ADVERTISEMENT

ಸಂಪಾದಕೀಯ | ಜೆಎನ್‌ಯು: ದಾಂದಲೆ ನಡೆಸಿದ ಗೂಂಡಾ ಪಡೆಗೆ ಶಿಕ್ಷೆ ಆಗಲಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 4:13 IST
Last Updated 7 ಜನವರಿ 2020, 4:13 IST
   

ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯ ಎನಿಸಿಕೊಂಡಿರುವ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಕ್ಯಾಂಪಸ್‌ಗೆ ಮಾರಕಾಸ್ತ್ರಗಳೊಂದಿಗೆ ನುಗ್ಗಿದ ಮುಸುಕುಧಾರಿ ಗೂಂಡಾ ಪಡೆ, ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರನ್ನು ಥಳಿಸಿ ದಾಂದಲೆ ನಡೆಸಿರುವ ಆಘಾತಕಾರಿ ಘಟನೆ ತೀವ್ರ ಖಂಡನಾರ್ಹ.

ಈ ಹಲ್ಲೆಯಲ್ಲಿ 35ಕ್ಕೂ ಹೆಚ್ಚು ವಿದ್ಯಾರ್ಥಿ, ಪ್ರಾಧ್ಯಾಪಕರು ಗಾಯಗೊಂಡಿದ್ದಾರೆ. 50ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಗೂಂಡಾ ಪಡೆಯು ಹೆಣ್ಣುಮಕ್ಕಳ ಹಾಸ್ಟೆಲ್‌ಗಳಿಗೂ ನುಗ್ಗಿ ವಿದ್ಯಾರ್ಥಿನಿಯರನ್ನು ಥಳಿಸಿದೆ. ಕ್ಯಾಂಪಸ್‌ಗೆ ಪೊಲೀಸ್‌ ಕಾವಲು ಇದ್ದರೂ ಈ ರೀತಿ ಗೂಂಡಾಗಳು ನುಗ್ಗಿ ದಾಂದಲೆ ನಡೆಸಿರುವುದನ್ನು ನೋಡಿದರೆ, ಇದೊಂದು ಪೂರ್ವಯೋಜಿತ ಕೃತ್ಯ ಎನ್ನಬಹುದು.

ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ, ಎಡಪಂಥೀಯ ವಿಚಾರಧಾರೆಯ ಆಯಿಷಿ ಘೋಷ್‌ ಅವರ ತಲೆಗೆ ಕಬ್ಬಿಣದ ಸರಳಿನಿಂದ ಹೊಡೆದಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಲ್ಲೆ ಮತ್ತು ದಾಂದಲೆಗೆ ಕಾರಣ ಯಾರು ಎನ್ನುವ ಕುರಿತು ರಾಜಕೀಯ ಕೆಸರೆರಚಾಟ ಈಗಾಗಲೇ ಶುರುವಾಗಿದೆ. ‘ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯ ಸದಸ್ಯರು ಮುಸುಕುಧಾರಿ ಗೂಂಡಾಗಳ ಜೊತೆ ಸೇರಿ ಈ ಹಲ್ಲೆ ನಡೆಸಿದ್ದಾರೆ’ ಎಂದು ಆಯಿಷಿ ಘೋಷ್‌ ನೇರ ಆರೋಪ ಮಾಡಿದ್ದಾರೆ.

ADVERTISEMENT

ಗಾಯಗೊಂಡವರಲ್ಲಿ ಹೆಚ್ಚಿನವರು ಎಡಪಂಥೀಯ ವಿಚಾರಧಾರೆ ಬಗ್ಗೆ ಒಲವುಳ್ಳ ವಿದ್ಯಾರ್ಥಿಗಳು ಎಂಬುದು ಆಯಿಷಿ ಅವರ ಆರೋಪವನ್ನು ಪುಷ್ಟೀಕರಿಸುತ್ತದೆ.

ಈ ಆರೋಪಗಳನ್ನು ಅಲ್ಲಗಳೆದಿರುವ ಎಬಿವಿಪಿ, ‘ಎಡಪಂಥೀಯರೇ ಗೂಂಡಾಗಳನ್ನು ಕರೆತಂದು ಹಲ್ಲೆ ನಡೆಸಿದ್ದಾರೆ’ ಎಂದು ಪ್ರತ್ಯಾರೋಪ ಮಾಡಿದೆ.

ಆರೋಪ– ಪ್ರತ್ಯಾರೋಪಗಳೇನೇ ಇದ್ದರೂ, ಕ್ಯಾಂಪಸ್‌ಗೆ ಹೊರಗಿನ ಗೂಂಡಾಗಳು ನುಗ್ಗಿ ಹಿಂಸಾಕೃತ್ಯ ಎಸಗಿರುವುದು ಅತ್ಯಂತ ಹೇಯ ಕೃತ್ಯ. ದೇಶಕ್ಕೆ ಹಲವಾರು ಪ್ರತಿಭಾವಂತರನ್ನು ಕೊಟ್ಟಿರುವ ಜೆಎನ್‌ಯು, ಆರಂಭದಿಂದಲೂ ಪ್ರಖರ ಬೌದ್ಧಿಕ ವಾಗ್ವಾದಕ್ಕೆ ಹೆಸರುವಾಸಿಯಾದ ಸಂಸ್ಥೆ. ಇಲ್ಲಿ ಕಲಿತವರು ಸಂಸದ, ಸಚಿವ, ಅರ್ಥಶಾಸ್ತ್ರಜ್ಞ, ಬಹುರಾಷ್ಟ್ರೀಯ ಕಂಪನಿಗಳ ಮುಖ್ಯಸ್ಥರಾಗಿ ದೇಶ– ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ, ನೊಬೆಲ್‌ ಪ್ರಶಸ್ತಿ ಸಹಿತ ಹಲವು ಪ್ರತಿಷ್ಠಿತ ಪುರಸ್ಕಾರಗಳನ್ನು ಪಡೆದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಈಗ ನಡೆದಿರುವ ಗೂಂಡಾ ದಾಳಿಯು ಸಂಸ್ಥೆಯ ಪ್ರತಿಷ್ಠೆಗೆ ಮಸಿ ಬಳಿದಿದೆ. ರಾಜಕೀಯ ಮತಭೇದಗಳನ್ನು ಬದಿಗಿಟ್ಟು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾದ ಕೃತ್ಯವಿದು.

ಜೆಎನ್‌ಯು ಕ್ಯಾಂಪಸ್‌ನ ಗೂಂಡಾ ದಾಳಿಯು ಪೊಲೀಸರ ವೈಫಲ್ಯದ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ. ಹಾಸ್ಟೆಲ್‌ ಶುಲ್ಕ ಏರಿಕೆ, ಪೌರತ್ವ (ತಿದ್ದುಪಡಿ) ಕಾಯ್ದೆ ಮುಂತಾದ ವಿಷಯಗಳ ವಿರುದ್ಧ ವಿದ್ಯಾರ್ಥಿಗಳು ದನಿ ಎತ್ತಿದ್ದಾರೆ. ಪರೀಕ್ಷಾ ಶುಲ್ಕ ಪಾವತಿಸುವ ವಿಷಯದಲ್ಲಿ ಎಡಪಂಥೀಯ ಮತ್ತು ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳ ನಡುವೆ ಶನಿವಾರ ಜಟಾಪಟಿಯೂ ನಡೆದಿದೆ. ಪೊಲೀಸರು ಸೂಕ್ತ ಬಂದೋಬಸ್ತ್ ಏರ್ಪಡಿಸದೆ ನಿರ್ಲಕ್ಷ್ಯ ತೋರಿರುವುದು ಸ್ಪಷ್ಟ.

ಭಾನುವಾರ ಮಾರಕಾಸ್ತ್ರಗಳೊಂದಿಗೆ ಗೂಂಡಾಗಳ ಗುಂಪು ಒಳಗೆ ಬರುವಾಗ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಏನು ಮಾಡುತ್ತಿದ್ದರು? ಕ್ಯಾಂಪಸ್‌ ಒಳಗೆ ಮುಸುಕುಧಾರಿಗಳು ದಾಂದಲೆ ನಡೆಸಿರುವ ವಿಡಿಯೊಗಳು ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗಿವೆ. ಕೆಲವು ವಿಡಿಯೊಗಳಲ್ಲಿ ಯಾವುದೇ ಮುಸುಕು ಇಲ್ಲದೆ ಕ್ಯಾಂಪಸ್‌ ಒಳಗೆ ಪ್ರವೇಶಿಸುತ್ತಿರುವ ಹೊರಗಿನ ವ್ಯಕ್ತಿಗಳ ಚಿತ್ರಗಳೂ ಇವೆ. ಹಲ್ಲೆ ತಡೆಯುವಲ್ಲಿ ಮತ್ತು ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಲ್ಲಿ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಗಮನಿಸಿದರೆ, ಪೊಲೀಸರೂ ಗೂಂಡಾಪಡೆ ಜೊತೆ ಕೈಜೋಡಿಸಿದ್ದಾರೆಯೇ ಎನ್ನುವ ಅನುಮಾನ ಮೂಡುತ್ತದೆ.

ದೇಶದ ರಾಜಧಾನಿ ದೆಹಲಿಯಲ್ಲೇ ಪೊಲೀಸರ ಕಾರ್ಯದಕ್ಷತೆ ಈ ಪರಿ ಶೋಚನೀಯವಾಗಿರುವುದು ದುರದೃಷ್ಟಕರ. ದೆಹಲಿಯ ಪೊಲೀಸ್‌ ಆಡಳಿತವು ಕೇಂದ್ರ ಗೃಹ ಇಲಾಖೆಯ ಅಧೀನಕ್ಕೆ ಒಳಪಡುತ್ತದೆ. ಕೇಂದ್ರ ಗೃಹ ಸಚಿವರು ಘಟನೆಯ ಬಗ್ಗೆ ಪೊಲೀಸರಿಂದ ವರದಿ ಕೇಳಿದರಷ್ಟೇ ಸಾಲದು, ಹಿಂಸೆ ನಡೆಸಿದ ಗೂಂಡಾಪಡೆಯನ್ನು ತಕ್ಷಣ ಬಂಧಿಸಿ ಮುಂದಿನ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದಲ್ಲಿ ಹೊಣೆಗೇಡಿತನ ತೋರಿದ ಪೊಲೀಸರ ವಿರುದ್ಧವೂ ಕಠಿಣ ಕ್ರಮ ಜರುಗಿಸಬೇಕು. ಭಾರಿ ಪೊಲೀಸ್‌ ಬಂದೋಬಸ್ತ್‌ ಇರುವ ರಾಜಧಾನಿ ದೆಹಲಿಯಲ್ಲೇ ಕಾನೂನು ಮತ್ತು ಸುವ್ಯವಸ್ಥೆ ಇಷ್ಟು ಹದಗೆಟ್ಟರೆ ಉಳಿದ ನಗರಗಳ ಪಾಡೇನು? ರಾಜಕೀಯ ಪಕ್ಷಗಳು ಈ ವಿದ್ಯಮಾನವನ್ನು ಕೆಸರೆರಚಾಟಕ್ಕೆ ಬಳಸಿಕೊಳ್ಳುವುದನ್ನು ನಿಲ್ಲಿಸಿ, ವಿದ್ಯಾರ್ಥಿಗಳಲ್ಲಿ ಭದ್ರತೆಯ ಭಾವ ಮೂಡಿಸಲು ಶ್ರಮಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.