ADVERTISEMENT

ಸಂಸತ್ತಿನಲ್ಲಿ ಗುಣಮಟ್ಚದ ಚರ್ಚೆಗೆಹೆಚ್ಚು ಸಮಯ ಮೀಸಲಿಡಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 19:45 IST
Last Updated 18 ಜೂನ್ 2019, 19:45 IST
   

ಹದಿನೇಳನೇ ಲೋಕಸಭೆಯ ಬಜೆಟ್‌ ಅಧಿವೇಶನಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಮಾಧ್ಯಮದ ಮುಂದೆ ಆಡಿರುವ ಮಾತುಗಳು ಸ್ವಾಗತಾರ್ಹ. ‘ಸಂಸತ್ತಿನಲ್ಲಿ ವಿರೋಧಪಕ್ಷಗಳು, ಜನ ತಮಗೆ ನೀಡಿರುವ ಸಂಖ್ಯೆ ಬಗ್ಗೆ ಚಿಂತೆ ಮಾಡಬೇಕಿಲ್ಲ. ವಿರೋಧಪಕ್ಷದ ಸದಸ್ಯರು ಆಡುವ ಪ್ರತಿ ಶಬ್ದವನ್ನೂ, ಭಾವನೆಯನ್ನೂ ಸರ್ಕಾರ ಅಮೂಲ್ಯವೆಂದು ಪರಿಗಣಿಸುತ್ತದೆ. ಸಂಸದೀಯ ಪ್ರಜಾ
ಪ್ರಭುತ್ವದಲ್ಲಿ ಪ್ರಬಲ ಮತ್ತು ಕ್ರಿಯಾತ್ಮಕ ವಿರೋಧಪಕ್ಷ ಅತ್ಯಗತ್ಯ’ ಎಂದು ಮೋದಿ ಹೇಳಿದ್ದಾರೆ. 545 ಸದಸ್ಯಬಲದ ಲೋಕಸಭೆಯಲ್ಲಿ, ಆಳುವ ಎನ್‌ಡಿಎ ಕೂಟವು 350ಕ್ಕೂ ಹೆಚ್ಚು ಸದಸ್ಯರ ದೈತ್ಯ ಬಹುಮತ ಹೊಂದಿರುವ ಹಿನ್ನೆಲೆಯಲ್ಲಿ ಪ್ರಧಾನಿಯವರ ಈ ಮಾತುಗಳಿಗೆ ವಿಶೇಷ ಮಹತ್ವವಿದೆ. ಸಂಸತ್ತಿನಲ್ಲಿ ನಡೆಯುವ ಚರ್ಚೆಗಳೇ ಪ್ರಜಾಪ್ರಭುತ್ವದ ಜೀವಾಳ. ಪ್ರಚಂಡ ಬಹುಮತ ಹೊಂದಿಯೂ ವಿರೋಧಪಕ್ಷದ ಸಕ್ರಿಯ ಪಾಲ್ಗೊಳ್ಳುವಿಕೆಗೆ ಮುಕ್ತ ಅವಕಾಶ ನೀಡುವುದಾಗಿ ಹೇಳಿರುವುದು ಅವರ ಮುತ್ಸದ್ದಿತನದ ದ್ಯೋತಕವೆಂದೇ ಪರಿಗಣಿಸಬಹುದು. ಆದರೆ ಅವರು ಹೇಳಿದ್ದನ್ನು ಎಷ್ಟರಮಟ್ಟಿಗೆ ಕ್ರಿಯಾರೂಪದಲ್ಲಿ ಜಾರಿಗೆ ತರುತ್ತಾರೆ ಎನ್ನುವ ಪ್ರಶ್ನೆಯೂ ಮಹತ್ವದ್ದು. ಸಂಸತ್‌ ಕಲಾಪದ ಅವಧಿ ಹೆಚ್ಚಿದರೆ ಮಾತ್ರ ವಿಸ್ತೃತ ಚರ್ಚೆ ಸಾಧ್ಯ. 16ನೇ ಲೋಕಸಭೆಯಲ್ಲೂ ಆಳುವ ಎನ್‌ಡಿಎ ಕೂಟಕ್ಕೆ ದೊಡ್ಡ ಬಹುಮತ ಇತ್ತು. ಮೋದಿಯವರೇ ಪ್ರಧಾನಿಯಾಗಿದ್ದರು. ಆದರೆ ಮೊದಲ ನಾಲ್ಕು ವರ್ಷಗಳಲ್ಲಿ 287 ದಿನಗಳ ಕಲಾಪ ಮಾತ್ರ ನಡೆದಿತ್ತು. ಯಾವುದೇ ಮಹತ್ವದ ಮಸೂದೆಯ ಬಗ್ಗೆ ಪರ–ವಿರೋಧದ ಗಟ್ಟಿ ವಾದಗಳಿದ್ದರೆ, ಹೆಚ್ಚಿನ ಪರಿಶೀಲನೆಗೆ ಸದನ ಸಮಿತಿಗಳಿಗೆ ಒಪ್ಪಿಸುವುದು ನಡೆದು ಬಂದಿರುವ ಸಂಪ್ರದಾಯ. ಆದರೆ ಕಳೆದ ಲೋಕಸಭೆಯಲ್ಲಿ ಶೇ 26ರಷ್ಟು ಮಸೂದೆಗಳು ಮಾತ್ರ ಸದನ ಸಮಿತಿಗಳ ಪರಿಶೀಲನೆಗೆ ಒಳಪಟ್ಟವು. ಇಡೀ ದೇಶದ ಆರ್ಥಿಕತೆಗೆ ಆಧಾರವಾದ ಮುಂಗಡಪತ್ರದ ಶೇ 15ರಷ್ಟು ಅಂಶಗಳ ಬಗ್ಗೆ ಮಾತ್ರ ವಿವರವಾದ ಚರ್ಚೆ ನಡೆದಿದೆ ಎಂದು ವರದಿಯಾಗಿದೆ. ಹಿಂದಿನ ಅವಧಿಯಲ್ಲಿ ಲೋಕಸಭೆಯ ಕಲಾಪದ ಗುಣಮಟ್ಟ ತೃಪ್ತಿಕರವಾಗಿರಲಿಲ್ಲ ಎನ್ನುವುದನ್ನು ಇದು ಸೂಚಿಸುತ್ತದೆ. ಹಿಂದಿನ ಸಂಸತ್‌ ಕಲಾಪಗಳ ಈ ಐಬುಗಳು ಮರುಕಳಿಸದಂತೆ ನೋಡಿಕೊಂಡರೆ, ಚರ್ಚೆಯ ಗುಣಮಟ್ಟ ಸುಧಾರಿಸಲು ಸಾಧ್ಯ.

ಇದು ಬರೀ ಎನ್‌ಡಿಎ ಆಳ್ವಿಕೆಯ ಪ್ರಶ್ನೆಯಲ್ಲ. ಯುಪಿಎ–2 ಸರ್ಕಾರ ಇದ್ದಾಗಲೂ ಲೋಕಸಭೆಯ ಚರ್ಚೆಯ ಗುಣಮಟ್ಟ ಹೇಳಿಕೊಳ್ಳುವಂತಿರಲಿಲ್ಲ. 15ನೇ ಲೋಕಸಭೆಯಲ್ಲಿ ಶೇ 25ರಷ್ಟು ಮಸೂದೆಗಳು ಪ್ರತಿಪಕ್ಷಗಳ ಗದ್ದಲ, ಕೋಲಾಹಲದ ನಡುವೆ ಚರ್ಚೆಯೇ ಇಲ್ಲದೆ ಅಂಗೀಕಾರವಾಗಿದ್ದವು. ವಿರೋಧಪಕ್ಷದಲ್ಲಿದ್ದ ಬಿಜೆಪಿಯ ಸದಸ್ಯರ ಕೋಲಾಹಲದಿಂದಾಗಿ, ಸದನದ ಹೆಚ್ಚು ಸಮಯ
ವ್ಯರ್ಥವಾಗಿತ್ತು. ಈ ಹಿಂದಿನ ಲೋಕಸಭಾ ಅಧಿವೇಶನದಲ್ಲಿ ಪ್ರಧಾನಿ ಮೋದಿಯವರು ಹಲವು ಉದ್ದುದ್ದ ಭಾಷಣಗಳನ್ನು ಮಾಡಿದ್ದುಂಟು. ಆದರೆ ಸಂಸದೀಯ ಚರ್ಚೆಯಲ್ಲಿ ಅವರು ಮುಖಾಮುಖಿ ಪಾಲ್ಗೊಂಡದ್ದು ಕಡಿಮೆಯೇ. ಚರ್ಚೆಯ ಸಂದರ್ಭದಲ್ಲಿ ಸ್ವತಃ ಪ್ರಧಾನಿಯವರಿಂದ ಸದಸ್ಯರು ಉತ್ತರ ಬಯಸಿದರೂ ಅವರು ಮೌನ ವಹಿಸಿದ್ದೇ ಹೆಚ್ಚು. ಆಳುವ ಪಕ್ಷದ ಸದಸ್ಯರು ನಾಯಕನನ್ನು ಬೆಂಬಲಿಸುವ ಘೋಷಣೆಗಳಿಗಷ್ಟೇ ಸೀಮಿತವಾಗಿ ಇರುತ್ತಿದ್ದರು. ಲೋಕಸಭೆಯ ಆರಂಭಿಕ ಹಂತದ ಅಧಿವೇಶನಗಳಲ್ಲಿ ಹೀಗಿರಲಿಲ್ಲ. ಪ್ರಧಾನಿ ಜವಾಹರಲಾಲ್‌ ನೆಹರೂ ಎದುರಿಗೆ ಗಟ್ಟಿಯಾಗಿ ನಿಂತು ಫಿರೋಜ್‌ ಗಾಂಧಿ, ರಾಮಮನೋಹರ ಲೋಹಿಯಾ ಮುಂತಾದ ನಾಯಕರು ವಾಗ್ಯುದ್ಧಗಳನ್ನು ನಡೆಸುತ್ತಿದ್ದರು. ಹಣಕಾಸು ಸಚಿವ ಟಿ.ಟಿ. ಕೃಷ್ಣಮಾಚಾರಿಯವರು ಸ್ವತಃ ತಮ್ಮ ಪಕ್ಷದ ಸಂಸದರ ವಿರೋಧದ ಹಿನ್ನೆಲೆಯಲ್ಲೇ ರಾಜೀನಾಮೆ ಕೊಡಬೇಕಾಯಿತು. ಮೊದಲ ಮೂರು ಲೋಕಸಭೆ ಕಲಾಪಗಳ ಅವಧಿಗೆ ಹೋಲಿಸಿದರೆ ಈಗ ಲೋಕಸಭೆಯ ಕಲಾಪಗಳ ಅವಧಿ ಅರ್ಧಕ್ಕರ್ಧ ಇಳಿದಿದೆ. ಲೋಕಸಭೆಯಲ್ಲಿ ಕನಿಷ್ಠ 55 ಸ್ಥಾನಗಳನ್ನು ಹೊಂದಿರುವ ಪಕ್ಷ ಮಾತ್ರ ಅಧಿಕೃತ ವಿರೋಧಪಕ್ಷದ ನಾಯಕನ ಸ್ಥಾನ ಪಡೆಯಲು ಸಾಧ್ಯವಿದೆ. ಸಂಸತ್ತಿನಲ್ಲಿ ವಿರೋಧಪಕ್ಷಗಳ ಧ್ವನಿ ಗಟ್ಟಿಯಾಗಿರಬೇಕೆಂಬ ತಮ್ಮ ಆಶಯದ ಬಗ್ಗೆ ಪ್ರಧಾನಿ ಮೋದಿಯವರು ನಿಜಕ್ಕೂ ಪ್ರಾಮಾಣಿಕರಾಗಿದ್ದರೆ, ಈಗಿನ ಲೋಕಸಭೆಯಲ್ಲಿ 52 ಸ್ಥಾನ ಮಾತ್ರ ಹೊಂದಿರುವ ಕಾಂಗ್ರೆಸ್‌ ಪಕ್ಷಕ್ಕೆ ಅಧಿಕೃತ ವಿರೋಧಪಕ್ಷದ ನಾಯಕನ ಸ್ಥಾನವನ್ನು ನೀಡುವ ಔದಾರ್ಯ ತೋರಬೇಕು. ಅಧಿಕೃತ ವಿರೋಧಪಕ್ಷದ ನಾಯಕ, ಸಂಪುಟ ದರ್ಜೆಯ ಸಚಿವ ಸ್ಥಾನಮಾನ ಪಡೆಯಲಿದ್ದು ಸಿಬಿಐ ನಿರ್ದೇಶಕ, ಲೋಕಪಾಲ, ಕೇಂದ್ರ ಜಾಗೃತ ದಳದ ಆಯುಕ್ತ ಮುಂತಾದ ಸಾಂವಿಧಾನಿಕ ಹುದ್ದೆಗಳ ನೇಮಕದಲ್ಲಿ ಸಕ್ರಿಯ ಪಾತ್ರ ವಹಿಸಬಹುದು. ಸಂಸದೀಯ ಪ್ರಜಾಪ್ರಭುತ್ವ ಯಶಸ್ಸು ಹೊಂದಬೇಕಿದ್ದರೆ ಸದನದ ನಾಯಕ, ಕೃತಿಯಲ್ಲೂ ಹೆಚ್ಚು ಉದಾರಿಯಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT