ADVERTISEMENT

ಸಿಡಿಎಸ್‌ ಹುದ್ದೆ ಸೃಷ್ಟಿ: ರಕ್ಷಣಾವ್ಯವಸ್ಥೆಯಲ್ಲೊಂದು ಪರಿವರ್ತನೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 19:44 IST
Last Updated 29 ಡಿಸೆಂಬರ್ 2019, 19:44 IST
   

‘ರಕ್ಷಣಾ ಪಡೆಗಳ ಮುಖ್ಯಸ್ಥ’ (ಸಿಡಿಎಸ್) ಹುದ್ದೆಯ ಸೃಷ್ಟಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವುದರಿಂದ ಈ ವಿಚಾರವಾಗಿ ದೀರ್ಘಾವಧಿಯಿಂದ ನಡೆದಿರುವ ಚರ್ಚೆ ಹಾಗೂ ಚಿಂತನೆಯು ಕಾರ್ಯರೂಪ ತಳೆಯುವ ಹಂತಕ್ಕೆ ಬಂದಿದೆ. ಈ ಹುದ್ದೆಯನ್ನು ಸೃಷ್ಟಿಸಬೇಕು ಎನ್ನುವ ಚರ್ಚೆ ಕೆಲವು ದಶಕಗಳಿಂದ ಚಾಲ್ತಿಯಲ್ಲಿ ಇದ್ದರೂ, 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ನಂತರ ಅದು ಪ್ರಾಧಾನ್ಯ ಪಡೆಯಿತು. ಈ ಹುದ್ದೆಯನ್ನು ಸೃಷ್ಟಿಸಬೇಕು ಎಂದು ಕೆ. ಸುಬ್ರಹ್ಮಣ್ಯಂ ಸಮಿತಿಶಿಫಾರಸು ಮಾಡಿತ್ತು. ಆ ಕುರಿತು ಅಧ್ಯಯನ ನಡೆಸಿದ್ದ ಸಚಿವರ ಗುಂಪು, ಶಿಫಾರಸನ್ನು ಅನುಮೋದಿಸಿತ್ತು. ಈ ಶಿಫಾರಸನ್ನು ಹಿಂದಿನ ಸರ್ಕಾರಗಳು ತಾತ್ವಿಕವಾಗಿ ಒಪ್ಪಿ
ಕೊಂಡಿದ್ದವಾದರೂ ಅದು ಸ್ಪಷ್ಟ ರೂಪ ಪಡೆದಿರಲಿಲ್ಲ.

ಈ ಹುದ್ದೆಗೆ ವಹಿಸಬೇಕಾದ ಜವಾಬ್ದಾರಿಗಳು ಏನು, ನೀಡಬೇಕಾದ ಅಧಿಕಾರಗಳು ಏನು ಎಂಬ ವಿಚಾರಗಳೆಲ್ಲ ಚರ್ಚೆಯ ಹಂತದಲ್ಲೇ ಉಳಿದುಕೊಂಡಿದ್ದವು. ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರಿಗಿಂತ ಮೇಲಿನ ಹಂತದಲ್ಲಿ ಸೃಷ್ಟಿಯಾಗುವ ಈ ಹುದ್ದೆಯ ಬಗ್ಗೆ ಹಿರಿಯ ಅಧಿಕಾರಿಗಳ ವಲಯದಲ್ಲಿ ಹಾಗೂ ರಾಜಕೀಯ ವಲಯದಲ್ಲಿ ಕಳವಳ ವ್ಯಕ್ತವಾಗಿದ್ದು ಕೂಡ ಇದೆ. ಆದರೆ, ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು,ಸಿಡಿಎಸ್‌ ಹುದ್ದೆಯನ್ನು ಸೃಷ್ಟಿಸುವುದಾಗಿ ಹೇಳಿದ್ದರು. ಸಂಪುಟ ಈ ದಿಸೆಯಲ್ಲಿ ಈಗ ಮಹತ್ವದ ನಿರ್ಧಾರ ಕೈಗೊಂಡಿದೆ.

ಸಿಡಿಎಸ್ ಹುದ್ದೆಯು ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರ ಶ್ರೇಣಿಯಲ್ಲೇ ಇರುತ್ತದೆ. ಆದರೆ, ‘ಸಮಾನರ ನಡುವೆ ಮೊದಲಿಗ’ ಆಗಿರುತ್ತದೆ. ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಸೇನಾ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾಗಿಯೂ ಸಿಡಿಎಸ್‌ ಕೆಲಸ ಮಾಡಬೇಕಾಗುತ್ತದೆ. ಸಲಕರಣೆಗಳು ಹಾಗೂ ಶಸ್ತ್ರಾಸ್ತ್ರಗಳ ಖರೀದಿ, ಸಿಬ್ಬಂದಿ ತರಬೇತಿ ಮತ್ತು ಸಿಬ್ಬಂದಿ ನಿಯೋಜನೆ ವಿಚಾರದಲ್ಲಿ ಮೂರೂ ಪಡೆಗಳ ನಡುವೆ ಸಮನ್ವಯ ತರುವ ಹೊಣೆ ಸಿಡಿಎಸ್‌ ಮೇಲೆ ಇರಲಿದೆ.

ADVERTISEMENT

ಈ ಹುದ್ದೆ ಸೃಷ್ಟಿಯ ನಂತರ ರಕ್ಷಣಾ ಪಡೆಗಳ ಅಗತ್ಯಗಳನ್ನು ಆದ್ಯತೆಯ ಮೇರೆಗೆ ವರ್ಗೀಕರಿಸಿಕೊಳ್ಳುವುದು, ಸಂಪನ್ಮೂಲಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳುವುದು ಹೆಚ್ಚು ಸುಲಲಿತವಾಗುವ ನಿರೀಕ್ಷೆ ಇದೆ. ಇವೆಲ್ಲಕ್ಕಿಂತ ಹೆಚ್ಚಾಗಿ, ಈ ಹುದ್ದೆಯು ಮಿಲಿಟರಿ ವಿಚಾರದಲ್ಲಿ ಸರ್ಕಾರಕ್ಕೆ ಏಕಗವಾಕ್ಷಿ ಸಲಹಾ ವ್ಯವಸ್ಥೆಯಾಗಿ ಕೆಲಸ ಮಾಡಲಿದೆ. ಸಿಡಿಎಸ್‌ ಹುದ್ದೆಯು ನಿಭಾಯಿಸಬೇಕಿರುವ ಈ ಎಲ್ಲ ಜವಾಬ್ದಾರಿಗಳ ಬಗ್ಗೆ ವಿಸ್ತೃತ ರೂಪುರೇಷೆಗಳು ಸಿದ್ಧವಿವೆ. ಆದರೆ, ಇವೆಲ್ಲವೂ ಯಾವ ಸ್ವರೂಪದಲ್ಲಿ ವಿಕಾಸ ಹೊಂದುತ್ತವೆ, ಈ ಹುದ್ದೆಯು ಯಾವ ರೀತಿಯ ಅಧಿಕಾರಗಳನ್ನು ಹೊಂದಿರುತ್ತದೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.

ಇವೆಲ್ಲವೂ ಈ ಹುದ್ದೆಗೆ ಮೊದಲು ಯಾರು ನೇಮಕ ಆಗುತ್ತಾರೆ, ಅವರು ಹುದ್ದೆಯ ಚೌಕಟ್ಟನ್ನು ಹೇಗೆ ರೂಪಿಸುತ್ತಾರೆ ಎಂಬುದನ್ನು ಆಧರಿಸಿದೆ. ‘ಈ ಹುದ್ದೆ ಸೃಷ್ಟಿಯಾದ ನಂತರ ರಕ್ಷಣಾ ಪಡೆಗಳ ಮೂರೂ ವಿಭಾಗಗಳಿಗೆ ಮೇಲಿನ ಹಂತದಲ್ಲಿ ಪರಿಣಾಮಕಾರಿ ನಾಯಕತ್ವ ಲಭಿಸಲಿದೆ’ ಎಂದು ಪ್ರಧಾನಿ ಮೋದಿ ಅವರು ಭರವಸೆ ನೀಡಿದ್ದಾರೆ. ಈ ಹುದ್ದೆಯು ರಕ್ಷಣಾ ಪಡೆಗಳ ಮೂರೂ ವಿಭಾಗಗಳಿಗೆ ಉತ್ತಮ ನಾಯಕತ್ವ ನೀಡುವ ಜೊತೆಯಲ್ಲೇ, ಮಿಲಿಟರಿ ಹಾಗೂ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದೆ. ದೇಶಕ್ಕೆ ಒದಗಿಸಬೇಕಿರುವ ಭದ್ರತೆಯ ಸ್ವರೂಪವು ಇಂದು ಗಡಿ ಕಾವಲು,ಭಯೋತ್ಪಾದಕರ ನುಸುಳುವಿಕೆಯನ್ನು ತಡೆಯುವಂತಹ ವಿಷಯಗಳಿಗೆ ಮಾತ್ರ ಸೀಮಿತ ಆಗಿಲ್ಲ.

ದೇಶದ ರಕ್ಷಣೆಯು ಸೈಬರ್‌ ದಾಳಿ ತಡೆ ಸೇರಿದಂತೆ ವಿವಿಧ ಆಯಾಮಗಳನ್ನು ಪಡೆದುಕೊಂಡಿದೆ. ಹಾಗೆಯೇ, ‘ರಕ್ಷಣೆ’ ಎಂಬ ಪದದ ವ್ಯಾಖ್ಯೆ ಬದಲಾಗುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಮೂರೂ ವಿಭಾಗಗಳ ನಡುವೆ ಹೆಚ್ಚಿನ ಸಮನ್ವಯ ಇರಬೇಕಾದುದು ಅಪೇಕ್ಷಣೀಯವೂ ಹೌದು. ದೇಶದ ಮಿಲಿಟರಿಯಲ್ಲಿನ ಪರಿವರ್ತನೆಯ ಹಾದಿಯಲ್ಲಿ ಈ ಹುದ್ದೆಯ ಸೃಷ್ಟಿಯು ಅತ್ಯಂತ ಪ್ರಮುಖ ಹಂತವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.