ADVERTISEMENT

ಕಚ್ಚಾ ತೈಲ ಬಿಕ್ಕಟ್ಟು ಎಚ್ಚರಿಕೆಯ ನಡೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 20:30 IST
Last Updated 25 ಏಪ್ರಿಲ್ 2019, 20:30 IST
   

ಇರಾನ್‌ನಿಂದ ಕಚ್ಚಾ ತೈಲ ಆಮದಿಗೆ ಸಂಬಂಧಿಸಿದಂತೆ ಭಾರತಕ್ಕೆ ನೀಡಿದ್ದ ಆರು ತಿಂಗಳ ‘ದಿಗ್ಬಂಧನ ವಿನಾಯಿತಿ’ಯನ್ನು ಇನ್ನು ವಿಸ್ತರಿಸದಿರಲು ಅಮೆರಿಕ ತೀರ್ಮಾನಿಸಿದೆ. ಇದರ ಪರಿಣಾಮವಾಗಿ ಭಾರತ ತೈಲ ಸಂಕಷ್ಟ ಎದುರಿಸಬೇಕಾದ ಆತಂಕ ಸೃಷ್ಟಿಯಾಗಿದೆ. ಸೌದಿ ಅರೇಬಿಯಾ ಸೇರಿದಂತೆ ಕೆಲ ದೇಶಗಳು ತಕ್ಷಣಕ್ಕೆ ತೈಲ ಉತ್ಪಾದನೆ ಹೆಚ್ಚಿಸದಿರಲು ನಿರ್ಧರಿಸಿವೆ. ಇದು ಬೇಡಿಕೆ ಮತ್ತು ಪೂರೈಕೆ ನಡುವೆ ಅಸಮತೋಲನ ಸೃಷ್ಟಿಸಬಹುದು. ಕಚ್ಚಾ ತೈಲ ಬಳಕೆಯಲ್ಲಿ ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ದೇಶವಾಗಿದೆ ಭಾರತ.

ಸಂಭವನೀಯ ತೈಲ ದರ ಏರಿಕೆಯಿಂದ ಹಣದುಬ್ಬರ, ರೂಪಾಯಿ ವಿನಿಮಯ ದರ ಮತ್ತು ಚಾಲ್ತಿ ಖಾತೆ ಕೊರತೆ (ಸಿಎಡಿ) ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಇರಾನ್‌ನಿಂದ ಅತಿಹೆಚ್ಚು ತೈಲ ಆಮದು ಮಾಡಿಕೊಳ್ಳುತ್ತಿರುವ ದೇಶಗಳಲ್ಲಿ ಭಾರತಕ್ಕೆ ಮೂರನೇ ಸ್ಥಾನ ಇದೆ. ಇರಾನ್‌ನಿಂದ ತೈಲ ಪೂರೈಕೆ ಸ್ಥಗಿತಗೊಂಡರೆ, ಸ್ಪರ್ಧಾತ್ಮಕ ದರದಲ್ಲಿ ತೈಲ ಪೂರೈಸುವ ಬೇರೆ ದೇಶಗಳನ್ನು ಗುರುತಿಸುವುದು ತಕ್ಷಣಕ್ಕೆ ಸುಲಭವಲ್ಲ. ಈ ಬೆಳವಣಿಗೆಯು ಇರಾನ್‌ ಜತೆಗಿನ ದೀರ್ಘಾವಧಿಯ ರಾಜತಾಂತ್ರಿಕ ಬಾಂಧವ್ಯದ ಮೇಲೂ ಪರಿಣಾಮ ಬೀರಲಿದೆ. ಅಮೆರಿಕ ಮತ್ತು ಇರಾನ್‌ ಜತೆ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿರುವ ಭಾರತಕ್ಕೆ ಇದೊಂದು ಬಿಸಿ ತುಪ್ಪದ ಅನುಭವವೂ ಹೌದು.

ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಭಾರತಕ್ಕೆ ಕಷ್ಟದ ಕೆಲಸ. ಭಾರತ, ಚೀನಾ, ಜಪಾನ್‌ ಸೇರಿದಂತೆ ಒಟ್ಟು ಎಂಟು ದೇಶಗಳು ಇದೇ ಬಗೆಯ ತೊಳಲಾಟದಲ್ಲಿ ಸಿಲುಕಲಿವೆ. ಇರಾನ್‌ ಜತೆ 2015ರಲ್ಲಿ ಮಾಡಿಕೊಂಡಿದ್ದ ಪರಮಾಣು ಒಪ್ಪಂದದಿಂದ ಡೊನಾಲ್ಡ್‌ ಟ್ರಂಪ್‌ ಆಡಳಿತವು ಹಿಂದೆ ಸರಿದು ಆರ್ಥಿಕ ದಿಗ್ಬಂಧನ ವಿಧಿಸಿರುವುದರಿಂದ ಈ ಹೊಸ ಬಿಕ್ಕಟ್ಟು ಸೃಷ್ಟಿಯಾಗಿದೆ. ಕಚ್ಚಾ ತೈಲಕ್ಕೆ ಇರಾನ್‌ ದೇಶವನ್ನು ನೆಚ್ಚಿಕೊಂಡಿರುವ ಎಂಟು ದೇಶಗಳು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲು ಆರು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಈ ಗಡುವು ಮೇ 2ರಂದು ಕೊನೆಗೊಳ್ಳಲಿದೆ. ಇರಾನ್‌ನಿಂದ ತೈಲ ಆಮದು ಸ್ಥಗಿತಗೊಳಿಸುವುದಾಗಿ ಭಾರತ ತಿಳಿಸಿದೆ. ಅಮೆರಿಕ ಮತ್ತು ಇರಾನ್‌ ನಡುವಣ ಸಂಘರ್ಷದಲ್ಲಿ ಭಾರತ, ಅಮೆರಿಕದ ಪರ ನಿಲುವು ತಳೆದಿರುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ.

ADVERTISEMENT

ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ಜೈಷ್‌ ಎ ಮೊಹಮ್ಮದ್‌ ಮುಖಂಡ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆಯ ‘ಜಾಗತಿಕ ಉಗ್ರ’ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಅಮೆರಿಕವು ಬೆಂಬಲವಾಗಿ ನಿಂತಿದೆ. ಹೀಗಾಗಿ ಇರಾನ್‌ ವಿರುದ್ಧದ ಆರ್ಥಿಕ ದಿಗ್ಬಂಧನದ ವಿಷಯದಲ್ಲಿ ಭಾರತವು ಅಮೆರಿಕದ ನಿಲುವನ್ನು ಸಮರ್ಥಿಸುವ ಅನಿವಾರ್ಯಕ್ಕೆ ಸಿಲುಕಿದೆ. ಚಾಬಹರ್‌ ಬಂದರು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಇರಾನ್‌ಗೆ ಭಾರತ ನೀಡುತ್ತಿರುವ ಸಹಕಾರಕ್ಕೆ ಅಮೆರಿಕದ ದಿಗ್ಬಂಧನದಿಂದ ಯಾವುದೇ ಪರಿಣಾಮ ಆಗುವುದಿಲ್ಲ ಎನ್ನುವುದು ಮಾತ್ರ ಸಮಾಧಾನದ ಸಂಗತಿ. ತೈಲ ಬಿಕ್ಕಟ್ಟಿನ ಈ ಬೆಳವಣಿಗೆಯು ಭಾರತದ ಆರ್ಥಿಕ ಮತ್ತು ವಿದೇಶಿ ನೀತಿ ಮೇಲೂ ತೀವ್ರ ಪರಿಣಾಮ ಬೀರಲಿದೆ. ಇರಾನ್‌ನಿಂದ ಭಾರತವು ಅಗ್ಗದ ದರದಲ್ಲಿ ಕಚ್ಚಾ ತೈಲ ಪಡೆಯುತ್ತಿತ್ತು. ಈಗ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ಇದರಿಂದ ತೈಲಕ್ಕೆ ಮಾಡುವ ವೆಚ್ಚ ಹೆಚ್ಚಲಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಪ್ರತಿ ಬ್ಯಾರಲ್‌ಗೆ ಒಂದು ಡಾಲರ್‌ ಏರಿಕೆಯಾದರೂ ಭಾರತದ ಆಮದು ವೆಚ್ಚ ₹ 7,000 ಕೋಟಿ ದುಬಾರಿಯಾಗಲಿದೆ. ಕಾಶ್ಮೀರದ ವಿಷಯದಲ್ಲಿ ಇರಾನ್‌ ಭಾರತದ ಬೆಂಬಲಕ್ಕೆ ನಿಂತಿದೆ. ಅಫ್ಗಾನಿಸ್ತಾನದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಎರಡೂ ದೇಶಗಳು ಪರಸ್ಪರ ಸಹಕರಿಸುತ್ತಿವೆ. ಈ ಸಹಕಾರ ಎರಡೂ ದೇಶಗಳ ಹಿತಾಸಕ್ತಿಗೆ ಪೂರಕವಾಗಿದೆ. ಇರಾನ್‌ ಜತೆಗಿನ ಬಾಂಧವ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಭಾರತದ ಮುಂದಿರುವ ಸವಾಲು. ಇರಾನ್‌ನೊಂದಿಗೆ ಬೇರೆ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆಗೆ ಭಾರತ ಮುಂದಾಗಬೇಕು. ವ್ಯಾಪಾರ ಮತ್ತು ರೂಪಾಯಿ ಹಿತಾಸಕ್ತಿ ರಕ್ಷಿಸಲು ಡಾಲರ್‌ಯೇತರ ವಾಣಿಜ್ಯ ವಹಿವಾಟಿನತ್ತಲೂ ಗಮನ ಕೇಂದ್ರೀಕರಿಸಿದರೆ ಮಾತ್ರ ಭಾರತವು ತೈಲ ಆಮದಿಗೆ ಸಂಬಂಧಿಸಿದ ಈ ಬಿಕ್ಕಟ್ಟನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.