ADVERTISEMENT

ಬಿಜೆಪಿಗೆ ಬಲ ತುಂಬಿದ ಫಲಿತಾಂಶ: ಅಭಿವೃದ್ಧಿ ಇನ್ನಾದರೂ ಆದ್ಯತೆಯಾಗಲಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 20:15 IST
Last Updated 9 ಡಿಸೆಂಬರ್ 2019, 20:15 IST
Edit- 10122019
Edit- 10122019   

ರಾಜ್ಯ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯು ಹನ್ನೆರಡರಲ್ಲಿ ಜಯಭೇರಿ ಬಾರಿಸಿದೆ. ಅಧಿಕೃತ ವಿರೋಧಪಕ್ಷವಾದ ಕಾಂಗ್ರೆಸ್‍ ಬರೀ ಎರಡು ಸ್ಥಾನಗಳನ್ನು ಗೆದ್ದು ಮುಖಭಂಗ ಅನುಭವಿಸಿದೆ. 12 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್‍ ಶೂನ್ಯ ಸಂಪಾದನೆಯೊಂದಿಗೆ ಕೈಚೆಲ್ಲಿದೆ. ಸದ್ಯ 222 ಸದಸ್ಯ ಬಲ ಹೊಂದಿರುವ ವಿಧಾನಸಭೆಯಲ್ಲಿ ಬಿಜೆಪಿ ಬಲ ಈಗ 117ಕ್ಕೆ ಏರಿದ್ದು, ರಾಜ್ಯ ರಾಜಕೀಯಕ್ಕೆ ಕವಿದಿದ್ದ ಅಸ್ಥಿರತೆಯ ಕಾರ್ಮೋಡ ದೂರ ಸರಿದಿದೆ. ನಾಲ್ಕೈದು ತಿಂಗಳಿನಿಂದ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ಕಾಂಗ್ರೆಸ್‍, ಜೆಡಿಎಸ್‍ ಶಾಸಕರ ರಾಜೀನಾಮೆ ಪ್ರಹಸನ, ಈ ಶಾಸಕರನ್ನು ಅನರ್ಹಗೊಳಿಸಿದ ವಿಧಾನಸಭಾಧ್ಯಕ್ಷರ ಆದೇಶ, ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ... ಈ ಎಲ್ಲದಕ್ಕೂ ಫಲಿತಾಂಶವು ತಾರ್ಕಿಕ ಅಂತ್ಯ ಹಾಡಿದೆ. ಬಿ.ಎಸ್‍.ಯಡಿಯೂರಪ್ಪ ನೇತೃತ್ವದ ಸರ್ಕಾರ ಹೆಚ್ಚು ಬಲ ಪಡೆದಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪೇ ಅಂತಿಮವಾಗಿರುವುದರಿಂದ ಚುನಾವಣೆಗೂ ಮುಂಚೆ ಪಕ್ಷಾಂತರ ಕುರಿತು ನಡೆದ ಚರ್ಚೆಗಳೆಲ್ಲವೂ ಈಗ ಅಪ್ರಸ್ತುತ. ನಿರ್ದಿಷ್ಟ ಕ್ಷೇತ್ರದಲ್ಲಿ ಅಭ್ಯರ್ಥಿ ಹೊಂದಿರುವ ಜನಸಂಪರ್ಕ, ಮಾಡಿರುವ ಅಭಿವೃದ್ಧಿ ಕಾರ್ಯ, ಮತದಾರರನ್ನು ಒಲಿಸಿಕೊಳ್ಳಲು ಚೆಲ್ಲಿದ ಅಪಾರ ಹಣ, ಜಾತಿ ಆಧಾರಿತ ಮತಗಳ ಧ್ರುವೀಕರಣ... ಇವೆಲ್ಲವೂ ಗೆಲುವಿನ ಹಿಂದೆ ಕೆಲಸ ಮಾಡಿರಬಹುದು. ಆದರೆ, ಇವೆಲ್ಲವು
ಗಳಿಗಿಂತ ಮಿಗಿಲಾಗಿ ರಾಜಕೀಯ ಸ್ಥಿರತೆಗೆ ದೊರೆತ ಜನಾದೇಶ ಇದಾಗಿದೆ ಎಂದು ಹೇಳಿದರೆ ಅದರಲ್ಲಿ ಅತಿಶಯೋಕ್ತಿ ಏನೂ ಇಲ್ಲ.

ಮಿನಿಮಹಾಸಮರ ಎಂದೇ ಬಣ್ಣಿತವಾದ ಈ ಉಪಚುನಾವಣೆಯ ಫಲಿತಾಂಶವು ರಾಜ್ಯದ ಮೂರೂ ಪ್ರಧಾನ ಪಕ್ಷಗಳಲ್ಲಿ ಹಲವು ಪಲ್ಲಟಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ಬಿಜೆಪಿಯಲ್ಲಿ ತಾವು ಪ್ರಶ್ನಾತೀತ ನಾಯಕ ಎನ್ನುವುದನ್ನು ಯಡಿಯೂರಪ್ಪ ಈ ಫಲಿತಾಂಶದ ಮೂಲಕ ಸಾಬೀತುಪಡಿಸಿದ್ದಾರೆ. ಬಿಜೆಪಿಗೆ ವಿಧಾನಸಭೆ ಚುನಾವಣೆಗಳಲ್ಲಿ ಎಂದೂ ಪ್ರಾತಿನಿಧ್ಯ ದೊರಕಿಸಿಕೊಡದ ಮಂಡ್ಯ ಜಿಲ್ಲೆಯಲ್ಲೂ ಪಕ್ಷವು ಖಾತೆ ತೆರೆದಿದೆ ಎಂಬುದು ಗಮನಾರ್ಹ. ಇದು, ಬಿಜೆಪಿಯು ನೆಲೆ ವಿಸ್ತರಿಸಿಕೊಳ್ಳುತ್ತಿರುವುದರ ದ್ಯೋತಕ. ಪರಾಭವ ಉಂಟು ಮಾಡಿರುವ ತಲ್ಲಣ ಕಾಂಗ್ರೆಸ್‍ ಪಕ್ಷದಲ್ಲಿ ಈಗಾಗಲೇ ಕಾಣಿಸತೊಡಗಿದೆ. ಕಾಂಗ್ರೆಸ್‍ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್‍ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಒಳಗೆ ವಲಸಿಗರು ಮತ್ತು ಮೂಲ ಕಾಂಗ್ರೆಸ್ಸಿಗರು ಎಂಬ ಭೇದಭಾವ ಅಳಿಸಿಹೋಗದಿರುವುದು ಪಕ್ಷದ ದಯನೀಯ ಸೋಲಿನ ಕಾರಣಗಳಲ್ಲಿ ಒಂದು. ಈ ಸೋಲಿನ ಹಿನ್ನೆಲೆಯಲ್ಲಿ ಪಕ್ಷ ತುರ್ತಾಗಿ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯ ಇದೆ. ಅಧಿಕಾರದಲ್ಲಿ ಇದ್ದಾಗ ಕುಟುಂಬ ರಾಜಕೀಯವನ್ನೇ ಉಸಿರಾಡಿದ ಜೆಡಿಎಸ್‌ಗೆ ಮತದಾರರು ಬಹುದೊಡ್ಡ ಹೊಡೆತ ಕೊಟ್ಟಿದ್ದಾರೆ. ಅದರಲ್ಲೂ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದ ಸೋಲು ಪಕ್ಷಕ್ಕೆ ಮರ್ಮಾಘಾತ ಉಂಟುಮಾಡಿದೆ. ಈ ಸೋಲಿನಿಂದ ಪಕ್ಷ ಹೇಗೆ ಹೊರಬರಲಿದೆ ಎನ್ನುವುದನ್ನು ಕಾದುನೋಡಬೇಕು.ಚುನಾವಣೆಗೂ ಮುನ್ನ ಮಾತು ಕೊಟ್ಟಂತೆ, ಹಿಂದೆ ತಾವಿದ್ದ ಪಕ್ಷ ತ್ಯಜಿಸಿ ಬಿಜೆಪಿಗೆ ಬಂದು ಗೆದ್ದಿರುವ ಎಲ್ಲ ಶಾಸಕರನ್ನೂ ಸಚಿವರನ್ನಾಗಿಸುವುದಾಗಿ ಯಡಿಯೂರಪ್ಪ ಪ್ರಕಟಿಸಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸಚಿವ ಸಂಪುಟದ ವಿಸ್ತರಣೆ ಅಥವಾ ಪುನರ್‌ರಚನೆ ಮಾಡುವುದು ಮುಖ್ಯಮಂತ್ರಿ ಮುಂದಿರುವ ಸವಾಲು. ಇದರಲ್ಲಿ ತುಸು ಏರುಪೇರಾದರೂ ಗೊಂದಲ ಮತ್ತುಭಿನ್ನಮತ ಬಿಜೆಪಿಯನ್ನೂ ಕಾಡಬಹುದು. ಕಾಂಗ್ರೆಸ್‍ನಂತೆಯೇ ಬಿಜೆಪಿಯಲ್ಲೂ ಮೂಲನಿವಾಸಿಗಳು ಮತ್ತು ವಲಸಿಗರೆಂಬ ಭೇದಭಾವ ಕಾಣಿಸಿಕೊಳ್ಳಬಹುದು. 15 ಕ್ಷೇತ್ರಗಳ ಮತದಾರರು ಸ್ಥಿರತೆ ಬಯಸಿ ಬಿಜೆಪಿಗೆ ಬಲ ತುಂಬಿದ್ದಾರೆ. ಇದರಿಂದಾಗಿ ಆಡಳಿತ ಪಕ್ಷದ ಜವಾಬ್ದಾರಿಯೂ ಹೆಚ್ಚಿದೆ. ಈ ಹೊಣೆ ಅರಿತು ಜನರ ದೈನಂದಿನ ಸಂಕಷ್ಟಗಳಿಗೆ ಸ್ಪಂದಿಸಬೇಕು. ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿ ರಾಜ್ಯದ ಮುಂದಿರುವ ಸವಾಲುಗಳನ್ನು ಎದುರಿಸಲು ಸಿದ್ಧವಾಗಬೇಕು. ಆರ್ಥಿಕ ಹಿಂಜರಿತ, ನಿರುದ್ಯೋಗದಂತಹ ಸಮಸ್ಯೆಗಳು ದೇಶದ ಮುಂದೆ ಎಚ್ಚರಿಕೆಯ ಗಂಟೆ ಬಾರಿಸುತ್ತಿವೆ. ನಮ್ಮ ರಾಜ್ಯದ ಪರಿಸ್ಥಿತಿಯೂ ಅದಕ್ಕೆ ಹೊರತಲ್ಲ. ಉದ್ಯೋಗ ಅವಕಾಶಗಳ ಸೃಷ್ಟಿಗೆ ಒತ್ತು ನೀಡುವಂತಹ, ಸುಸ್ಥಿರ ಅಭಿವೃದ್ಧಿಗೆ ಪೂರಕವಾಗುವಂತಹ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸುವುದು ಸರ್ಕಾರದತಕ್ಷಣದ ಆದ್ಯತೆ ಆಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT