್ಲಿ ಆರ್ಥಿಕ ಲೆಕ್ಕಾಚಾರದ ಬದಲು ಮಾನವೀಯ ಅಂತಃಕರಣವನ್ನು ಅದು ತೋರಿಸಬೇಕು. ಆದರೆ, ಆ ಮನಃಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಇಲ್ಲ ಎಂಬುದನ್ನು ಅವುಗಳ ಧೋರಣೆ ಎತ್ತಿ ತೋರಿದೆ. ಏಕೆಂದರೆ, ಜನರ ಸಂಕಷ್ಟವನ್ನು ಕಣ್ಣಾರೆ ಕಂಡಮೇಲೂ ಎರಡೂ ಸರ್ಕಾರಗಳು ಅವರ ಮೇಲೆ ಅಮಾನವೀಯವಾಗಿ ಹೊರೆ ಹೊರಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.