ADVERTISEMENT

ಸಂಪಾದಕೀಯ: ಕಾಶ್ಮೀರ ಡಿಡಿಸಿ ಚುನಾವಣೆ ಜನತಂತ್ರ ಪ್ರಕ್ರಿಯೆಗೆ ಜನಮನ್ನಣೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 20:49 IST
Last Updated 25 ಡಿಸೆಂಬರ್ 2020, 20:49 IST
   

ಪ್ರಜಾತಂತ್ರ ವ್ಯವಸ್ಥೆಯ ಬಹುಮುಖ್ಯ ಪ್ರಕ್ರಿಯೆ ಚುನಾವಣೆ. ಇದು, ಸೋಲು– ಗೆಲುವು ಮತ್ತು ಅಧಿಕಾರದ ಹಾವು–ಏಣಿ ಆಟಕ್ಕೆ ಸೀಮಿತವಾದ ಸಂಗತಿಯಲ್ಲ. ಜನತಂತ್ರ ವ್ಯವಸ್ಥೆಯನ್ನೇ ಧಿಕ್ಕರಿಸಿ, ಚುನಾವಣೆಯನ್ನು ಬಹಿಷ್ಕರಿಸುತ್ತಾ ಬಂದಿದ್ದ ಕಟ್ಟಾ ಪ್ರತ್ಯೇಕತಾವಾದಿಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ಹಿನ್ನಡೆ ಕಂಡ ಸಂದರ್ಭ ಇದು. ಈಗ ಅಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಮಂಡಳಿಯ (ಡಿಡಿಸಿ) ಚುನಾವಣೆ ಮತ್ತು ಅದರ ಫಲಿತಾಂಶವು ಅಲ್ಲಿನ ಜನರು ಬದಲಾವಣೆಗೆ ತೆರೆದುಕೊಳ್ಳುತ್ತಿರುವುದರ ಸಂಕೇತದಂತೆ ಗೋಚರಿಸಿವೆ.

ಒಟ್ಟು 20 ಜಿಲ್ಲೆಗಳ 280 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌ಸಿ) ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ನೇತೃತ್ವದ ಗುಪ್ಕಾರ್‌ ಮೈತ್ರಿಕೂಟ (ಪೀಪಲ್ಸ್‌ ಅಲಯನ್ಸ್‌ ಫಾರ್‌ ಗುಪ್ಕಾರ್‌ ಡಿಕ್ಲರೇಷನ್‌– ಪಿಎಜಿಡಿ) 110 ಸ್ಥಾನಗಳನ್ನು ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದೆ. ಹಿಂದೆ ಎನ್‌ಸಿಯ ಪ್ರತಿಸ್ಪರ್ಧಿಯಾಗಿದ್ದ ಮೆಹಬೂಬಾ ಮುಫ್ತಿ ಅವರ ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷವೂ (ಪಿಡಿಪಿ) ಸೇರಿದಂತೆ ಏಳು ಪಕ್ಷಗಳನ್ನು ಮೈತ್ರಿಕೂಟ ಒಳಗೊಂಡಿದೆ. 75 ಸ್ಥಾನಗಳನ್ನು ಗಳಿಸಿರುವ ಬಿಜೆಪಿ ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಬೆಳವಣಿಗೆಗಳು ಕಣಿವೆ ನಾಡಿನ ರಾಜಕೀಯ ಸಮೀಕರಣಗಳನ್ನು ಬೇರೆಯದೇ ರೀತಿಯಲ್ಲಿ ವಿಶ್ಲೇಷಿಸುವಂತೆ ಮಾಡಿವೆ.

ಈ ಫಲಿತಾಂಶವುಮೂರು ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ. ಒಂದು, ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರಾಜ್ಯವನ್ನು ವಿಭಜಿಸಿ, ಜಮ್ಮು–ಕಾಶ್ಮೀರ ಮತ್ತು ಲಡಾಖ್‌ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಿದೆ. ಇದಾದ ವರ್ಷದ ತರುವಾಯ ನಡೆದ ಮೊದಲ ಚುನಾವಣೆ ಇದು. ಎರಡು, ಇಂತಹದ್ದೊಂದು ಮಹತ್ವದ ಕ್ರಮವನ್ನು ಜಾರಿಗೊಳಿಸಿದ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿದ ಮೈತ್ರಿಕೂಟವು ಅದನ್ನೇ ಪ್ರಮುಖ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡಿತ್ತು.

ADVERTISEMENT

ರಾಜ್ಯದ ದುಃಸ್ಥಿತಿಗೆ ವಿಶೇಷ ಸ್ಥಾನಮಾನವೇ ಕಾರಣ, ಇದೊಂದು ‘ಚಾರಿತ್ರಿಕ ಪ್ರಮಾದ’ ಎಂದು ಬಣ್ಣಿಸಿದ್ದ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿಯ ಪ್ರತಿಪಾದನೆಯೂ ಈ ಮೂಲಕ ಸತ್ವಪರೀಕ್ಷೆಗೆ ಒಳಗಾಗಿತ್ತು. ಈ ಫಲಿತಾಂಶವನ್ನು ‘ಕೇಂದ್ರ ಸರ್ಕಾರ ಇಲ್ಲಿ ಕೈಗೊಂಡ ಅಪ್ರಜಾತಾಂತ್ರಿಕ ಕ್ರಮಗಳ ವಿರುದ್ಧದ ಜನಾದೇಶ’ ಎಂದೇ ಮೈತ್ರಿಕೂಟ ವ್ಯಾಖ್ಯಾನಿಸಿದೆ. ಆದರೆ, ಈ ಪಕ್ಷಗಳು ಈವರೆಗಿನ ತಮ್ಮ ರಾಜಕಾರಣವನ್ನು ಕಾಶ್ಮೀರ ಕೇಂದ್ರಿತವಾಗಿಸಿದ್ದಕ್ಕೆ ಜಮ್ಮು ವಲಯದಲ್ಲಿ ತಕ್ಕ ಬೆಲೆಯನ್ನೇ ತೆತ್ತಿವೆ. ಅಲ್ಲಿನ ಜನರಲ್ಲಿ ಹರಳುಗಟ್ಟಿದ್ದ ಅಸಮಾಧಾನವು ಈ ಭಾಗದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿಗೆ ತಂದುಕೊಟ್ಟಿದೆ. ಜೊತೆಗೆ ಮುಸ್ಲಿಂ ಬಾಹುಳ್ಯದ ಕಾಶ್ಮೀರ ಪ್ರದೇಶದಲ್ಲೂ ಬಿಜೆಪಿ ಮೂರು ಸ್ಥಾನಗಳಲ್ಲಿ ಗೆದ್ದಿರುವುದು, ನಾಡಿನ ಅಭಿವೃದ್ಧಿ ಚಿತ್ರಣವನ್ನೇ ಬದಲಿಸುವುದಾಗಿ ಹೇಳಿರುವ ಕೇಂದ್ರ ಸರ್ಕಾರದ ಹೊಣೆಗಾರಿಕೆಯನ್ನು ಹೆಚ್ಚಿಸಿದೆ.

ಆದರೆ ಇಂತಹದ್ದೊಂದು ಬಲವಾದ ಮೈತ್ರಿಕೂಟವನ್ನು ನಿರೀಕ್ಷಿಸಿರದಿದ್ದ ಬಿಜೆಪಿ ವರಿಷ್ಠರು, ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿಯ ನಾಯಕರು ಮೈತ್ರಿಕೂಟದ ಸದಸ್ಯರನ್ನು ‘ದೇಶದ್ರೋಹಿಗಳು’ ಎಂದು ಜರೆದಿದ್ದರು. ಆದರೆ, ಇದರಿಂದ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಫಲ ದೊರೆತಂತೆ ಕಾಣುವುದಿಲ್ಲ. ಮೈತ್ರಿಕೂಟವೇ ಮೇಲುಗೈ ಸಾಧಿಸಿದೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಅಂತಿಮವಾಗಿ ಪ್ರಜಾತಂತ್ರದ ಮೂಲ ಆಶಯವು ನಾಡಿನ ಪ್ರಗತಿ ಮತ್ತು ಆ ಮೂಲಕ ಅಲ್ಲಿನ ಜನರ ಹಿತರಕ್ಷಣೆ.

ಈ ಕಾರಣಕ್ಕೂ ಮಹತ್ವ ಪಡೆದಿದ್ದ ಈ ಚುನಾವಣೆಯು ದಶಕಗಳಿಂದಲೂ ಕ್ಷೋಭೆಗೆ ಒಳಗಾಗಿರುವ ನಾಡಿನಲ್ಲಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಹೆಬ್ಬಾಗಿಲನ್ನು ತೆರೆಯಲಿ. ಜಮ್ಮು– ಕಾಶ್ಮೀರವು ಕೇಂದ್ರಾಡಳಿತ ಪ್ರದೇಶವಾದ ಬಳಿಕ ನಡೆದ ಈ ಚುನಾವಣೆಯು ಜನತಂತ್ರ ಪ್ರಕ್ರಿಯೆಯ ಪುನರಾರಂಭದ ಮೊದಲ ಹೆಜ್ಜೆ. ಜನತಂತ್ರ ಪ್ರಕ್ರಿಯೆಗೆ ಈ ನಾಡು ಹಸನಾಗಿದೆ ಎಂಬುದರ ಸೂಚನೆಯನ್ನು ಈ ಚುನಾವಣೆಯು ನೀಡಿದೆ. ಜಮ್ಮು–ಕಾಶ್ಮೀರದ ವಿಧಾನಸಭೆಗೂ ಶೀಘ್ರವೇ ಚುನಾವಣೆ ನಡೆಯಲು ಇದು ಪ್ರೇರಣೆಯಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.