ADVERTISEMENT

ಏಷ್ಯಾ ಸಿಂಹಗಳ ಸರಣಿ ಸಾವುತಡೆಗೆ ತುರ್ತು ಕ್ರಮ ಕೈಗೊಳ್ಳಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2018, 19:46 IST
Last Updated 4 ಅಕ್ಟೋಬರ್ 2018, 19:46 IST
Lion
Lion   

ಗುಜರಾತ್‌ನ ಗಿರ್‌ ಅರಣ್ಯ ಪ್ರದೇಶದಲ್ಲಿ ಮಾತ್ರವೇ ಕೇಂದ್ರೀಕೃತವಾದ ಏಷ್ಯಾ ತಳಿ ಸಂತತಿಯ ಸಿಂಹಗಳ ಸರಣಿ ಸಾವು ಆತಂಕಕಾರಿ ವಿದ್ಯಮಾನ. ಸೌರಾಷ್ಟ್ರದ 12 ಜಿಲ್ಲೆಗಳ ಕಾಡು ಮತ್ತು ಕಾಡಿನಂಚಿನ ಗ್ರಾಮಗಳಲ್ಲೂ ಸಿಂಹಗಳಿವೆ. ಏಷ್ಯಾ ಸಿಂಹಗಳು ಟರ್ಕಿ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಈಗಾಗಲೇ ಸಂಪೂರ್ಣ ನಾಮಾವಶೇಷವಾಗಿವೆ ಎಂಬುದು ನಮಗೆ ನೆನಪಿರಬೇಕು. ಗುಜರಾತ್‌ನ ಕೆಲ ಭಾಗದಲ್ಲಿ ಮಾತ್ರವೇ ಈ ತಳಿಯ ಸಿಂಹಗಳು ಈಗ ಕೇಂದ್ರೀಕೃತವಾಗಿವೆ. ಸಿಂಹಗಳು ಪರಸ್ಪರ ಹೊಡೆದಾಟದಿಂದ ಸಾಯುತ್ತಿವೆ ಎಂದು ಆರಂಭದಿಂದಲೂ ಗುಜರಾತ್ ಸರ್ಕಾರ ಹೇಳುತ್ತಿತ್ತು. ಸಿಂಹಗಳು ಸಂಘ ಜೀವಿಗಳು. ಒಂದು ಕುಟುಂಬದಲ್ಲಿ ಹೆಣ್ಣು, ಗಂಡು, ಮರಿಗಳು ಇರುತ್ತವೆ. ಒಟ್ಟಿಗೇ ಬೇಟೆಯಾಡುತ್ತವೆ. ಆದರೆ, ನಾಯಕನಾದ ಗಂಡನ್ನು ಮತ್ತೊಂದು ಬಲಿಷ್ಠ ಸಿಂಹ ಹೊಡೆದೋಡಿಸಿ, ನಾಯಕನಾಗಬಹುದು. ನಾಯಕತ್ವಕ್ಕಾಗಿ ನಿರಂತರ ಹೋರಾಟ ನಡೆಯುತ್ತಿರುತ್ತದೆ. ಆದರೆ ಇಂತಹ ಸಂಘರ್ಷದಿಂದ ಸಿಂಹಗಳು ಸಾಯುತ್ತಿಲ್ಲ. ಸಾವಿಗೆ ಕಾರಣ ವೈರಸ್‌ ಸೋಂಕು ಎನ್ನುವುದು ಈಗ ಪತ್ತೆಯಾಗಿದೆ. ಕೆನೈನ್‌ ಡಿಸ್ಟಂಪರ್‌ ವೈರಸ್‌ (ಸಿಡಿವಿ) ಮತ್ತು ಉಣ್ಣೆ ಮೂಲದ ಬೆಬೆಸಿಯೋಸಿಸ್‌ ವೈರಸ್‌ಗಳೇ ಸಾವಿಗೆ ಕಾರಣವೆಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಸೆಪ್ಟೆಂಬರ್‌ 12ರಿಂದ ಇಲ್ಲಿಯವರೆಗೆ 23 ಸಿಂಹಗಳು ಸತ್ತಿವೆ ಎಂಬುದು ದುರದೃಷ್ಟಕರ. ಇವುಗಳ ಪೈಕಿ ಸಿಡಿವಿಗೆ ನಾಲ್ಕು, ಬೆಬೆಸಿಯೋಸಿಸ್‌ಗೆ 17 ಮತ್ತು ಪತ್ತೆಯಾಗದ ಕಾರಣಗಳಿಂದ ಮತ್ತೆರಡು ಸಿಂಹಗಳು ಬಲಿಯಾಗಿವೆ. ಬೆಂಗಳೂರಿನ ಪಶು ಸಂಶೋಧನೆ ಮತ್ತು ವಿಶ್ಲೇಷಣಾ ಸಂಸ್ಥೆ ಮತ್ತು ಉತ್ತರಾಖಂಡದ ಭಾರತೀಯ ಪಶುಸಂಗೋಪನಾ ಸಂಸ್ಥೆಯು ಸಿಂಹಗಳ ಸಾವಿಗೆ ಕಾರಣವಾಗಬಹುದಾದ ವೈರಸ್‌ ಅಂಶವು ಅವುಗಳ ದೇಹದಲ್ಲಿ ಇರುವುದನ್ನು ಪತ್ತೆ ಮಾಡಿದ್ದವು. 2016ರಲ್ಲಿ ಸತ್ತ ನಾಲ್ಕು ಸಿಂಹಗಳಲ್ಲಿ ಸಿಡಿವಿ ಸೋಂಕು ಪತ್ತೆಯಾಗಿತ್ತು. ಏಷ್ಯಾ ಸಿಂಹಗಳ ಸಂಖ್ಯೆ 523 ಮಾತ್ರ. ಇವು ಗುಜರಾತ್‌ನಲ್ಲಿ ಮಾತ್ರವೇ ಇರುವುದರಿಂದ ಇವುಗಳ ಸಂರಕ್ಷಣೆಗೆ ಒತ್ತು ನೀಡಬೇಕಿರುವುದು ಆ ರಾಜ್ಯ ಸರ್ಕಾರದ ಕರ್ತವ್ಯ. ಇದರ ಜೊತೆಗೇ ಕೇಂದ್ರ ಸರ್ಕಾರದ ಪಾತ್ರವೂ ಇರುವುದನ್ನು ಮರೆಯುವಂತಿಲ್ಲ. ಅಳಿವಿನಂಚಿನ ಪ್ರಾಣಿಯ ರಕ್ಷಣೆ ವಿಚಾರದಲ್ಲಿ ಗುಜರಾತ್‌ ಸರ್ಕಾರ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಪ್ರಾಣಿ ವಿಜ್ಞಾನಿಗಳೂ ಆಕ್ಷೇಪ ಎತ್ತಿದ್ದಾರೆ.

ಅಳಿವಿನಂಚಿನಲ್ಲಿರುವ ಏಷ್ಯಾ ಸಿಂಹಗಳಿಗೆ ಸಾಂಕ್ರಾಮಿಕ ರೋಗ ತಗುಲಿದರೆ, ಆ ತಳಿಯೇ ನಾಶವಾಗುತ್ತದೆ. ಹೀಗಾಗಿ ಕೆಲವನ್ನು ಬೇರೊಂದು ಅಭಯಾರಣ್ಯಕ್ಕೆ ಸ್ಥಳಾಂತರ ಮಾಡಬೇಕು ಎಂದು ಅಭಿಪ್ರಾಯಪಟ್ಟು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು 1994ರಲ್ಲಿ ಮಧ್ಯಪ್ರದೇಶದ ಕುನೊ ಅಭಯಾರಣ್ಯವನ್ನು ಆಯ್ದುಕೊಂಡಿತ್ತು. ಕುಟುಂಬದಲ್ಲೇ ಸಂತಾನಾಭಿವೃದ್ಧಿ, ಸೋಂಕು ಕಾರಣದಿಂದ ಸಿಂಹಗಳು ಒಂದು ಕಡೆ ನಾಶವಾದರೂ ಮತ್ತೊಂದು ಕಡೆ ಉಳಿಯಬೇಕು ಎಂದು ಅಭಿಪ್ರಾಯಪಟ್ಟಿತ್ತು. ಆದರೆ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಗುಜರಾತ್‌ ಸರ್ಕಾರ, ‘ಈ ಸಿಂಹಗಳು ನಮ್ಮ ರಾಜ್ಯದ ಗೌರವ. ಇವುಗಳ ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ’ ಎಂದಿತ್ತು. ಈ ಜಟಾಪಟಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲನ್ನು ಏರಿತ್ತು. 2013ರ ಅಕ್ಟೋಬರ್‌ ಅಂತ್ಯದೊಳಗೆ ಕೆಲ ಸಿಂಹಗಳನ್ನು ಮಧ್ಯಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ನ್ಯಾಯಾಲಯವು ಗುಜರಾತ್‌ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಅಂದಿನ ಸರ್ಕಾರ ಇದಕ್ಕೆ ಮನ್ನಣೆಯನ್ನೇ ನೀಡಲಿಲ್ಲ. ಇದಾದ ನಂತರ ಪರಿಸರವಾದಿ ಅಜಯ್‌ ದುಬೆ ಅವರು ಗುಜರಾತ್‌ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಕೇಂದ್ರವೇ ಗುಜರಾತ್‌ ಸರ್ಕಾರದ ಪರ ನಿಂತಿತ್ತು. ಇದರ ಜೊತೆಯಲ್ಲಿ ‘ಸಿಂಹಗಳನ್ನು ಸ್ಥಳಾಂತರಿಸಿ ಎಂದು ಮಧ್ಯಪ್ರದೇಶ ಸರ್ಕಾರ ಕೋರಿಲ್ಲ’ ಎಂದು ಕೇಂದ್ರವು ಸಂಸತ್ತಿನಲ್ಲಿ ಹೇಳಿದೆ. ವನ್ಯಜೀವಿ ಸಂರಕ್ಷಣೆಯಲ್ಲಿ ರಾಜಕೀಯ ಬರಬಾರದು. ತುರ್ತಾಗಿ ವೈರಸ್‌ ನಿಯಂತ್ರಿಸುವ ಮೂಲಕ ಸಿಂಹದ ಸಂತತಿ ನಾಮಾವಶೇಷ ಆಗದಂತೆ ತಡೆಗಟ್ಟಬೇಕು. ಇದರ ಜೊತೆಯಲ್ಲಿ ಸ್ಥಳಾಂತರಕ್ಕೂ ಯೋಜನೆ ರೂಪಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT