ADVERTISEMENT

ಸಂಪಾದಕೀಯ: ಕೋವಿಡ್‌ ಮುನ್ನೆಚ್ಚರಿಕೆ ಲಸಿಕೆ ಎಲ್ಲರ ಕೈಗೂ ಎಟಕುವಂತಾಗಲಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 18:35 IST
Last Updated 17 ಏಪ್ರಿಲ್ 2022, 18:35 IST
ಸಂಪಾದಕೀಯ
ಸಂಪಾದಕೀಯ   

18 ವರ್ಷ ಮೇಲ್ಪಟ್ಟ, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಎಲ್ಲರೂ ಕೋವಿಡ್‌ನ ಬೂಸ್ಟರ್ ಡೋಸ್ ಅಥವಾ ಮುನ್ನೆಚ್ಚರಿಕೆ ಡೋಸ್ ಪಡೆಯಲು ಅವಕಾಶ ಕಲ್ಪಿಸುವ ಮೂಲಕ ಕೇಂದ್ರ ಸರ್ಕಾರವು ಒಳ್ಳೆಯ ಕೆಲಸ ಮಾಡಿದೆ. ಕೋವಿಡ್‌ ವಿರುದ್ಧ ಲಸಿಕೆ ನೀಡುವ ಈ ಹಂತದ ಕಾರ್ಯಕ್ರಮವು ಏಪ್ರಿಲ್ 10ರಿಂದ ಆರಂಭವಾಗಿದೆ.

60 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು, ಆರೋಗ್ಯಸೇವಾ ಕಾರ್ಯಕರ್ತರು ಹಾಗೂ ಕೋವಿಡ್‌ ಮುಂಚೂಣಿ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಡೋಸ್ ಪಡೆಯಲು ಜನವರಿಯಿಂದಲೇ ಅವಕಾಶ ನೀಡಲಾಗಿತ್ತು. ಕೋವಿಡ್‌ ಸಾಂಕ್ರಾಮಿಕದ ಅಬ್ಬರ ಈಗ ತಗ್ಗಿದೆ. ಕೋವಿಡ್ ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಗೆ ತರಲಾಗಿದ್ದ ಹಲವು ನಿಯಮಗಳನ್ನು ಈಗ ದೇಶದ ಬಹುತೇಕ ಭಾಗಗಳಲ್ಲಿ ಸಡಿಲಗೊಳಿಸಲಾಗಿದೆ.

ಹೀಗಿದ್ದರೂ ಕೋವಿಡ್‌ನ ಭಯ ಪೂರ್ತಿಯಾಗಿ ನಿವಾರಣೆ ಆಗಿಲ್ಲ. ಕೆಲವು ದೇಶಗಳಲ್ಲಿ ಕೋವಿಡ್ ಸಾಂಕ್ರಾಮಿಕದ ನಾಲ್ಕನೆಯ ಹಾಗೂ ಐದನೆಯ ಅಲೆಗಳು ಕಾಣಿಸಿಕೊಂಡಿವೆ. ಚೀನಾದ ಶಾಂಘೈ ನಗರದಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದೆ. ಕೊರೊನಾ ವೈರಾಣುವಿನ ಹೊಸ ತಳಿಗಳು ತಲೆ ಎತ್ತುವ ಸಾಧ್ಯತೆಯನ್ನು ಅಲ್ಲಗಳೆಯಲು ಆಗದು. ಹೆಚ್ಚು ವೇಗವಾಗಿ ಹರಡುತ್ತದೆ ಎನ್ನಲಾಗಿರುವ ಕೊರೊನಾದ ಇನ್ನೊಂದು ರೂಪಾಂತರಿ ತಳಿ ಎಕ್ಸ್‌ಇ ಹಲವೆಡೆ ಕಾಣಿಸಿಕೊಂಡಿದೆ. ಈ ರೂಪಾಂತರಿಯ ವಿರುದ್ಧ ಮತ್ತು ಮುಂದೆ ಬರಬಹುದಾದ ಯಾವುದೇ ರೂಪಾಂತರಿಯ ವಿರುದ್ಧ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕಾದ ಅಗತ್ಯ ಖಂಡಿತ ಇದೆ.

ADVERTISEMENT

ಈ ಹಿನ್ನೆಲೆಯಲ್ಲಿ ನೋಡಿದಾಗ, ಕೋವಿಡ್‌ ವಿರುದ್ಧ ಲಸಿಕೆ ನೀಡುವ ಹೊಸ ಕಾರ್ಯಕ್ರಮವು ಸಮಯೋಚಿತ ಎಂದು ಅನ್ನಿಸುತ್ತದೆ. ಲಸಿಕೆ ಪಡೆದ ನಂತರ ವ್ಯಕ್ತಿಗೆ ಬರುವ ನಿರೋಧಕ ಶಕ್ತಿಯು ನಿರ್ದಿಷ್ಟ ಅವಧಿಯ ನಂತರದಲ್ಲಿ ಕಡಿಮೆ ಆಗಲಾರಂಭಿಸು
ತ್ತದೆ ಎಂಬುದನ್ನು ಅಧ್ಯಯನಗಳು ತೋರಿಸಿಕೊಟ್ಟಿವೆ. ಎರಡನೆಯ ಡೋಸ್ ಪಡೆದ ನಾಲ್ಕರಿಂದ ಆರು ತಿಂಗಳ ನಂತರದಲ್ಲಿ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ ಎಂಬುದು ಈಗಿನ ತಿಳಿವಳಿಕೆ.

ದೇಶದ ವಯಸ್ಕರಲ್ಲಿ ದೊಡ್ಡ ಸಂಖ್ಯೆಯ ಜನ ಎರಡನೆಯ ಡೋಸ್ ಪಡೆದಿದ್ದು ಆರು ತಿಂಗಳುಗಳ ಹಿಂದೆ. ಹೀಗಾಗಿ, ಈಗ ಮುನ್ನೆಚ್ಚರಿಕೆ ಡೋಸ್ ನೀಡಲು ಸಕಾಲ. ಲಸಿಕೆ ನೀಡಬೇಕಾದ ಅವಧಿ ಮತ್ತು ಲಸಿಕೆಗೆ ಸಂಬಂಧಿಸಿದ ಇತರ ಹಲವು ವಿಷಯಗಳು ಈಗಲೂ ಅಧ್ಯಯನದ ವಸ್ತು. ಮೊದಲ ಎರಡು ಡೋಸ್‌ಗಳಲ್ಲಿ ಬಳಕೆಯಾದ ಲಸಿಕೆಯನ್ನೇ ಮುನ್ನೆಚ್ಚರಿಕೆ ಲಸಿಕೆಯಾಗಿ ಪಡೆದರೆ ಹೆಚ್ಚು ಪರಿಣಾಮಕಾರಿಯೇ ಅಥವಾ ಬೇರೆ ಲಸಿಕೆ ಪಡೆದರೆ ಹೆಚ್ಚು ‍‍‍‍ಪರಿಣಾಮಕಾರಿಯೇ ಎಂಬುದು ಕೂಡ ಅಧ್ಯಯನದ ವಸ್ತು. ಹೀಗಿದ್ದರೂ, ಮುನ್ನೆಚ್ಚರಿಕೆ ಡೋಸ್‌ನ ಅಗತ್ಯ ಇದೆ, ಅದನ್ನು ಪಡೆಯುವುದು ಒಳ್ಳೆಯದು ಎಂಬ ವಿಚಾರವಾಗಿ ಸಹಮತ ಇದೆ. ಕೆಲವು ದೇಶಗಳಲ್ಲಿ ನಾಲ್ಕನೆಯ ಡೋಸ್ ನೀಡುವ ಕೆಲಸ ಕೂಡ ಶುರುವಾಗಿದೆ.

ಆದರೆ, ಮುನ್ನೆಚ್ಚರಿಕೆ ಡೋಸ್‌ಗಳು ಈ ಹಂತದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಸಿಗುತ್ತಿರುವುದು ಹಾಗೂ ಅದು ಬೇಕು ಎಂದು ಬಯಸಿರುವವರು ಹಣ ಪಾವತಿಸಬೇಕಿರುವುದು ದುರದೃಷ್ಟಕರ. ಮುನ್ನೆಚ್ಚರಿಕೆ ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಸಿಗುವಂತೆ ಮಾಡಿರುವುದು ತಪ್ಪು. ಇದು ತಾರತಮ್ಯದ ನಡೆ. ದೇಶದ ದೊಡ್ಡ ಜನವರ್ಗಕ್ಕೆ ಲಸಿಕೆ ಸಿಗದಂತಾಗುವುದಕ್ಕೆ ಇದು ದಾರಿ ಮಾಡಿಕೊಡುತ್ತದೆ. ಲಸಿಕೆಗಳ ಬೆಲೆಯನ್ನು ತಗ್ಗಿಸಲಾಗಿದೆ ಎಂಬುದು ನಿಜ.

ಆದರೆ, ಲಸಿಕೆ ನೀಡಿದ್ದಕ್ಕೆ ಆಸ್ಪತ್ರೆಗಳು ಪಡೆಯುವ ಸೇವಾ ಶುಲ್ಕ ಸೇರಿ ಲಸಿಕೆಗೆ ಪಾವತಿಸಬೇಕಿರುವ ವೆಚ್ಚವು ಹಲವರ ಪಾಲಿಗೆ ದೊಡ್ಡ ಮೊತ್ತವಾಗಬಹುದು. ಲಸಿಕೆಯ ವೆಚ್ಚಕ್ಕೆ ಸಂಬಂಧಿಸಿದಂತೆ ಕೆಲವು ಗೊಂದಲಗಳು ಇದ್ದವು. ಖಾಸಗಿ ಆಸ್ಪತ್ರೆಗಳಲ್ಲಿ ಮೊದಲೇ ಖರೀದಿಸಿರುವ ಲಸಿಕೆಗಳು ಇವೆ. ಅವುಗಳನ್ನು ಹೆಚ್ಚಿನ ಬೆಲೆ ನೀಡಿ ಖರೀದಿಸಲಾಗಿದೆ. ಈಗ ನಿಗದಿ ಮಾಡಿರುವ ಬೆಲೆ ಹಾಗೂ ಹಿಂದೆ ಖರೀದಿಸಿದ್ದ ಬೆಲೆಯ ನಡುವಿನ ವ್ಯತ್ಯಾಸವನ್ನು ಭರ್ತಿ ಮಾಡಿಕೊಡಲಾಗುವುದು ಎಂದು ಆಸ್ಪತ್ರೆಗಳಿಗೆ ಹೇಳಲಾಗಿದೆ.

ಆದರೂ ಅನುಮಾನಗಳು ಪೂರ್ತಿಯಾಗಿ ಬಗೆಹರಿದಂತಿಲ್ಲ. ಮುನ್ನೆಚ್ಚರಿಕೆ ಡೋಸ್ ಪಡೆಯುವ ವಿಚಾರದಲ್ಲಿ ಸಾರ್ವಜನಿಕರಿಂದ ಬಂದಿರುವ ಸ್ಪಂದನ ನೀರಸವಾಗಿದೆ. ಕೋವಿಡ್ ನಿರೋಧಕ ಲಸಿಕೆಎಲ್ಲರಿಗೂ ಸಿಗುವಂತೆ ಮಾಡುವುದು ಸರ್ಕಾರದ ಗುರಿಯಾಗಬೇಕು. ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಇಂತಹ ಉದ್ದೇಶಗಳಿಗೆ ವೆಚ್ಚ ಮಾಡುವುದಕ್ಕೆ ಅದು ಹಿಂದೇಟು ಹಾಕಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.