Editorial | ಸ್ಥಳೀಯ ಸಂಸ್ಥೆ: ಸಕಾಲಕ್ಕೆ ಚುನಾವಣೆ ನಡೆಸದಿರುವುದು ಜನವಿರೋಧಿ ನಡೆ
ದೇಶದಲ್ಲಿನ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸುವುದು ರಾಜ್ಯ ಚುನಾವಣಾ ಆಯೋಗಗಳ ಸಾಂವಿಧಾನಿಕ ಜವಾಬ್ದಾರಿ. ಸಂವಿಧಾನದ 243ನೇ ವಿಧಿಯಲ್ಲಿ ಇದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಯಾವುದೇ ಗ್ರಾಮೀಣ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಚುನಾಯಿತ ಆಡಳಿತ ಮಂಡಳಿಯು ವಿಸರ್ಜನೆಯಾದ ಆರು ತಿಂಗಳೊಳಗೆ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯ ಎಂಬುದು ಸಂವಿಧಾನದಲ್ಲೇ ಇದೆ. ಆದರೆ, ಬಹುತೇಕ ರಾಜ್ಯಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಕಾಲಕ್ಕೆ ನಡೆಯುತ್ತಿಲ್ಲ. ನ್ಯಾಯಾಲಯಗಳು ಛೀಮಾರಿ ಹಾಕಿದರೂ ರಾಜ್ಯ ಚುನಾವಣಾ ಆಯೋಗಗಳು ಮತ್ತು ವಿವಿಧ ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರು ನಿಗದಿತ ಕಾಲಮಿತಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಆಸಕ್ತಿ ತೋರುತ್ತಿಲ್ಲ. ಕರ್ನಾಟಕದ ಎಲ್ಲ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಚುನಾಯಿತ ಸದಸ್ಯರ ಅಧಿಕಾರದ ಅವಧಿ 2021ರ ಏಪ್ರಿಲ್– ಮೇ ತಿಂಗಳಲ್ಲಿ ಮುಕ್ತಾಯವಾಗಿತ್ತು. ಮೂರೂವರೆ ವರ್ಷಗಳು ಕಳೆದರೂ ಈ ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ ಆರಂಭವೇ ಆಗಿಲ್ಲ. ಅದೇ ರೀತಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಚುನಾಯಿತ ಸದಸ್ಯರ ಅವಧಿ ಪೂರ್ಣಗೊಂಡು ನಾಲ್ಕು ವರ್ಷವಾಯಿತು. ಬಿಬಿಎಂಪಿ ಚುನಾವಣೆ ಪ್ರಕ್ರಿಯೆಗೂ ಚಾಲನೆ ದೊರೆತಿಲ್ಲ. ಈಗ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಗೆ ಇನ್ನಷ್ಟು ಕಾಲಾವಕಾಶ ನೀಡುವಂತೆ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮನವಿ ಮಾಡಿದೆ. ಇದರೊಂದಿಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.
ಆಡಳಿತದಲ್ಲಿ ಜನರ ನೇರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆ ರೂಪಿಸಲಾಯಿತು. ಚುನಾವಣೆ ನಡೆಸುವಲ್ಲಿ ವಿಳಂಬ ಧೋರಣೆ ತಳೆಯುತ್ತಿರುವುದರಿಂದ ಅಧಿಕಾರ ವಿಕೇಂದ್ರೀಕರಣದ ಉದ್ದೇಶವೇ ವಿಫಲವಾಗುತ್ತಿದೆ. ಕ್ಷೇತ್ರಗಳ ಪುನರ್‌ವಿಂಗಡಣೆ ಮತ್ತು ಮೀಸಲಾತಿ ನಿಗದಿಯಲ್ಲಿನ ತಾಂತ್ರಿಕ ಅಂಶಗಳನ್ನೇ ನೆಪವಾಗಿಸಿಕೊಂಡು ಚುನಾವಣೆಯನ್ನು ಮುಂದೂಡುವ ಪರಿಪಾಟವನ್ನು ಎಲ್ಲ ರಾಜಕೀಯ ಪಕ್ಷಗಳ ನೇತೃತ್ವದ ಸರ್ಕಾರಗಳೂ ಅನುಸರಿಸಿಕೊಂಡು ಬಂದಿವೆ. ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ರಾಜಕೀಯ ಹಿಂದುಳಿದಿರುವಿಕೆಯನ್ನು ನಿಖರ ದತ್ತಾಂಶಗಳ ಆಧಾರದಲ್ಲಿ ಗುರುತಿಸಿ, ಅದರ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಪಾಲನೆಯನ್ನು ಈಗ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮೂರು ವರ್ಷಗಳ ಹಿಂದೆಯೇ ಈ ಪ್ರಕ್ರಿಯೆ ಆರಂಭವಾಗಿದ್ದರೂ ಒಂದಿಷ್ಟೂ ಮುಂದಕ್ಕೆ ಸಾಗದಿರುವುದು ಇದಕ್ಕೆ ನಿದರ್ಶನ. ಕ್ಷೇತ್ರಗಳ ಪುನರ್‌ವಿಂಗಡಣೆ ಮತ್ತು ಮೀಸಲಾತಿ ನಿಗದಿ ಅಧಿಕಾರ ರಾಜ್ಯ ಚುನಾವಣಾ ಆಯೋಗದ ಬಳಿ ಇಲ್ಲ. ರಾಜ್ಯ ಸರ್ಕಾರ ಈ ಎರಡೂ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕವಷ್ಟೇ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕಾದ ಇಕ್ಕಟ್ಟಿನಲ್ಲಿ ಆಯೋಗ ಇದೆ. ಈ ಅವಕಾಶವನ್ನು ಆಡಳಿತಾರೂಢ ಪಕ್ಷಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿವೆ. ಶಾಸಕರಿಗೂ ಸ್ಥಳೀಯ ಸಂಸ್ಥೆಗಳಿಗೆ ಸಕಾಲಕ್ಕೆ ಚುನಾವಣೆ ನಡೆಸುವುದು ಬೇಕಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಸದಸ್ಯರು ಚುನಾಯಿತರಾದರೆ ತಮ್ಮ ಅಧಿಕಾರದ ಬಲ ಕುಗ್ಗಬಹುದು ಎಂಬ ಆತಂಕ ಶಾಸಕರಲ್ಲಿ ಇದೆ. ಹೀಗಾಗಿ, ಚುನಾವಣೆ ವಿಳಂಬದ ವಿರುದ್ಧ ಯಾವ ಶಾಸಕರೂ ಗಟ್ಟಿ ಧ್ವನಿಯಲ್ಲಿ ಮಾತನಾಡುವುದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವುದರ ಹಿಂದೆ ಶಾಸಕರನ್ನು ಸಂತೃಪ್ತಿಪಡಿಸುವ ಉದ್ದೇಶವಿದೆ ಎಂಬುದು ರಹಸ್ಯವೇನೂ ಅಲ್ಲ.
ಸ್ಥಳೀಯ ಸಂಸ್ಥೆಗಳಿಗೆ ಕಾಲಕಾಲಕ್ಕೆ ಚುನಾವಣೆ ನಡೆಸದೇ ಇರುವುದರಿಂದ ಜನರ ಮತದಾನದ ಹಕ್ಕು ಮತ್ತು ಆಡಳಿತದಲ್ಲಿ ನೇರ ಪಾಲ್ಗೊಳ್ಳುವಿಕೆಯ ಅವಕಾಶಗಳು ಮೊಟಕುಗೊಳ್ಳುತ್ತಿವೆ. ಜನರ ಸಮಸ್ಯೆಗಳನ್ನು ಕೆಳಹಂತದಲ್ಲಿ ಅರಿತು, ತ್ವರಿತವಾಗಿ ಪರಿಹಾರ ಒದಗಿಸುವ ಅಧಿಕಾರ ವಿಕೇಂದ್ರೀಕರಣದ ಉದ್ದೇಶಕ್ಕೆ ಹಿನ್ನಡೆಯಾಗುತ್ತಿದೆ. ಕರ್ನಾಟಕಕ್ಕೆ ಕೇಂದ್ರ ಹಣಕಾಸು ಆಯೋಗದಿಂದ ದೊರೆಯುತ್ತಿದ್ದ ₹ 2,800 ಕೋಟಿಯಷ್ಟು ಅನುದಾನವು ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬ ಮಾಡಿರುವುದಕ್ಕಾಗಿ ಕೈತಪ್ಪುತ್ತಿದೆ. ನಿಗದಿತ ಕಾಲಮಿತಿಯೊಳಗೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸದೇ ಕಾಲಹರಣ ಮಾಡುವುದು ಸಂವಿಧಾನದ ಆಶಯಗಳ ಉಲ್ಲಂಘನೆ. ‘ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆ ನಡೆಸಲು ವಿಪರೀತ ವಿಳಂಬ ಮಾಡುವುದು ಕಾನೂನಿನ ಆಡಳಿತವು ಕುಸಿದುಬಿದ್ದಿರುವುದರ ಸಂಕೇತ’ ಎಂದು ಸುಪ್ರೀಂ ಕೋರ್ಟ್ ಕಟುವಾಗಿಯೇ ಹೇಳಿದೆ. ಆದರೂ, ರಾಜ್ಯ ಸರ್ಕಾರಗಳು ಮತ್ತು ರಾಜ್ಯ ಚುನಾವಣಾ ಆಯೋಗಗಳು ತಮ್ಮ ಧೋರಣೆಯನ್ನು ಬದಲಿಸಿಕೊಳ್ಳದೇ ಇರುವುದು ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಗೆ ಮಾರಕ. ಗ್ರಾಮ ಸ್ವರಾಜ್ ಕಾಯ್ದೆಯ ಜಾರಿಯೊಂದಿಗೆ ಮೂರು ಹಂತದ ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತಂದು 30 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆಗೆ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಿದ್ಧವಾಗುತ್ತಿದೆ. ಈ ಸಂದರ್ಭದಲ್ಲಾದರೂ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣಾ ಪ್ರಕ್ರಿಯೆಗೆ ಚಾಲನೆ ನೀಡದಿದ್ದರೆ ಸಂಭ್ರಮಾಚರಣೆಯೇ ಅರ್ಥಹೀನವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.