ಹೆಸರಿನಲ್ಲಿ ‘ಗ್ರೇಟರ್’ ಎಂದು ಸೇರಿಕೊಂಡ ಮಾತ್ರಕ್ಕೆ ಬೆಂಗಳೂರು ನಗರವೇನೂ ಸಮಸ್ಯೆಗಳಿಂದ ಮುಕ್ತವಾಗಲು ಸಾಧ್ಯವಿಲ್ಲ ಎಂಬುದನ್ನು ಮುಂಗಾರುಪೂರ್ವದ ಮಳೆಯು ಆಡಳಿತದ ಹೊಣೆ ಹೊತ್ತವರಿಗೆ ಕಣ್ಣಿಗೆ ರಾಚುವಂತೆ ಎತ್ತಿ ತೋರಿಸಿದೆ. ಬೆಂಗಳೂರಿನಲ್ಲಿ ಮಳೆ ಸುರಿದರೆ ಮುಗಿಯಿತು, ರಸ್ತೆಗಳು ನದಿಗಳಾಗುತ್ತವೆ, ತಗ್ಗು ಪ್ರದೇಶಗಳು ಕೆರೆಗಳ ಸ್ವರೂಪ ತಾಳುತ್ತವೆ, ರಸ್ತೆ ಪಕ್ಕದ ಮರಗಳು ಉರುಳಿ ಬೀಳುತ್ತವೆ. ನಗರದ ಪೂರ್ವಭಾಗದ ಜಲಾವೃತ ಪ್ರದೇಶಗಳಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಬೋಟುಗಳು ರಸ್ತೆಗೆ ಇಳಿಯಬೇಕಾಗುತ್ತದೆ. ಆದ್ದರಿಂದಲೇ, ‘ಹೇಳಿದ್ದು ಗ್ರೇಟರ್ ಬೆಂಗಳೂರು, ಮಾಡಿದ್ದು ವಾಟರ್ ಬೆಂಗಳೂರು’ ಎಂಬಂತಹ ಕುಹಕದ ನುಡಿಗಳ ಮಹಾಪೂರವೇ ಸಾಮಾಜಿಕ ಜಾಲತಾಣಗಳಲ್ಲಿ ಈಗ ಹರಿದಾಡುತ್ತಿದೆ. ಪ್ರತಿಸಲ ಮಳೆ ಬಂದಾಗಲೂ ರಾಜಧಾನಿಯದ್ದು ಇದೇ ಕಥೆ. ಸಾಲದು ಎನ್ನುವಂತೆ ನಗರದ ಹಲವು ರಸ್ತೆಗಳನ್ನು ವೈಟ್ ಟಾಪಿಂಗ್ ಇಲ್ಲವೆ ಉನ್ನತೀಕರಿಸುವ ಯೋಜನೆಯ ನೆಪದಲ್ಲಿ ಸಂಪೂರ್ಣವಾಗಿ ಅಗೆದುಹಾಕಲಾಗಿದ್ದು, ಕೆಸರುಗದ್ದೆಯಂತಾದ ರಸ್ತೆಗಳಿಂದ ಪರಿಸ್ಥಿತಿ ಇನ್ನಷ್ಟು ಅಸಹನೀಯವಾಗಿದೆ. ಮಳೆಯಿಂದಾಗಿ ಗೋಡೆ ಕುಸಿದಿದ್ದರಿಂದ ಮಹಿಳೆಯೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿಯ ‘ವಾರ್ ರೂಮ್’ನಲ್ಲಿ ಕುಳಿತು ಪರಿಸ್ಥಿತಿ ಅವಲೋಕಿಸಿದ್ದಾರೆ. ಜಲಾವೃತ ಪ್ರದೇಶಗಳು, ಉರುಳಿಬಿದ್ದ ಮರಗಳು, ಮಳೆನೀರು ತುಂಬಿದ ಕೆಲ ಸರ್ಕಾರಿ ಕಚೇರಿಗಳು ಅವರಿಗೆ ‘ನಗರ ಮಹಾಪೂರ’ದ ಆಳ– ಅಗಲದ ದರ್ಶನ ಮಾಡಿಸಿವೆ. ಮಳೆ ಶುರುವಾಗುವುದಕ್ಕಿಂತ ಕೆಲವು ದಿನಗಳಿಗೆ ಮುಂಚೆ ಬೆಂಗಳೂರಿನ ಜನ ವಿಪರೀತ ತಾಪಮಾನದಿಂದ ಬಳಲಿದ್ದರು. ಈ ಮಳೆ ಅವರಿಗೆ ಆಹ್ಲಾದವನ್ನು ಉಂಟುಮಾಡಿರಲಿಕ್ಕೆ ಸಾಕು. ಆದರೆ, ಮುಂಗಾರುಪೂರ್ವದ ಮಳೆಯೇ ನಗರದಲ್ಲಿ ಈ ಪ್ರಮಾಣದ ಪ್ರವಾಹದ ಸನ್ನಿವೇಶವನ್ನು ಸೃಷ್ಟಿಸಿರುವುದು ಜನರಲ್ಲಿ ಕಳವಳ ಮೂಡಿಸಿದೆ.
‘ನಗರ ಮಹಾಪೂರ’ಕ್ಕೆ ಅಭಿವೃದ್ಧಿಯ ಹೆಸರಿನಲ್ಲಿ ನಡೆದ ಅಕ್ರಮಗಳೇ ಕಾರಣವಾಗಿದ್ದು, ರಾಜಧಾನಿಯ ಇಂದಿನ ಸ್ಥಿತಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ದೂರದೇ ಬೇರೆ ಮಾರ್ಗವಿಲ್ಲ. ಮಳೆನೀರಿನ ಬಹುಪಾಲು ಒತ್ತಡವನ್ನು ಹಗುರ ಮಾಡುತ್ತಿದ್ದ ಬಹುತೇಕ ರಾಜಕಾಲುವೆಗಳು ಒತ್ತುವರಿಯಾಗಿರುವುದು, ನೀರು ಇಂಗಲು ಅಂಗುಲದಷ್ಟೂ ಜಾಗ ಇಲ್ಲದಂತೆ ಎಲ್ಲೆಡೆಯೂ ಟಾರು, ಕಾಂಕ್ರೀಟ್‌ನಿಂದ ಆವೃತವಾಗಿರುವುದು, ಕೆರೆಗಳು ಕಣ್ಮರೆ ಆಗಿರುವುದು – ಹೀಗೆ ನಗರದ ಇಂದಿನ ಸ್ಥಿತಿಗೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು. ವಾಸ್ತವವಾಗಿ ಮಳೆಗಾಲದ ಸನ್ನಿವೇಶ ಎದುರಿಸಲು ಬೇಸಿಗೆ ಕಾಲದಲ್ಲೇ ತಯಾರಿ ಮಾಡಿಕೊಳ್ಳಬೇಕು. ಚರಂಡಿಗಳ ಹೂಳು ಎತ್ತುವ, ಅವುಗಳ ಗೋಡೆ ಸರಿಪಡಿಸುವ ಹಾಗೂ ಮೋರಿಗಳನ್ನು ದುರಸ್ತಿಗೊಳಿಸುವ ಕೆಲಸಗಳು ಮಳೆಗಾಲ ಶುರುವಾಗುವ ಮುನ್ನವೇ ಮುಗಿಯಬೇಕು. ಆದರೆ, ನಿದ್ರೆಯಲ್ಲಿ ಮೈಮರೆತಿರುವ ಬಿಬಿಎಂಪಿಗೆ ನಗರದ ಪರಿಸ್ಥಿತಿಯ ಕಡೆಗೆ ಗಮನವಿಲ್ಲ. ಸಮಸ್ಯೆ ಬಗೆಹರಿಸಬೇಕೆಂಬ ಇಚ್ಛಾಶಕ್ತಿಯೂ ಇಲ್ಲ. ಅಧಿಕಾರಿಗಳನ್ನು ಚಿವುಟಿ ಎಬ್ಬಿಸಲು ಚುನಾಯಿತ ಕೌನ್ಸಿಲ್ ಕೂಡ ಅಸ್ತಿತ್ವದಲ್ಲಿಲ್ಲ.
ರಾಜಧಾನಿಯಲ್ಲಿ ಮಳೆ ಅನಾಹುತಗಳು, ನಗರ ಮಹಾಪೂರಗಳು ಇತ್ತೀಚಿನ ವರ್ಷಗಳಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಿದ್ದರೂ ಸಮಸ್ಯೆ ಬಗೆಹರಿಸಲು ಇದುವರೆಗೆ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದವರ‍್ಯಾರೂ ಸಮರ್ಪಕ ಕಾರ್ಯಯೋಜನೆಯನ್ನು ಹಾಕಿಕೊಳ್ಳದಿರುವುದು ಆಶ್ಚರ್ಯ. ಕೆಲವು ವರ್ಷಗಳ ಹಿಂದೆ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದಾಗ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಲಾಗುವುದು ಎಂದು ಅಬ್ಬರಿಸಿ, ಕಾರ್ಯಾಚರಣೆಯನ್ನೂ ಆರಂಭಿಸಲಾಯಿತು. ಬೆಂಗಳೂರಿನ ಪೂರ್ವಭಾಗದಲ್ಲಿ ಜೆಸಿಬಿ ಯಂತ್ರಗಳ ಸದ್ದು ಜೋರಾಗಿ ಮೊಳಗಿತು. ದಿನಗಳು ಕಳೆದಂತೆ, ಬಿಬಿಎಂಪಿಗೆ ಭೂಮಾಪಕರ ‘ಕೊರತೆ’ ಎದುರಾಯಿತು. ಕಾರ್ಯಾಚರಣೆ ತಣ್ಣಗಾಯಿತು. ಒತ್ತುವರಿ ತೆರವು ಕೆಲಸವನ್ನು ಆಗ ಪ್ರಭಾವಿಗಳ ಒತ್ತಡದಿಂದಾಗಿ ಮೊಟಕುಗೊಳಿಸದೇ ಇದ್ದಿದ್ದರೆ ಇಂದಿನ ಬಹುಪಾಲು ಸಮಸ್ಯೆ ನೀಗಿರುತ್ತಿತ್ತು. ಮಳೆ ಬಂದಾಗ ಒಂದಿಷ್ಟು ಕಾಮಗಾರಿ ನಡೆಸುವುದು, ಮತ್ತೆ ಹೊದ್ದು ಮಲಗುವುದು ಬಿಬಿಎಂಪಿಯ ಹಳೆಯ ಚಾಳಿ. ಇದರಿಂದ ಬೆಂಗಳೂರಿನ ‘ಬ್ರ್ಯಾಂಡ್’ ಮುಕ್ಕಾಗುವುದೇ ವಿನಾ ಹೊಳೆಯುವುದಿಲ್ಲ ಎಂಬುದನ್ನು ಬೆಂಗಳೂರು ಅಭಿವೃದ್ಧಿ ಖಾತೆಯನ್ನೂ ಹೊಂದಿರುವ ಉಪಮುಖ್ಯಮಂತ್ರಿ ಶಿವಕುಮಾರ್ ಅವರು ಗಮನಕ್ಕೆ ತಂದುಕೊಳ್ಳಬೇಕು. ಮಳೆಗಾಲದ ನಿರ್ವಹಣೆಯಲ್ಲಿ ಯಾವುದೇ ಲೋಪ ಆಗದಂತೆ ನೋಡಿಕೊಳ್ಳುವಂತೆ ಬಿಬಿಎಂಪಿ ಅಧಿಕಾರಿಗಳನ್ನು ಎಚ್ಚರಗೊಳಿಸಬೇಕು. ಬೆಂಗಳೂರನ್ನು ‘ಗ್ರೇಟರ್’ ಮಾಡುವಂತಹ ದೊಡ್ಡ ಉಪಕ್ರಮವು ಮೋರಿ ಸ್ವಚ್ಛಗೊಳಿಸಿ, ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳುವ ಪುಟ್ಟ ಹೆಜ್ಜೆಯಿಂದಲೇ ಆರಂಭವಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.