
ರಾಜ್ಯ ವಾಣಿಜ್ಯ ತೆರಿಗೆಗಳ ಇಲಾಖೆಯು ನೋಟಿಸ್ ನೀಡಿದ್ದ 9,000 ಸಣ್ಣ ವರ್ತಕರು ಇಲ್ಲಿಯವರೆಗೂ ಪಾವತಿಸಬೇಕಾಗಿದ್ದ ಜಿಎಸ್‌ಟಿ ಮನ್ನಾ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ತೆರಿಗೆ ಸಂಗ್ರಹದಲ್ಲಿ ಸರ್ಕಾರ ಪಾರದರ್ಶಕವಾಗಿದ್ದು, ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ವರ್ತಕರ ಅನುಕೂಲಕ್ಕೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ, ಜಿಎಸ್‌ಟಿ ಪಾವತಿಗೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಸಣ್ಣ ವ್ಯಾಪಾರಿಗಳು ಮತ್ತು ವರ್ತಕ ಸಮೂಹದಲ್ಲಿ ಉಂಟಾಗಿದ್ದ ಗೊಂದಲ ಹಾಗೂ ಆತಂಕವನ್ನು ಬಗೆಹರಿಸಲು ಅಗತ್ಯವಾಗಿದ್ದ ಕ್ರಮಗಳನ್ನು ಸರ್ಕಾರ ಕೈಗೊಂಡಂತಾಗಿದೆ. ಯುಪಿಐ ಮೂಲಕ ವಾರ್ಷಿಕ ₹40 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸಿದ್ದ ಬೇಕರಿ, ಹೋಟೆಲ್, ಬೀಡಾ ಅಂಗಡಿ ಮತ್ತು ಟೀ ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದರು; ಜಿಎಸ್‌ಟಿ ನೋಂದಣಿ ಮಾಡಿಸಿ ಮತ್ತು ತೆರಿಗೆ ಪಾವತಿಸಿ ಎಂದು ಸೂಚಿಸಿದ್ದರು. ತೆರಿಗೆ ಇಲಾಖೆಯ ಕ್ರಮವನ್ನು ವಿರೋಧಿಸಿ ವರ್ತಕರು ಪ್ರತಿಭಟನೆ ನಡೆಸಿದ್ದರು. ಕೆಲವು ವರ್ತಕರು ಯುಪಿಐ ವಹಿವಾಟಿನಿಂದ ಹಿಂದೆ ಸರಿದು, ನಗದು ವ್ಯಾಪಾರಕ್ಕೆ ಮುಂದಾಗಿದ್ದರಿಂದ ಗ್ರಾಹಕರೂ ತೊಂದರೆ ಅನುಭವಿಸುವಂತಾಯಿತು. ನಗದು ರಹಿತ ವ್ಯವಹಾರ ಈಗ ಜನಪ್ರಿಯವಾಗಿದ್ದು, ಯುಪಿಐ ಪಾವತಿ ಪದ್ಧತಿಗೆ ಜನಸಾಮಾನ್ಯರೂ ಒಗ್ಗಿಕೊಂಡಿದ್ದಾರೆ. ಮೊಬೈಲ್ ಫೋನ್‌ಗಳ ವ್ಯಾಪಕ ಬಳಕೆಯಿಂದಾಗಿ ಯುಪಿಐ ಮೂಲಕ ಹಣದ ಸರಳ ವಹಿವಾಟು ಸಾಧ್ಯವಾಗಿದೆ. ಆ ಅಭ್ಯಾಸ ಮುಂದುವರಿಯುವುದರಲ್ಲಿ ಗ್ರಾಹಕರಿಗೆ ಹೆಚ್ಚಿನ ಅನುಕೂಲವಿದೆ ಹಾಗೂ ಪಾರದರ್ಶಕ ವಹಿವಾಟಿಗೂ ಯುಪಿಐ ಪದ್ಧತಿ ಪೂರಕವಾಗಿದೆ.
ವ್ಯಾಪಾರಿಗಳು, ಸಣ್ಣ ವರ್ತಕರು ಮತ್ತು ಗ್ರಾಹಕರ ನಡುವೆ ಉಂಟಾಗಿದ್ದ ಗೊಂದಲವನ್ನು ಪರಿಹರಿಸಬೇಕಾದ ಆಡಳಿತ ಮತ್ತು ಪ್ರತಿ ಪಕ್ಷಗಳ ಮುಖಂಡರು, ತಮ್ಮ ಹೊಣೆಗಾರಿಕೆಯನ್ನು ಮರೆತು ಪರಸ್ಪರ ದೂಷಣೆಯಲ್ಲಿ ತೊಡಗಿಕೊಂಡಿದ್ದುದು ದುರದೃಷ್ಟಕರ. ವರ್ತಕರ ಸಮಸ್ಯೆಗಳನ್ನು ಆಲಿಸುವ ಬದಲು, ಜಿಎಸ್‌ಟಿ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದು ಕಾಂಗ್ರೆಸ್ ನಾಯಕರು ಹಾಗೂ ಕರ್ನಾಟಕದಲ್ಲಿ ಮಾತ್ರ ಈ ರೀತಿ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದು ಬಿಜೆಪಿ ನಾಯಕರು ಪರಸ್ಪರ ದೂರಿಕೊಂಡರು. ಮೆಟ್ರೊ ರೈಲು ಪ್ರಯಾಣ ದರ ಹೆಚ್ಚಳದ ಸಂದರ್ಭದಲ್ಲೂ ಹೀಗೆಯೇ ಪರಸ್ಪರ ದೂಷಣೆಯ ರಾಜಕೀಯ ವಾಗ್ವಾದ ನಡೆದಿತ್ತು ಹಾಗೂ ಪ್ರಯಾಣಿಕರ ಹಿತಾಸಕ್ತಿ ರಕ್ಷಿಸುವ ಉತ್ತರದಾಯಿತ್ವವನ್ನು ಯಾರೊಬ್ಬರೂ ನಿರ್ವಹಿಸಿರಲಿಲ್ಲ. ಪ್ರಸ್ತುತ, ಸಣ್ಣ ವರ್ತಕರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತಡವಾಗಿಯಾದರೂ ಎಚ್ಚೆತ್ತು ಜವಾಬ್ದಾರಿಯಿಂದ ವರ್ತಿಸಿರುವುದು ಸಮಾಧಾನದ ಸಂಗತಿ. ಜಿಎಸ್‌ಟಿ ಸಂಗ್ರಹದ ಹಣದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಮ ಪಾಲು ಹೊಂದಿರುವುದರಿಂದ, ಸಣ್ಣ ವರ್ತಕರ ಸಮಸ್ಯೆಯನ್ನು ಪರಿಹರಿಸಬೇಕಾದ ಹೊಣೆ ರಾಜ್ಯ ಸರ್ಕಾರದ್ದೇ ಆಗಿತ್ತು. ಸರಕುಗಳ ವಾರ್ಷಿಕ ವಹಿವಾಟು ಮಿತಿಯನ್ನು ₹40 ಲಕ್ಷಕ್ಕೆ ಹಾಗೂ ಸೇವಾ ವಹಿವಾಟು ಮಿತಿಯನ್ನು ₹20 ಲಕ್ಷಕ್ಕೆ ಸರ್ಕಾರ ನಿಗದಿಪಡಿಸಿದೆ. ಈ ಮಿತಿ ದಾಟಿದವರು ಜಿಎಸ್‌ಟಿ ನೋಂದಣಿ ಮಾಡಿಸುವುದು ಹಾಗೂ ನಿಯಮದಂತೆ ತೆರಿಗೆ ಪಾವತಿಸುವುದು ಕಡ್ಡಾಯ. ಹಾಲು, ಹಣ್ಣು, ತರಕಾರಿ, ಮಾಂಸ, ಇತ್ಯಾದಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ ಹಾಗೂ ಪ್ರತಿ ವರ್ತಕರಿಗೂ ವೈಯಕ್ತಿಕ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜಿಎಸ್‌ಟಿ ಪಾವತಿಗೆ ಸಂಬಂಧಿಸಿದಂತೆ ಸರ್ಕಾರದ ಈ ನಿಲುವು ಸದ್ಯದ ಗೊಂದಲಗಳಿಗೆ ಉತ್ತರ ನೀಡುವಂತಿದೆ. ದೊಡ್ಡ ಮೊತ್ತದ ವಹಿವಾಟು ನಡೆಸುವವರು ನ್ಯಾಯಯುತ ತೆರಿಗೆ ಪಾವತಿಸಲೇಬೇಕು ಎಂದು ಹೇಳಿರುವುದೂ ಸರಿಯಾಗಿದೆ. ವ್ಯಾಪಾರಿಗಳಿಗೆ ಹಾಗೂ ಸಣ್ಣ ವರ್ತಕರಿಗೆ ಇರುವ ಗೊಂದಲಗಳನ್ನು ನಿವಾರಿಸಿ, ಜಿಎಸ್‌ಟಿ ನೋಂದಣಿ ಮತ್ತು ಪಾವತಿಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ತೆರಿಗೆ ಇಲಾಖೆಯು ವ್ಯಾಪಕ ಪ್ರಯತ್ನಗಳನ್ನು ನಡೆಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.