ADVERTISEMENT

ಸಂಪಾದಕೀಯ | ಪಿಎಫ್‌ಐಗೆ ನಿಷೇಧ: ಸಂಘಟನೆ ಚಟುವಟಿಕೆ ಕುರಿತು ಪಾರದರ್ಶಕ ತನಿಖೆ ಆಗಲಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2022, 19:31 IST
Last Updated 29 ಸೆಪ್ಟೆಂಬರ್ 2022, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾವು (ಪಿಎಫ್‌ಐ) ‘ಕಾನೂನುಬಾಹಿರ ಸಂಘಟನೆ’ ಎಂದು ಕೇಂದ್ರ ಗೃಹ ಸಚಿವಾಲಯವು ಗೆಜೆಟ್‌ನಲ್ಲಿ ಅಧಿಸೂಚನೆ ಹೊರಡಿಸಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಅಡಿಯಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಿದರೆ ಆ ಸಂಘಟನೆಯನ್ನು ನಿಷೇಧಿಸಲಾಗಿದೆ ಎಂದು ಅರ್ಥ. ಈ ಕ್ರಮಕ್ಕೂ ಮುಂಚೆ, ಪಿಎಫ್‌ಐ ಸಕ್ರಿಯವಾಗಿದ್ದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಿಎಫ್‌ಐ ಮತ್ತು ಅದರ ಜತೆಗೆ ನಂಟು ಹೊಂದಿರುವವರಿಗೆ ಸೇರಿದ ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಜಾರಿ ನಿರ್ದೇಶನಾಲಯ (ಇ.ಡಿ), ಸ್ಥಳೀಯ ಪೊಲೀಸ್‌ ಇಲಾಖೆ ಮತ್ತು ಇತರ ತನಿಖಾ ಸಂಸ್ಥೆಗಳು ಜತೆಗೂಡಿ ಶೋಧ ನಡೆಸಿವೆ. ಪಿಎಫ್‌ಐಯ ಹಲವು ಪದಾಧಿಕಾರಿಗಳು ಮತ್ತು ಸದಸ್ಯರನ್ನು ಬಂಧಿಸಲಾಗಿದೆ ಇಲ್ಲವೇ ವಶಕ್ಕೆ ಪಡೆಯಲಾಗಿದೆ. ‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕೆಲಸಗಳ ಜತೆಗೆ, ರಾಜಕೀಯ ಸಂಘಟನೆಯಾಗಿಯೂ ಕೆಲಸ ಮಾಡುವುದಾಗಿ ಪಿಎಫ್‌ಐ ಮತ್ತು ಅದರ ಸದಸ್ಯರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಆದರೆ, ಮುಸ್ಲಿಂ ಸಮುದಾಯದ ಯುವಕರಲ್ಲಿ ಮೂಲಭೂತವಾದವನ್ನು ತುಂಬುವ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ, ಸಂವಿಧಾನಕ್ಕೆ ಅಗೌರವ ತೋರುವಂತಹ ಕೆಲಸಗಳನ್ನು ಸಂಘಟನೆಯು ರಹಸ್ಯವಾಗಿ ಮಾಡುತ್ತಿದೆ’ ಎಂದು ಗೃಹ ಸಚಿವಾಲಯವು ಅಧಿಸೂಚನೆಯಲ್ಲಿ ಹೇಳಿದೆ. ವಿದೇಶದ ಉಗ್ರಗಾಮಿ ಸಂಘಟನೆಗಳಿಗೆ ಸೇರುವಂತೆ ಮುಸ್ಲಿಂ ಯುವಕರಿಗೆ ಕುಮ್ಮಕ್ಕು ನೀಡುವ ಮತ್ತು ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸಿನ ನೆರವು ನೀಡುವಂತಹ ಕೆಲಸಗಳನ್ನು ಕೂಡ ಪಿಎಫ್‌ಐ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಇವೆಲ್ಲವೂ ಅತ್ಯಂತ ಗಂಭೀರವಾದ ಆಪಾದನೆಗಳು. ಈ ಆಪಾದನೆಗಳು ನಿಜವೇ ಆಗಿದ್ದರೆ ಪಿಎಫ್‌ಐಯನ್ನು ನಿಷೇಧಿಸಿದ್ದನ್ನು ಯಾರೂ ವಿರೋಧಿಸಲು ಸಾಧ್ಯವಿಲ್ಲ. ಈ ಎಲ್ಲ ಆಪಾದನೆಗಳನ್ನು ಕಾನೂನು ಮತ್ತು
ನಿಯಮಾನುಸಾರವಾಗಿ ದೃಢೀಕರಿಸುವ ಕೆಲಸವನ್ನು ಕೇಂದ್ರ ಸರ್ಕಾರವು ಮಾಡಬೇಕು. ಈ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿಯೇ ನಡೆಯುವಂತೆ ನೋಡಿಕೊಳ್ಳಬೇಕು. ಪಿಎಫ್‌ಐ ಮೇಲೆ ಹೇರಿರುವ ನಿಷೇಧವು ಸಕಾರಣವಾಗಿಯೇ ಇದೆ ಎಂಬುದನ್ನು ಜನರಿಗೆ ಮನದಟ್ಟು ಮಾಡಿಸುವ ಹೊಣೆ ಸರ್ಕಾರದ ಮೇಲೆ ಇದೆ.

ಯಾವುದೇ ಸಂಘಟನೆಯನ್ನು ನಿಷೇಧಿಸಿದರೆ ಆ ಸಂಘಟನೆಯು ಜನರ ಕಣ್ಣಿನಿಂದ ಮರೆಯಾಗುತ್ತದೆ. ಆದರೆ, ಸಂಘಟನೆ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ ಎಂದಲ್ಲ. ಇಂತಹ ಸಂಘಟನೆಗಳ ಕಾರ್ಯಚಟುವಟಿಕೆಗಳು ಬೇರೆ ಹೆಸರಿನಲ್ಲಿ ಅಥವಾ ಭೂಗತವಾಗಿ ನಡೆಯುತ್ತವೆ. ಈ ಹಿಂದಿನ ಇತಿಹಾಸವನ್ನು ಗಮನಿಸಿದರೆ ಇದು ವೇದ್ಯವಾಗುತ್ತದೆ. ಮೂಲಭೂತವಾದಿ ನಿಲುವುಗಳನ್ನೇ ಇರಿಸಿಕೊಂಡು1970ರ ದಶಕದಲ್ಲಿ ಆರಂಭವಾದ ಸ್ಟೂಡೆಂಟ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ (ಸಿಮಿ) ಸಂಘಟನೆಯನ್ನು 2001ರಲ್ಲಿ ನಿಷೇಧಿಸಲಾಗಿತ್ತು. ಆದರೆ, ಸಿಮಿಯ ಸದಸ್ಯರಲ್ಲಿ ಹಲವರು ನ್ಯಾಷನಲ್‌ ಡೆವಲಪ್‌ಮೆಂಟ್‌ ಫ್ರಂಟ್‌ (ಎನ್‌ಡಿಎಫ್‌) ಎಂಬ ಸಂಘಟನೆಯಲ್ಲಿ ಸಕ್ರಿಯರಾದರು. ಎನ್‌ಡಿಎಫ್‌ ಸದಸ್ಯರೇ ಪಿಎಫ್ಐಯನ್ನು ಕೂಡ ಸ್ಥಾಪಿಸಿದರು. ಸರ್ಕಾರದ ಕ್ರಮದ ಸಂತ್ರಸ್ತರು ತಾವು ಎಂಬ ಭಾವನೆಯು ನಿಷೇಧದಿಂದಾಗಿ ಸಂಘಟನೆಯ ಸದಸ್ಯರಲ್ಲಿ ಬೆಳೆಯುತ್ತದೆ. ಕಿರುಕುಳ ನೀಡಲಾಗುತ್ತಿದೆ ಎಂಬ ಭಾವವೂ ಇರುತ್ತದೆ. ಇವೆಲ್ಲದರಿಂದಾಗಿ ಅವರು ಇನ್ನಷ್ಟು ಚೈತನ್ಯದಿಂದ ಕೆಲಸ ಮಾಡುವ ಅಪಾಯ ಇರುತ್ತದೆ. ಇಂತಹ ಸಂಘಟನೆಗಳು ಸಾಮಾನ್ಯವಾಗಿ ರಾಜಕೀಯ ಸಿದ್ಧಾಂತವನ್ನು ಹೊಂದಿರುತ್ತವೆ. ಈ ರಾಜಕೀಯ ಸಿದ್ಧಾಂತವು ಏನನ್ನು ಸಾಧಿಸುವುದಕ್ಕಾಗಿ ಇದೆ ಎಂಬುದನ್ನು ಕಂಡುಕೊಳ್ಳಬೇಕು. ಇಂತಹ ಸಂಘಟನೆಗಳು ಹುಟ್ಟಿಕೊಳ್ಳಲು ಇರುವ ಕಾರಣಗಳು ಇಲ್ಲದಂತೆ ಮಾಡಬೇಕು. ಅದಿಲ್ಲದೆ ಹೋದರೆ ನಿಷೇಧದಿಂದ ಯಾವ ಉಪಯೋಗವೂ ಇಲ್ಲ ಎಂದು ಈ ಹಿಂದೆ ಹಲವು ಬಾರಿ ಸಾಬೀತಾಗಿದೆ.

ಬಹುಸಂಖ್ಯಾತವಾದಿ ಸಿದ್ಧಾಂತಗಳು, ರಾಷ್ಟ್ರೀಯ ನೆಲೆಯಲ್ಲಿ ಮುಸ್ಲಿಮರಿಗೆ ಇದ್ದ ಸ್ಥಾನ ಕರಗಿ ಹೋಗಿರುವುದರಿಂದಾಗಿ ಮುಸ್ಲಿಮರಲ್ಲಿ ಮೂಡಿರುವ ಭೀತಿ ಮತ್ತು ಆತಂಕವೇ ಪಿಎಫ್‌ಐ ಹಾಗೂ ಎಸ್‌ಡಿಪಿಐನ ರಾಜಕಾರಣದ ಕೇಂದ್ರ ಬಿಂದು. ಬಹುಸಂಖ್ಯಾತವಾದಿ ಸಿದ್ಧಾಂತ ಮತ್ತು ನೀತಿಗಳಿಗೆ ಸರ್ಕಾರದ ಬೆಂಬಲವೂ ಇದೆ ಎಂಬ ಗ್ರಹಿಕೆ ಮತ್ತು ವಾಸ್ತವ ಸ್ಥಿತಿಯು ಈ ಭೀತಿಯನ್ನು ಇನ್ನಷ್ಟು ಹೆಚ್ಚಿಸಿರುವುದು ನಿಜ. ‍ಪಿಎಫ್‌ಐನಂತಹ ಸಂಘಟನೆಗಳಿಂದಾಗುವ ಅಪಾಯವನ್ನು ತಪ್ಪಿಸಲು ಇರುವ ಅತ್ಯುತ್ತಮ ಮಾರ್ಗವೆಂದರೆ, ವಿಭಜನಕಾರಿ ನೀತಿ ಮತ್ತು ನಿರ್ದಿಷ್ಟ ಸಮುದಾಯವನ್ನು ದೂರ ಇರಿಸುವ ರಾಜಕಾರಣವನ್ನು ಕೊನೆಗೊಳಿಸುವುದು. ಇಲ್ಲದೇ ಇದ್ದರೆ ಪಿಎಫ್‌ಐ ಮತ್ತು ಅದರ ಏಳು ಅಂಗ ಸಂಸ್ಥೆಗಳ ಮೇಲಿನ ನಿಷೇಧವೇ ರಾಜಕಾರಣದ ಮತ್ತೊಂದು ಸಾಧನವಾಗಿ ಪರಿವರ್ತನೆ ಆಗಬಹುದು. ಇನ್ನೊಂದು ಪ್ರಶ್ನೆಯೂ ಇಲ್ಲಿ ಇದೆ. ಬಹುಸಂಖ್ಯಾತವಾದವನ್ನು ಪ್ರತಿಪಾದಿಸುವ, ಸಾರ್ವಜನಿಕ ಸುವ್ಯವಸ್ಥೆ ಹಾಗೂ ಸಂವಿಧಾನಕ್ಕೆ ಬೆದರಿಕೆ ಆಗಿರುವ ಎಲ್ಲ ಸಂಘಟನೆಗಳನ್ನು ಕೂಡ ಪಿಎಫ್‌ಐಯನ್ನು ನಡೆಸಿಕೊಂಡ ರೀತಿಯಲ್ಲಿಯೇ ನಡೆಸಿಕೊಳ್ಳಲಾಗುವುದೇ? ಇದಕ್ಕೆ ಉತ್ತರ ‘ಇಲ್ಲ’ ಎಂದಾದರೆ ಸರ್ಕಾರವು ಯಾವುದೋ ಕಾರ್ಯಸೂಚಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ ಎಂಬ ಸಂದೇಹಕ್ಕೆ ಪುಷ್ಟಿ ದೊರೆಯುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.