ADVERTISEMENT

ಹೊಸ ಲಸಿಕಾ ಅಭಿಯಾನ; ಮಹತ್ವ ಮನವರಿಕೆಯಾಗಲಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 20:00 IST
Last Updated 16 ಡಿಸೆಂಬರ್ 2019, 20:00 IST
Edit- 17-12-2019
Edit- 17-12-2019   

ದೇಶದಾದ್ಯಂತ ಆರಂಭವಾಗಿರುವ ಹೊಸ ಲಸಿಕಾ ಅಭಿಯಾನವು ಅತ್ಯಂತ ಪ್ರಮುಖ ಕಾರ್ಯಕ್ರಮ. ಎರಡು ವರ್ಷದೊಳಗಿನ ಎಲ್ಲಾ ಮಕ್ಕಳು ಮತ್ತು ಗರ್ಭಿಣಿಯರಿಗೆ ಲಸಿಕೆ ಹಾಕುವುದು ಇದರ ಗುರಿ. ‘ಇಂದ್ರಧನುಷ್ 2.0’ ಎಂದು ಹೆಸರಿಸಲಾಗಿರುವ ಈ ಅಭಿಯಾನವನ್ನು ಡಿಸೆಂಬರ್‌ 2ರಂದು ಉದ್ಘಾಟಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು 2017ರಲ್ಲಿ ಉದ್ಘಾಟಿಸಿದ ಲಸಿಕಾ ಕಾರ್ಯಕ್ರಮದ ಸುಧಾರಿತ ಆವೃತ್ತಿ ಇದಾಗಿದೆ. ರಾಷ್ಟ್ರದ 272 ಜಿಲ್ಲೆಗಳನ್ನು ಸಂಪೂರ್ಣವಾಗಿ ಒಳಗೊಳ್ಳುವ, ಎಲ್ಲಾ ಜಿಲ್ಲೆಗಳಿಗೆ ಹಾಗೂ ಸರ್ವ ಜನಸಮುದಾಯಗಳಿಗೆ ಅನ್ವಯವಾಗುವಂತೆ ಶೇ 90ರಷ್ಟು ಗುರಿ ಸಾಧಿಸುವ ಉದ್ದೇಶವನ್ನು ಇದು ಹೊಂದಿದೆ.

ಈ ಡಿಸೆಂಬರ್‌ನಿಂದ 2020ರ ಮಾರ್ಚ್‌ವರೆಗಿನ ಮೂರು ತಿಂಗಳ ಕಾಲಮಿತಿಯನ್ನು ಇದಕ್ಕಾಗಿ ಹಾಕಿಕೊಳ್ಳಲಾಗಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ಹಾಕಿಸಿಕೊಳ್ಳದೇ ಇದ್ದಿರಬಹುದಾದ ಎರಡು ವರ್ಷದೊಳಗಿನ ಎಲ್ಲಾ ಶಿಶುಗಳು ಮತ್ತು ಗರ್ಭಿಣಿಯರಿಗೆ ಈ ಸೌಲಭ್ಯವನ್ನು ತಲುಪಿಸುವ ಮಹತ್ವಾಕಾಂಕ್ಷೆಯನ್ನು ಈ ಕಾರ್ಯಕ್ರಮ ಹೊಂದಿದೆ. ಲಸಿಕೆಯಿಂದ ತಡೆಗಟ್ಟಬಹುದಾದ ಯಾವುದೇ ಕಾಯಿಲೆಯಿಂದ ಮಕ್ಕಳು ನರಳುವಂತಾಗಬಾರದು ಎಂಬುದು ಇದರ ಹಿಂದಿನ ಸದಾಶಯ. ಶಿಶುಗಳ ಪ್ರಾಣ ಮತ್ತು ಆರೋಗ್ಯಕ್ಕೆ ಗಂಭೀರ ಗಂಡಾಂತರಗಳನ್ನು ತಂದೊಡ್ಡಬಹುದಾದ ಹೆಪಟೈಟಿಸ್– ಬಿ, ಕ್ಷಯ, ಗಂಟಲುಮಾರಿಯಂತಹ ಎಂಟು ರೋಗಗಳ ವಿರುದ್ಧ ಈ ಲಸಿಕೆ ರಕ್ಷಣೆ ಒದಗಿಸುತ್ತದೆ.

ಜಗತ್ತಿನಲ್ಲಿ ಲಸಿಕಾ ರಕ್ಷಣೆಯಿಂದ ಹೊರಗುಳಿ ದಿರುವ ಶಿಶುಗಳ ಪ್ರಮಾಣ ಭಾರತದಲ್ಲೇ ಅತ್ಯಧಿಕ. ಇಂತಹ ಮಕ್ಕಳ ಸಂಖ್ಯೆ 74 ಲಕ್ಷ ಎಂಬ ಅಂದಾಜು ಇದೆ. ಹೀಗಾಗಿ, ಈ ಲಸಿಕಾ ಅಭಿಯಾನ ಅತ್ಯಂತ ಪ್ರಮುಖ ಎಂಬುದರಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ. ಇದರ ಜೊತೆಗೆ, ರಾಷ್ಟ್ರದಲ್ಲಿ ಪ್ರತಿವರ್ಷ ಜನಿಸುತ್ತಿರುವ ಶಿಶುಗಳ ಸಂಖ್ಯೆ 2.6 ಕೋಟಿ ಆಗಿದೆ. ಇದರಲ್ಲಿ ಕೂಡ ಭಾರತವು ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ಪ್ರತೀ ಮಗುವಿಗೆ ಲಸಿಕೆಯನ್ನು ಲಭ್ಯವಾಗಿಸುವುದು ಎಷ್ಟು ಮುಖ್ಯ ಎಂಬುದನ್ನು ಈ ಅಂಕಿಅಂಶಗಳೇ ಹೇಳುತ್ತವೆ. ಜೊತೆಗೆ, ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಲಸಿಕಾ ಅಭಿಯಾನ ಹಮ್ಮಿಕೊಳ್ಳುವುದು ಬಲುದೊಡ್ಡ ಸವಾಲು ಎಂಬುದೂ ಇದರಿಂದಲೇ ಗೊತ್ತಾಗುತ್ತದೆ. ರಾಷ್ಟ್ರದಲ್ಲಿ ಶಿಶು ಮರಣ ಪ್ರಮಾಣ ಅಧಿಕ ಮಟ್ಟದಲ್ಲೇ ಇದೆ. ಇಂತಹ ಬಹುತೇಕ ಸಾವಿನ ಹಾಗೂ ಅಂಗವೈಕಲ್ಯದ ಪ್ರಕರಣಗಳು ಲಸಿಕೆ ವ್ಯಾಪ್ತಿಗೆ ಒಳಪಡುವ ಎಂಟು ಕಾಯಿಲೆಗಳಿಂದಲೇ ಸಂಭವಿಸುತ್ತಿವೆ. ಹೀಗಾಗಿ, ಸಕಾಲದಲ್ಲಿ ಲಸಿಕೆ ಹಾಕುವುದರಿಂದ ಇವನ್ನು ತಡೆಗಟ್ಟಬಹುದಾಗಿದೆ.
ಇದು ರಾಷ್ಟ್ರದಲ್ಲಿನ ಅತ್ಯಂತ ಪ್ರಮುಖ ಸಾರ್ವತ್ರಿಕ ಆರೋಗ್ಯ ಧ್ಯೇಯೋದ್ದೇಶಗಳಲ್ಲಿ ಒಂದಾಗಿದೆ. ಆರ್ಥಿಕ, ಸಾಮಾಜಿಕ ಮತ್ತು ಜನಸಂಖ್ಯೆ ಮೇಲೆ ತನ್ನದೇ ಆದ ಪರಿಣಾಮಗಳನ್ನೂ ಹೊಂದಿರುವ ಈ ಅಭಿಯಾನವು ರಾಷ್ಟ್ರದ ಅಭಿವೃದ್ಧಿ ಕಾರ್ಯತಂತ್ರದ ಪ್ರಮುಖ ಅಂಶಗಳಲ್ಲೂ ಸೇರಿದೆ. ಜೊತೆಗೆ, 2030ರೊಳಗೆ ಸಾಧಿಸುವ ಉದ್ದೇಶದ, ವಿಶ್ವಸಂಸ್ಥೆಯ ಸಹಸ್ರಮಾನದ ಅಭಿವೃದ್ಧಿ ಗುರಿಗಳಲ್ಲಿಯೂ ಒಂದಾಗಿದೆ. ಈ ಲಸಿಕಾ ಅಭಿಯಾನದ ಅನುಷ್ಠಾನದಲ್ಲಿ ಕೆಲವು ತೊಡರುಗಳು ಇದ್ದು, ಅವುಗಳ ನಿವಾರಣೆಗಾಗಿ ವಿಶೇಷ ಗಮನ ನೀಡಬೇಕಾದ ಅಗತ್ಯವಿದೆ. ಈ ಅಭಿಯಾನವು ಕೆಲವು ಪ್ರದೇಶಗಳನ್ನು ತಲುಪುವಲ್ಲಿ ಯಶಸ್ವಿಯಾಗಿಲ್ಲ. ವಿಶೇಷವಾಗಿ ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ಕಂಡುಬಂದಿವೆ. ಈ ಪ್ರದೇಶಗಳನ್ನು ತಲುಪುವುದು ಕಷ್ಟಕರವಾಗಿರುವುದೇ ಇದಕ್ಕೆ ಕಾರಣ ಎಂಬುದು ಖಚಿತಪಟ್ಟಿದೆ. ಒಂದಷ್ಟು ಪ್ರಕರಣಗಳಲ್ಲಿ, ಸಮುದಾಯಗಳು ಮತ್ತು ಕುಟುಂಬದವರು ಮೌಢ್ಯದಿಂದಾಗಿ ಇದನ್ನು ತಿರಸ್ಕರಿಸಿರುವುದು ಉಂಟು. ಮೂಢನಂಬಿಕೆ ಮತ್ತು ತಪ್ಪು ಕಲ್ಪನೆಗಳಿಂದಾಗಿ ಈ ಅಭಿಯಾನಕ್ಕೆ ಪ್ರತಿರೋಧ ಒಡ್ಡಿದ ಪ್ರಸಂಗಗಳೂ ನಡೆದಿವೆ. ಈ ಲಸಿಕಾ ಅಭಿಯಾನವು ಸಂತಾನಶಕ್ತಿಯನ್ನು ಕುಂದಿಸಿ ಜನಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶ ಹೊಂದಿರುವ ಸರ್ಕಾರಿ ಕಾರ್ಯಕ್ರಮ ಎಂದೂ ಕೆಲವರು ತಪ್ಪಾಗಿ ಭಾವಿಸಿದ್ದಾರೆ. ಧಾರ್ಮಿಕ ಭಾವನೆಗಳನ್ನು ಪ್ರಚೋದಿಸಿ, ಇದಕ್ಕೆ ತಡೆಯೊಡ್ಡುವ ಪ್ರಯತ್ನಗಳು ಸಹ ನಡೆದಿವೆ. ಹೀಗಾಗಿ, ಲಸಿಕೆ ಹಾಕಿಸಿಕೊಳ್ಳುವ ಅಗತ್ಯದ ಬಗ್ಗೆ ಜನರನ್ನು ಸುಶಿಕ್ಷಿತಗೊಳಿಸುವ ಮೂಲಕ ಅವರಲ್ಲಿ ಅರಿವು ಮೂಡಿಸಬೇಕಾಗಿದೆ. ಸ್ವಯಂ ಸೇವಾ ಸಂಸ್ಥೆಗಳು ಕೂಡ ಸರ್ಕಾರದೊಂದಿಗೆ ಕೈಜೋಡಿಸಬೇಕು. ನಿಗದಿತ ಕಾಲಮಿತಿಯಲ್ಲಿ ಗುರಿ ಸಾಧನೆ ಆಗಬೇಕಾದರೆ, ನಾಗರಿಕ ಸಮಾಜ ಹೆಚ್ಚಿನ ಮಟ್ಟದಲ್ಲಿ ಇದರಲ್ಲಿ ಭಾಗಿಯಾಗಬೇಕಿದೆ. ಇದಾದ ಬಳಿಕವೂ ಅಭಿಯಾನವು ಸಂಪೂರ್ಣ ಯಶಸ್ಸು ಸಾಧಿಸಬೇಕಾದರೆ, ಇದೊಂದು ನಿರಂತರ ಕಾರ್ಯಕ್ರಮ ಆಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT