ADVERTISEMENT

ಸಂಪಾದಕೀಯ | ದಿಟ್ಟ ನಡೆ ಅನುಸರಿಸಿದ ಮಾರ್ಗ ಸರಿಯೇ?

ಸಂವಿಧಾನದ ‘ವಿಧಿ’ ಹೇಳಿದ್ದು ಒಂದಾದರೆ, ರಾಜ್ಯದ ಜನರ ವಿಧಿ ಬೇರೆಯದಾಗಿತ್ತು

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2019, 4:31 IST
Last Updated 6 ಆಗಸ್ಟ್ 2019, 4:31 IST
   

ರಾಷ್ಟ್ರೀಯತೆಗೆ ಸಂಬಂಧಿಸಿದ ಸಂಕಥನಗಳಲ್ಲಿ ಪ್ರಸ್ತಾಪ ಆಗುವ ಪ್ರಮುಖ ವಿಚಾರಗಳಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನ ಕೂಡ ಒಂದು. ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ದೇಶವಾಸಿಗಳು ಕಾಶ್ಮೀರದ ಜೊತೆ ಹೊಂದಿರುವ ಸಂಬಂಧ ಇದಕ್ಕೆ ಒಂದು ಪ್ರಮುಖ ಕಾರಣ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಕಾಶ್ಮೀರವನ್ನು ಆಳುತ್ತಿದ್ದ ಮಹಾರಾಜ ಹರಿಸಿಂಗ್ ಸ್ವತಂತ್ರವಾಗಿ ಉಳಿಯಲು ಬಯಸಿದ್ದರು. ಆ ಹೊತ್ತಿನಲ್ಲಿ ಪಾಕಿಸ್ತಾನವು ಕಾಶ್ಮೀರವನ್ನು ಕಬಳಿಸುವ ಉದ್ದೇಶದಿಂದ, ಆ ರಾಜ್ಯಕ್ಕೆ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತಗೊಳಿಸಿ, ರಾಜ್ಯದ ಉಸಿರುಗಟ್ಟಿಸುವ ಕೆಲಸಕ್ಕೆ ಮುಂದಾದಾಗ ರಾಜ್ಯದ ಜನರ ನೆರವಿಗೆ ಧಾವಿಸಿದ್ದು ಭಾರತ. ನಂತರ ಕಾಶ್ಮೀರವನ್ನು ಭಾರತದ ಜೊತೆ ವಿಲೀನಗೊಳಿಸಲು ಹರಿಸಿಂಗ್ ಸಮ್ಮತಿಸಿದರು. ಆ ಹೊತ್ತಿನಲ್ಲಿ ರೂಪುಗೊಂಡಿದ್ದು, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ಅವಕಾಶ ನೀಡುವ ಸಂವಿಧಾನದ 370ನೇ ವಿಧಿ. ಇದು, ಭಾರತದ ಸಂವಿಧಾನದಲ್ಲಿ ಅಡಕವಾಗಿರುವ ತಾತ್ಕಾಲಿಕ ವಿಧಿಯೇ ವಿನಾ ಇದನ್ನು ಶಾಶ್ವತವಾಗಿ ಉಳಿಸುವ ಇರಾದೆ ಸಂವಿಧಾನ ನಿರ್ಮಾತೃಗಳಿಗೆ ಇದ್ದಿರಲಿಲ್ಲ. 370ನೇ ವಿಧಿಯನ್ನು ಉಲ್ಲೇಖಿಸುವಾಗ ಸಂವಿಧಾನದಲ್ಲಿ ಬಳಕೆಯಾಗಿರುವ ‘ತಾತ್ಕಾಲಿಕ, ಮಧ್ಯಂತರದ, ವಿಶೇಷ ಅವಕಾಶ’ ಎಂಬ ಪದಗಳೇ, ಈ ವಿಧಿಯು ಶಾಶ್ವತವಾಗಿ ಜಾರಿಯಲ್ಲಿ ಇರಬೇಕಾದದ್ದಲ್ಲ ಎಂಬುದನ್ನು ಸುಸ್ಪಷ್ಟವಾಗಿ ಹೇಳುತ್ತವೆ. ಆದರೆ, ಸಂವಿಧಾನದ ‘ವಿಧಿ’ ಹೇಳಿದ್ದು ಒಂದಾದರೆ, ರಾಜ್ಯದ ಜನರ ವಿಧಿ ಬೇರೆಯದಾಗಿತ್ತು. ಯಾವುದು ಶಾಶ್ವತ ಅಲ್ಲವೋ, ಅದನ್ನು ಶಾಶ್ವತಗೊಳಿಸಲು ರಾಜ್ಯದ ರಾಜಕೀಯ ಶಕ್ತಿಗಳು ತಮ್ಮೆಲ್ಲ ಶಕ್ತಿಯನ್ನು ಬಳಸಿ ಯತ್ನಿಸುತ್ತಾ ಬಂದವು. ಇದಕ್ಕೆ ರಾಷ್ಟ್ರದ ಪ್ರಭುತ್ವ ಕೂಡ ಮಣಿದಿತ್ತು. ದೇಶದ ಜೊತೆ ಕಾಶ್ಮೀರವನ್ನು ಭಾವನಾತ್ಮಕವಾಗಿ ಬೆಸೆಯುವ ಕೆಲಸ ಎಂದೋ ಆಗಬೇಕಿತ್ತು. ಸಂವಿಧಾನದ ತಾತ್ಕಾಲಿಕ ಅಂಶವೊಂದನ್ನು ಏಳು ದಶಕಗಳವರೆಗೆ ಉಳಿಸಿಕೊಂಡು, ಎಳೆದುಕೊಂಡು ಬಂದಿರುವುದು ದುರದೃಷ್ಟಕರ. ಈ ವಿಧಿಯ ಅನ್ವಯ ಕಣಿವೆ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ, ದೇಶದ ಸಂವಿಧಾನ ಅಲ್ಲಿಗೂ ಅನ್ವಯವಾಗುತ್ತದೆ ಎಂಬುದನ್ನು ಸಾರುವ ಆದೇಶವನ್ನು ರಾಷ್ಟ್ರಪತಿ ಈಗ ಹೊರಡಿಸಿದ್ದಾರೆ. ಇಂಥದ್ದೊಂದು ಆದೇಶ ಹೊರಡಿಸಲು ಅಪಾರ ರಾಜಕೀಯ ಇಚ್ಛಾಶಕ್ತಿ ಬೇಕು ಎಂಬುದು ನಿರ್ವಿವಾದ. ಅಂಥ ಇಚ್ಛಾಶಕ್ತಿಯನ್ನುನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರದರ್ಶಿಸಿದೆ.

ಈ ರಾಜ್ಯಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದಿಂದ ರಾಜ್ಯದ ಜನರಿಗೆ ಆದ ಪ್ರಯೋಜನಗಳು ಏನು ಎಂಬುದನ್ನು ಪರಿಶೀಲಿಸಿದರೆ ಆಗುವುದು ನಿರಾಸೆಯೇ. ರಾಜ್ಯಕ್ಕೆ ದೊಡ್ಡ ಉದ್ದಿಮೆಗಳು ಬರಲಿಲ್ಲ. ಅಲ್ಲಿ ಬೃಹತ್ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಆಗಲಿಲ್ಲ. ಸಂಪತ್ತು ಸೃಷ್ಟಿಯಾಗಲಿಲ್ಲ. ಉದ್ಯೋಗ ಕೂಡ ಸೃಷ್ಟಿಯಾಗಲಿಲ್ಲ. ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರದ ಸಂದರ್ಭದಲ್ಲಿ, ದೇಶದ ಹಲವು ನಗರಗಳು ಐ.ಟಿ., ಬಿ.ಟಿ.ಯಂತಹ ಹೊಸ ಕಾಲದ ಉದ್ದಿಮೆಗಳನ್ನು ಆಕರ್ಷಿಸಿದರೆ, ಕಣಿವೆ ರಾಜ್ಯಕ್ಕೆ ಇಂಥದ್ದನ್ನು ಮಾಡಲು ಸಾಧ್ಯವಾಗಲಿಲ್ಲ. ಪರಿಣಾಮವಾಗಿ ರಾಜ್ಯದ ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಯಾಗಲಿಲ್ಲ. ಉದ್ಯೋಗ ಸೃಷ್ಟಿ ಇಲ್ಲದ ಪರಿಣಾಮವಾಗಿ ಅಲ್ಲಿನ ಯುವಜನರು ತೀವ್ರವಾದಿ ವಿಚಾರಗಳಿಗೆ ಸುಲಭದ ತುತ್ತಾದರು. ಇದು, ಅಲ್ಲಿನ ಏಕೈಕ ದೊಡ್ಡ ಆರ್ಥಿಕ ಚಟುವಟಿಕೆಯಾದ ಪ್ರವಾಸೋದ್ಯಮದ ಮೇಲೆ ನೇರ ಏಟು ಕೊಟ್ಟಿತು. ಕೇಂದ್ರ ಸರ್ಕಾರ ಈಗ ಕೈಗೊಂಡಿರುವ ತೀರ್ಮಾನದಿಂದಾಗಿ, ಅಲ್ಲಿ ಕೂಡ ಹೆಚ್ಚಿನ ಬಂಡವಾಳ ಹೂಡಿಕೆ ಆಗಿ, ಹೆಚ್ಚಿನ ಪ್ರಮಾಣದಲ್ಲಿ ಆರ್ಥಿಕ ಚಟುವಟಿಕೆಗಳು ನಡೆಯುವ ಸಾಧ್ಯತೆ ಇರುವ ಕಾರಣ, ಅಲ್ಲಿನ ಜನಜೀವನ ಸುಧಾರಿಸಬಹುದು, ಅಲ್ಲಿನ ಯುವಜನರು ತೀವ್ರಗಾಮಿ ಸಿದ್ಧಾಂತಗಳಿಂದ ದೂರವಾಗಬಹುದು ಎಂಬ ನಿರೀಕ್ಷೆ ಹೊಂದಬಹುದು. ಆದರೆ, ರಾಜ್ಯದ ಭವಿಷ್ಯದ ಕುರಿತು ಆಶಾಭಾವ ವ್ಯಕ್ತಪಡಿಸುತ್ತಲೇ,ಕೇಂದ್ರ ಸರ್ಕಾರವು ತನ್ನ ತೀರ್ಮಾನವನ್ನು ಜಾರಿಗೆ ತಂದ ರೀತಿಯ ಬಗ್ಗೆ ಗಂಭೀರ ಪ್ರಶ್ನೆಗಳು ಮೂಡಿರುವುದನ್ನು ನಿರ್ಲಕ್ಷಿಸಲಾಗದು. ಇಡೀ ಕಣಿವೆ ರಾಜ್ಯಕ್ಕೆ ಹೊರ ಜಗತ್ತಿನ ಸಂಪರ್ಕ ಇಲ್ಲದಂತೆ ಮಾಡಿ, ಅಲ್ಲಿನ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿ ಇರಿಸಿ, ಏನಾಗಲಿದೆ ಎಂಬುದು ಜನರ ಅರಿವಿಗೆ ಬಾರದಂತೆ ಮಾಡಿ, ರಾಜ್ಯವನ್ನು ಇಬ್ಭಾಗವಾಗಿಸಿ, ಎರಡೂ ಭಾಗಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿಸುವ ತೀರ್ಮಾನ ತೆಗೆದುಕೊಂಡಿದ್ದು ಪ್ರಜಾತಂತ್ರಕ್ಕೆ ಸರಿಹೊಂದುವ ನಡೆ ಅಲ್ಲ. ಇಡೀ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವು ಮುಕ್ತವಾಗಿ, ಪಾರದರ್ಶಕವಾಗಿ, ಪ್ರಜಾಸತ್ತಾತ್ಮಕವಾಗಿ ಮಾಡಬೇಕಿತ್ತು. ಎಲ್ಲ ತೀರ್ಮಾನಗಳ ಫಲ ಅನುಭವಿಸಬೇಕಿರುವ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಬಿಜೆಪಿಯ ಹಿರಿಯ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರುಪ್ರತಿಪಾದಿಸಿದ್ದ ‘ಇನ್ಸಾನಿಯತ್, ಜಮೂರಿಯತ್, ಕಾಶ್ಮೀರಿಯತ್’ (ಮಾನವೀಯತೆ, ಪ್ರಜಾಪ್ರಭುತ್ವ,ಕಾಶ್ಮೀರದ ಸಾಂಸ್ಕೃತಿಕ ಪ್ರಜ್ಞೆ) ತತ್ವ ಅನುಸರಿಸಬಹುದಿತ್ತು. ಹಾಗೆ ಆಗಿದ್ದಿದ್ದರೆ ಕೇಂದ್ರದ ನಡೆ ಹೆಚ್ಚಿನ ಘನತೆ ಪಡೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT