ADVERTISEMENT

ಮಕ್ಕಳ ಪಾಲನಾ ಸಂಸ್ಥೆಗಳ ಆವರಣದಲ್ಲಿ ಕೆಲವು ನಿರ್ಬಂಧ: ಸದುದ್ದೇಶದ ಕ್ರಮ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 19:45 IST
Last Updated 26 ಅಕ್ಟೋಬರ್ 2021, 19:45 IST
Sampadakiya 27-10-2021.jpg
Sampadakiya 27-10-2021.jpg   

ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಹೊರಗಿನವರು ತಮ್ಮ ಮಕ್ಕಳ ಅಥವಾ ತಮ್ಮ ಜನ್ಮದಿನ ಆಚರಣೆ ಕಾರ್ಯಕ್ರಮ ನಡೆಸುವಂತೆ ಇಲ್ಲ ಎಂದು ರಾಜ್ಯ ಸರ್ಕಾರವು ಈಚೆಗೆ ತೀರ್ಮಾನಿಸಿದೆ. ಇದು ಸ್ವಾಗತಾರ್ಹ ತೀರ್ಮಾನ. ಮಾನವೀಯ ಆಲೋಚನೆಯೊಂದು ಇದರ ಹಿಂದಿರುವಂತೆ ಮೇಲ್ನೋಟಕ್ಕೆ ಅನಿಸುತ್ತಿದೆ.

ಕೆಲವು ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಸಾರ್ವಜನಿಕರಲ್ಲಿ ಕೆಲವರಿಗೆ ತಮ್ಮ ಅಥವಾ ತಮ್ಮ ಮಕ್ಕಳ ಜನ್ಮದಿನ ಆಚರಣೆಯನ್ನು ಇಂತಹ ಸಂಸ್ಥೆಗಳ ಆವರಣದಲ್ಲಿ ನಡೆಸುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ, ಹೀಗೆ ಮಾಡಿದಾಗ ಈ ಸಂಸ್ಥೆಗಳಲ್ಲಿಯೇ ನೆಲೆ ಕಂಡುಕೊಂಡಿರುವ ಮಕ್ಕಳಿಗೆ ಏನನ್ನಿಸ ಬಹುದು ಎಂಬ ಬಗ್ಗೆ ಬಹುತೇಕರು ಆಲೋಚಿಸುತ್ತಿರಲಿಲ್ಲ.

ಆ ದಿಸೆಯಲ್ಲಿ ಆಲೋಚನೆ ಮಾಡಿದ್ದಿದ್ದರೆ, ಇಂತಹ ಆಚರಣೆಗಳು ಅಲ್ಲಿ ಮತ್ತೆ ಮತ್ತೆ ನಡೆಯುತ್ತ ಇರಲಿಲ್ಲ. ಲೈಂಗಿಕ ಕಿರುಕುಳ ಅಥವಾ ದೌರ್ಜನ್ಯಕ್ಕೆ ತುತ್ತಾದ ಮಕ್ಕಳಿಗೆ, ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮಕ್ಕಳಿಗೆ, ಭಿಕ್ಷೆ ಬೇಡುತ್ತಿದ್ದ ಮಕ್ಕಳಿಗೆ, ತಂದೆ–ತಾಯಿಯಿಂದ ದೂರವಾದ ಮಕ್ಕಳಿಗೆ ಹಾಗೂ ಅನಾಥ ಮಕ್ಕಳಿಗೆ ಇಂತಹ ಸಂಸ್ಥೆಗಳು ಆಶ್ರಯತಾಣ.

ADVERTISEMENT

ಸಹಜವಾಗಿ ಸಿಗಬೇಕಿರುವ ಕೌಟುಂಬಿಕ ಪ್ರೀತಿಯಿಂದ ಈ ಮಕ್ಕಳು ವಂಚಿತರಾಗಿರುತ್ತಾರೆ. ಹೊರಗಿನವರು ಅವರ ನಡುವೆ ಕುಟುಂಬ ಸಮೇತರಾಗಿ ಹುಟ್ಟುಹಬ್ಬ ಆಚರಿಸಿಕೊಂಡರೆ, ಆ ಮಕ್ಕಳು ತಮ್ಮ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳಬಹುದು. ಬೇರೆ ಹಲವು ಮಕ್ಕಳಿಗೆ ಸುಲಭವಾಗಿ ದಕ್ಕುವ ಪ್ರೀತಿ ತಮಗೆ ಸಿಗುತ್ತಿಲ್ಲವಲ್ಲ ಎಂದು ಬೇಸರಪಟ್ಟುಕೊಳ್ಳಬಹುದು.

ಕೆಲವು ಪೋಷಕರು ತಮ್ಮ ಮಕ್ಕಳಿಗೆ ಬಡತನದ ಬಗ್ಗೆ ಗೊತ್ತಿರಲಿ ಎಂದೋ, ತಮ್ಮ ಮಕ್ಕಳು ಹುಟ್ಟಿದ ದಿನದ ಸಂಭ್ರಮವು ಭಿನ್ನವಾಗಿ ಇರಲಿ ಎಂದೋ ಈ ಸಂಸ್ಥೆಗಳ ಆವರಣದಲ್ಲಿ ಅಲ್ಲಿನ ಮಕ್ಕಳ ಜೊತೆ ಜನ್ಮದಿನ ಆಚರಿಸುವುದು ಇದೆ. ಇಂತಹ ಪೋಷಕರ ಉದ್ದೇಶ ತಪ್ಪು ಎಂದು ಹೇಳಲಾಗದು. ಆದರೆ, ಅವರು ಮಾಡುವ ಸಂಭ್ರಮಾಚರಣೆಗಳು ಅಲ್ಲಿ ವಾಸ ಮಾಡುತ್ತಿರುವ ಮಕ್ಕಳ ಮನಸ್ಸಿನ ಮೇಲೆ ಒಳ್ಳೆಯ ರೀತಿಯ ಪರಿಣಾಮ ಉಂಟುಮಾಡದೆ ಇರಬಹುದು.

ಮನಸ್ಸಿಗೆ ಬೇಸರ ತರಿಸಬಹುದಾದ ಆಚರಣೆಗಳ ಬದಲಾಗಿ ಇಂತಹ ಸಂಸ್ಥೆಗಳ ಆವರಣದಲ್ಲಿ, ಅಲ್ಲಿನ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವಂತಹ ಆಚರಣೆಗಳನ್ನು ಆಯೋಜಿಸಬಹುದು ಎಂದು ಮಕ್ಕಳ ರಕ್ಷಣಾ ನಿರ್ದೇಶನಾಲಯ ಹೇಳಿದೆ. ಅಲ್ಲದೆ, ಅಲ್ಲಿನ ಮಕ್ಕಳು ಸಮಾಜದ ಮುಖ್ಯವಾಹಿನಿಯಲ್ಲಿ ಸುಲಭವಾಗಿ ಸೇರಿಕೊಳ್ಳುವುದಕ್ಕೆ ನೆರವಾಗುವಂತಹ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲು ಅವಕಾಶ ಇದೆ ಎಂದು ನಿರ್ದೇಶನಾಲಯ ಹೇಳಿದೆ.

ಕೆಲವೊಮ್ಮೆ, ಸಂಸ್ಥೆಗಳ ಆವರಣದಲ್ಲಿ ದಿನವೊಂದಕ್ಕೆ ಮೂರರಿಂದ ನಾಲ್ಕು ಕಾರ್ಯಕ್ರಮಗಳು ನಡೆಯುತ್ತಿದ್ದವಂತೆ. ಇದು ಅಲ್ಲಿನ ಮಕ್ಕಳ ಮೇಲೆ ಯಾವ ಬಗೆಯ ಪರಿಣಾಮ ಬೀರುತ್ತಿತ್ತು ಎಂಬುದನ್ನು ಈ ಸಂಖ್ಯೆಯನ್ನು ನೋಡಿಯೇ ಅಂದಾಜಿಸಬಹುದು. ಅಲ್ಲಿ ವಾಸಿಸುವ ಮಕ್ಕಳು ತಮ್ಮ ಜೀವನವನ್ನು, ಯಾವಾಗಲೋ ಒಮ್ಮೆ ಬಂದು ಜನ್ಮದಿನ ಆಚರಿಸಿಕೊಂಡು ಹೋಗುವ ಮಕ್ಕಳ ಜೊತೆ ಹೋಲಿಸಿ ನೋಡಿಕೊಂಡರೆ, ಅವರ ಆತ್ಮಸ್ಥೈರ್ಯಕ್ಕೆ ಪೆಟ್ಟು ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ, ಅಲ್ಲಿನ ಮಕ್ಕಳು ತಮ್ಮನ್ನು ಇತರ ಮಕ್ಕಳ ಜೊತೆ ಹೋಲಿಸಿಕೊಂಡು ಕೀಳರಿಮೆ ಬೆಳೆಸಿಕೊಳ್ಳದಿರಲಿ ಎಂಬ ಉದ್ದೇಶವೂ ಈ ನಿರ್ಬಂಧದ ಹಿಂದೆ ಇರುವಂತೆ ಕಾಣುತ್ತಿದೆ.

ಮಕ್ಕಳ ಪಾಲನಾ ಸಂಸ್ಥೆಗಳ ಆವರಣದಲ್ಲಿ ಇಂತಹ ಆಚರಣೆಗಳಿಗೆ ಅವಕಾಶ ಕೊಡಬಾರದು ಎಂಬ ಬೇಡಿಕೆಯನ್ನು ಮಕ್ಕಳ ಹಕ್ಕುಗಳ ಪರ ಕಾರ್ಯಕರ್ತರು ಬಹಳ ಹಿಂದಿನಿಂದಲೂ ಮಂಡಿಸುತ್ತ ಬಂದಿದ್ದಾರೆ. ಅಲ್ಲಿ ಇರುವ ಮಕ್ಕಳು ಮೃಗಾಲಯದಲ್ಲಿ ಇರುವ ಪ್ರಾಣಿಗಳಂತೆ ಅಲ್ಲ. ಅವರು ಯಾರದೋ ಒಬ್ಬರ ಜನ್ಮದಿನಾಚರಣೆಯ ದಿನ ಒಂದಿಷ್ಟು ಹಾಡಿ, ಒಂದಿಷ್ಟು ಕುಣಿದು, ತುಂಡು ಸಿಹಿತಿನಿಸು ಅಥವಾ ಕೇಕ್ ಪಡೆದುಕೊಂಡು ಹೋಗಲು ಇರುವಂಥವರಲ್ಲ ಎಂದು ಈ ಕಾರ್ಯಕರ್ತರು ಹೇಳುತ್ತ ಬಂದಿದ್ದಾರೆ.

ಇಲ್ಲಿನ ಮಕ್ಕಳಿಗೆ ಹಳೆಯ ಬಟ್ಟೆಗಳನ್ನು ಅಥವಾ ಹಳೆಯ ಆಟಿಕೆಗಳನ್ನು ನೀಡುವ ಕ್ರಮ ಕೂಡ ಟೀಕೆಗಳಿಗೆ ಗುರಿಯಾಗಿದೆ. ಇಲ್ಲಿ ನಡೆಯುವ ಜನ್ಮದಿನ ಆಚರಣೆಯ ಫೋಟೊಗಳನ್ನು ಹಲವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳ ಮೂಲಕ ಹಂಚಿಕೊಳ್ಳುತ್ತಿದ್ದರು. ಇದು ಬಾಲನ್ಯಾಯ ಕಾಯ್ದೆಯ ಆಶಯಗಳಿಗೆ ವಿರುದ್ಧವಾದುದು. ಮಕ್ಕಳ ಪಾಲನೆಗೆ ಇರುವ ಎಲ್ಲ ಸಂಸ್ಥೆಗಳಲ್ಲಿ ಮಕ್ಕಳಿಗೆ ಉತ್ತಮಸೌಲಭ್ಯಗಳನ್ನು ಕಲ್ಪಿಸುವ ಶಕ್ತಿ ಇಲ್ಲದಿರಬಹುದು.

ಇಂತಹ ಕಡೆಗಳಲ್ಲಿ ಮಕ್ಕಳಿಗೆ ಉತ್ತಮ ಸೌಕರ್ಯಗಳನ್ನು ಕಲ್ಪಿಸಿಕೊಡಲು ರಾಜಕಾರಣಿಗಳಿಗೆ, ಶ್ರೀಮಂತ ವ್ಯಕ್ತಿಗಳಿಗೆ, ಸೆಲೆಬ್ರಿಟಿಗಳಿಗೆ ಅವಕಾಶ ಇದ್ದೇ ಇದೆ. ಅವರು ತಮ್ಮ ಇಂತಹ ಕಾರ್ಯವನ್ನು ಸಾರ್ವಜನಿಕ ಪ್ರಚಾರದಿಂದ ದೂರವಿದ್ದು ಮಾಡಬಹುದು. ಹಾಗೆ ಮಾಡುವ ಸಂದರ್ಭದಲ್ಲಿ, ‘ಇನ್ನೊಬ್ಬರು ದಾನವಾಗಿ ಕೊಟ್ಟಿದ್ದನ್ನು ನಾವು ಅನುಭವಿಸುತ್ತಿದ್ದೇವೆ’ ಎಂಬ ಭಾವನೆಯು ಮಕ್ಕಳಲ್ಲಿ ಮೂಡದಂತೆ ಕಾಳಜಿ ವಹಿಸಬೇಕು. ಈಗ ಸರ್ಕಾರ ಕೈಗೊಂಡಿರುವ ತೀರ್ಮಾನ ಸ್ವಾಗತಾರ್ಹ. ಇದರ ಜೊತೆಯಲ್ಲೇ, ಅಲ್ಲಿನ ಮಕ್ಕಳು ಸಂತಸಮಯ ವಾತಾವರಣದಲ್ಲಿ, ತಮ್ಮನ್ನು ಅರ್ಥ ಮಾಡಿಕೊಳ್ಳುವವರ ನಡುವೆ ಬೆಳೆಯುವಂತೆ ನೋಡಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾದರೆ ಚೆನ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.