ADVERTISEMENT

ಸಂಪಾದಕೀಯ: ಅಕ್ಬರ್–ಪ್ರಿಯಾ ಪ್ರಕರಣ; ಅಚ್ಚಳಿಯದೆ ಉಳಿಯಲಿದೆ ಆದೇಶ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 21:22 IST
Last Updated 18 ಫೆಬ್ರುವರಿ 2021, 21:22 IST
ಸಂಪಾದಕೀಯ
ಸಂಪಾದಕೀಯ   

ಸುಬ್ರಮಣಿಯನ್ ಸ್ವಾಮಿ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ 2016ರ ಮೇ ತಿಂಗಳಿನಲ್ಲಿ ನೀಡಿರುವ ತೀರ್ಪು, ಮೈಲಿಗಲ್ಲು ಅನ್ನಿಸುವಂಥದ್ದು. ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, ವ್ಯಕ್ತಿಯು ಸಮಾಜದಲ್ಲಿ ಹೊಂದಿರುವ ಹೆಸರು, ಆತ ಸಂಪಾದಿಸಿರುವ ಕೀರ್ತಿಯು ಸಂವಿಧಾನದ 21ನೆಯ ವಿಧಿಯು ನೀಡಿರುವ ಜೀವಿಸುವ ಸ್ವಾತಂತ್ರ್ಯದ ಅವಿಭಾಜ್ಯ ಅಂಗ ಎಂದು ಹೇಳಿದೆ. ವ್ಯಕ್ತಿ ತಾನು ಸಂಪಾದಿಸಿದ ಕೀರ್ತಿಯನ್ನು ರಕ್ಷಿಸಿಕೊಳ್ಳುವುದು ಮೂಲಭೂತ ಹಕ್ಕು ಎಂದು ಕೂಡ ಸುಪ್ರೀಂ ಕೋರ್ಟ್‌ ಹೇಳಿದೆ.

ಪತ್ರಕರ್ತ ಹಾಗೂ ಕೇಂದ್ರದ ಮಾಜಿ ಸಚಿವ ಎಂ.ಜೆ. ಅಕ್ಬರ್ ಅವರು ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ, ದೆಹಲಿಯ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ನ್ಯಾಯಾಲಯವು ಪ್ರಿಯಾ ಅವರನ್ನು ಆರೋಪಮುಕ್ತಗೊಳಿಸಿದೆ. ದೇಶದಲ್ಲಿ ಮಾನನಷ್ಟ ಮೊಕದ್ದಮೆಗಳು ನೂರಾರು ಸಂಖ್ಯೆಯಲ್ಲಿ ದಾಖಲಾಗುತ್ತಲೇ ಇರುತ್ತವೆ. ಮಾನನಷ್ಟಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳು ಅಕ್ಬರ್ ಮತ್ತು ಪ್ರಿಯಾ ಅವರ ಪ್ರಕರಣದಷ್ಟು ಗಮನ ಸೆಳೆಯುವುದಿಲ್ಲ. ಇವರಿಬ್ಬರೂ ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಗಳಾದುದರಿಂದ, ಈ ಪ್ರಕರಣವು ಸಮಾಜದ ಗಮನವನ್ನು ದೊಡ್ಡ ಮಟ್ಟದಲ್ಲಿ ಸೆಳೆಯಿತು. ಈಗ, ಪ್ರಕರಣದಲ್ಲಿ ಹೊರಬಂದಿರುವ ಆದೇಶವು ಇನ್ನೂ ಹೆಚ್ಚಿನ ಗಮನ ಸೆಳೆದಿದೆ.

ಮಹಿಳೆಯರ ಬದುಕಿನ ಘನತೆ, ಲೈಂಗಿಕ ಕಿರುಕುಳಕ್ಕೆ ತುತ್ತಾದ ಹೆಣ್ಣುಮಕ್ಕಳ ಪರವಾಗಿ ಆಡಿರುವ ಕೆಲವು ಮಾತುಗಳ ಕಾರಣದಿಂದಾಗಿ ಈ ಆದೇಶವು ಜನರ ಸ್ಮೃತಿಪಟಲದಲ್ಲಿ ಬಹುಕಾಲ ಉಳಿದುಕೊಳ್ಳಲಿದೆ. ‘ಲೈಂಗಿಕವಾಗಿ ದೌರ್ಜನ್ಯಕ್ಕೆ ಗುರಿಯಾದ ಮಹಿಳೆ ದನಿ ಎತ್ತಿದಾಗ ಮಾನನಷ್ಟದ ಕಾರಣ ಹೇಳಿ ಆ ಮಹಿಳೆಯನ್ನು ಶಿಕ್ಷೆಗೆ ಗುರಿಪಡಿಸಲು ಆಗುವುದಿಲ್ಲ’ ಎಂದು ದೆಹಲಿಯ ನ್ಯಾಯಾಲಯ ಹೇಳಿದೆ. ಹಾಗೆಯೇ, ‘ಮಹಿಳೆಯರ ಜೀವಿಸುವ ಮತ್ತು ಘನತೆಯ ಹಕ್ಕನ್ನು ಬಲಿಕೊಟ್ಟು, ವ್ಯಕ್ತಿಯೊಬ್ಬನ ಕೀರ್ತಿಯನ್ನು ರಕ್ಷಿಸಲು ಆಗದು’ ಎಂದು ಕೂಡ ನ್ಯಾಯಾಲಯವು ಸ್ಪಷ್ಟಪಡಿಸಿದೆ. ವ್ಯಕ್ತಿಯ ಕೀರ್ತಿ, ಪ್ರತಿಷ್ಠೆ ಹಾಗೂ ಮಹಿಳೆಯ ಜೀವಿಸುವ ಸ್ವಾತಂತ್ರ್ಯ, ಘನತೆಯ ಬದುಕಿನ ನಡುವಿನ ಪ್ರಶ್ನೆ ಎದುರಾದಾಗ ನ್ಯಾಯಾಲಯವು ಮಹಿಳೆಯ ಬದುಕಿನ ಸ್ವಾತಂತ್ರ್ಯ ಹೆಚ್ಚು ಮಹತ್ವದ್ದು ಎಂದು ಈ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಹೀಗಾಗಿ, ಇದೊಂದು ಪ್ರಗತಿಪರ ಹಾಗೂ ಸ್ವಾಗತಾರ್ಹ ತೀರ್ಪು.

ADVERTISEMENT

2018ರ ಸುಮಾರಿನಲ್ಲಿ ‘ಮೀಟೂ’ ಪ್ರಕರಣಗಳು ಹೆಚ್ಚು ವರದಿಯಾದಾಗ, ‘ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದಾಗಿ ಹೇಳಿಕೊಳ್ಳುವ ಮಹಿಳೆಯರು ತಮ್ಮ ನೋವನ್ನು ಮೊದಲೇ ಏಕೆ ಬಹಿರಂಗಪಡಿಸಲಿಲ್ಲ. ದೌರ್ಜನ್ಯ ನಡೆದ ತಕ್ಷಣದಲ್ಲಿ ಅದನ್ನು ತಿಳಿಸದಿದ್ದುದು, ವರ್ಷಗಳ ನಂತರ ಅದನ್ನು ಹೇಳುತ್ತಿರುವುದು ಸರಿಯೇ’ ಎಂಬ ಪ್ರಶ್ನೆಗಳು ಮೂಡಿದ್ದವು. ಆದರೆ, ತಾನು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದೇನೆ ಎಂಬುದು ಗೊತ್ತಾಗದ ಕಾರಣದಿಂದಾಗಿಯೂ ಮಹಿಳೆ ಸುಮ್ಮನಿದ್ದಿರುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಹೇಳಿದೆ. ಲೈಂಗಿಕ ದೌರ್ಜನ್ಯಕ್ಕೆ ಗುರಿಯಾದವರನ್ನೇ ಅವಮಾನಕ್ಕೆ ಗುರಿಪಡಿಸುವ ನಮ್ಮ ಸಮಾಜದಲ್ಲಿ, ಕಿರುಕುಳಕ್ಕೆ ತುತ್ತಾದ ಹೆಣ್ಣು ತನಗಾಗಿದ್ದನ್ನು ತಕ್ಷಣಕ್ಕೆ ಹೇಳಿಕೊಳ್ಳಬೇಕು ಎಂದು ಬಯಸುವುದೇ ತಪ್ಪು. ಈ ನಿಲುವು ಕೂಡ, ಅಕ್ಬರ್ ಮತ್ತು ಪ್ರಿಯಾ ನಡುವಿನ ಪ್ರಕರಣದ ಆದೇಶದಲ್ಲಿ ವ್ಯಕ್ತವಾಗಿದೆ.

‘ಮಹಿಳೆಗೆ ತನ್ನ ನೋವನ್ನು ಯಾವುದೇ ವೇದಿಕೆಯ ಮೂಲಕ,ಘಟನೆ ನಡೆದ ದಶಕದ ನಂತರವೂ ಹೇಳಿಕೊಳ್ಳುವ ಹಕ್ಕು ಇದೆ’ ಎಂದು ನ್ಯಾಯಾಲಯ ಹೇಳಿದೆ. ಲೈಂಗಿಕ ದೌರ್ಜನ್ಯ ಎಂಬುದು ಮಹಿಳೆಯ ದೇಹದ ಮೇಲೆ ಮಾತ್ರವಲ್ಲ, ಆಕೆಯ ಆತ್ಮದ ಮೇಲೆ ನಡೆಸುವ ಹಲ್ಲೆ ಎಂಬ ಮಾತನ್ನು ದೇಶದ ನ್ಯಾಯಾಂಗ ಹಿಂದೆಯೇ ಹೇಳಿದೆ. ಈ ಬಗೆಯ ದೌರ್ಜನ್ಯಕ್ಕೆ ಗುರಿಯಾದ ಹೆಣ್ಣು, ತನಗಾದ ಅನ್ಯಾಯವನ್ನು ತಕ್ಷಣಕ್ಕೆ ಹೇಳಿಬಿಡಬೇಕು ಎಂಬ ಯಾವ ಕಟ್ಟುಪಾಡೂ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿರುವ ಈ ಆದೇಶವು ಮಾನವೀಯವೂ ಸಂವೇದನಾಶೀಲವೂ ಆಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ವ್ಯಕ್ತಿಯು ಜೀವಿತಾವಧಿಯಲ್ಲಿ ಸಂಪಾದಿಸುವ ಕೀರ್ತಿ ಎಂಬುದು ಆತನ ಮೂಲಭೂತ ಹಕ್ಕಿನ ಭಾಗ ಎಂಬುದು ನಿಜ. ಸುಬ್ರಮಣಿಯನ್ ಸ್ವಾಮಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ್ದೂ ಅದನ್ನೇ. ಆದರೆ, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ, ಆ ಮೂಲಭೂತ ಹಕ್ಕನ್ನು ಗುರಾಣಿಯಂತೆ ಬಳಸಿಕೊಳ್ಳಲಾಗದು ಎಂಬುದನ್ನು ದೆಹಲಿ ನ್ಯಾಯಾಲಯದ ಆದೇಶವು ಸ್ಪಷ್ಟಪಡಿಸಿದೆ. ಈ ಎಲ್ಲ ಕಾರಣಗಳಿಂದಾಗಿ ಈಗ ಬಂದಿರುವ ಆದೇಶವು ಸಾರ್ವಜನಿಕರ ನಡುವೆ ವ್ಯಾಪಕ ಚರ್ಚೆಗೆ ಒಳಗಾಗಲಿದೆ, ಸಮಾಜ ಜೀವನದಲ್ಲಿ ಅಚ್ಚಳಿಯದೆ ನಿಲ್ಲಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.