ADVERTISEMENT

ಸಂಪಾದಕೀಯ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ- ಸುಪ್ರೀಂ ಕೋರ್ಟ್‌ ತೀರ್ಪು ಪಾಲಿಸಿ

​ಪ್ರಜಾವಾಣಿ ವಾರ್ತೆ
Published 11 ಮೇ 2022, 22:15 IST
Last Updated 11 ಮೇ 2022, 22:15 IST
ಸಂಪಾದಕೀಯ
ಸಂಪಾದಕೀಯ   

ಸ್ಥಳೀಯ ಸಂಸ್ಥೆಗಳ ಅಧಿಕಾರದ ಅವಧಿ ಪೂರ್ಣಗೊಂಡ ಬಳಿಕ ನಿರ್ವಾತ ಸೃಷ್ಟಿಯಾಗಲು ಅವಕಾಶ ಕೊಡದೆ ಸಕಾಲದಲ್ಲಿ ಚುನಾವಣೆ ನಡೆಸಬೇಕಾದುದು ಪ್ರತಿಯೊಂದು ರಾಜ್ಯ ಸರ್ಕಾರದ ಸಾಂವಿಧಾನಿಕ ಹೊಣೆ. ಆದರೆ, ಕರ್ನಾಟಕವೂ ಸೇರಿದಂತೆ ದೇಶದ ಹಲವು ರಾಜ್ಯ ಸರ್ಕಾರಗಳು ಈ ವಿಷಯದಲ್ಲಿ ಹೊಣೆಗೇಡಿತನ ಪ್ರದರ್ಶಿಸುತ್ತಾ ಬಂದಿವೆ. ಚುನಾವಣೆ ನಡೆಸುವಂತೆ ಕೋರ್ಟ್‌ಗಳಿಂದ ಪದೇ ಪದೇ ನಿರ್ದೇಶನ ಪಡೆಯುವುದು ಅವುಗಳ ಪಾಲಿಗೆ ಮಾಮೂಲು ಚಾಳಿಯಾಗಿಬಿಟ್ಟಿದೆ. ಈಗ ಮತ್ತೆ ಅಂತಹದ್ದೇ ಸಂದರ್ಭ ಸೃಷ್ಟಿಯಾಗಿದ್ದು, ಎರಡು ವಾರಗಳಲ್ಲಿ ಚುನಾವಣೆಗೆ ಅಧಿಸೂಚನೆಯನ್ನು ಹೊರಡಿಸುವಂತೆ ಮಧ್ಯಪ್ರದೇಶ ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ.

ಚುನಾವಣೆ ಬಾಕಿ ಇರುವ ಸ್ಥಳೀಯ ಸಂಸ್ಥೆಗಳಿಗೆ ವಿಳಂಬ ಇಲ್ಲದೆ ಚುನಾವಣೆ ನಡೆಸಬೇಕು ಎಂದು ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಇದು ಇಡೀ ದೇಶಕ್ಕೆ ಅನ್ವಯ ಆಗಲಿದೆ. ಕರ್ನಾಟಕದಲ್ಲೂ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾವಣೆಯನ್ನು ಒಂದು ವರ್ಷದಿಂದ ಮುಂದೂಡುತ್ತಾ ಬರಲಾಗಿದೆ. 2020ರ ಸೆಪ್ಟೆಂಬರ್‌ನಲ್ಲಿಯೇ ನಡೆಯಬೇಕಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾವಣೆ ಕೂಡ ಇದುವರೆಗೆ ನಡೆದಿಲ್ಲ. ಸಕಾಲದಲ್ಲಿ ಚುನಾವಣೆಯನ್ನು ನಡೆಸದ ಸರ್ಕಾರ, ಆ ಮೂಲಕ ಮತದಾರನ ಹಕ್ಕನ್ನು ಮೊಟಕುಗೊಳಿಸಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ಶಿಥಿಲಗೊಳಿಸಿದೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ನಿಖರ ದತ್ತಾಂಶಗಳ ಆಧಾರದಲ್ಲಿ ಗುರುತಿಸಿ, ಮೀಸಲಾತಿಯನ್ನು ಖಾತರಿಪಡಿಸುವ ವಿಷಯದಲ್ಲಿ ವಿಳಂಬ ಧೋರಣೆ ಅನುಸರಿಸಿ ಹಿಂದುಳಿದ ವರ್ಗಗಳಿಗೂ ಅನ್ಯಾಯ ಮಾಡಿದೆ. ಈ ಮೂರೂ ಲೋಪಗಳ ಮೂಲಕ ಸಂವಿಧಾನದ ಆಶಯಗಳನ್ನೇ ಗಾಳಿಗೆ ತೂರಿದೆ. ಹೀಗಾಗಿ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಈಗ ಸೃಷ್ಟಿಯಾಗಿರುವ ಎಲ್ಲ ಬಿಕ್ಕಟ್ಟುಗಳಿಗೂ ರಾಜ್ಯ ಸರ್ಕಾರವೇ ನೇರ ಹೊಣೆ. ಎಲ್ಲ ಸಿಕ್ಕುಗಳನ್ನು ಬಿಡಿಸಿಕೊಂಡು, ಯಾರಿಗೂ ಅನ್ಯಾಯವಾಗದಂತೆ ಬೇಗ ಚುನಾವಣೆ ನಡೆಸುವ ದಾರಿಯನ್ನು ಈಗ ಅದೇ ಕಂಡುಕೊಳ್ಳಬೇಕಿದೆ.

ADVERTISEMENT

ಪ್ರಜಾಪ್ರಭುತ್ವದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆಗೆ ಬುನಾದಿ ರೂಪದಲ್ಲಿರುವುದು ಸ್ಥಳೀಯ ಸಂಸ್ಥೆ. ಅದು ಗಟ್ಟಿಗೊಂಡಷ್ಟೂ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಸಮುದಾಯದ ಸಹಭಾಗಿತ್ವ ಹೆಚ್ಚಿದಷ್ಟೂ ಆಡಳಿತ ಚೆಲುವು ಪಡೆದುಕೊಳ್ಳುತ್ತದೆ. ಆದರೆ, ಆಡಳಿತ ವ್ಯವಸ್ಥೆಯ ಮೊದಲ ಮೆಟ್ಟಿಲಿನಂತಿರುವ ಸ್ಥಳೀಯ ಸಂಸ್ಥೆಗಳನ್ನು ಶಿಥಿಲಗೊಳಿಸುವ ಕೆಲಸಇತ್ತೀಚಿನ ವರ್ಷಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ.

ಅಂತಹ ಪ್ರಮಾದ ಎಸಗುವಲ್ಲಿ ಚುನಾವಣೆಯನ್ನು ಮುಂದೂಡುವುದು ಸರ್ಕಾರದ ಪಾಲಿಗೆ ಸುಲಭವಾಗಿ ಸಿಕ್ಕಿರುವ ಅಸ್ತ್ರ. ಸ್ಥಳೀಯ ಮಟ್ಟದಲ್ಲಿ ತಮ್ಮದೇ ರಾಜ್ಯಭಾರ ನಡೆಯುವಂತಾಗಲು ಹಲವು ಶಾಸಕರಿಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವುದು ಬೇಕಾಗಿಲ್ಲ. ಅವರ ತಾಳಕ್ಕೆ ತಕ್ಕಂತೆ ಸರ್ಕಾರದ ಹೊಣೆ ಹೊತ್ತವರೂ ಕುಣಿಯುವಂತಾಗಿದ್ದು ದುರದೃಷ್ಟಕರ. ಚುನಾವಣೆಯನ್ನು ಮುಂದೂಡಲು ಮೀಸಲಾತಿ ನಿರ್ಧಾರವಾಗದೇ ಇರುವುದು ಕಾರಣ ಎಂಬ ನೆಪವನ್ನು ಸರ್ಕಾರ ಹೇಳುತ್ತಿದೆ.

ಮೀಸಲಾತಿಗೆ ಸಂಬಂಧಿಸಿದ ತೊಡಕುಗಳನ್ನು ತ್ವರಿತವಾಗಿ ನಿವಾರಿಸಲು ಅಡ್ಡಿಪಡಿಸಿದವರು ಯಾರು? ಮೂರು ಹಂತಗಳ ಪರಿಶೀಲನೆ ನಡೆಸಿ, ಮೀಸಲಾತಿಯನ್ನು ನಿಗದಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿ ಹನ್ನೆರಡು ವರ್ಷಗಳೇ ಆಗಿವೆ. ಕಳೆದ ವರ್ಷದ ಮಾರ್ಚ್‌ನಲ್ಲೂ ಕೋರ್ಟ್‌ ಇದೇ ಮಾತನ್ನು ಪುನರುಚ್ಚರಿಸಿದೆ. ಬೇಕಾದಷ್ಟು ಅವಕಾಶವಿದ್ದರೂ ಕಾಲಹರಣ ಮಾಡಿ, ಈಗ ಮೀಸಲಾತಿಯ ಜಪ ಮಾಡುವುದು ಹೊಣೆಯಿಂದ ನುಣುಚಿಕೊಳ್ಳುವ ಯತ್ನವಷ್ಟೇ. ಮೀಸಲಾತಿ ಕುರಿತು ನಿರ್ಣಯಿಸಲು ಈಗಷ್ಟೇ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ವರದಿ ನೀಡಲು ಸಮಿತಿಗೆ ಕಾಲಮಿತಿ ವಿಧಿಸದಿರುವುದು ಸರ್ಕಾರದ ‘ಕಾಳಜಿ’ಯನ್ನು ಎತ್ತಿತೋರಿಸುತ್ತದೆ. ಬಿಬಿಎಂಪಿಯಲ್ಲಿ ವಾರ್ಡ್‌ಗಳ ಮರುವಿಂಗಡಣೆಯ ನೆಪ ಸಿಕ್ಕಿದ್ದು, ಶಾಸಕರನ್ನು ಸಂಪ್ರೀತಗೊಳಿಸುವ ಕೆಲಸದಲ್ಲಿ ನೆರವಿಗೆ ಬಂದಿದೆ.

‘ನಾವು ಚುನಾವಣೆಗೆ ಸಿದ್ಧರಿದ್ದೇವೆ, ನೀವು ಸಿದ್ಧರಿದ್ದೀರಾ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿರೋಧ ಪಕ್ಷಗಳನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯಲ್ಲಿ ಆಡಳಿತಪಕ್ಷವು ಎಲ್ಲ ಸಿದ್ಧತೆಯನ್ನು ಮಾಡಿಕೊಂಡ ಮೇಲಷ್ಟೇ ಚುನಾವಣೆ ಕುರಿತು ಯೋಚಿಸಲಿದೆ ಎಂಬ ಭಾವ ಎದ್ದುಕಾಣುತ್ತದೆ. ಆ ಸ್ಥಾನದಲ್ಲಿ ಬೇರೆ ಪಕ್ಷದ ನಾಯಕರಿದ್ದರೂ ಅವರ ಧೋರಣೆಯೂ ಇದೇ ಆಗಿರುತ್ತಿತ್ತು. ಆದರೆ, ಯಾವುದೇ ಪಕ್ಷವು ಸಿದ್ಧತೆ ಮಾಡಿಕೊಳ್ಳಲಿ, ಬಿಡಲಿ ಸಕಾಲದಲ್ಲಿ ಚುನಾವಣೆಯಂತೂ ನಡೆಯಲೇಬೇಕು. ರಾಜಕೀಯ ಹಿತಾಸಕ್ತಿಗಾಗಿ ಪ್ರಜಾಪ್ರಭುತ್ವವನ್ನು ಬಲಿ ಕೊಡುವುದು ಅಕ್ಷಮ್ಯ.

ಮೀಸಲಾತಿಯನ್ನು ಕಾಲಮಿತಿಯಲ್ಲಿ ನಿಗದಿ ಮಾಡಿ, ಚುನಾವಣೆಯನ್ನು ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡುವುದೋ, ಇದುವರೆಗೆ ಕಾಲಹರಣ ಮಾಡಿದ ತಪ್ಪಿಗಾಗಿ ಸಮರೋಪಾದಿಯಲ್ಲಿ ಮೀಸಲಾತಿ ನಿಗದಿಗೆ ಕ್ರಮ ಕೈಗೊಳ್ಳುವುದೋ ಎಂಬ ನಿರ್ಧಾರ ಸರ್ಕಾರಕ್ಕೇ ಬಿಟ್ಟಿದ್ದು. ವಿಳಂಬ ಮಾಡದೆ, ಹಿಂದುಳಿದ ವರ್ಗಗಳಿಗೆ ಅನ್ಯಾಯ ಆಗಲೂ ಬಿಡದೆ ಚುನಾವಣೆ ನಡೆಸಲು ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕು. ಈ ದಿಸೆಯಲ್ಲಿ ತನ್ನ ಮೇಲಿನ ಸಾಂವಿಧಾನಿಕ ಹೊಣೆಯನ್ನು ಅದು ಮರೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.