ADVERTISEMENT

ಪಿಂಕ್‌ ಟ್ಯಾಕ್ಸಿ: ಮಹಿಳಾ ಸುರಕ್ಷತೆಗೆ ಒಂದು ಉಪಕ್ರಮ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 20:22 IST
Last Updated 16 ಜನವರಿ 2019, 20:22 IST
   

ಬೆಂಗಳೂರಿಗೆ ಪೊಲೀಸ್‌ ಕಮಿಷನರ್‌ ಆಗಿ ಯಾರೇ ನೇಮಕವಾಗಲಿ, ಅಧಿಕಾರ ಸ್ವೀಕರಿಸುವಾಗ ಅವರು ನಾಗರಿಕರಿಗೆ ನೀಡುವ ಭರವಸೆಗಳಲ್ಲಿ ‘ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂಬ ಅಂಶವಂತೂ ಇದ್ದೇ ಇರುತ್ತದೆ. ಆದರೆ, ಅದು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆ ಎಂಬುದು, ಆ ಹೇಳಿಕೆಯಷ್ಟೇ ಕ್ಲೀಷೆಯಾಗಿ ಹೋಗಿರುವ ಪ್ರಶ್ನೆ.ಇಂತಹ ಸ್ಥಿತಿಯಲ್ಲೂ ಈಗಿನ ದಿನಮಾನದಲ್ಲಿ ವೃತ್ತಿ ಕೈಂಕರ್ಯಕ್ಕಾಗಿ ಏಕಾಂಗಿ ಸಂಚಾರ ಮಹಿಳೆಯರಿಗೆ ಅನಿವಾರ್ಯ. ಈ ಬಗೆಯ ಸಂಚಾರವನ್ನು ಸಹ್ಯವಾಗಿಸುವ ನಿಟ್ಟಿನಲ್ಲಿ, ಟ್ಯಾಕ್ಸಿಯಲ್ಲಿ ಸಂಚರಿಸುವ ಮಹಿಳೆಯರ ಸುರಕ್ಷತೆಗಾಗಿ ರಾಜ್ಯ ಸರ್ಕಾರ ‘ಪಿಂಕ್‌ ಟ್ಯಾಕ್ಸಿ’ ಸೇವೆ ಆರಂಭಿಸಿರುವುದು ಉತ್ತಮವಾದ ಸುರಕ್ಷಾ ಕ್ರಮವಾಗಿದೆ. ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ಅಲ್ಲಿಂದ ಹಿಂದಿರುಗುವ ಮಹಿಳೆಯರಿಗೆಂದೇ ಪ‍್ರವಾಸೋದ್ಯಮ ಅಭಿವೃದ್ಧಿ ನಿಗಮವು ವಿಶೇಷವಾಗಿ ಈ ಟ್ಯಾಕ್ಸಿಗಳಿಗೆ ಚಾಲನೆ ನೀಡಿದೆ. ಅದರಲ್ಲೂ ಇವುಗಳನ್ನು ಮಹಿಳೆಯರೇ ಚಲಾಯಿಸುತ್ತಾರೆ ಎನ್ನುವುದು, ಮಹಿಳಾ ಪ್ರಯಾಣಿಕರಲ್ಲಿ ಇನ್ನಷ್ಟು ಭದ್ರತಾ ಭಾವ ಮೂಡಿಸುವ ಉಪಕ್ರಮಗಳಲ್ಲೊಂದು. ಆ್ಯಪ್‌ ಆಧಾರಿತ ಟ್ಯಾಕ್ಸಿಗಳಲ್ಲೂ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂಬಂತಹ ವಾತಾವರಣ ಸೃಷ್ಟಿಸುವ ಆತಂಕ ಬಹು ದೊಡ್ಡದು. ಟ್ಯಾಕ್ಸಿಗಳಲ್ಲಿ ಒಂಟಿಯಾಗಿ ಸಂಚರಿಸುವ ಮಹಿಳೆಯರಿಗೆ ಮಾನಸಿಕ ಕಿರುಕುಳ, ಲೈಂಗಿಕ ದೌರ್ಜನ್ಯ ನೀಡಿದಂತಹ ಹಲವಾರು ಪ್ರಕರಣಗಳು ವರದಿಯಾಗಿವೆ. ನಿಗದಿತ ಮಾರ್ಗ ಬಿಟ್ಟು ಬೇರಾವುದೋ ಸುತ್ತುಬಳಸು ಮಾರ್ಗದಲ್ಲಿ ಕರೆದೊಯ್ಯುವುದು, ಇದನ್ನು ವಿರೋಧಿಸುವ ಪ್ರಯಾಣಿಕರನ್ನು ಅರ್ಧದಲ್ಲೇ ಇಳಿಸಿ ಹೋಗುವುದು, ಅವರೊಂದಿಗೆ ಅಸಭ್ಯ ವರ್ತನೆ, ಅತ್ಯಾಚಾರ ಯತ್ನದಂತಹ ಪ್ರಕರಣಗಳು ಮಹಿಳೆಯರ ಧೈರ್ಯ ಉಡುಗಿಸುತ್ತವೆ. ಚಾಲಕರು ಒಡ್ಡುವ ಬೆದರಿಕೆ ಕಾರಣದಿಂದಲೂ ಅವರ ದುರ್ವರ್ತನೆ ಎಷ್ಟೋ ಬಾರಿ ಬೆಳಕಿಗೆ ಬಾರದೇ ಹೋಗುತ್ತದೆ. ಇಂತಹ ವಿಪರೀತಗಳಿಗೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ, ಟ್ಯಾಕ್ಸಿ ಮೇಲೆ ನಿರಂತರವಾಗಿ ಕಣ್ಗಾವಲಿರಿಸಲು ಅನುವಾಗುವ ಜಿಪಿಎಸ್‌, ಪ್ಯಾನಿಕ್‌ ಬಟನ್‌ನಂತಹ ಅತ್ಯಾಧುನಿಕ ವ್ಯವಸ್ಥೆ ಪಿಂಕ್‌ ಟ್ಯಾಕ್ಸಿಗಳಲ್ಲಿದೆ. ಚಾಲಕರ ಅನುಚಿತ ವರ್ತನೆಗಳಿಗೆ ಪೂರಕವಾಗಿದ್ದ ಚೈಲ್ಡ್‌ ಲಾಕ್‌ ವ್ಯವಸ್ಥೆಯನ್ನು ಎಲ್ಲ ವಾಣಿಜ್ಯ ಉದ್ದೇಶದ ವಾಹನಗಳಲ್ಲೂ ನಿಷ್ಕ್ರಿಯಗೊಳಿಸಲು ಸಾರಿಗೆ ಇಲಾಖೆ ಮುಂದಾಗಿದೆ. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದಲೂ ಇದು ಅನುಕೂಲಕರ ಅಂಶವೇ ಆಗಿದೆ.

ಇಷ್ಟಾದರೂ, ತಂತ್ರಜ್ಞಾನದ ಲಭ್ಯತೆ ಮಾತ್ರದಿಂದಲೇ ಟ್ಯಾಕ್ಸಿ ಪ್ರಯಾಣ ಮಹಿಳೆಯರಿಗೆ ಸುರಕ್ಷಿತ ಎಂದು ಭಾವಿಸುವುದು ತಪ್ಪಾದೀತು. ಇಂತಹ ತಾಂತ್ರಿಕ ಸಾಧನಗಳ ಗುಣಮಟ್ಟ ಎಂತಹುದು, ಅವು ಎಷ್ಟರಮಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ ಎಂಬುದರ ಮೇಲೆ ಟ್ಯಾಕ್ಸಿ ಸೇವಾ ಸಂಸ್ಥೆಗಳು ಹಾಗೂ ಸಂಚಾರ ಪೊಲೀಸರು ನಿರಂತರ ನಿಗಾ ಇರಿಸಬೇಕಾಗುತ್ತದೆ. ಕೆಲ ತಿಂಗಳ ಹಿಂದೆ ಚಾಲಕನೊಬ್ಬ ನಿಗದಿತ ಮಾರ್ಗ ಬಿಟ್ಟು ಬೇರೆ ದಾರಿ ಹಿಡಿದಾಗ ಆತಂಕಕ್ಕೊಳಗಾದ ಯುವತಿ ತುರ್ತು ನೆರವಿನ ಬಟನ್‌ ಒತ್ತಿದ್ದರು. ಅದು ಸರಿಯಾಗಿ ಕಾರ್ಯ ನಿರ್ವಹಿಸದೇ ಇದ್ದುದರಿಂದ ಸಕಾಲದಲ್ಲಿ ಆಕೆಗೆ ಪೊಲೀಸರ ನೆರವು ಸಿಕ್ಕಿರಲಿಲ್ಲ.ವಿಮಾನ ನಿಲ್ದಾಣದಲ್ಲಿ ಸ್ಥಳೀಯ ಟ್ಯಾಕ್ಸಿ ಚಾಲಕರು ಮತ್ತು ಆನ್‌ಲೈನ್‌ನಲ್ಲಿ ಬುಕ್‌ ಮಾಡಿದ ಹೊರಗಿನ ಟ್ಯಾಕ್ಸಿ ಚಾಲಕರ ನಡುವಿನ ಸಂಘರ್ಷದಿಂದಲೂ ಮಹಿಳೆಯರು ತೊಂದರೆ ಅನುಭವಿಸಿದ್ದಿದೆ. ವಿಮಾನ ನಿಲ್ದಾಣಕ್ಕೆ ಯಾವುದೇ ಬಗೆಯ ಟ್ಯಾಕ್ಸಿ ಪ್ರವೇಶಕ್ಕೆ ನಿರ್ಬಂಧ ಇಲ್ಲದಿರುವುದರ ನಡುವೆಯೂ ಇಂತಹ ಅಹಿತಕರ ಘಟನೆಗಳು ನಡೆಯುವುದು ದುರದೃಷ್ಟಕರ. ಟ್ಯಾಕ್ಸಿ ಸೇವಾ ಸಂಸ್ಥೆಗಳಿಗೆ ತಾವು ನಿಯೋಜಿಸಿಕೊಳ್ಳುವ ಎಷ್ಟೋ ಕ್ಯಾಬ್‌ ಚಾಲಕರ ಪೂರ್ವಾಪರದ ಮಾಹಿತಿ ಇರುವುದಿಲ್ಲ ಎಂಬುದೂ ಆತಂಕಕಾರಿ. ಹೀಗಾಗಿ, ಸುರಕ್ಷಾ ಕ್ರಮಗಳನ್ನು ಗಂಭೀರವಾಗಿ ಪರಿಗಣಿಸಿ ಪೂರ್ಣ ಪ್ರಮಾಣದಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತಂದರಷ್ಟೇ ಮಹಿಳೆಯರಿಗೆ ಸುರಕ್ಷಿತ ಪ್ರಯಾಣ ಸಾಧ್ಯವಾದೀತು. ಈ ನಿಟ್ಟಿನಲ್ಲಿ, ಬೆರಳೆಣಿಕೆಯಷ್ಟೇ ಇರುವ ಚಾಲಕಿಯರ ಸಂಖ್ಯೆಯನ್ನು ಅಧಿಕಗೊಳಿಸುವ ಮಾರ್ಗವೂ ಸಮಸ್ಯೆಗೆ ಪರಿಹಾರವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT