ADVERTISEMENT

ಸಂಪಾದಕೀಯ: ಕಮಿಷನ್‌ ದಂಧೆ ಆರೋಪ– ಸಮಗ್ರ ತನಿಖೆ ಆಗಲಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 20:30 IST
Last Updated 13 ಏಪ್ರಿಲ್ 2022, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣವು ಕಾಮಗಾರಿಗಳಲ್ಲಿ ಆವರಿಸಿಕೊಂಡಿರುವ ಕಮಿಷನ್‌ ಹಾವಳಿ ಸುತ್ತಲಿನ ಚ‌ರ್ಚೆಯನ್ನು ಬಿರುಸುಗೊಳಿಸಿದೆ. ಸಂತೋಷ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಸ್ನೇಹಿತರಿಗೆ ಕಳುಹಿಸಿದ್ದರು ಎನ್ನಲಾದ ವಾಟ್ಸ್‌ಆ್ಯಪ್‌ ಸಂದೇಶದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರೇ ತಮ್ಮ ಸಾವಿಗೆ ನೇರ ಕಾರಣ ಎಂದು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ. ಕಾಮಗಾರಿಗಳ ಬಿಲ್‌ ಬಾಕಿ ಮೊತ್ತ ಪಾವತಿಗೆ ಶೇಕಡ 40ರಷ್ಟು ಕಮಿಷನ್‌ ಕೊಡುವಂತೆ ಸಚಿವರ ಸಮೀಪವರ್ತಿಗಳು ಬೇಡಿಕೆ ಇಟ್ಟಿದ್ದಾರೆ ಎಂದು ಅಳಲು ತೋಡಿಕೊಂಡಿದ್ದ ಸಂತೋಷ್, ಈ ಸಂಬಂಧ ನೆರವಿಗೆ ಬರಬೇಕೆಂದುಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರಿಗೂ ಮನವಿ ಮಾಡಿದ್ದರು. ಸಂತೋಷ್ ಆತ್ಮಹತ್ಯೆ ನಂತರ ಸಚಿವ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಅವರೇ ಮೊದಲ ಆರೋಪಿ. ತನಿಖೆ ಮೇಲೆ ಪ್ರಭಾವ ಬೀರುವ ಶಕ್ತಿ ಹೊಂದಿದ ವ್ಯಕ್ತಿಯ ವಿರುದ್ಧವೇ ಎಫ್ಐಆರ್ ದಾಖಲಾದಾಗ ನಿಷ್ಪಕ್ಷಪಾತ ತನಿಖೆಗೆ ಅನುವು ಮಾಡಿಕೊಡುವುದಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ನೈತಿಕತೆ. ರಾಜೀನಾಮೆ ಕೊಡದಿದ್ದರೆ ಸಂಪುಟದಿಂದ ವಜಾ ಮಾಡುವ ಉತ್ತರದಾಯಿತ್ವವನ್ನು ಮುಖ್ಯಮಂತ್ರಿ ತೋರಬೇಕಾದುದು ಅಪೇಕ್ಷಣೀಯ ನಡೆ. ಇಲ್ಲದಿದ್ದರೆ ತನಿಖೆಯು ವಿಶ್ವಾಸಾರ್ಹವಾಗಿ ಉಳಿಯುವುದಿಲ್ಲ. ಈಶ್ವರಪ್ಪ ರಾಜೀನಾಮೆಗೆ ವಿರೋಧ ಪಕ್ಷಗಳು ಆಗ್ರಹಿಸುತ್ತಿರುವುದು ಈ ನೆಲೆಯಲ್ಲಿ ಸಮರ್ಥನೀಯ. ಆದರೆ, ಸಚಿವರಸಮರ್ಥನೆಗೆ ಬಿಜೆಪಿ ನಾಯಕರು ಸ್ಪರ್ಧೆಗೆ ಇಳಿದಂತೆ ವರ್ತಿಸುತ್ತಿರುವುದು ವಿಪರ್ಯಾಸ.

ಕಾಮಗಾರಿಗಳಲ್ಲಿನ ಭ್ರಷ್ಟಾಚಾರವು ನಾಡಿಗೆ ಹೊಸತೇನೂ ಅಲ್ಲ. ಆದರೆ, ಈಗಿನ ಸರ್ಕಾರದ ಅವಧಿಯಲ್ಲಿ ಪ್ರಮುಖ ಬೆಳವಣಿಗೆಯೊಂದು ಆಗಿದೆ. ಕಾಮಗಾರಿಯ ಟೆಂಡರ್‌, ಕಾರ್ಯಾದೇಶ ಪಡೆದುಕೊಳ್ಳುತ್ತಿದ್ದ ಗುತ್ತಿಗೆದಾರರು ಕಮಿಷನ್‌ ಹಾವಳಿ ವಿಪರೀತಕ್ಕೆ ಹೋಗಿರುವುದನ್ನು ವಿರೋಧಿಸಿ ಬೀದಿಗೆ ಇಳಿದಿದ್ದಾರೆ. ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ಕರ್ನಾಟಕ ಗುತ್ತಿಗೆದಾರರ ಸಂಘವು ರಾಜ್ಯದಲ್ಲಿ ಗುತ್ತಿಗೆ ವ್ಯವಹಾರಗಳಲ್ಲಿ ಶೇಕಡ 40ರಷ್ಟು ಕಮಿಷನ್‌ ಪಡೆಯಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿತ್ತು.ಪ್ರಧಾನಿ ಕಚೇರಿಗೆ ಪತ್ರ ಹೋಗಿತ್ತಾದರೂ ಅದರ ಫಲವೇನೂ ಕಾಣಲಿಲ್ಲ. ರಾಜ್ಯಪಾಲ ಥಾವರಚಂದ್ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಗುತ್ತಿಗೆದಾರರು ದೂರು ಕೊಟ್ಟು, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಎಂದು ಗೋಗರೆದರು. ಆಗ ಪ್ರತಿಕ್ರಿಯಿಸಿದ್ದ ಬೊಮ್ಮಾಯಿ ಅವರು, ಗುತ್ತಿಗೆದಾರರು ಉಲ್ಲೇಖಿಸಿದ್ದ ಐದು ಇಲಾಖೆಗಳಲ್ಲಿನ ಅಕ್ರಮಗಳ ಬಗ್ಗೆ ವಿಚಾರಣೆ ನಡೆಸಲು ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್ ನೇತೃತ್ವದ ಸಮಿತಿ ರಚಿಸಿರುವುದಾಗಿ ಹೇಳಿದ್ದರು. ಮುಂದೇನಾಯಿತು ಎಂಬುದು ಹೊರಗೆ ಬಂದಿಲ್ಲ. ಭ್ರಷ್ಟಾಚಾರದ ಬಗ್ಗೆ ಸೂಕ್ತ ದಾಖಲೆಗಳಿದ್ದರೆ ಕೊಡಲಿ ಎಂದು ಮುಖ್ಯಮಂತ್ರಿ ಸವಾಲೊಡ್ಡುತ್ತಲೇ ಬಂದರು. ಆದರೆ, ರಾಜ್ಯದ ವಿವಿಧ ಗುತ್ತಿಗೆದಾರರು, ಅಧಿಕಾರಿಗಳು, ಯಡಿಯೂರಪ್ಪ ಆಪ್ತರ ಮನೆ, ಕಚೇರಿಗಳ ಮೇಲೆಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಶೋಧ ಕೈಗೊಂಡಿತು. ಈ ಕಾರ್ಯಾಚರಣೆಯಲ್ಲಿ ಜಲಸಂಪನ್ಮೂಲ, ಲೋಕೋಪಯೋಗಿ ಇಲಾಖೆಗಳ ಟೆಂಡರ್ ದಾಖಲೆಗಳು ಮೂಟೆಗಟ್ಟಲೇ ಸಿಕ್ಕಿದವು. ತೆರಿಗೆ ವಂಚನೆ, ಆದಾಯಕ್ಕೆ ಮೀರಿದ ಆಸ್ತಿಯೂ ಪತ್ತೆಯಾಗಿತ್ತು. ಮುಖ್ಯಮಂತ್ರಿಯವರು ಆಗಲಾದರೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಕಠಿಣ ನಿರ್ಧಾರಗಳನ್ನು ಕೈಗೊಂಡಿದ್ದರೆ ಸರ್ಕಾರ ಈಗಿನ ಮುಜುಗರದ ಸಂದರ್ಭದಲ್ಲಿ ಸಿಲುಕಿಕೊಳ್ಳುತ್ತಿರಲಿಲ್ಲ. ಭ್ರಷ್ಟಾಚಾರ ನಿಗ್ರಹಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಹತ್ತಾರು ಸಂಸ್ಥೆಗಳಿವೆ. ತಮ್ಮ ವಿರುದ್ಧ ಕೊಸರಾಡುವವರನ್ನು ಮೊಟಕಲು ಕೇಂದ್ರ ಸರ್ಕಾರವು ಸಿಬಿಐ, ಆದಾಯ ತೆರಿಗೆ, ಜಾರಿ ನಿರ್ದೇಶನಾಲಯಗಳನ್ನು ಬಳಸಿಕೊಳ್ಳುತ್ತಿರುವುದು ರಹಸ್ಯವೇನಲ್ಲ. ‘ನಾ ಖಾವೂಂಗಾ, ನಾ ಖಾನೆದೂಂಗಾ’ (ನಾನೂ ತಿನ್ನುವುದಿಲ್ಲ, ತಿನ್ನಲು ಬಿಡುವುದೂ ಇಲ್ಲ) ಎಂದು ಪ್ರಧಾನಿ ಮೋದಿಯವರು ಪದೇ ಪದೇ ಹೇಳಿದ್ದುಂಟು. ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇದ್ದಾಗ ರಾಜ್ಯಕ್ಕೆ ಬಂದಿದ್ದ ಮೋದಿಯವರು, ‘10 ಪರ್ಸೆಂಟ್ ಸರ್ಕಾರ, ಸೀದಾರೂಪಯ್ಯಾ ಸರ್ಕಾರ’ ಎಂದು ಹಂಗಿಸಿದ್ದರು. ಈಗ ವಿರೋಧ ಪಕ್ಷದವರಲ್ಲ; ಗುತ್ತಿಗೆದಾರರೇ 40 ಪರ್ಸೆಂಟ್ ಸರ್ಕಾರ ಎಂದು ಬೀದಿಯಲ್ಲಿ ನಿಂತು ಹೇಳುತ್ತಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ ದೆಹಲಿಗೆ ಹೋಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್‌ ಹಾಗೂ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ದೂರು ನೀಡಿ ಬಂದಿದ್ದರು. ಗಂಭೀರ ಸ್ವರೂಪದ ದೂರು ಬಂದಾಗ ತನಿಖೆ ನಡೆಸುವುದು ಸರ್ಕಾರದ ಹೊಣೆ. ಆದರೆ, ಕಮಿಷನ್‌ ದಂಧೆ ವಿಚಾರದಲ್ಲಿ ಸರ್ಕಾರ ಆ ಕೆಲಸ ಮಾಡಲಿಲ್ಲ. ಈ ಎಲ್ಲವನ್ನೂ ಪರಾಮರ್ಶಿಸಿದರೆ ಬೇರೆ ಬೇರೆ ಬಗೆಯ ಸಂಶಯಗಳು ಮೂಡುವುದು ಸಹಜ. ಗುತ್ತಿಗೆದಾರರು ಮಾಡಿರುವ ಆಪಾದನೆ ಬಗ್ಗೆ ಸಮಗ್ರ ತನಿಖೆ ಆಗಲೇಬೇಕು. ಗುತ್ತಿಗೆದಾರರು ಹೇಳುತ್ತಿರುವುದು ಸುಳ್ಳೆಂದಾದರೆ ಅವರ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಅವಕಾಶ ಇದ್ದೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT