ADVERTISEMENT

ಸಂಪಾದಕೀಯ: ಅಡುಗೆ ಎಣ್ಣೆ ಬೆಲೆ ಏರಿಕೆಯ ಬಿಸಿ- ಜನಸಾಮಾನ್ಯರಿಗೆ ಬೇಕಿದೆ ನೆರವು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 19:21 IST
Last Updated 8 ಮಾರ್ಚ್ 2022, 19:21 IST
   

ಕೋವಿಡ್‌ ಮತ್ತು ಲಾಕ್‌ಡೌನ್‌ಗಳಿಂದಾಗಿ ಬಸವಳಿದಿದ್ದ ಜನಸಮುದಾಯಗಳು ಮತ್ತೊಂದು ಪೆಟ್ಟು ತಿನ್ನಲು ಸಜ್ಜಾಗಬೇಕಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮವಾಗಿ ಸೂರ್ಯಕಾಂತಿ ಅಡುಗೆ ಎಣ್ಣೆ ಬೆಲೆಯು ಗಗನಮುಖಿಯಾಗಿ ನಿಂತಿದೆ. ಭಾರತ ತನ್ನ ಅಗತ್ಯದ ಸೂರ್ಯಕಾಂತಿ ಎಣ್ಣೆ ಪೈಕಿ ಸರಿಸುಮಾರು ಶೇಕಡ 80ರಷ್ಟನ್ನು ಉಕ್ರೇನ್‌ನಿಂದ ಆಮದು ಮಾಡಿಕೊಳ್ಳುತ್ತಿದೆ.

ಅಲ್ಲಿ ಯುದ್ಧದ ಪರಿಣಾಮವಾಗಿ ಎಣ್ಣೆ ಗಿರಣಿಗಳು ಕೆಲಸ ಸ್ಥಗಿತ ಮಾಡಿದ್ದು, ಸೂರ್ಯಕಾಂತಿ ಎಣ್ಣೆಯನ್ನು ಹೊತ್ತ ಹಡಗುಗಳು ಅಲ್ಲಿಂದ ಹೊರಡುತ್ತಿಲ್ಲ. ಇದು ಭಾರತದಲ್ಲಿ ಪೂರೈಕೆ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟು ಮಾಡಿದೆ. ಲೀಟರ್‌ ಸೂರ್ಯಕಾಂತಿ ಎಣ್ಣೆಯು ಈಗಾಗಲೇ ₹ 40ರವರೆಗೆ ಹೆಚ್ಚಳ ಆಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅಡುಗೆ ಎಣ್ಣೆಯನ್ನು ಗ್ರಾಹಕರಿಗೆ ಮಿತ ಪ್ರಮಾಣದಲ್ಲಿ ಮಾರಾಟ ಮಾಡುತ್ತಿರುವ ವರದಿಗಳು ಬಂದಿವೆ. ಯುದ್ಧ ಈಗಲೇ ನಿಂತರೂ, ಅಲ್ಲಿಂದ ಇಲ್ಲಿಗೆ ಸೂರ್ಯಕಾಂತಿ ಎಣ್ಣೆ ಬರಲು ಕನಿಷ್ಠ 45 ದಿನಗಳು ಬೇಕು ಎಂದು ಉದ್ಯಮದ ಮೂಲಗಳು ಹೇಳಿವೆ.

ADVERTISEMENT

ಸೂರ್ಯಕಾಂತಿ ಎಣ್ಣೆಯ ಬೆಲೆಯಲ್ಲಿ ಆಗುವ ಏರಿಕೆಯು ಇತರ ಅಡುಗೆ ಎಣ್ಣೆಗಳ ಬೆಲೆಯ ಮೇಲೆಯೂ ಪರಿಣಾಮ ಉಂಟುಮಾಡುವುದು ಖಂಡಿತ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಎಲ್ಲ ಬಗೆಯ ಅಡುಗೆ ಎಣ್ಣೆ ಬೆಲೆಯಲ್ಲಿಯೂ ಏರಿಕೆ ಆಗುತ್ತದೆ. ಜನಸಾಮಾನ್ಯರ ಬದುಕು ಅಷ್ಟರಮಟ್ಟಿಗೆ ತುಟ್ಟಿಯಾಗುತ್ತದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಇನ್ನೊಂದು ಪರಿಣಾಮವೆಂದರೆ, ಕಚ್ಚಾ ತೈಲದ ಬೆಲೆಯಲ್ಲಿ ಆಗಿರುವ ಭಾರಿ ಪ್ರಮಾಣದ ಏರಿಕೆ. ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹತ್ತಿರವಾದಾಗ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಏರಿಕೆಗೆ ತಡೆ ಹಾಕಲಾಗಿತ್ತು.

ಇದು ಸಂಪೂರ್ಣವಾಗಿ ರಾಜಕೀಯ ತೀರ್ಮಾನ ಆಗಿತ್ತು. ಈಗ ಮತದಾನ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯು ಬಹುತೇಕ ಖಚಿತ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಆಗಿರುವ ಹೆಚ್ಚಳವನ್ನು ಗಮನಿಸಿದರೆ, ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯು ಹಂತ ಹಂತವಾಗಿ ಲೀಟರಿಗೆ ₹ 12ರವರೆಗೆ ಹೆಚ್ಚಳ ಆಗಬಹುದು ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಆಗುವ ಏರಿಕೆಯು ದಿನನಿತ್ಯ ಬಳಸುವ ಎಲ್ಲ ವಸ್ತುಗಳ ಬೆಲೆಯಲ್ಲಿಯೂ ಪ್ರತಿಫಲನ ಆಗುವುದು ತೀರಾ ಸಹಜ. ಅಡುಗೆ ಎಣ್ಣೆಯ ಬೆಲೆಯಲ್ಲಿ ಈಗಾಗಲೇ ಆಗಿರುವ ಏರಿಕೆ, ಯುದ್ಧ ಮುಂದುವರಿದರೆ ಇನ್ನು ಮುಂದೆಯೂ ಆಗಬಹುದಾದ ಏರಿಕೆ, ಇಂಧನ ಬೆಲೆ ಏರಿಕೆ, ಅದರಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿ ಆಗಲಿರುವ ಏರಿಕೆಗೆ ಜನಸಾಮಾನ್ಯರು ಸಜ್ಜಾಗಬೇಕಿದೆ. ದೇಶದ ಚಿಲ್ಲರೆ ಹಣದುಬ್ಬರ ದರದ ಪ್ರಮಾಣವು ಜನವರಿಯಲ್ಲಿಯೇ ಶೇಕಡ 6ರ ಗಡಿಯನ್ನು ದಾಟಿದೆ. ಅಂದರೆ, ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ತಾನೇ ನಿಗದಿ ಮಾಡಿಕೊಂಡಿರುವ ಗರಿಷ್ಠ ಪ್ರಮಾಣಕ್ಕಿಂತ ಹಣದುಬ್ಬರ ದರ ಹೆಚ್ಚಳ ಕಂಡಿದೆ.

ಜನವರಿಯಲ್ಲಿ ಜಾಗತಿಕ ರಾಜಕೀಯ, ಆರ್ಥಿಕ ಪರಿಸ್ಥಿತಿ ಈಗಿನಂತೆ ಇರಲಿಲ್ಲ. ಆಗ ಕಚ್ಚಾ ತೈಲ ಬೆಲೆಯು ಈಗಿನ ಮಟ್ಟವನ್ನು ತಲುಪಿರಲಿಲ್ಲ. ಈಗಿನ ಸಂದರ್ಭವು ಬೇರೆಯದೇ ಆಗಿದೆ. ಅನಿರೀಕ್ಷಿತವಾಗಿ ಬಂದೆರಗಿರುವ ಯುದ್ಧದ ಪರಿಣಾಮಗಳನ್ನು ಆರ್‌ಬಿಐ ಹೇಗೆ ನಿಭಾಯಿಸುತ್ತದೆ, ಹಣದುಬ್ಬರದ ಏರುಗತಿಯನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಅವಲಂಬಿಸಿದೆ ಜನಸಾಮಾನ್ಯರ ದಿನನಿತ್ಯದ ಬದುಕು. ಸೋಮವಾರದ ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಭಾರಿ ಕುಸಿತ ದಾಖಲಿಸಿದ್ದರ ಹಿಂದೆ ಹಣದುಬ್ಬರ ಪ್ರಮಾಣವು ವಿಪರೀತ ಅನ್ನಿಸುವ ಮಟ್ಟವನ್ನು ತಲುಪಬಹುದು ಎಂಬ ಒಂದು ಆತಂಕವೂ ಇತ್ತು.

ಈ ಆತಂಕದಲ್ಲಿ ಹುರುಳಿದೆ. ವ್ಯವಸ್ಥೆಯಲ್ಲಿ ನಗದು ಹರಿವಿನ ‍ಪ್ರಮಾಣವನ್ನು ನಿಯಂತ್ರಿಸಿ, ಆ ಮೂಲಕ ಹಣದುಬ್ಬರ ಪ್ರಮಾಣವನ್ನು ಆರ್‌ಬಿಐ ಹತೋಟಿಗೆ ತರುತ್ತದೆ ಎಂಬ ನಿರೀಕ್ಷೆ ಇತ್ತು. ಈಗಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಾಗುವುದು ಅನುಮಾನಕರ. ಈಗಿನ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಸರ್ಕಾರಗಳ ಮಧ್ಯಪ್ರವೇಶ ಅಗತ್ಯವಾಗುತ್ತದೆ. ಸಗಟು ವ್ಯಾಪಾರಿಗಳು ಅಡುಗೆ ಎಣ್ಣೆಯಂತಹ ಅಗತ್ಯ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿ, ಮಾರುಕಟ್ಟೆಯಲ್ಲಿ ಅವುಗಳ ಕೃತಕ ಅಭಾವ ಸೃಷ್ಟಿಸಿ, ಬೆಲೆಯನ್ನು ಹೆಚ್ಚಿಸುವ ತಂತ್ರದ ಮೊರೆಹೋಗುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವ ಶಕ್ತಿ ಇರುವುದು ಸರ್ಕಾರಗಳಿಗೆ ಮಾತ್ರ. ಆ ಕೆಲಸ ಆಳುವವರಿಂದ ಈಗ ಆಗಬೇಕು. ಅಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಮೇಲಿನ ಎಕ್ಸೈಸ್ ಸುಂಕ ಹಾಗೂ ಮೌಲ್ಯವರ್ಧಿತ ತೆರಿಗೆ ಪ್ರಮಾಣವನ್ನು ತಗ್ಗಿಸಿ ಅವುಗಳ ದೇಶಿ ಮಾರುಕಟ್ಟೆ ಬೆಲೆಯು ವಿಪರೀತದ ಮಟ್ಟ ತಲುಪದಂತೆ ನೋಡಿಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.