ADVERTISEMENT

ಕೆರೆಗಳ ಅಭಿವೃದ್ಧಿಗೆ ನಾಂದಿಯಾಗಲಿ ಹಸಿರು ನ್ಯಾಯಮಂಡಳಿ ತೀರ್ಪು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2018, 19:45 IST
Last Updated 7 ಡಿಸೆಂಬರ್ 2018, 19:45 IST
   

ಬೆಂಗಳೂರಿನಲ್ಲಿ ಅತಿಯಾದ ಮಾಲಿನ್ಯಕ್ಕೆ ತುತ್ತಾದ ಬೆಳ್ಳಂದೂರು, ವರ್ತೂರು ಮತ್ತು ಅಗರ ಕೆರೆಗಳ ದುಃಸ್ಥಿತಿಗೆ ಕೆಂಡಾಮಂಡಲವಾಗಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು(ಎನ್‌ಜಿಟಿ), ರಾಜ್ಯ ಸರ್ಕಾರಕ್ಕೆ ₹ 50 ಕೋಟಿ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ₹ 25 ಕೋಟಿ ದಂಡವನ್ನು ವಿಧಿಸಿ ತೀರ್ಪು ನೀಡಿದೆ. ‘ಉದ್ದೇಶಪೂರ್ವಕವಾಗಿ ಕೆರೆಗಳ ಸಂರಕ್ಷಣೆಯನ್ನು ನಿರ್ಲಕ್ಷಿಸಲಾಗಿದೆ’ ಎಂಬಂತಹ ಕಟುಮಾತುಗಳನ್ನೂ ಈ ಸಂದರ್ಭದಲ್ಲಿ ಹೇಳಲಾಗಿದೆ. ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ದುಃಸ್ಥಿತಿ ಅಂತರರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಮಾಡಿತ್ತು. ಹೀಗಿದ್ದೂ ಇದನ್ನು ಗಂಭೀರವಾಗಿ ಪರಿಗಣಿಸದ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗಳನ್ನು ಎನ್‌ಜಿಟಿ ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದೆ. ಇದು ‘ಪರಿಸರ ತುರ್ತುಪರಿಸ್ಥಿತಿ’ ಎಂದೂ ತೀರ್ಪಿನಲ್ಲಿ ಪರಿಸ್ಥಿತಿಯ ಗಂಭೀರತೆಯನ್ನು ಮನನ ಮಾಡಿಸಲು ಪ್ರಯತ್ನಿಸಿದೆ. ಪುನಶ್ಚೇತನ ಕಾರ್ಯದ ಮೇಲುಸ್ತುವಾರಿಗಾಗಿ
ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಬೇಕು ಮತ್ತು ಅದರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರೊ. ಟಿ.ವಿ. ರಾಮಚಂದ್ರ ಒಳಗೊಂಡಿರಬೇಕು ಎಂದು ಆದೇಶಿಸಿರುವ ಎನ್‌ಜಿಟಿ, ಒಂದು ತಿಂಗಳೊಳಗೆ ಕ್ರಿಯಾ ಯೋಜನೆ ರೂಪಿಸುವ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಕಾಲಮಿತಿ ನಿಗದಿಪಡಿಸುವ ಹೊಣೆ ಸಮಿತಿಯದ್ದಾಗಿದೆ ಎಂದು ಹೇಳಿದೆ. ಕೆರೆಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರೂ ಒಳಗೊಳ್ಳುವಂತೆ ಸಮಿತಿಯೇ ಪ್ರೇರೇಪಿಸಬೇಕು. ಆಸಕ್ತರಿಂದ ಸಲಹೆ, ದೂರುಗಳನ್ನು ಸ್ವೀಕರಿಸಲು ಪ್ರತ್ಯೇಕ ವೆಬ್‌ಸೈಟ್ ಆರಂಭಿಸಬೇಕು ಎಂದು ನ್ಯಾಯ ಪೀಠ ನೀಡಿರುವ ಸಲಹೆ ಸೂಕ್ತವಾದದ್ದು. ಸ್ವಾತಂತ್ರ್ಯಪೂರ್ವದಲ್ಲಿ ರಾಜರು, ಪ್ರಜೆಗಳು ಅಭಿವೃದ್ಧಿಪಡಿಸಿ, ಸಲಹಿದ ಕೆರೆಗಳ ಸಂರಕ್ಷಣೆಗೆ ಎನ್‌ಜಿಟಿ ನೀಡಿರುವ ಈ ತೀರ್ಪು ಈಗ ಆಡಳಿತ ನಡೆಸುತ್ತಿರುವವರ ಕಣ್ಣು ತೆರೆಸಬೇಕು. ನಿರ್ಲಕ್ಷ್ಯಕ್ಕೆ ಒಳಗಾದ ಕೆರೆಗಳ ಅಭಿವೃದ್ಧಿಗೆ ಸ್ಥಳೀಯ ಆಡಳಿತ ಮತ್ತು ಅಧಿಕಾರಿಗಳಿಗೆ ಜವಾಬ್ದಾರಿ ನಿಗದಿ ಮಾಡಿರುವುದು ಸರಿಯಾಗಿಯೇ ಇದೆ.

ಬೆಂಗಳೂರಿನ ಕೆರೆಗಳ ಸಂರಕ್ಷಣೆಯನ್ನು ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ತೀವ್ರವಾಗಿ ನಿರ್ಲಕ್ಷಿಸಿವೆ ಎಂಬುದರಲ್ಲಿ ಎರಡು ಮಾತಿಲ್ಲ. ನೀರು ಹರಿದು ಬರುವ ರಾಜಕಾಲುವೆಗಳ ಅತಿಕ್ರಮಣವನ್ನು ತಡೆಯುವಲ್ಲಿ ಆಡಳಿತಯಂತ್ರ ಸಂಪೂರ್ಣ ವಿಫಲವಾಗಿದೆ. ಘನತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತದ ಕೆಲಸ. ಅದನ್ನು ನಿರ್ಲಕ್ಷಿಸಿ ಕೆರೆಗಳಿಗೆ ತ್ಯಾಜ್ಯ ಹರಿಬಿಡುತ್ತಿರುವುದು ಗಂಭೀರ ಸ್ವರೂಪದ ಅಪರಾಧ ಎಂಬುದು ನ್ಯಾಯಪೀಠದ ಅಭಿಪ್ರಾಯವಾಗಿದೆ. ನ್ಯಾಯಾಲಯದ ಈ ನಿಲುವು ಸರಿಯಾಗಿಯೇ ಇದೆಯಾದರೂ, ಈ ಮೂರೂ ಕೆರೆಗಳು ಬಿಡಿಎ ವ್ಯಾಪ್ತಿಗೆ ಸೇರುತ್ತವೆ. ನೇರವಾಗಿ ಬಿಬಿಎಂಪಿ ವ್ಯಾಪ್ತಿಗೆ ಬರುವುದಿಲ್ಲ. ಬೆಳ್ಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ಎನ್‌ಜಿಟಿ ಆದೇಶ ನೀಡಿದ ನಂತರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ, ಕೆರೆ ಸುತ್ತಲ ಕೈಗಾರಿಕೆಗಳು ಯಾವುದೇ ಕಾರಣಕ್ಕೂ ಸಂಸ್ಕರಿಸದ ನೀರು ಕೆರೆಗೆ ಬಿಡದಂತೆ ನೋಡಿಕೊಂಡಿತ್ತು. ಆದರೂ ಬೆಳ್ಳಂದೂರು, ವರ್ತೂರು ಕೆರೆಯಲ್ಲಿ ನೊರೆ ಸಮಸ್ಯೆ ಬಗೆಹರಿದಿಲ್ಲ. ಇದಕ್ಕೆ ಸುತ್ತಲ 110 ಹಳ್ಳಿಗಳಿಂದ ಒಳಚರಂಡಿ ನೀರು ಸಂಸ್ಕರಣಗೊಳ್ಳದೆ ನೇರವಾಗಿ ಕೆರೆಗಳನ್ನು ಸೇರುತ್ತಿರುವುದೇ ಕಾರಣ. ಇದಕ್ಕೆ ಜಲಮಂಡಲಿಯೇ ನೇರ ಹೊಣೆ. ಈ ಇಲಾಖೆಯೂ ಉತ್ತರದಾಯಿತ್ವ ಪ್ರದರ್ಶಿಸಬೇಕಿದೆ. ಕೆರೆಗಳು ತಮಗೆ ಸೇರಿದ್ದಲ್ಲ ಎನ್ನುವ ಭಾವನೆಯನ್ನು ಸರ್ಕಾರದ ವಿವಿಧ ಇಲಾಖೆಗಳು ಹೊಂದಿರುವುದರಿಂದಲೇ ಈ ದುಃಸ್ಥಿತಿ ಬಂದಿದೆ. ಜಲಮೂಲಗಳ ಅಭಿವೃದ್ಧಿ ಯೋಜನೆ ಜಾರಿಗೊಳಿಸಲು ಅಧಿಕಾರಿಗಳನ್ನು ನಿಯೋಜಿಸಿ, ಅಭಿವೃದ್ಧಿಗೆ ಅವರನ್ನೇ ವೈಯಕ್ತಿಕ ಹೊಣೆಯಾಗಿಸಬೇಕು. ಈ ವಿಷಯವನ್ನು ಅವರ ಸೇವಾ ದಾಖಲೆಯಲ್ಲೂ ನಮೂದಿಸಬೇಕು ಎಂದು ಹಸಿರು ಪೀಠ ಒತ್ತಿ ಹೇಳಿದೆ. ಇದು ಜಾರಿಯಾದರೆ ಅಧಿಕಾರಿ ವರ್ಗದಲ್ಲಿ ಹೆದರಿಕೆಯ ಭಾವ ಮೂಡಿ ಕೆರೆ ಅಭಿವೃದ್ಧಿಯಾಗಬಹುದು. ಎನ್‌ಜಿಟಿ ಬೀಸಿರುವ ಚಾಟಿ ಕೇವಲ ಮೂರು ಕೆರೆಗಳಿಗೆ ಸೀಮಿತವಾಗಬಾರದು. ರಾಜ್ಯದ ಎಲ್ಲಾ ಕೆರೆಗಳು ಅಭಿವೃದ್ಧಿಯಾಗಿ ಪರಿಸರ ಸ್ವಚ್ಛವಾಗಲು ಈ ಆದೇಶ ಕಾರಣವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT