ADVERTISEMENT

ಸಂಪಾದಕೀಯ | ಕೆಪಿಎಸ್‌ಸಿ: ಮರುಪರಿಶೀಲನಾ ಅರ್ಜಿ ಸಲ್ಲಿಸುವ ನಿರ್ಧಾರ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 19:30 IST
Last Updated 19 ಮಾರ್ಚ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘2011ನೇ ಸಾಲಿನ 362 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ನಡೆದ ನೇಮಕಾತಿ ವಿಷಯದಲ್ಲಿ ಕೋರ್ಟ್‌ಗೆ ರಾಜ್ಯ ಸರ್ಕಾರ ಮರುಪರಿಶೀಲನಾ ಅರ್ಜಿ ಸಲ್ಲಿಸಲಿದೆ’ ಎಂದು ಕಾನೂನು ಸಚಿವ ಮಾಧುಸ್ವಾಮಿ ವಿಧಾನ ಪರಿಷತ್‌ನಲ್ಲಿ ಹೇಳಿದ್ದಾರೆ. ಈ ವಿಷಯದ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಸಚಿವರು, 2011ನೇ ಸಾಲಿನ ನೇಮಕಾತಿಯನ್ನು ಹೈಕೋರ್ಟ್‌ ರದ್ದುಪಡಿಸಿದೆ. ಆ ಆದೇಶವನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿಹಿಡಿದಿದೆ. ನೇಮಕಗೊಂಡ ಬಳಿಕ ಪಟ್ಟಿ ರದ್ದುಗೊಂಡಿದ್ದರಿಂದ ಕೆಲಸದಿಂದ ವಂಚಿತರಾದವರ ಬಗ್ಗೆ ಸರ್ಕಾರಕ್ಕೆ ಅನುಕಂಪ ಇದೆ ಎಂದು ಹೇಳಿದ್ದಾರೆ.

ಕಾನೂನು ಸಚಿವ ಮತ್ತು ಕೆಲವು ಸದಸ್ಯರ ವಾದ ನೋಡಿ ಅಳಬೇಕೋ, ನಗಬೇಕೋ ಗೊತ್ತಾಗುತ್ತಿಲ್ಲ. ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರವೂ ಸಚಿವರು ಈ ಅಭ್ಯರ್ಥಿಗಳ ಪರವಾಗಿ ನಿಲ್ಲುವುದು ಸಮಾಜಕ್ಕೆ ಬೇರೆಯದೇ ಸಂದೇಶವನ್ನು ರವಾನಿಸುತ್ತದೆ. ಈ ನೇಮಕಾತಿಯಲ್ಲಿ ಅಕ್ರಮಗಳು ನಡೆದಿವೆ ಎಂಬುದು ಸಿಐಡಿ ತನಿಖೆಯಿಂದ ಸಾಬೀತಾಗಿದೆ. ಮುಖ್ಯ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ನಡೆದ ಅಕ್ರಮಗಳ ಬಗ್ಗೆ ಸಿಐಡಿ ತನ್ನ ವರದಿಯಲ್ಲಿ ದಾಖಲೆ ಸಮೇತ ವಿವರಿಸಿದೆ. ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಚೇರಿಯಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಹೇಗೆ ನಾಶಪಡಿಸಲಾಗಿತ್ತು ಎನ್ನುವುದೂ ವರದಿಯಲ್ಲಿ ಇದೆ. ಕೆಪಿಎಸ್‌ಸಿ ಸದಸ್ಯರು ಯಾವ್ಯಾವ ಅಭ್ಯರ್ಥಿಗಳ ಜೊತೆ ಮೊಬೈಲ್ ಫೋನ್‌ ಮೂಲಕ ಮಾತನಾಡಿದ್ದಾರೆ, ಮೌಲ್ಯಮಾಪಕರು ಹೇಗೆ ಅಭ್ಯರ್ಥಿಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದರು ಎನ್ನುವುದನ್ನೂ ಸಿಐಡಿ ವರದಿ ಎತ್ತಿತೋರಿಸಿದೆ.

ಅದನ್ನು ಆಧರಿಸಿಯೇ ಕಾಂಗ್ರೆಸ್‌ ನೇತೃತ್ವದ ಸರ್ಕಾರವು ನೇಮಕಾತಿ ಪಟ್ಟಿಯನ್ನು ರದ್ದು ಮಾಡಿತ್ತು. ಈಗಿನ ಸರ್ಕಾರವು ಮರುಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಹೇಳುತ್ತಿರುವುದು ಹಾಸ್ಯಾಸ್ಪದ. ಕೆಪಿಎಸ್‌ಸಿ ಆಡಳಿತದಲ್ಲಿ ಸುಧಾರಣೆ ಮತ್ತು ನೇಮಕಾತಿಯಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ತರಬೇಕಾದ ಸರ್ಕಾರ, ಅಕ್ರಮ ಎಂದು ಸಾಬೀತಾದ ನೇಮಕಾತಿ ಪಟ್ಟಿಗೆ ಮರುಜೀವ ತರಲು ಹೊರಟಿರುವುದು ಸರ್ವಥಾ ಸಲ್ಲ.

ADVERTISEMENT

‘ಯಾರೋ ಮಾಡಿದ ತಪ್ಪಿಗೆ 362 ಅಭ್ಯರ್ಥಿಗಳ ಭವಿಷ್ಯ ಬಲಿಯಾಗಿದೆ. ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಆಯ್ಕೆ ಆದವರಿಗೂ ಅನ್ಯಾಯವಾಗಿದೆ. ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಕೆಪಿಎಸ್‌ಸಿ ಸದಸ್ಯರು, ಅಧಿಕಾರಿಗಳ ಮೇಲೆ ಈವರೆಗೂ ಯಾವುದೇ ಕ್ರಮ ಆಗಿಲ್ಲ. ಹೀಗಾಗಿ‌, ಈ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಬೇಕು’ ಎಂದು ವಿಧಾನ ಪರಿಷತ್ತಿನ ಕೆಲವು ಸದಸ್ಯರು ವಾದಿಸಿರುವುದು ನೈತಿಕ ದಿವಾಳಿಯ ದ್ಯೋತಕ. ಈ ಪ್ರಕರಣದಲ್ಲಿ ಕೆಲವು ಸದಸ್ಯರು ಮತ್ತು ಕೆಲವು ಅಭ್ಯರ್ಥಿಗಳು ಕೈಜೋಡಿಸಿಯೇ ಅಕ್ರಮ ಎಸಗಿದ್ದಾರೆ.

ಅಕ್ರಮ ಎಸಗಿದ ಸದಸ್ಯರು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವ ಬದಲು, ಅಕ್ರಮ ನಡೆಸಿರುವವರ ಪರ ನಿಲ್ಲುವುದು ಯಾರೂ ಮೆಚ್ಚುವ ವಿಷಯ ಅಲ್ಲ. ವಿಧಾನ ಪರಿಷತ್ ಸದಸ್ಯರ ಘನತೆಗೆ ಅದು ತಕ್ಕುದಾದ ನಡವಳಿಕೆಯೂ ಅಲ್ಲ. ‘ಈ ನೇಮಕಾತಿ ವೇಳೆ ಕೆಪಿಎಸ್‌ಸಿ ಸದಸ್ಯರಾಗಿದ್ದವರು ನಿವೃತ್ತರಾಗಿದ್ದಾರೆ. ಹೀಗಾಗಿ, ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಪ್ರಶ್ನೆ ಈಗ ಉದ್ಭವಿಸುವುದಿಲ್ಲ’ ಎಂದು ಕಾನೂನು ಸಚಿವರು ಹೇಳಿದ್ದಾರೆ. ಅಂದಮೇಲೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ತಡ ಯಾಕೆ? ನೇಮಕಾತಿ ರದ್ದು ಮಾಡಿದ ವಿಷಯವನ್ನು ಕೆಪಿಎಸ್‌ಸಿ ತನ್ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿ, ವಿಧಾನಮಂಡಲದ ಉಭಯ ಸದನಗಳಲ್ಲಿ ವರದಿ ಮಂಡಿಸಿದೆ. ಆದರೆ, ಸಂವಿಧಾನದ ವಿಧಿ 323 (2) ಅನ್ವಯ ಸದಸ್ಯರಿಗೆ ಈ ವಿಷಯದ ಮೇಲೆ ಚರ್ಚೆಗೆ ಅವಕಾಶ ಸಿಕ್ಕಿಲ್ಲ.

ಆದ್ದರಿಂದ ಈ ನೇಮಕಾತಿಯನ್ನು ಪುನರ್ ಪರಿಶೀಲಿಸಬೇಕು ಎಂದು ಕೆಲವು ಸದಸ್ಯರು ವಾದಿಸಿದ್ದಾರೆ. ಇದು ಕೂಡ ಅತ್ಯಂತ ಬಾಲಿಶ ವಾದ. 2011ನೇ ಸಾಲಿನಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲರಿಗೂ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ರಾಜ್ಯ ಸರ್ಕಾರವೇ ಹೇಳಿದೆ. ಹಾಗಿದ್ದರೂ ನೇಮಕಾತಿಗೆ ಮರುಜೀವ ನೀಡುವುದಾಗಿ ಕಾನೂನು ಸಚಿವರು ಹೇಳಿದ್ದಾರೆ. ಈ ವಿಷಯದಲ್ಲಿ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ ಎನ್ನುವುದನ್ನು ಇದು ತೋರಿಸುತ್ತದೆ. ನೇಮಕಾತಿಗೆ ಸಂಬಂಧಿಸಿದಂತೆ ಮರುಪರಿಶೀಲನಾ ಅರ್ಜಿ ಸಲ್ಲಿಸುವ ನಿರ್ಧಾರವನ್ನೇ ಸರ್ಕಾರ ಮರುಪರಿಶೀಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.