ADVERTISEMENT

ಕನ್ನಡ: ಭಾವುಕತೆ ಸಾಕು ಆಧುನಿಕ ಚಿಂತನೆ ಬೇಕು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 20:35 IST
Last Updated 31 ಅಕ್ಟೋಬರ್ 2018, 20:35 IST
   

ಕರ್ನಾಟಕ ರಾಜ್ಯೋತ್ಸವದ ಸಂದರ್ಭ ಕನ್ನಡದ ಇಂದು ಮತ್ತು ನಾಳೆಗಳನ್ನು ಅವಲೋಕಿಸುವ ದೃಷ್ಟಿಯಿಂದ ಮಹತ್ವವಾದುದು. ಆದರೆ, ಕನ್ನಡದ ಕುರಿತ ನಮ್ಮ ಬಹುತೇಕ ಚಿಂತನೆಗಳು ಭಾವನಾತ್ಮಕ ನೆಲೆಯಲ್ಲಿಯಷ್ಟೇ ಉಸಿರಾಡುತ್ತಿರುತ್ತವೆ. ಆಧುನಿಕ ಸಂದರ್ಭಕ್ಕೆ ತಕ್ಕಂತೆ ಕನ್ನಡವನ್ನು ಸಜ್ಜುಗೊಳಿಸುವ ಕೆಲಸಗಳೇನಾದರೂ ನಡೆದಿವೆಯೇ ಎಂದು ನೋಡಿದರೆ ಆಶಾದಾಯಕ ಸಂಗತಿಗಳೇನೂ ಕಾಣಿಸುವುದಿಲ್ಲ.

ಕಳೆದ ರಾಜ್ಯೋತ್ಸವದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಬದಲಾಗುತ್ತಿರುವ ಕಾಲಮಾನ ಮತ್ತು ಕನ್ನಡಿಗರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಜನಪರವಾದ ಭಾಷಾನೀತಿಯೊಂದು ರೂಪುಗೊಳ್ಳಬೇಕಾದ ಅಗತ್ಯವಿದೆ’ ಎಂದು ಅಭಿ‍ಪ್ರಾಯಪಟ್ಟಿದ್ದರು. ಇಷ್ಟಕ್ಕೂ ಜನಪರವಾದ ಭಾಷಾನೀತಿ ಎಂದರೇನು? ಅದು ಆಯಾ ನೆಲದ ಭಾಷಿಕರ ಪ್ರಾಥಮಿಕ ಅಗತ್ಯಗಳನ್ನು ಪೂರೈಸುವ ಹಾಗೂ ಒಟ್ಟಾರೆ ನಾಡುನುಡಿಯ ಬೆಳವಣಿಗೆಗೆ ಪೂರಕವಾದ ಒಂದು ನೀತಿ. ಈ ಹಿನ್ನೆಲೆಯಲ್ಲಿಯೇ ಕನ್ನಡ ಶಾಲೆಗಳ ಸ್ಥಿತಿಗತಿಯನ್ನೂ, ಆಧುನಿಕ ಸಂದರ್ಭಕ್ಕೆ ಕನ್ನಡವನ್ನು ಒಗ್ಗಿಸುವ ನಿಟ್ಟಿನಲ್ಲಿ ನಡೆದಿರಬಹುದಾದ ಪ್ರಯತ್ನಗಳನ್ನೂ ಪರಿಶೀಲಿಸಬೇಕು.

ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವ ಸರ್ಕಾರಿ ಶಾಲೆಗಳ ಸುಧಾರಣೆಗೆ ಸಂಬಂಧಿಸಿದಂತೆ ಸರ್ಕಾರ ದಿಟ್ಟ ನಿರ್ಧಾರವೊಂದನ್ನು ಕೈಗೊಳ್ಳಲು ಪ್ರಯತ್ನಿಸಿಯೇ ಇಲ್ಲ. ಕೆಲವು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ತರಗತಿಗಳನ್ನು ಆರಂಭಿಸುವ ಚಿಂತನೆಯನ್ನು ತಮ್ಮ ಬಜೆಟ್‌ ಭಾಷಣದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಸ್ತಾಪಿಸಿದ್ದರು. ಆದರೆ, ಇದರ ಸಾಧಕಬಾಧಕಗಳ ಬಗ್ಗೆ ಸರ್ಕಾರದ ಬಳಿ ನಿರ್ದಿಷ್ಟ ಅಂಕಿಅಂಶಗಳೇನೂ ಇದ್ದಂತಿಲ್ಲ. ಪಳೆಯುಳಿಕೆ ರೂಪದಲ್ಲಿಯೇ ಸರ್ಕಾರಿ ಶಾಲೆಗಳನ್ನು ಉಳಿಸಿಕೊಂಡು, ಅಲ್ಲಿ ಇಂಗ್ಲಿಷ್‌ ಪ್ರದರ್ಶನಗೊಂಬೆಯನ್ನು ತೋರುವುದರಿಂದ ಯಾವ ಉಪಯೋಗವೂ ಇಲ್ಲ. ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕೆನ್ನುವ ಸರ್ಕಾರದ ಆದೇಶ ಕೂಡ ಈವರೆಗೆ ಪೂರ್ಣರೂಪದಲ್ಲಿ ಈಡೇರಿಲ್ಲ ಎನ್ನುವುದು ಕೂಡ ಆಡಳಿತಯಂತ್ರದ ಇಚ್ಛಾಶಕ್ತಿಯ ಕೊರತೆಯನ್ನೇ ಸೂಚಿಸುವಂತಿದೆ.

ADVERTISEMENT

ಕನ್ನಡವನ್ನು ಜಾಗತಿಕ ಮಟ್ಟದಲ್ಲಿ ಯಾವೆಲ್ಲ ರೂಪದಲ್ಲಿ ಬಿಂಬಿಸಬೇಕು ಎನ್ನುವ ನಿಟ್ಟಿನಲ್ಲಿ ಕ್ರಿಯಾಯೋಜನೆಯೊಂದನ್ನು ಹೊಂದುವುದು ಇಂದಿನ ತುರ್ತು. ವಿಶ್ವದ ಅನೇಕ ಭಾಗಗಳಲ್ಲಿ ಕನ್ನಡದ ಕುರಿತ ಅರಿವಿರಲಿ, ಕನ್ನಡದ ಹೆಸರೇ ತಿಳಿದಿಲ್ಲ. ಇಂಥ ಸಂದರ್ಭಗಳಲ್ಲಿ ವಿಶ್ವದ ಪ್ರತಿಷ್ಠಿತ ಯೂನಿವರ್ಸಿಟಿಗಳಲ್ಲಿ ಕನ್ನಡದ ಕಲಿಕೆ ಹಾಗೂ ಸಂಶೋಧನೆಗೆ ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಬೇಕಾಗಿದೆ. ಕನ್ನಡ ಕಟ್ಟುವ ನಿಟ್ಟಿನಲ್ಲಿ ಆಗಬೇಕಾದ ಮತ್ತೊಂದು ಮುಖ್ಯ ಕೆಲಸ, ಅಭಿಜಾತ ಕೃತಿಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ವಿಶ್ವದೆಲ್ಲೆಡೆ ವಿತರಿಸುವುದು.

ಇವುಗಳ ಜೊತೆಗೆ ಕನ್ನಡೇತರರಿಗೆ ಕನ್ನಡ ಕಲಿಸುವ ನಿಟ್ಟಿನಲ್ಲಿ ವೈಜ್ಞಾನಿಕ ನೆಲೆಗಟ್ಟಿನ ಪಠ್ಯವೊಂದನ್ನು ರೂಪಿಸಬೇಕಾಗಿದೆ. ‘ಎಷ್ಟೆಲ್ಲ ಮಾತು, ಕೋಟಿಗಟ್ಟಲೆ ಹಣದ ಖರ್ಚಿನ ನಂತರವೂ ಕನ್ನಡೇತರರಿಗೆ ಕನ್ನಡ ಬೋಧಿಸುವ ಒಳ್ಳೆಯ ಪಠ್ಯವನ್ನು ರೂಪಿಸುವುದು ಸಾಧ್ಯವಾಗಿಲ್ಲ. ಆಧುನಿಕ ರೀತಿಯಲ್ಲಿ, ಆಡುಕನ್ನಡವನ್ನೂ ಶಿಷ್ಟ ಕನ್ನಡವನ್ನೂ ವ್ಯಾವಹಾರಿಕವಾಗಿ ಪರಿಚಯಿಸುವ ಪಠ್ಯ ಸಿದ್ಧಪಡಿಸಬೇಕಿದೆ’ ಎನ್ನುವ ಅಮೆರಿಕದ ನ್ಯೂಯಾರ್ಕ್‌ನಲ್ಲಿರುನ ‘ಸ್ಟೋನಿ ಬ್ರೂಕ್‌ ಯೂನಿವರ್ಸಿಟಿ’ಯ ‘ಸೆಂಟರ್‌ ಫಾರ್‌ ಇಂಡಿಯಾ ಸ್ಟಡೀಸ್‌’ ನಿರ್ದೇಶಕರಾಗಿರುವ ಪ್ರೊ. ಎಸ್‌.ಎನ್. ಶ್ರೀಧರ್ ಅವರ ಮಾತುಗಳನ್ನು ಗಮನಿಸಬೇಕಾಗಿದೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದ ಅನೇಕ ಸಂಶೋಧನೆಗಳು ನಡೆಯುತ್ತಿವೆ. ಆದರೆ, ಈ ಸಂಶೋಧನೆಗಳ ವಿವರಗಳು ಮಾತ್ರ ಇಂದಿಗೂ ಸುಲಭಲಭ್ಯವಿಲ್ಲ.

ತಮ್ಮಲ್ಲಿ ನಡೆದಿರುವ ಸಂಶೋಧನೆಗಳ ಮಾಹಿತಿಯನ್ನು ತಂತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಪಡಿಸುವುದು ವಿಶ್ವವಿದ್ಯಾಲಯಗಳಿಗೆ ಕಷ್ಟದ ಸಂಗತಿಯಲ್ಲ. ಕನ್ನಡ ಲೇಖಕರ ವಿಳಾಸಗಳನ್ನು ಸಂಗ್ರಹಿಸಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಸರ್ಕಾರಿ ಸಂಸ್ಥೆಗಳು ತಮ್ಮಲ್ಲಿನ ಮಾಹಿತಿಯನ್ನು ಅಂತರ್ಜಾಲದ ಮೂಲಕ ಆಸಕ್ತರಿಗೆ ತಲುಪಿಸುವ ಉತ್ಸಾಹ ತೋರಿಸುವುದಿಲ್ಲ. ಕನ್ನಡಕ್ಕೆ ಪ್ರಸ್ತುತ ಅಗತ್ಯವಿರುವುದು ಕನ್ನಡವನ್ನು ಪ್ರದರ್ಶನ ವಸ್ತುವಾಗಿಸುವ, ಕನ್ನಡಾಂಬೆಯನ್ನು ಮೆರವಣಿಗೆ ಮಾಡುವ ಯೋಜನೆಗಳಲ್ಲ. ಕನ್ನಡವನ್ನು ಒಳಗಿನಿಂದ ಸಶಕ್ತಗೊಳಿಸುವುದು ಇಂದಿನ ತುರ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.