ADVERTISEMENT

ಹಂಪಿ ಸ್ಮಾರಕಗಳಿಗೆ ಹಾನಿ ಪುಂಡರಿಗೆ ಕಠಿಣ ಶಿಕ್ಷೆಯಾಗಲಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2019, 20:00 IST
Last Updated 5 ಫೆಬ್ರುವರಿ 2019, 20:00 IST
.
.   

ಹಂಪಿಯ ವಿಷ್ಣು ಮಂದಿರದ ಪರಿಸರದಲ್ಲಿನ ಕಂಬವೊಂದನ್ನು ಉರುಳಿಸಿರುವ ಮೂವರು ಕಿಡಿಗೇಡಿಗಳ ವಿಕೃತಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕಲೆ ಹಾಗೂ ಪರಂಪರೆಯ ಬಗ್ಗೆ ಅರಿವು– ಅಭಿಮಾನವಿಲ್ಲದ ವ್ಯಕ್ತಿಗಳು ನಡೆಸಿರುವ ಕೃತ್ಯ ಇದಾಗಿದೆ. ಭಾರತೀಯರಿಗೆ ಇತಿಹಾಸಪ್ರಜ್ಞೆ ಕಡಿಮೆ ಎನ್ನುವ ಪಾಶ್ಚಾತ್ಯರ ಪೂರ್ವಗ್ರಹವನ್ನು ಈ ಅವಿವೇಕಿಗಳು ನಿಜಗೊಳಿಸಲು ಪ್ರಯತ್ನಿಸಿದಂತಿದೆ. ಮಕ್ಕಳಾಟಿಕೆಯ ಕಂಬವೊಂದನ್ನು ಉರುಳಿಸಿದಷ್ಟು ಸಲೀಸಾಗಿ ಸ್ಮಾರಕವನ್ನು ಉರುಳಿಸಿರುವ ಕೃತ್ಯ ಆತಂಕ ಹುಟ್ಟಿಸುವಂತಹದ್ದು. ಹಂಪಿಯ ಸ್ಮಾರಕಗಳ ರಕ್ಷಣಾ ಕಾರ್ಯದಲ್ಲಿನ ಲೋಪಕ್ಕಿದು ಉದಾಹರಣೆಯೂ ಹೌದು. 4,100 ಎಕರೆ ವಿಸ್ತೀರ್ಣದಲ್ಲಿರುವ 1,600 ಸ್ಮಾರಕಗಳಿಂದಾಗಿ ಹಂಪಿ ವಿಶ್ವದ ಬಹುದೊಡ್ಡ ಬಯಲು ಸಂಗ್ರಹಾಲಯವೆಂದು ಪ್ರಸಿದ್ಧವಾಗಿದೆ. ವಿಶ್ವದ ವಿವಿಧ ಭಾಗಗಳಿಂದ ಇತಿಹಾಸದ ವಿದ್ಯಾರ್ಥಿಗಳು, ಪ್ರವಾಸಿಗರು ಹಂಪಿಯನ್ನು ಸಂದರ್ಶಿಸಿ ರೋಮಾಂಚನಗೊಳ್ಳುತ್ತಾರೆ. 1986ರಲ್ಲಿ ಯುನೆಸ್ಕೊದ ‘ವಿಶ್ವ ಪರಂಪರೆ ಪಟ್ಟಿ’ಗೆ ಸೇರ್ಪಡೆಯಾದ ನಂತರವಂತೂ ಹಂಪಿಯ ಆಕರ್ಷಣೆ ಮತ್ತಷ್ಟು ಹೆಚ್ಚಾಗಿದೆ. ಈ ತಾಣ, ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತದ ಹೆಮ್ಮೆ. ಇಷ್ಟಾದರೂ ಹಂಪಿಯ ಸಂರಕ್ಷಣೆಯ ಬಗ್ಗೆ ಸರ್ಕಾರ ವಹಿಸಿರುವ ಕಾಳಜಿ ಅಷ್ಟಕ್ಕಷ್ಟೆ. 57 ಪ್ರಮುಖ ಸ್ಮಾರಕಗಳಿಗಷ್ಟೇ ದಿನದ ಇಪ್ಪತ್ತನಾಲ್ಕು ತಾಸುಗಳ ಭದ್ರತಾ ವ್ಯವಸ್ಥೆಯಿದೆ. ಹಂಪಿ ಸ್ಮಾರಕಗಳ ರಕ್ಷಣೆಗಾಗಿ ಸರ್ಕಾರ ಪ್ರತಿವರ್ಷ ₹ 1.2 ಕೋಟಿ ಖರ್ಚು ಮಾಡುತ್ತಿದೆ. ಸ್ಮಾರಕಗಳ ಪರಿಸರದ ಅಗಾಧತೆಗೆ ಹೋಲಿಸಿದರೆ ಈ ಮೊತ್ತ ತೀರಾ ಕಡಿಮೆ. ಹಂಪಿ ಉತ್ಸವದ ಸಂಭ್ರಮಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಸರ್ಕಾರ, ಆ ಸಂಭ್ರಮದ ಜೀವಂತ ರೂಪದಂತಿರುವ ಸ್ಮಾರಕಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜುಗ್ಗತನ ಮಾಡುವುದಕ್ಕೆ ಯಾವುದೇ ಸಮರ್ಥನೆಯಿಲ್ಲ. ಈ ಹಿಂದೆ ಕೂಡ ಹಂಪಿಯಲ್ಲಿ ಪುಂಡಾಟಗಳು ನಡೆದಿದ್ದವು. 2016ರಲ್ಲಿ ಅಚ್ಯುತರಾಯ ಬಜಾರ್‌ನಲ್ಲಿ ಕಂಬಗಳಿಗೆ ಹಾನಿ ಮಾಡಲಾಗಿತ್ತು. ಒತ್ತುವರಿ ಪ್ರಕರಣಗಳಿಗೂ ಕೊರತೆಯಿಲ್ಲ. ತೂಗುಸೇತುವೆಯ ಮೂಲಕ ಹಂಪಿಯ ಸೌಂದರ್ಯಕ್ಕೆ ಧಕ್ಕೆ ತರಲು ಹೊರಟ ರಾಜ್ಯ ಸರ್ಕಾರದ ನಡವಳಿಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಪ್ರಸಕ್ತ ದುಷ್ಕೃತ್ಯ ಒಂದು ವರ್ಷದಷ್ಟು ಹಳೆಯದು ಎಂದು ಪೊಲೀಸರು ಹೇಳುತ್ತಿದ್ದಾರೆ. ಹಾಗಾದರೆ, ಪುಂಡರ ಮೇಲೆ ಕ್ರಮ ಜರುಗಿಸಲಿಕ್ಕೆ ಪೊಲೀಸರು ಈವರೆಗೆ ಸುಮ್ಮನಿದ್ದುದೇಕೆ ಎನ್ನುವ ಪ್ರಶ್ನೆ ಏಳುತ್ತದೆ.

ಚರಿತ್ರೆ–ಪರಂಪರೆಯ ಬಗ್ಗೆ ಸಮಾಜದಲ್ಲಿನ ತಿಳಿವಳಿಕೆಯ ಮಾದರಿಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ವೀರಗಲ್ಲು, ಮಾಸ್ತಿಕಲ್ಲು, ಶಾಸನಗಳಿಗೆ ಜಾನುವಾರುಗಳನ್ನು ಕಟ್ಟುವ ಮಟ್ಟಿಗಿನ ಅಜ್ಞಾನ ಗ್ರಾಮೀಣ ಪ್ರದೇಶಗಳಲ್ಲಿದೆ. ಗೆದ್ದಲಿನ ಪಾಲಾಗಿರುವ ಅಮೂಲ್ಯ ಶಾಸ್ತ್ರಗ್ರಂಥಗಳ ಓಲೆಗರಿಗಳಿಗೂ ಕೊರತೆಯಿಲ್ಲ. ವಾಸ್ತವ ಹೀಗಿದ್ದರೂ, ಇತಿಹಾಸದ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳು ಸಮರ್ಪಕವಾಗಿ ಆಗುತ್ತಿಲ್ಲ. ಪಠ್ಯಪುಸ್ತಕಗಳಲ್ಲಿ ಚರಿತ್ರೆಯನ್ನು ನಿರ್ಜೀವ ಅಂಕಿಅಂಶಗಳ ರೂಪದಲ್ಲಿ ಉರುಹೊಡೆಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಕುತೂಹಲ, ಅಭಿಮಾನ ಹಾಗೂ ಹೆಮ್ಮೆ ಮೂಡಿಸುವ ಚರಿತ್ರೆಯ ಪಠ್ಯಗಳು ವಿರಳ. ಕೆಲವು ಚಾರಿತ್ರಿಕ ನಾಯಕರ ಬಗೆಗೆ ಜನಮಾನಸದಲ್ಲಿ ಭಾವೋದ್ರೇಕ ಕಾಣಬಹುದಾದರೂ, ಆ ಭಾವನೆಗಳ ಹಿಂದಿರುವುದು ಜಾತಿ–ಧರ್ಮಗಳೇ ಹೊರತು ಕೃತಿಯಲ್ಲ. ಹಂಪಿಯ ಪ್ರಸಕ್ತ ಘಟನೆ ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದಂತೆ ಎಲ್ಲರಿಗೂ ಒಂದು ಪಾಠವಾಗಬೇಕು. ಕಂಬವನ್ನು ಉರುಳಿಸಿ ಆನಂದಿಸುತ್ತಿರುವ ವಿಕೃತ ವ್ಯಕ್ತಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆ ಶಿಕ್ಷೆ, ಸ್ಮಾರಕಗಳಿಗೆ ಹಾಗೂ ಪರಂಪರೆಯ ಸ್ಮೃತಿಗಳಿಗೆ ಹಾನಿಯುಂಟು ಮಾಡುವವರಿಗೆ ಎಚ್ಚರಿಕೆಯ ರೂಪದಲ್ಲಿರಬೇಕು. ಹಂಪಿಯ ಸ್ಮಾರಕಗಳ ನಿರ್ವಹಣೆಯ ಹೊಣೆ ಹೊತ್ತಿರುವ ‘ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ’ಕ್ಕೆ ಪೂರ್ಣಾವಧಿ ಮುಖ್ಯಸ್ಥರು ಇಲ್ಲದಿರುವುದೂ ಅಲ್ಲಿನ ಅವ್ಯವಸ್ಥೆಗಳಿಗೊಂದು ಕಾರಣವಾಗಿದೆ. ಈ ಆಡಳಿತಾತ್ಮಕ ಕೊರತೆಯನ್ನು ಸರ್ಕಾರ ಕೂಡಲೇ ಸರಿಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT