ADVERTISEMENT

ಸಂಪಾದಕೀಯ | ಅಂತರ್ಜಲ ಬಳಕೆಗೆ ಶುಲ್ಕ: ಜಾಗೃತಿಗೆ ಕಾರಣವಾಗಲಿ

ಸಂಪಾದಕೀಯ
Published 23 ಜುಲೈ 2025, 22:30 IST
Last Updated 23 ಜುಲೈ 2025, 22:30 IST
   

ನಗರ ಪ್ರದೇಶಗಳಲ್ಲಿನ ಕೊಳವೆಬಾವಿಗಳ ನೀರಿನ ಬಳಕೆಗೆ ದರ ನಿಗದಿ ಮಾಡುವ ರಾಜ್ಯ ಸರ್ಕಾರದ ನಿರ್ಧಾರ, ಅಂತರ್ಜಲ ಸಂರಕ್ಷಣೆಯ ದೃಷ್ಟಿಯಿಂದ ಅಗತ್ಯವಾಗಿದ್ದ ಕ್ರಮ. ಅಂತರ್ಜಲ ಬಳಕೆಯನ್ನು ನಿರ್ಬಂಧಿಸಲು ‘ಕೇಂದ್ರ ಅಂತರ್ಜಲ ಪ್ರಾಧಿಕಾರ’ ಹೊರಡಿಸಿರುವ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದ್ದು, ಪ್ರಾಧಿಕಾರದ ಮಾರ್ಗಸೂಚಿಗೆ ಕೆಲವು ತಿದ್ದುಪಡಿಗಳನ್ನು ತರಲು ಉದ್ದೇಶಿಸಿದೆ. ಪರಿಷ್ಕೃತ ಮಾರ್ಗಸೂಚಿ ಸಿದ್ಧಗೊಂಡ ಬಳಿಕ ದರ ನಿಗದಿಯಾಗಲಿದೆ. ‘ಡಿಜಿಟಲ್ ಟೆಲಿಮಿಟ್ರಿ’ ಅಳವಡಿಕೆಯ ಮೂಲಕ ಕೊಳವೆಬಾವಿಯಿಂದ ತೆಗೆಯುವ ನೀರಿನ ಪ್ರಮಾಣವನ್ನು ಅಳೆಯಲಾಗುವುದು. ಕೈಗಾರಿಕೆ, ವಾಣಿಜ್ಯ, ಗಣಿಗಾರಿಕೆ, ಮೂಲ ಸೌಕರ್ಯದ ಅಭಿವೃದ್ಧಿ, ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ವಹಿವಾಟು, ಸಮೂಹ ಗೃಹ ಸಹಕಾರ ಸಂಘಗಳು ಮತ್ತು ಅಪಾರ್ಟ್‌ಮೆಂಟ್ ಸಮುಚ್ಚಯಗಳ ಅಂತರ್ಜಲ ಬಳಕೆಯ ಮೇಲೆ ಪ್ರತಿ ಕ್ಯೂಬಿಕ್ ಮೀಟರ್‌ಗೆ ₹1ರಿಂದ ₹35ರವರೆಗೆ ಶುಲ್ಕ ನಿಗದಿ ಮಾಡುವ ಪ್ರಸ್ತಾವ ಸರ್ಕಾರದ ಮುಂದಿದೆ. ಗೃಹೋಪಯೋಗಿ ಬಳಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಕೊಳವೆಬಾವಿ ನೀರು ಬಳಸುವುದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಸೇನೆ– ಸಶಸ್ತ್ರ ಪಡೆಗಳ ಕಟ್ಟಡಗಳು, ಸಂಸ್ಥೆಗಳನ್ನು ಶುಲ್ಕದಿಂದ ಹೊರಗಿಡಲಾಗಿದೆ. ಈ ವಿನಾಯಿತಿ, ದಿನಕ್ಕೆ 10 ಕ್ಯೂಬಿಕ್‌ಗಿಂತ ಕಡಿಮೆ ನೀರು ಬಳಸುವ ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೂ ಅನ್ವಯಿಸಲಿದೆ. ಅಂತರ್ಜಲ ಬಳಕೆಗೆ ನಿರಕ್ಷೇಪಣಾ ಪತ್ರ ಪಡೆಯುವುದನ್ನೂ ಕಡ್ಡಾಯಗೊಳಿಸಲಾಗಿದೆ. ಇವೆಲ್ಲ ಕ್ರಮಗಳೂ ಅಂತರ್ಜಲದ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯವಾಗಿದ್ದವು. ಕೊಳವೆಬಾವಿಗಳಿಂದ ನೀರು ತೆಗೆಯುವುದನ್ನು ಕಾನೂನು ಚೌಕಟ್ಟಿಗೆ ತರುವ ಮೂಲಕ, ಅಂತರ್ಜಲ ಸುರಕ್ಷತೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದಂತೆಯೂ ಆಗಿದೆ.

ಅಂತರ್ಜಲ ಮಟ್ಟ ತೀವ್ರವಾಗಿ ಕುಸಿಯುತ್ತಿರುವುದು ಆತಂಕ ಹುಟ್ಟಿಸುವ ವಿದ್ಯಮಾನ. ಜಲಮೂಲಗಳಲ್ಲಿನ ನೀರಿನ ಲಭ್ಯತೆ ಕಡಿಮೆ ಆಗುತ್ತಿರುವಂತೆ, ಅಂತರ್ಜಲದ ಮೇಲಿನ ಅವಲಂಬನೆಯೂ ಹೆಚ್ಚಾಗಿದೆ. ಅನಿಯಮಿತ ಮಳೆಯಿಂದಾಗಿ ಬಹುತೇಕ ಕೃಷಿ ಚಟುವಟಿಕೆಗಳು ಕೊಳವೆಬಾವಿಗಳನ್ನು ಆಧರಿಸಿವೆ. ಹೀಗೆ, ಭೂಮಿಯಿಂದ ನೀರನ್ನು ಎತ್ತುವ ಚಟುವಟಿಕೆ ಅವ್ಯಾಹತವಾಗಿ ನಡೆಯುತ್ತಿದ್ದರೂ, ಅದಕ್ಕೆ ತಕ್ಕನಾಗಿ ನೀರನ್ನು ಭೂಮಿಗೆ ಸೇರಿಸುವ ಪ್ರಯತ್ನಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಮಳೆನೀರನ್ನು ಭೂಮಿಗೆ ಸೇರಿಸುವ ಯೋಜನೆಗಳು ಕಟ್ಟುನಿಟ್ಟಾಗಿ ಜಾರಿಗೆ ಬಂದಿಲ್ಲ ಹಾಗೂ ಮಳೆ ನೀರು ಸಂಗ್ರಹದ ಕುರಿತು ಸಾರ್ವಜನಿಕ ಹೊಣೆಗಾರಿಕೆಯೂ ದೊಡ್ಡ ಪ್ರಮಾಣದಲ್ಲಿ ಕಾಣಿಸುತ್ತಿಲ್ಲ. ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಅಂತರ್ಜಲ ಪ್ರಮಾಣ ಅಪಾಯಕರ ಮಟ್ಟಕ್ಕೆ ಕುಸಿದಿದೆ. ಅಳತೆಗೆ ಸಿಗದೆ ಬೆಳೆಯುತ್ತಿರುವ ಬೆಂಗಳೂರಿನಂಥ ಮಹಾನಗರಗಳಲ್ಲಿ ಕೊಳವೆಬಾವಿಗಳಿಂದ ನೀರೆತ್ತುವುದು ದೊಡ್ಡ ವಹಿವಾಟಿನ ಸ್ವರೂಪ ಪಡೆದುಕೊಂಡಿದ್ದು, ಅಂತರ್ಜಲವನ್ನು ಸೂರೆ ಮಾಡಲಾಗುತ್ತಿದೆ. ನೆಲದ ಮೇಲಿನ ಒಡೆತನ ವ್ಯಕ್ತಿಗಳಿಗೆ ಸೇರಿದ್ದಾದರೂ, ಭೂಮಿಯೊಳಗಿನ ನೀರು ಸಾಮುದಾಯಿಕ ಸಂಪನ್ಮೂಲವಾಗಿದೆ. ಆ ಕಾರಣದಿಂದಲೇ, ಎಲ್ಲರಿಗೂ ಸೇರಿದ ಸಂಪನ್ಮೂಲವನ್ನು ಜವಾಬ್ದಾರಿಯಿಂದ ಬಳಸುವುದು ಅಗತ್ಯ. ನೀರಿನ ಸಂಗ್ರಹ ಹಾಗೂ ಮಿತಬಳಕೆ ಇಂದಿನ ಅಗತ್ಯ. ನೀರಿನ ಬಳಕೆಯ ಬಗ್ಗೆ ಸಾರ್ವಜನಿಕ ಎಚ್ಚರ ಮೂಡದೆ ಹೋದಾಗ, ಅದನ್ನು ಕಾನೂನು ಮಾರ್ಗದಿಂದಾದರೂ ರೂಪಿಸುವುದು ಅಗತ್ಯ. ಅಂತರ್ಜಲ ಬಳಕೆ ಹಾಗೂ ಮರುಪೂರಣದ ಬಗ್ಗೆ ಸಾರ್ವಜನಿಕ ಉತ್ತರದಾಯಿತ್ವ ರೂಪಿಸುವುದಕ್ಕೆ, ಕೊಳವೆಬಾವಿ ನೀರಿನ ಬಳಕೆಗೆ ಶುಲ್ಕ ವಿಧಿಸುವ ಕ್ರಮ ಪೂರಕವಾಗಬಹುದು. ಸರ್ಕಾರದ ಬಹುತೇಕ ಯೋಜನೆಗಳು ಸದುದ್ದೇಶದಿಂದ ಕೂಡಿದ್ದರೂ, ಅವುಗಳ ಅನುಷ್ಠಾನ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಿರುವ ಉದಾಹರಣೆಗಳೇ ಹೆಚ್ಚಾಗಿವೆ. ಈ ಭ್ರಷ್ಟಾಚಾರ, ಅಂತರ್ಜಲ ಬಳಕೆಗೆ ಶುಲ್ಕ ವಿಧಿಸುವ ವಿಷಯದಲ್ಲಿ ಮರುಕಳಿಸಬಾರದು. ಮಳೆ ನೀರು ಸಂಗ್ರಹದ ಕಾನೂನು ಪಾಲನೆ ಕಾಟಾಚಾರಕ್ಕೆ ನಡೆಯುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹ ನಡೆದಿದ್ದರೆ ಅಂತರ್ಜಲದ ಪ್ರಮಾಣ ಉತ್ತಮಗೊಳ್ಳುತ್ತಿತ್ತು ಹಾಗೂ ನಗರ ಪ್ರದೇಶಗಳ ನೀರಿನ ಬೇಡಿಕೆ ಪೂರೈಕೆಗೆ ಸ್ಥಳೀಯ ಜಲಮೂಲಗಳು ಹೆಚ್ಚಿನ ಪಾಲು ಸಲ್ಲಿಸುತ್ತಿದ್ದವು. ಕೊಳವೆಬಾವಿಗಳ ನೀರಿನ ಬಳಕೆಯನ್ನು ಕಾನೂನು ಚೌಕಟ್ಟಿಗೆ ತರುವ ಕ್ರಮ ಅಂತರ್ಜಲ ಸಂರಕ್ಷಣೆಗೆ ಅನುಕೂಲ ಆಗಬೇಕೇ ಹೊರತು, ಅಧಿಕಾರಿಗಳಿಗೆ ಹಾಗೂ ನೀರು ಮಾರಾಟ ಮಾಡುವವರಿಗೆ ಲಾಭದಾಯಕ ಆಗಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT