
ಕೇಂದ್ರ ಸರ್ಕಾರ ಹೊಸತಾಗಿ ಅನುಷ್ಠಾನಕ್ಕೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು, ದೇಶದ ಕಾರ್ಮಿಕ ವಲಯದ ಇತಿಹಾಸದಲ್ಲಿ ಮಾತ್ರವಲ್ಲದೆ, ಆರ್ಥಿಕತೆ ಬೆಳವಣಿಗೆಗೆ ಸಂಬಂಧಿಸಿದಂತೆಯೂ ಮಹತ್ವದ್ದಾಗಿವೆ. ವೇತನ, ಕೈಗಾರಿಕಾ ಸಂಬಂಧ, ಕೆಲಸದ ಸ್ಥಳದಲ್ಲಿ ಸುರಕ್ಷತೆ ಹಾಗೂ ಸಾಮಾಜಿಕ ಭದ್ರತೆಗೆ ಸಂಬಂಧಿಸಿದಂತೆ ಹೊಸ ಸಂಹಿತೆಗಳನ್ನು ‘ಚಾರಿತ್ರಿಕ’ ಎಂದು ಸರ್ಕಾರ ಬಣ್ಣಿಸಿದೆ. ಕಾರ್ಮಿಕರು ಮತ್ತು ಕೈಗಾರಿಕೆಗಳಿಗೆ ಸಂಬಂಧಿಸಿದ 29 ಕಾರ್ಮಿಕ ಕಾನೂನುಗಳನ್ನು ಒಟ್ಟುಗೂಡಿಸಿ ಹೊಸ ಸಂಹಿತೆಗಳಲ್ಲಿ ಅಡಕಗೊಳಿಸಲಾಗಿದೆ; 1,228 ಸೆಕ್ಷನ್‌ಗಳನ್ನು 480ಕ್ಕೆ ಹಾಗೂ 1,436 ನಿಯಮಗಳನ್ನು 351ಕ್ಕೆ ಇಳಿಸಲಾಗಿದೆ; 65 ವಿಭಾಗಗಳಿಗೆ ಸಂಬಂಧಿಸಿದ ಅಪರಾಧೀಕರಣವನ್ನು ತೆಗೆದುಹಾಕಲಾಗಿದೆ. ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿದ ಈ ವ್ಯಾಪಕ ಪರಿಷ್ಕರಣೆ ಬಹಳ ಕಾಲದ ಹಿಂದೆಯೇ ನಡೆಯಬೇಕಾಗಿತ್ತು. ಕೆಲವು ಕಾನೂನುಗಳು ನಿರ್ಬಂಧಿತವಾಗಿದ್ದವು ಹಾಗೂ ನಮ್ಯತೆಯ ಕೊರತೆಯನ್ನು ಹೊಂದಿದ್ದವು. ಕಾರ್ಮಿಕ ಮತ್ತು ಬಂಡವಾಳ ಮಾರುಕಟ್ಟೆಗೆ ಸಂಬಂಧಿಸಿದ ವಸ್ತುಸ್ಥಿತಿಗೆ ಸ್ಪಂದಿಸುವಲ್ಲಿ ಇರುವ ಕೊರತೆಗೆ ಸಂಬಂಧಿಸಿದಂತೆಯೂ ಟೀಕೆಗಳು ವ್ಯಕ್ತವಾಗಿದ್ದವು. ಪ್ರಸ್ತುತ ಸುಧಾರಣೆಗಳ ಉದ್ದೇಶಗಳನ್ನು ಮೂರು ಆಯಾಮಗಳಲ್ಲಿ ಗುರ್ತಿಸಬಹುದಾಗಿದೆ: ಪ್ರಸ್ತುತ ಇರುವ ಚೌಕಟ್ಟಿನ ಸರಳೀಕರಣ, ಕಾರ್ಮಿಕರ ಉದ್ಯೋಗದಲ್ಲಿ ಔಪಚಾರಿಕತೆಯನ್ನು ತರುವುದು ಹಾಗೂ ಕಾರ್ಮಿಕರ ಸ್ಥಿತಿಗತಿ ನಿಭಾಯಿಸಲು ಉದ್ಯೋಗದಾತರಿಗೆ ಹೆಚ್ಚಿನ ನಮ್ಯತೆ ಕಲ್ಪಿಸುವುದು. ಸ್ವಾತಂತ್ರ್ಯಾನಂತರ ತರಲಾಗಿರುವ ಅತ್ಯಂತ ಸಮಗ್ರ ಕಾರ್ಮಿಕ ಕಾನೂನುಗಳ ಸುಧಾರಣೆ ಇದಾಗಿದೆ.
ಹೊಸ ಸಂಹಿತೆಗಳು ಗಿಗ್ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಲಿವೆ. ಮಹಿಳೆಯರ ಮೇಲಿನ ನ್ಯಾಯಯುತವಲ್ಲದ ನಿರ್ಬಂಧಗಳನ್ನು ತೆಗೆದುಹಾಕಲಿವೆ ಹಾಗೂ ಅಂತರರಾಜ್ಯ ಕಾರ್ಮಿಕರಿಗೆ ಸೌಲಭ್ಯಗಳ ವರ್ಗಾವಣೆಯನ್ನು ಸಾಧ್ಯಗೊಳಿಸುತ್ತವೆ. ಕಾಲಕ್ಕೆ ಸರಿಯಾಗಿ ಕನಿಷ್ಠ ವೇತನ ಪಾವತಿ, ಎಲ್ಲ ಹೊಸ ನೌಕರರಿಗೆ ನೇಮಕಾತಿ ಪತ್ರ, ಮಹಿಳೆಯರಿಗೆ ಸಮಾನವೇತನ, ಒಂಬತ್ತು ವರ್ಷಗಳ ನಂತರ ಕಾಯಂ ನೌಕರರಿಗೆ ಗ್ರಾಚ್ಯುಯಿಟಿ, ನಲವತ್ತು ವರ್ಷಗಳಿಗೂ ಹೆಚ್ಚಿನ ವಯಸ್ಸಿನ ಎಲ್ಲ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆ ಹಾಗೂ ಹೆಚ್ಚಿನ ಅವಧಿಯ ದುಡಿಮೆಗೆ ದುಪ್ಪಟ್ಟು ವೇತನವನ್ನು ಕಡ್ಡಾಯಗೊಳಿಸಲಿವೆ. ಹೊಸ ಸಂಹಿತೆಗಳು ಪಾರದರ್ಶಕತೆಯ ಕಡೆಗೆ ಮುನ್ನಡೆಯುವ ಪ್ರಯತ್ನವಾಗಿವೆ. ಗಿಗ್ ಮತ್ತು ಪ್ಲಾಟ್‌ಫಾರ್ಮ್ ನೌಕರರನ್ನು ಸಾಮಾಜಿಕ ಭದ್ರತೆಯೊಳಗೆ ಗುರ್ತಿಸುವುದು ಬಹುಮುಖ್ಯವಾದ ರಚನಾತ್ಮಕ ಬದಲಾವಣೆಯಾಗಿದೆ. ಹಾಗೆಯೇ ಮಹಿಳೆಯರ ಉದ್ಯೋಗ ಸ್ಥಿತಿಗತಿಯಲ್ಲಿ ಸುಧಾರಣೆ ಮತ್ತು ಸಮಾನತೆ ತರುವ ಮೂಲಕ ಕಾರ್ಮಿಕ ಸಂಪನ್ಮೂಲದಲ್ಲಿ ಅವರ ಭಾಗವಹಿಸುವಿಕೆಯನ್ನು ವಿಸ್ತರಿಸುವ ಸಾಧ್ಯತೆ ಈಗ
ಕಾನೂನುಬದ್ಧ ಆಗಿದೆ.
ಬಹುತೇಕ ಕಾರ್ಮಿಕ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಹೊಸ ಸುಧಾರಣೆಗಳನ್ನು ಕಾರ್ಮಿಕ ವಿರೋಧಿ ಎಂದು ಟೀಕಿಸಿ, ತೀವ್ರ ವಿರೋಧ ವ್ಯಕ್ತಪಡಿಸಿವೆ. ಹೊಸ ನಿಯಮಗಳ ಅನ್ವಯ 300 ಕಾರ್ಮಿಕರನ್ನು ಹೊಂದಿರುವ ಕಂಪನಿಗಳು ಸರ್ಕಾರದ ಅನುಮತಿ ಇಲ್ಲದೆಯೇ ಆ ಕಾರ್ಮಿಕರನ್ನು ಸಾಮೂಹಿಕವಾಗಿ ಕೆಲಸದಿಂದ ವಜಾ ಮಾಡಬಹುದು ಅಥವಾ ಕಂಪನಿಯನ್ನೇ ಮುಚ್ಚಬಹುದು. ಈ ಮೊದಲು 100 ಕಾರ್ಮಿಕರಿಗೆ ಈ ನಿಯಮ ಸೀಮಿತವಾಗಿತ್ತು. ಹೊಸ ನಿಯಮವು ಉದ್ಯೋಗದಾತರ ಪರವಾಗಿದ್ದು, ಕಾರ್ಮಿಕರ ಉದ್ಯೋಗ ಭದ್ರತೆಗೆ ಕೊಡಲಿಪೆಟ್ಟು ನೀಡುತ್ತದೆ ಎಂದು ಕಾರ್ಮಿಕ ಸಂಘಗಳು ಹೇಳಿವೆ. ಸವಲತ್ತುಗಳನ್ನು ಪಡೆಯುವುದಕ್ಕೆ ಸಂಬಂಧಿಸಿದಂತೆ ಕಾರ್ಮಿಕರ ಸಂಘಟಿತ ಮಾತುಕತೆಯ ಶಕ್ತಿಯನ್ನು ದುರ್ಬಲಗೊಳಿಸಿ, ಉದ್ಯೋಗದಾತರಿಗೆ ಹೆಚ್ಚಿನ ಅಧಿಕಾರ ಕೊಡುತ್ತವೆ ಎನ್ನುವ ಟೀಕೆಯೂ ಇದೆ. ಕಾರ್ಮಿಕರ ವಿಷಯವು ಸಮವರ್ತಿ ಪಟ್ಟಿಯಲ್ಲಿರುವ ಕಾರಣ, ರಾಜ್ಯ ಸರ್ಕಾರಗಳು ಸಹ ಈ ನಿಯಮ ರೂಪಿಸಿ ಅಧಿಸೂಚನೆ ಪ್ರಕಟಿಸಬೇಕಿದೆ. ಹೊಸ ಸಂಹಿತೆಗಳನ್ನು ಅನುಷ್ಠಾನಗೊಳಿಸುವ ಹೊಣೆ ರಾಜ್ಯಗಳ ಮೇಲೆ ಅವಲಂಬಿತ ಆಗಿರುವುದರಿಂದ, ಅಸಮಾನ ಅಳವಡಿಕೆ ಆಗುವ ಆತಂಕವೂ ಇದೆ. ಹೊಸ ಸಂಹಿತೆಗಳ ವ್ಯಾಪ್ತಿಗೆ ಬರುವ ಶಾಸನಗಳನ್ನು ಈಗಾಗಲೇ ಕೆಲವು ರಾಜ್ಯಗಳು ಹೊಂದಿವೆ. ಪರಿಷ್ಕರಣೆಗೆ ಮೊದಲು, ಕೇಂದ್ರ ಸರ್ಕಾರ ಮತ್ತು ವಿವಿಧ ಪಕ್ಷಗಳ ನಡುವೆ ಸಾಕಷ್ಟು ಚರ್ಚೆಗಳೂ ನಡೆದಿಲ್ಲ. ನಾಲ್ಕರಲ್ಲಿ ಮೂರು ಸಂಹಿತೆಗಳನ್ನು ಕೋವಿಡ್ ಪಿಡುಗಿನ ಸಂದರ್ಭದಲ್ಲಿ, ಚರ್ಚೆಗಳು ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ, ಸಂಸತ್ತು ಅಂಗೀಕರಿಸಿತ್ತು. ಈಗ ಪ್ರಕಟಿಸಿರುವ ಸಂಹಿತೆಗಳಲ್ಲಿನ ನಿಯಮಗಳನ್ನು ಅಂತಿಮಗೊಳಿಸುವ ಮೊದಲು ಎಲ್ಲ ಪಾಲುದಾರರೊಂದಿಗೆ ಚರ್ಚೆಗಳನ್ನು ನಡೆಸಬೇಕಾಗಿದೆ. ಮಾತುಕತೆಗಳ ಮೂಲಕವೇ ಸದ್ಯದ ಆತಂಕಗಳನ್ನು ಪರಿಹರಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.