
ಮಕ್ಕಳನ್ನು ಲೈಂಗಿಕ ದೌರ್ಜನ್ಯಗಳಿಂದ ರಕ್ಷಿಸುವ ಪ್ರಬಲ ಅಸ್ತ್ರವಾಗಿ ‘ಪೋಕ್ಸೊ’ ಕಾಯ್ದೆ ಉಳಿದುಕೊಳ್ಳಬೇಕು. ಅದರ ದುರ್ಬಳಕೆಯನ್ನು ತಡೆಯಲು ಮಾರ್ಗೋಪಾಯಗಳ ಹುಡುಕಾಟ ನಡೆಯಬೇಕು.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ದುರ್ಬಳಕೆ ಬಗ್ಗೆ ಕಳವಳ ವ್ಯಕ್ತಪಡಿಸುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಬಹಳ ಮಹತ್ವದ ವಿಚಾರವೊಂದನ್ನು ಪ್ರಸ್ತಾಪಿಸಿದೆ. ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ನೀಡುವುದನ್ನು ಕಡ್ಡಾಯ ಮಾಡಬೇಕು ಹಾಗೂ ಅತ್ಯಾಚಾರ ತಡೆಯುವ ಉದ್ದೇಶದ ಕಾನೂನುಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂಬ ಕೋರಿಕೆ ಇರುವ ಅರ್ಜಿಯ ವಿಚಾರಣೆಯನ್ನು ನಡೆಸುವಾಗ ಕೋರ್ಟ್ ಈ ಕಳವಳ ವ್ಯಕ್ತಪಡಿಸಿದೆ. ಹದಿಹರೆಯದವರು ಸಮ್ಮತಿಯ ಆಧಾರದಲ್ಲಿ ಸಂಬಂಧ ಹೊಂದಿದ ಸಂದರ್ಭಗಳಲ್ಲಿಯೂ ಪೋಕ್ಸೊ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ. ಈ ಬಗ್ಗೆ ಕೋರ್ಟ್ ಹಿಂದೆಯೂ ಕೆಲವು ಮಾತುಗಳನ್ನು ಹೇಳಿದ ನಿದರ್ಶನಗಳಿವೆ. ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಹದಿಹರೆಯದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದಾಗ, ಅದಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಕೆಲವು ಮಾತುಗಳನ್ನು ಹೇಳಿದೆ. 16 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಮ್ಮತಿಯ ಆಧಾರದಲ್ಲಿ ಲೈಂಗಿಕಕ್ರಿಯೆ ನಡೆಸಿದರೆ, ಅದನ್ನು ಕೂಡ ಕ್ರಿಮಿನಲ್ ಅಪರಾಧವಾಗಿ ಈ ಕಾಯ್ದೆಯ ಅಡಿಯಲ್ಲಿ ಕಾಣುವುದನ್ನು ಪ್ರಶ್ನಿಸಿರುವ ಅರ್ಜಿಯೊಂದರ ವಿಚಾರಣೆಯನ್ನು ಕೋರ್ಟ್‌ನ ಇನ್ನೊಂದು ಪೀಠವು ನಡೆಸುತ್ತಿದೆ. ಈ ವಿಚಾರವಾಗಿ ದೇಶದ ಹಲವೆಡೆ ಚರ್ಚೆಗಳೂ ಆಗಿವೆ. ಇಂತಹ ಪ್ರಕರಣಗಳು ನ್ಯಾಯಮೂರ್ತಿಗಳಿಗೆ ಬಹಳ ‘ಕಠಿಣವಾದ ಪ್ರಶ್ನೆಗಳನ್ನು ಒಡ್ಡುತ್ತವೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆಗಿದ್ದ ಡಿ.ವೈ. ಚಂದ್ರಚೂಡ್ ಹೇಳಿದ್ದರು. ಈ ವಿಚಾರವನ್ನು, ಹದಿಹರೆಯದವರ ಆರೋಗ್ಯದ ವಿಚಾರದಲ್ಲಿ ನಡೆದಿರುವ ಸಂಶೋಧನೆಗಳನ್ನು ಆಧರಿಸಿ ಶಾಸಕಾಂಗವು ಪರಿಶೀಲಿಸಬೇಕು ಎಂದೂ ಅವರು ಸಲಹೆ ನೀಡಿದ್ದರು.
ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗುವುದನ್ನು ತಡೆಯಲು ವಿಶೇಷ ಕಾಯ್ದೆಯೊಂದರ ಅಗತ್ಯ ಇದೆ ಎಂಬ ಉದ್ದೇಶದಿಂದ ಪೋಕ್ಸೊ ಕಾಯ್ದೆಯನ್ನು ರೂಪಿಸಲಾಗಿದೆ. ಈ ಕಾಯ್ದೆಯ ಉದ್ದೇಶವು ಒಂದು ಹಂತದವರೆಗೆ ಈಡೇರಿದೆ ಕೂಡ. ಕಾಯ್ದೆಯ ಕಾರಣದಿಂದಾಗಿ ಹಲವು ಅಪರಾಧಿಗಳು ಶಿಕ್ಷೆಗೆ ಗುರಿಯಾಗಿದ್ದಾರೆ. ಆದರೆ ರಕ್ಷಣೆಗೆ ಅಗತ್ಯವಾದ ಕ್ರಮ ಎಂದು ಕಾಣಲಾದ ಈ ಕಾಯ್ದೆಯು ಅನುಷ್ಠಾನದ ಹಂತದಲ್ಲಿ ಹಲವು ಸಮಸ್ಯೆಗಳನ್ನೂ ಸೃಷ್ಟಿಸಿದೆ. ಸಹಜವಾದ ಸಂಬಂಧಗಳಿಗೆ ಶಿಕ್ಷೆ ವಿಧಿಸಲು ಈ ಕಾಯ್ದೆಯನ್ನು ಒಂದು ಅಸ್ತ್ರವನ್ನಾಗಿ ಬಳಕೆ ಮಾಡಿಕೊಂಡ ನಿದರ್ಶನಗಳಿವೆ. ಈ ಕಾಯ್ದೆಯ ಪ್ರಕಾರ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಯಾವುದೇ ಸಂದರ್ಭದಲ್ಲಿಯೂ ಲೈಂಗಿಕ ಸಂಪರ್ಕಕ್ಕೆ ಸಮ್ಮತಿ ನೀಡುವಂತಿಲ್ಲ. ಅಂದರೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣಿನ ಜೊತೆ ಲೈಂಗಿಕ ಸಂಬಂಧ ಬೆಳೆಸುವುದು ಅಪರಾಧವಾಗುತ್ತದೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕ ಕಟ್ಟುಪಾಡುಗಳು, ಯುವಜನರ ನಡುವಿನ ಸಂಬಂಧಗಳ ಸ್ವರೂಪ ಬಹಳಷ್ಟು ಬದಲಾಗಿದೆ. ಹದಿಹರೆಯದವರು ಪರಸ್ಪರರನ್ನು ಪ್ರೀತಿಸುತ್ತಾರೆ, ತಮ್ಮ ಸಂಬಂಧದ ಆಳ ಎಷ್ಟೆಂಬುದನ್ನು ಅನ್ವೇಷಿಸಲು ಮುಂದಾಗುತ್ತಾರೆ. ಆದರೆ, ಸಹಮತದ ಸಂಬಂಧವು ಕೆಲವು ಸಂದರ್ಭಗಳಲ್ಲಿ ಯುವಕನನ್ನು ಮಾತ್ರ ಕಾನೂನಿನ ಸುಳಿಗೆ ಸಿಲುಕಿಸಿ, ಜೈಲಿಗೆ ತಳ್ಳುತ್ತದೆ.
ಹದಿಹರೆಯದವರ ಕೆಲವು ಕೃತ್ಯಗಳು ಕಾನೂನಿನ ದೃಷ್ಟಿಯಿಂದ ಅತ್ಯಾಚಾರ ಎಂದು ಪರಿಗಣಿತವಾಗುತ್ತವೆ; ಹುಡುಗನ ಜೀವಿತಾವಧಿಯ ಒಂದಿಷ್ಟು ವರ್ಷಗಳು ಹಾಳಾಗುತ್ತವೆ. ಉತ್ತಮ ವಕೀಲರ ನೆರವು ಪಡೆಯಲು ಆಗದೆ, ಕಾನೂನಿನ ಅಡಿಯಲ್ಲಿ ಸರಿಯಾದ ರಕ್ಷಣೆ ಪಡೆಯಲು ಆಗದೆ ದುರ್ಬಲ ವರ್ಗಗಳಿಗೆ ಸೇರಿದವರು ಹೆಚ್ಚಿನ ಕಷ್ಟ ಅನುಭವಿಸಬೇಕಾಗುತ್ತದೆ. ಹುಡುಗಿಯ ಕುಟುಂಬದವರು ಕೆಲವು ಸಂದರ್ಭಗಳಲ್ಲಿ ಇಡೀ ಪ್ರಕರಣವನ್ನು ‘ಮರ್ಯಾದೆಯ ಪ್ರಶ್ನೆಯನ್ನಾಗಿ ಪರಿಗಣಿಸಿ’, ಹಗೆ ತೀರಿಸಿಕೊಳ್ಳಲು ಮುಂದಾಗುತ್ತಾರೆ. ಹುಡುಗನ ಮೇಲೆ ಅತ್ಯಾಚಾರದ ಆರೋಪ ಹೊರಿಸುತ್ತಾರೆ. ಅತ್ಯಾಚಾರಕ್ಕೆ ನೇರವಾಗಿ ಸಂಬಂಧವೇ ಇಲ್ಲದ ಕೆಲವು ಸಂಗತಿಗಳು, ಅಂದರೆ ಜಮೀನು ವ್ಯಾಜ್ಯಗಳು ಅಥವಾ ಕುಟುಂಬಗಳ ನಡುವಿನ ಕಲಹಗಳು ಕೂಡ ಪೋಕ್ಸೊ ಅಡಿಯಲ್ಲಿ ಸುಳ್ಳು ಪ್ರಕರಣ ದಾಖಲಿಸಲು ಕಾರಣವಾಗಿವೆ. ಈ ಎಲ್ಲ ಕಾರಣಗಳಿಂದಾಗಿ, ಪೋಕ್ಸೊ ಕಾಯ್ದೆಯ ದುರ್ಬಳಕೆಯನ್ನು ತಡೆಯಲು ಕಾಯ್ದೆಯ ಅಂಶಗಳನ್ನು ಪುನರ್ ಪರಿಶೀಲನೆಗೆ ಒಳಪಡಿಸುವ ಅಗತ್ಯ ಇದೆ. ಸಹಮತ ನೀಡಲು 16 ವರ್ಷ ವಯಸ್ಸಾಗಿದ್ದರೆ ಸಾಕು ಎಂಬ ಬದಲಾವಣೆಯನ್ನು ಕಾಯ್ದೆಯಲ್ಲಿ ತರಬೇಕು ಎಂಬ ಸಲಹೆಯೊಂದು ಇದೆ. ಆದರೆ, ಸಹಮತದ ವಯಸ್ಸನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಲ್ಲ. ಮಕ್ಕಳನ್ನು ಲೈಂಗಿಕ ದೌರ್ಜನ್ಯಗಳಿಂದ ರಕ್ಷಿಸಲು ಇರುವ ಪ್ರಬಲ ಅಸ್ತ್ರವಾಗಿ ಪೋಕ್ಸೊ ಕಾಯ್ದೆ ಉಳಿದುಕೊಳ್ಳಬೇಕು. ಆದರೆ, ಕೋರ್ಟ್ ಹೇಳಿರುವಂತೆ ಅದರ ದುರ್ಬಳಕೆಯನ್ನು ತಡೆಯಲು ಮಾರ್ಗೋಪಾಯ ಹುಡುಕಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.