ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಎರಡು ಗುಂಪುಗಳು ಪರಸ್ಪರ ಕಲ್ಲುತೂರಾಟ ನಡೆಸಿದ ಘಟನೆ ಕೋಮು ಉದ್ವಿಗ್ನಕ್ಕೆ ಕಾರಣವಾಗಿದೆ. ಪರಿಸ್ಥಿತಿ ತಿಳಿಗೊಳಿಸಿ, ಎಲ್ಲರನ್ನೂ ಒಂದುಗೂಡಿಸಬಹುದಾಗಿದ್ದ ಕಾನೂನಾತ್ಮಕ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿತ್ತು. ಅಷ್ಟರಲ್ಲೇ ರಾಜಕೀಯ ನಾಯಕರು ಮದ್ದೂರಿಗೆ ನುಗ್ಗಿದ್ದರಿಂದಾಗಿ ಪರಿಸ್ಥಿತಿ ಉಲ್ಬಣಗೊಂಡಿತು. ಮದ್ದೂರು ಪಟ್ಟಣದ ಸಿದ್ಧಾರ್ಥ ನಗರದ ಐದನೇ ತಿರುವಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸೆಪ್ಟೆಂಬರ್ 8ರ ರಾತ್ರಿ ರಾಮ್ ರಹೀಂ ನಗರದ ಮಸೀದಿ ಬಳಿ ಸಾಗುತ್ತಿದ್ದಾಗ, ಅಲ್ಲಿದ್ದ ದೀಪವನ್ನು ನಿಗೂಢ ವ್ಯಕ್ತಿಗಳು ಆರಿಸಿದ್ದಾರೆ. ಆ ವೇಳೆ, ಮೆರವಣಿಗೆ ಮೇಲೆ ಕಲ್ಲು ತೂರಲಾಗಿದೆ. ಮೆರವಣಿಗೆಯಲ್ಲಿದ್ದವರು ಅದಕ್ಕೆ ಪ್ರತಿಯಾಗಿ ಕಲ್ಲುತೂರಾಟ ನಡೆಸಿದ್ದಾರೆ. ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿದೆ. ಘಟನೆಯಲ್ಲಿ ನಾಲ್ವರು ಪೊಲೀಸರು ಸೇರಿದಂತೆ ಒಟ್ಟು 8 ಮಂದಿಗೆ ಗಾಯಗಳಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಸೆಪ್ಟೆಂಬರ್ 9ರ ಬೆಳಿಗ್ಗೆಯೇ ಮದ್ದೂರು ಪಟ್ಟಣದಲ್ಲಿ ಸೇರಿದ್ದ ಸಾವಿರಾರು ಮಂದಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಮಸೀದಿಯ ಮುಂದೆ ಪ್ರತಿಭಟನೆ ನಡೆಸಿದ ಕೆಲವರು ಕಲ್ಲುತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಭಾಯಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಇದು ಅಲ್ಲಿಗೇ ಮುಕ್ತಾಯವಾಗಲು ಸಾಧ್ಯವಿತ್ತು. ಆದರೆ, ಅಕ್ಕಪಕ್ಕದ ಜಿಲ್ಲೆಯ ಬಿಜೆಪಿ, ಜೆಡಿಎಸ್ ನಾಯಕರು ಮದ್ದೂರಿಗೆ ದೌಡಾಯಿಸಿ ಪ್ರಚೋದನಾಕಾರಿ ಭಾಷಣ ಮಾಡಿದ್ದಲ್ಲದೇ, ಮದ್ದೂರು ಘಟನೆಯನ್ನು ರಾಜಕೀಯಗೊಳಿಸಲು ಮುಂದಾಗಿದ್ದಾರೆ.
ವಿವಿಧ ಹೋರಾಟ, ಸೌಹಾರ್ದಕ್ಕೆ ಹೆಸರಾಗಿದ್ದ ಮಂಡ್ಯ ಎಂದೂ ಕೋಮು ಸೂಕ್ಷ್ಮ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರಲಿಲ್ಲ. ಉರೀಗೌಡ–ನಂಜೇಗೌಡ ಎಂಬ ಸುಳ್ಳು ಪಾತ್ರ ಸೃಷ್ಟಿಯ ಹುಸಿ ಸಂಕಥನದಿಂದ ಮಂಡ್ಯದ ಚಿತ್ರಣವೇ ಬದಲಾಗತೊಡಗಿತು. ಬೇರೆ ಜಿಲ್ಲೆಗಳ ಕೋಮುವಾದಿ ನಾಯಕರು ಅಲ್ಲಿಗೆ ಭೇಟಿ ನೀಡಿ, ಪ್ರಚೋದನಾಕಾರಿ ಭಾಷಣ ಮಾಡ ತೊಡಗಿದ ಬಳಿಕ, ಕೋಮು ಸಂಘರ್ಷದ ಬೆಳೆ ತೆಗೆಯುವ ನೆಲ ಹದಗೊಳ್ಳತೊಡಗಿತು. ಕಳೆದ ವರ್ಷ ನಾಗಮಂಗಲ ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಸೀದಿ ಬಳಿಯೇ ಕಲ್ಲುತೂರಾಟ ನಡೆದು, ಹತ್ತಾರು ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ವರ್ಷದಿಂದ ವರ್ಷಕ್ಕೆ ಮಂಡ್ಯ ಜಿಲ್ಲೆಯ ಒಂದೊಂದೇ ತಾಲ್ಲೂಕಿಗೆ ಕೋಮು ಕಿಚ್ಚು ಪಸರಿಸುತ್ತಿರುವುದು ಜಿಲ್ಲೆಯ ಅಭಿವೃದ್ಧಿಗೆ ಅಹಿತಕರ ಬೆಳವಣಿಗೆ. ಹಿಂದಿನ ವರ್ಷಗಳ ಕಹಿ ಘಟನೆಗಳನ್ನು ನೆನಪಿಟ್ಟುಕೊಂಡು, ಎಚ್ಚರ ವಹಿಸಬೇಕಾದ ಜಿಲ್ಲಾ ಪೊಲೀಸ್ ಇಲಾಖೆ, ಈ ಬಾರಿ ಗಣೇಶ ಮೂರ್ತಿ ವಿಸರ್ಜನೆಯ ವೇಳೆ ಸಾಕಷ್ಟು ಜಾಗ್ರತವಾಗಿರಬೇಕಾಗಿತ್ತು. ಘಟನೆ ಬಳಿಕ, ಮದ್ದೂರಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಅನ್ಯ ಜಿಲ್ಲೆಗಳಿಂದ ಬಂದ ಕೆಲವರಿಂದ ಈ ಕೃತ್ಯ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ತಮ್ಮ ಸ್ವಕ್ಷೇತ್ರ ನಾಗಮಂಗಲದ ಗಲಭೆ ಬಗ್ಗೆಯೂ ಅವರು ಹೀಗೆಯೇ ಪ್ರತಿಕ್ರಿಯಿಸಿದ್ದರು. ಸಚಿವರಿಗೆ ಗೊತ್ತಿರುವ ಸಂಗತಿ ಜಿಲ್ಲಾಡಳಿತಕ್ಕೆ ಗೊತ್ತಾಗಲಿಲ್ಲವೇ? ಅಥವಾ ಗೊತ್ತಾಗದಷ್ಟು ಪೊಲೀಸ್ ಇಲಾಖೆ ಜಾಗ್ರತ ಸ್ಥಿತಿಯನ್ನೇ ಕಳೆದುಕೊಂಡಿದೆಯೇ ಎಂಬ ಪ್ರಶ್ನೆ ಮುನ್ನೆಲೆಗೆ ಬರುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿರುವುದನ್ನು ಈ ಪ್ರಕರಣ ತೋರಿಸುತ್ತದೆ. ಇಂತಹ ಸಂಘರ್ಷಗಳಿಂದ ಹಾನಿ ಅನುಭವಿಸುವವರು ನಿತ್ಯದ ಅನ್ನ ದುಡಿದು ತಿನ್ನುವ ಶ್ರೀಸಾಮಾನ್ಯರು. ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕಾದುದು ಪೊಲೀಸ್ ಇಲಾಖೆಯ ಆದ್ಯ ಕರ್ತವ್ಯ. ಸ್ಥಳೀಯವಾಗಿ ಸಂಭವಿಸುವ ಘಟನೆಗಳನ್ನು ತಮ್ಮ ರಾಜಕೀಯ ಅನುಕೂಲಕ್ಕೆ, ತಮ್ಮ ನೆಲೆ ವಿಸ್ತರಿಸಿಕೊಳ್ಳಲು ಬಳಸಿಕೊಳ್ಳುವ ರಾಜಕೀಯ ಶಕ್ತಿಗಳು ಹಿಂದೆಂದಿಗಿಂತಲೂ ಈಗ ಪ್ರಬಲವಾಗಿದೆ. ಹೀಗಾಗಿಯೇ, ಇದನ್ನು ಜಾಗತಿಕ ವಿದ್ಯಮಾನವೆಂಬಂತೆ ಬಿಂಬಿಸಲು ಬಿಜೆಪಿ ನಾಯಕರು ಯತ್ನಿಸಿದ್ದಾರೆ. ಇದು ಸಮರ್ಥನೀಯವಲ್ಲ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಮ್ಮ ಪಕ್ಷದ ಹಿತಾಸಕ್ತಿಗಾಗಿ ಇಂತಹ ಪ್ರಕರಣಗಳನ್ನು ಬಳಸಿಕೊಳ್ಳುವ ಕುತ್ಸಿತ ರಾಜಕಾರಣವನ್ನು ಬಿಡಬೇಕು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಪೂರ್ಣ ಹೊಣೆ ಹಾಗೂ ಸ್ವಾತಂತ್ರ್ಯವನ್ನು ಜಿಲ್ಲಾಡಳಿತಕ್ಕೆ ನೀಡಬೇಕು. ಕಲ್ಲು ತೂರಿ, ಸಂಘರ್ಷಕ್ಕೆ ಕಾರಣವಾಗುವರು, ಧರ್ಮದ ಹೆಸರಿನಲ್ಲಿ ಮತ್ತೊಂದು ಸಮುದಾಯವನ್ನು ಹೀನಾಯವಾಗಿ ಬೈಯುವವರು, ಗಲಭೆಯ ಸಂಚು ನಡೆಸುವ ಯಾರೊಬ್ಬರೂ ಧರ್ಮದ ಶ್ರದ್ಧಾಳುಗಳಾಗಿರಲು ಸಾಧ್ಯವಿಲ್ಲ. ಅವರದು ರಾಜಕೀಯ ಸ್ವಾರ್ಥವಷ್ಟೆ. ಅಂತಹವರನ್ನು ಕಾನೂನಡಿ ತಂದು ಹೆಡೆಮುರಿ ಕಟ್ಟಿದರಷ್ಟೇ ಜನರಿಗೆ ನೆಮ್ಮದಿ ಲಭಿಸಿ, ರಾಜ್ಯ ಪ್ರಗತಿಯತ್ತ ಮುನ್ನಡೆಯಲು ಸಾಧ್ಯ. ಈ ನಿಟ್ಟಿನತ್ತ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕಿದೆ. ಸಂಘರ್ಷವನ್ನು ಉತ್ತುಂಗಕ್ಕೆ ಒಯ್ಯುವ ಪ್ರಯತ್ನದ ಬದಲು, ಪರಿಸ್ಥಿತಿ ತಿಳಿಗೊಳಿಸುವತ್ತ ಧಾರ್ಮಿಕ, ರಾಜಕೀಯ ನಾಯಕರು ತಮ್ಮ ಶ್ರಮ ಹಾಕಬೇಕಿರುವುದು ಇಂದಿನ ತುರ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.