ADVERTISEMENT

ಆಗ ಮಾತಿನಿಂದಲೇ ಮೋಡಿ: ಈಗ ಸಾಧನೆ ತೋರಿಸುವ ಸಮಯ

​ಪ್ರಜಾವಾಣಿ ವಾರ್ತೆ
Published 13 ಜನವರಿ 2019, 20:15 IST
Last Updated 13 ಜನವರಿ 2019, 20:15 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಇನ್ನೇನು ಕೆಲವೇ ವಾರಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಲಿದೆ. ದೆಹಲಿಯಲ್ಲಿ ಎರಡು ದಿನ ನಡೆದ ಪಕ್ಷದ ರಾಷ್ಟ್ರೀಯ ಮಂಡಳಿ ಸಮಾವೇಶದಲ್ಲಿಕೇಂದ್ರದ ಆಡಳಿತಾರೂಢ ಬಿಜೆಪಿ ಚುನಾವಣಾ ಕಹಳೆ ಮೊಳಗಿಸಿದೆ. ಯಾವ ವಿಚಾರಗಳನ್ನು ಮುಂದಿಟ್ಟು ಪಕ್ಷವು ಚುನಾವಣೆಗೆ ಹೋಗಲಿದೆ ಎಂಬುದರ ಸುಳಿವನ್ನು ಬಿಚ್ಚಿಟ್ಟಿದೆ. ಸರ್ಕಾರದ ಸಾಧನೆಗಳನ್ನು ಕೊಂಡಾಡಿದೆ. ಜತೆಗೆ, ಮುಖ್ಯ ವಿರೋಧ ಪಕ್ಷವಾದ ಕಾಂಗ್ರೆಸ್ಸನ್ನು ಟೀಕಿಸಿದೆ. ಬಿಜೆಪಿಯ ಈ ಸಮಾವೇಶ ನಡೆಯುತ್ತಿರುವಾಗಲೇ ಘೋಷಣೆಯಾದ ಉತ್ತರಪ್ರದೇಶದ ಎಸ್‌ಪಿ–ಬಿಎಸ್‌ಪಿ ಮೈತ್ರಿಯನ್ನು ಹಂಗಿಸಿದೆ. ಆದರೆ, ಬೇರೆ ಪ್ರಾದೇಶಿಕ ಪಕ್ಷಗಳ ಬಗ್ಗೆ ಇದೇ ರೀತಿಯ ನಿಲುವನ್ನು ಬಿಜೆಪಿ ಪ್ರದರ್ಶಿಸಿಲ್ಲ. ಲೋಕಸಭೆ ಚುನಾವಣೆಯ ಬಳಿಕ ಮೈತ್ರಿ ಸಮೀಕರಣಗಳು ಬದಲಾಗಬಹುದು ಎಂಬ ನಿರೀಕ್ಷೆ, ಗೆಲುವು ಸುಲಭವಲ್ಲ ಎಂಬ ಅಧೈರ್ಯ ಇದರ ಹಿಂದೆ ಇರುವಂತೆ ಕಾಣಿಸುತ್ತಿದೆ. ಸಮಾವೇಶಕ್ಕೆ ಕೆಲವೇ ದಿನ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಆಡಿದ ಮಾತು ಇದಕ್ಕೆ ಪುಷ್ಟಿ ನೀಡುವಂತೆ ಇತ್ತು. ‘ಹಳೆಯ ಗೆಳೆಯರೆಲ್ಲ ಮರಳಿ ಬಿಜೆಪಿಯ ಜತೆಗೆ ಬನ್ನಿ’ ಎಂದು ಮುಕ್ತವಾದ ಆಹ್ವಾನ ಕೊಟ್ಟಿದ್ದರು. ಬಿಜೆಪಿಯ ಸಮಾವೇಶವು ಕೆಲವು ಅಂಶಗಳನ್ನು ಮುಖ್ಯವಾಗಿ ಪ್ರಸ್ತಾಪಿಸಿದೆ. ಬಿಜೆ‍ಪಿಯಿಂದ ಮಾತ್ರ ಸುಭದ್ರ (ಮಜ್ಬೂತ್‌) ಸರ್ಕಾರ ಸಾಧ್ಯ, ಬಿಜೆಪಿಯನ್ನು ವಿರೋಧಿಸುವ ಪಕ್ಷಗಳೆಲ್ಲ ಒಂದಾಗಿ ರೂಪಿಸಲು ಉದ್ದೇಶಿಸಿರುವ ಮಹಾಮೈತ್ರಿ ಒಂದು ವೇಳೆ ಅಧಿಕಾರಕ್ಕೆ ಬಂದರೆ ಅದು ‘ಅಸಹಾಯಕ (ಮಜ್ಬೂರ್‌) ಸರ್ಕಾರ’ ಆಗಿರಲಿದೆ ಎಂಬುದು ಮೊದಲನೆಯ ಮುಖ್ಯ ಅಂಶ. ಹಿಂದಿ ಭಾಷಿಕ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದ ವಿಧಾನಸಭೆ ಚುನಾವಣೆಯಲ್ಲಿನ ಸೋಲು ಬಿಜೆಪಿಯನ್ನು ಕಾಡುತ್ತಿದೆ ಎಂಬುದು ಸಮಾವೇಶದಲ್ಲಿ ವ್ಯಕ್ತವಾಗಿದೆ. ಈ ರಾಜ್ಯಗಳಲ್ಲಿ ರಾಮಮಂದಿರವನ್ನು ಚುನಾವಣಾ ವಿಚಾರವಾಗಿಸಲು ಬಿಜೆಪಿ ಪರೋಕ್ಷವಾಗಿ ಯತ್ನಿಸಿತ್ತು. ಅದು ಫಲ ನೀಡಿಲ್ಲ ಎಂಬುದನ್ನು ಫಲಿತಾಂಶ ಹೇಳಿದೆ. ಹಾಗಾಗಿ ಇನ್ನಷ್ಟು ವಿಸ್ತೃತ ನೆಲೆಯಲ್ಲಿ ಹಿಂದುತ್ವವನ್ನು ಅಪ್ಪಿಕೊಳ್ಳಬೇಕು ಎಂಬುದು ಸಮಾವೇಶದಲ್ಲಿ ವ್ಯಕ್ತವಾದ ಎರಡನೇ ಮುಖ್ಯ ಅಂಶ. ಪೌರತ್ವ ತಿದ್ದುಪಡಿ ಮಸೂದೆ, ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಮೇಲ್ಜಾತಿಗಳ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಲು ಮಾಡಿದ ಸಂವಿಧಾನ ತಿದ್ದುಪಡಿಯನ್ನು ಈ ಹಿನ್ನೆಲೆಯಲ್ಲಿ ಪ್ರಸ್ತಾಪಿಸಲಾಗಿದೆ. ಮೋದಿ ಅವರಂತಹ ಪ್ರಬಲ ನಾಯಕನ ಎದುರು ನಿಲ್ಲಬಲ್ಲ ನಾಯಕ ವಿರೋಧ ಪಕ್ಷಗಳಲ್ಲಿ ಯಾರಿದ್ದಾರೆ ಎಂಬ ಪ್ರಶ್ನೆ ಕೇಳಿರುವುದರ ಬೆನ್ನಿಗೇ ಮೋದಿ ಅವರೊಬ್ಬರಿಂದಲೇ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ ಎಂಬ ಸಂದೇಶವನ್ನೂ ಕಾರ್ಯಕರ್ತರಿಗೆ ರವಾನಿಸಲಾಗಿದೆ ಎಂದು ವರದಿಯಾಗಿದೆ. ಆ ಮೂಲಕ, ಮೋದಿ ಈ ಹಿಂದಿನಷ್ಟು ಪ್ರಬಲ ನಾಯಕರಾಗಿ ಉಳಿದಿಲ್ಲ ಎಂಬುದನ್ನೂ ಪರೋಕ್ಷವಾಗಿ ಹೇಳಿದಂತಾಗಿದೆ.

2014ರ ಚುನಾವಣೆಯನ್ನು ಮೋದಿ ಅವರ ವರ್ಚಸ್ಸಿನ ಮೇಲೆಯೇ ಬಿಜೆಪಿ ಗೆದ್ದಿತ್ತು. ಪ್ರಾಸಬದ್ಧ ಮಾತು, ಅದ್ಭುತ ಧ್ವನಿ ಏರಿಳಿತದ ಭಾಷಣಗಳಿಂದ ಮೋದಿ ಜನರಿಗೆ ಮೋಡಿ ಮಾಡಿದ್ದರು. ತಾವು ಆಯ್ಕೆಯಾದರೆ ದೇಶದ ದಿಕ್ಕು ಬದಲಾಗಲಿದೆ ಎಂದಿದ್ದರು. ದೇಶಕ್ಕೆ ‘ಅಚ್ಛೇ ದಿನ್‌’ ಬರಲಿದೆ ಎಂದಿದ್ದರು. ಪ್ರತೀ ಪ್ರಜೆಯ ಬ್ಯಾಂಕ್‌ ಖಾತೆಗೆ ₹15 ಲಕ್ಷ ಜಮೆ ಮಾಡುವುದಾಗಿ, ಕೋಟಿಗಳ ಲೆಕ್ಕದಲ್ಲಿ ಉದ್ಯೋಗ ಸೃಷ್ಟಿಸುವುದಾಗಿ ಕನಸು ಬಿತ್ತಿದ್ದರು. ಅಧಿಕಾರದಲ್ಲಿದ್ದ ಯುಪಿಎ ಸರ್ಕಾರ ಭ್ರಷ್ಟಾಚಾರದ ಅನ್ವರ್ಥನಾಮ ಎಂದು ಸಾರಿ ಹೇಳಿದ್ದರು. ಮೋದಿ ಅವರ ಮಾತನ್ನು ನಂಬಿದ ಜನ, ದಶಕಗಳ ಬಳಿಕ ಒಂದೇ ಪಕ್ಷಕ್ಕೆ ಸರಳ ಬಹುಮತದ ಕೊಡುಗೆ ಕೊಟ್ಟಿದ್ದರು. ಈಗ ಮೋದಿ ಅವರು ಪ್ರಧಾನಿಯಾಗಿ ನಾಲ್ಕೂ ಮುಕ್ಕಾಲು ವರ್ಷ ಆಗಿದೆ. ಜನರಿಗೆ ಲೆಕ್ಕ ಕೊಡುವ ಸಮಯ ಬಂದಿದೆ. ಆರ್ಥಿಕ ಪ್ರಗತಿ, ಉದ್ಯೋಗ ಸೃಷ್ಟಿ ಆಗಿದೆ ಎಂಬುದನ್ನು ತೋರಿಸುವ ವಿಶ್ವಾಸಾರ್ಹ ಅಂಕಿ ಅಂಶಗಳೇನೂ ಈವರೆಗೆ ಜನರಿಗೆ ಸಿಕ್ಕಿಲ್ಲ. ಈ ಎರಡು ವಿಚಾರಗಳು ಸರ್ಕಾರವೊಂದು ಮಾಡಲೇಬೇಕಾದ ಕರ್ತವ್ಯ. ಹಿಂದೆ ಮೋದಿ ಅವರು ಕೇಳಿದಂತೆ ಈಗ ವಿರೋಧ ಪಕ್ಷಗಳು ಮತ್ತು ಜನರು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಉತ್ತರ ನೀಡುವ ಹೊಣೆ ಮೋದಿ ಅವರಿಗೆ ಇದೆ. ದೇಶದ ದುರವಸ್ಥೆಗೆ ಹಿಂದಿನ ಸರ್ಕಾರಗಳೇ ಕಾರಣ ಎಂದು ಈಗಲೂ ಹೇಳುತ್ತಾ ಹೋದರೆ ರಾಜಕೀಯವಾಗಿ ಅದರಿಂದ ಲಾಭ ಸಿಗಲಾರದು. ಮಾಡಿದ್ದನ್ನು ತೋರಿಸಿ ಮತ ಕೇಳಿದರೆ ಮೋದಿ ಇನ್ನಷ್ಟು ಪ್ರಬಲ ನಾಯಕರಾಗಿ ಬೆಳೆಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT