ADVERTISEMENT

ಸಂಪಾದಕೀಯ: ‘ಕಲ್ಯಾಣ’ಕ್ಕೆ ಪ್ರತ್ಯೇಕ ಸಚಿವಾಲಯ; ಜನರ ಆಶೋತ್ತರಗಳಿಗೆ ಸ್ಪಂದಿಸಲಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 19:30 IST
Last Updated 18 ಸೆಪ್ಟೆಂಬರ್ 2025, 19:30 IST
ಸಂಪಾದಕೀಯ
ಸಂಪಾದಕೀಯ   

ಕಲ್ಯಾಣ ಕರ್ನಾಟಕದಲ್ಲಿ ರಾಜ್ಯ ಸರ್ಕಾರ ‘ಪ್ರಗತಿಯ ಹೊಳೆ’ ಹರಿಸುತ್ತಿದೆ ಎಂದು ಹೇಳಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಸಚಿವಾಲಯ’ ಸ್ಥಾಪನೆಗೆ ವಾರದೊಳಗಾಗಿ ಅಧಿಸೂಚನೆ ಹೊರಡಿಸುವುದಾಗಿ ಹೇಳಿದ್ದಾರೆ. ‘ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನ’ದ ಅಂಗವಾಗಿ ಕಲಬುರಗಿಯಲ್ಲಿ ನಡೆದ ‘ಕಲ್ಯಾಣ ಕರ್ನಾಟಕ ಉತ್ಸವ’ದಲ್ಲಿ ಮಾತನಾಡಿರುವ ಅವರು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಆಗದ ಹೊರತು ಸಂಪೂರ್ಣ ರಾಜ್ಯದ ಅಭಿವೃದ್ಧಿ ಅಸಾಧ್ಯ ಎಂದೂ ಹೇಳಿದ್ದಾರೆ. ಈ ಭಾಗದ ಜನರ ತಲಾದಾಯ ಹೆಚ್ಚಿಸುವುದರೊಂದಿಗೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಮೂಲ ಸೌಕರ್ಯ ಸುಧಾರಣೆ ಸೇರಿ ಸರ್ವಾಂಗೀಣ ಅಭಿವೃದ್ಧಿಯೇ ಸರ್ಕಾರದ ಗುರಿ ಎಂದೂ ಮುಖ್ಯಮಂತ್ರಿ ಹೇಳಿರುವುದನ್ನು ನೋಡಿದರೆ, ‘ಕಲ್ಯಾಣ ಕರ್ನಾಟಕ’ದ ಭಾಗ್ಯದ ದಿನಗಳು ಹತ್ತಿರದಲ್ಲೇ ಇವೆ ಎಂದು ಭಾವಿಸಬಹುದಾಗಿದೆ. ಆದರೆ, ಪ್ರತಿ ವರ್ಷದ ಹೈದರಾಬಾದ್ ವಿಮೋಚನಾ ದಿನದ ಆಸುಪಾಸಿನಲ್ಲಿ ಆಯಾ ಕಾಲಘಟ್ಟದ ಮುಖ್ಯಮಂತ್ರಿಗಳು ಇದೇ ಬಗೆಯ ಮಾತುಗಳನ್ನಾಡಿರುವುದು ಹಾಗೂ ಅವುಗಳ ಪರಿಣಾಮವನ್ನು ಗಮನಿಸಿದರೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಮಾತುಗಳ ಹಿಂದೆ ಇಚ್ಛಾಶಕ್ತಿಯ ಬದಲು ಔಪಚಾರಿಕತೆಯಷ್ಟೇ ಇರುವುದು ಸ್ಪಷ್ಟವಾಗುತ್ತದೆ. 1948ರ ಸೆಪ್ಟೆಂಬರ್ 17ರಂದು ಭಾರತ ಒಕ್ಕೂಟಕ್ಕೆ ಸೇರ್ಪಡೆಯಾದ ದಿನದಿಂದ ಇಂದಿನವರೆಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೈದರಾಬಾದ್‌ ಕರ್ನಾಟಕ  ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ದೊರೆತಿಲ್ಲ ಎನ್ನುವ ದೂರುಗಳು ಕೇಳಿಬರುತ್ತಲೇ ಇವೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹಿಂದುಳಿದಿರುವಿಕೆ, ಬಾಲ್ಯವಿವಾಹಗಳ ಹೆಚ್ಚಳ, ಕೃಷಿ ವಲಯದ ಸಂಕಷ್ಟ, ವ್ಯಾಪಕ ಗುಳೆ ಸೇರಿದಂತೆ ಹಲವು ಸಮಸ್ಯೆಗಳಿಂದ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ತತ್ತರಿಸು ತ್ತಿವೆ. ದೇಶದ ಎರಡನೇ ಅತಿ ಶುಷ್ಕ ಪ್ರದೇಶ ಎಂದು ಗುರ್ತಿಸಲಾಗಿರುವ ಈ ಭಾಗವನ್ನು ಸುಧಾರಿಸುವ ಪ್ರಯತ್ನಗಳು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ.

ಪ್ರಾದೇಶಿಕ ಅಸಮತೋಲನದ ನಿವಾರಣೆಗಾಗಿ ವಿವಿಧ ಸರ್ಕಾರಗಳ ಅವಧಿಯಲ್ಲಿ ಹಲವು ಯೋಜನೆಗಳು ಜಾರಿಗೆ ಬಂದಿವೆ. ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯಂತೆ ‘ವಿಶೇಷ ಅಭಿವೃದ್ಧಿ ಯೋಜನೆ’ ಜಾರಿಗೊಳಿಸಲಾಗಿದೆ. ಸಂವಿಧಾನದ ‘371 ಜೆ’ ಕಲಂನಡಿ ‘ಕಲ್ಯಾಣ ಕರ್ನಾಟಕ’ಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದ್ದು, ‘ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ ರೂಪುಗೊಂಡಿದೆ. ಪ್ರಸ್ತುತ ‘ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ’ ಎಂದು ಕರೆಯಲಾಗುವ ಈ ಮಂಡಳಿಗೆ, 2013ರಿಂದ ಇದುವರೆಗೆ ಒಟ್ಟು ₹24,780 ಕೋಟಿ ಅನುದಾನ ಹಂಚಿಕೆ ಮಾಡಲಾಗಿದ್ದು, ₹14,000 ಕೋಟಿ ವೆಚ್ಚ ಮಾಡಲಾಗಿದೆ. ಕಲಬುರಗಿಯಲ್ಲಿ ಕಳೆದ ವರ್ಷ ನಡೆದ ಸಚಿವ ಸಂಪುಟದ ಸಭೆಯಲ್ಲಿ ₹11,770 ಕೋಟಿ ಮೊತ್ತದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿತ್ತು. ಈವರೆಗಿನ ಯೋಜನೆಗಳೆಲ್ಲ ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ಬಂದಿದ್ದಲ್ಲಿ ಕಲ್ಯಾಣ ಕರ್ನಾಟಕ ನಂದನದ ತುಣುಕಾಗಿ ಬದಲಾಗುತ್ತಿತ್ತು ಹಾಗೂ ದೇಶಕ್ಕೇ ಮಾದರಿ ಆಗುತ್ತಿತ್ತು. ರಾಜಕೀಯ ಪ್ರಾತಿನಿಧ್ಯದ ಮಾನದಂಡದಿಂದ ನೋಡಿದರೂ, ಈ ಭಾಗದ ಇಬ್ಬರು ನಾಯಕರು ಮುಖ್ಯಮಂತ್ರಿಗಳಾಗಿದ್ದಾರೆ.  ಹಲವು ನಾಯಕರು ಕೇಂದ್ರ ರಾಜಕಾರಣದಲ್ಲೂ ಅವಕಾಶ ಪಡೆದಿದ್ದಾರೆ. ಇದೆಲ್ಲದರಿಂದ ಆಗಿರುವುದಾದರೂ ಏನು? ನಗರ ಪ್ರದೇಶಗಳಲ್ಲಿನ ಅಲ್ಪಸ್ವಲ್ಪ ಅಭಿವೃದ್ಧಿಯನ್ನು ಹೊರತುಪಡಿಸಿದರೆ ಗ್ರಾಮೀಣ ಪ್ರದೇಶಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿಯೇ ಇವೆ. ಕುಡಿಯುವ ಶುದ್ಧನೀರು, ಅಗತ್ಯ ಸೌಲಭ್ಯಗಳನ್ನು ಒಳಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗುಣಮಟ್ಟದ ಸರ್ಕಾರಿ ಶಾಲೆಗಳು ಕಲ್ಯಾಣ ಕರ್ನಾಟಕದ ಗ್ರಾಮೀಣರಿಗೆ ಐಷಾರಾಮಿಯಾಗಿಯೇ ಉಳಿದಿವೆ. 

ಆಕರ್ಷಕ ಹಾಗೂ ಸುಂದರ ಹೆಸರುಗಳಿಂದ ಅನಭಿವೃದ್ಧಿಯನ್ನು ಮರೆಮಾಚುವುದು ಸಾಧ್ಯವಿಲ್ಲ. ‘ಕಲ್ಯಾಣ ಕರ್ನಾಟಕ’ದಲ್ಲಿನ ಕಲ್ಯಾಣ ಎನ್ನುವ ವಿಶೇಷಣ ಆ ಭಾಗದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಪರಂಪರೆಯ ಔನ್ನತ್ಯವನ್ನು ಸೂಚಿಸುತ್ತದೆ; ಅಭಿವೃದ್ಧಿಗೆ ಸಂಬಂಧಿಸಿದಂತೆ ವ್ಯಂಗ್ಯ ಹಾಗೂ ವಿಷಾದದ ಧ್ವನಿಯನ್ನೂ ಒಳಗೊಂಡಿದೆ. ಪ್ರದೇಶವೊಂದರ ಅಭಿವೃದ್ಧಿಗೆ ಬೇಕಿರುವುದು ರಾಜಕೀಯ ಇಚ್ಛಾಶಕ್ತಿ ಹಾಗೂ ಪ್ರಾಮಾಣಿಕತೆ. ಇದೀಗ, ಕಲ್ಯಾಣ ಕರ್ನಾಟಕಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಕಟಿಸಿರುವ ‘ಪ್ರತ್ಯೇಕ ಸಚಿವಾಲಯ’ ಕಾಗದದ ಮೇಲಿನ ಮತ್ತೊಂದು ಸಾಧನೆಯಷ್ಟೇ ಆಗಬಾರದು. ಈ ಸಚಿವಾಲಯ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಕಾಲಮಿತಿಯೊಳಗೆ ಜಾರಿಗೊಳ್ಳುವಂತೆ ಮಾಡುವ ಬದ್ಧತೆ ಪ್ರದರ್ಶಿಸಬೇಕು; ಆ ಭಾಗದ ಜನರ ಆಶೋತ್ತರಗಳಿಗೆ ತಾಯಿಕರುಳಿನಿಂದ ಸ್ಪಂದಿಸಬೇಕು. ಇದರ ಜೊತೆಗೆ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹಮ್ಮಿಕೊಂಡ ಯೋಜನೆಗಳ ಫಲಶ್ರುತಿಯ ಬಗ್ಗೆ ಗಂಭೀರ ಪರಾಮರ್ಶೆ ನಡೆಯಬೇಕು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.