ADVERTISEMENT

ಸಂಪಾದಕೀಯ | ಒಳಚರಂಡಿ ಸ್ವಚ್ಛತೆಗೆ ಕಾರ್ಮಿಕರು; ಅಮಾನವೀಯ ಪದ್ಧತಿಗೆ ಅಂತ್ಯ ಬೇಕು

ಸಂಪಾದಕೀಯ
Published 5 ಫೆಬ್ರುವರಿ 2025, 0:11 IST
Last Updated 5 ಫೆಬ್ರುವರಿ 2025, 0:11 IST
   

ಒಳಚರಂಡಿ ಸ್ವಚ್ಛಗೊಳಿಸಲು ಯಂತ್ರಗಳನ್ನು ಬಳಸುವ ಬದಲು ಕಾರ್ಮಿಕರನ್ನು ಇಳಿಸುವ ಪದ್ಧತಿಯನ್ನು ದೇಶದಲ್ಲಿ ಕಾನೂನಿನ ಮೂಲಕವೇ ನಿಷೇಧಿಸಲಾಗಿದೆ. ಈ ಪದ್ಧತಿಯನ್ನು ಕೊನೆಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹಲವು ಬಾರಿ ಹೇಳಿದೆ. ಆದರೂ ಈ ಪದ್ಧತಿಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕೋರ್ಟ್‌ ಸೂಚನೆ ನೀಡಬೇಕಾದ ಸ್ಥಿತಿ ಇದೆ. ಇದೊಂದು ಬಗೆಯಲ್ಲಿ ವಿಷಾದಕರ ಸ್ಥಿತಿ. ಈ ಪದ್ಧತಿಯನ್ನು ಕೊನೆಗೊಳಿಸಲು ಆಗದೇ ಇದ್ದುದಕ್ಕೆ ಕೇಂದ್ರ ಸರ್ಕಾರವನ್ನು ಕೋರ್ಟ್‌ ಈಚೆಗೆ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ, ಬೆಂಗಳೂರು ಸೇರಿದಂತೆ ಹಲವು ಮಹಾನಗರಗಳ ಆಡಳಿತ ವ್ಯವಸ್ಥೆಗೆ ಛೀಮಾರಿ ಹಾಕಿದೆ. ‘ಮನುಷ್ಯರನ್ನು ಇಳಿಸಿ ಒಳಚರಂಡಿ ಸ್ವಚ್ಛಗೊಳಿಸುವ ಪದ್ಧತಿಯನ್ನು ಯಾವಾಗ ಮತ್ತು ಹೇಗೆ ಕೊನೆಗೊಳಿಸಲಾಗಿದೆ’ ಎಂಬ ಬಗ್ಗೆ ಮಹಾನಗರ ಪಾಲಿಕೆಗಳ ಆಯುಕ್ತರು ಫೆಬ್ರುವರಿ 13ಕ್ಕೆ ಮೊದಲು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಅಮಾನವೀಯವಾದ ಈ ಪದ್ಧತಿಯನ್ನು ಕೊನೆಗೊಳಿಸಬೇಕು ಎಂದು ತಾನು 2023ರ ಅಕ್ಟೋಬರ್‌ನಲ್ಲಿ ಎಲ್ಲ ರಾಜ್ಯಗಳಿಗೆ ನೀಡಿದ್ದ ಸೂಚನೆಯ ಮೇಲ್ವಿಚಾರಣೆ ನಡೆಸುವ ಸಂದರ್ಭದಲ್ಲಿ ಕೋರ್ಟ್‌ ಹೊಸ ನಿರ್ದೇಶನಗಳನ್ನು ನೀಡಿದೆ. ಇಂತಹ ಪದ್ಧತಿಯು ಈಗಲೂ ಜಾರಿಯಲ್ಲಿದೆ ಎಂಬುದನ್ನು ಹೇಳಿರುವ ಕೋರ್ಟ್‌, ಕೆಲವು ದಿನಗಳ ಹಿಂದಷ್ಟೇ ಇಬ್ಬರು ಈ ಕೆಲಸದಲ್ಲಿ ತೊಡಗಿದ್ದಾಗ ಮೃತಪಟ್ಟಿದ್ದಾರೆ ಎಂಬುದನ್ನು ಕೂಡ ಉಲ್ಲೇಖಿಸಿದೆ. ಕೋರ್ಟ್‌ ನಿರ್ದೇಶನ ಇದ್ದರೂ ಕೋಲ್ಕತ್ತದಲ್ಲಿ ನಡೆದ ಒಂದು ದುರ್ಘಟನೆಯಲ್ಲಿ ಮೂವರು ಕಾರ್ಮಿಕರು ಒಳಚರಂಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. 2023ರಲ್ಲಿ ನೀಡಿದ್ದ ಸೂಚನೆಗಳನ್ನು ರಾಜ್ಯಗಳು ಅನುಷ್ಠಾನಕ್ಕೆ ತಂದಿಲ್ಲ, ತಪ್ಪು ಪ್ರಮಾಣಪತ್ರ ಸಲ್ಲಿಸುವ ರಾಜ್ಯ ಸರ್ಕಾರಗಳ ವಿರುದ್ಧ ನ್ಯಾಯಾಂಗ ನಿಂದನೆ ಕಾನೂನಿನ ಅಡಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.

ಕಾನೂನಿನ ಹಾಗೂ ಕೋರ್ಟ್‌ನ ಸೂಚನೆಗಳ ಅನುಷ್ಠಾನದಲ್ಲಿನ ಲೋಪಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಆರೋಪ ಹೊರಿಸುವ ಕೆಲಸ ಮಾಡುತ್ತಿದ್ದಾರೆ. ನೈರ್ಮಲ್ಯ ಎಂಬುದು ರಾಜ್ಯಗಳ ಅಧಿಕಾರ ವ್ಯಾಪ್ತಿಯಲ್ಲಿರುವ ವಿಷಯ, ಅಗತ್ಯ ಕ್ರಮಕ್ಕಾಗಿ ರಾಜ್ಯಗಳ ಜೊತೆ ಸಭೆ ನಡೆಸುವುದಕ್ಕೆ ತಾನು ಸಮನ್ವಯಕಾರನ ಕೆಲಸ ಮಾಡಿದ್ದುದಾಗಿ ಕೇಂದ್ರ ಸರ್ಕಾರವು ಕಳೆದ ಬಾರಿಯ ವಿಚಾರಣೆ ಸಂದರ್ಭದಲ್ಲಿ ಕೋರ್ಟ್‌ಗೆ ಹೇಳಿದೆ. ಆದರೆ ಯಾವುದೇ ಪ್ರಾಧಿಕಾರವು ಈ ಪದ್ಧತಿಯನ್ನು ಕೊನೆಗೊಳಿಸಲು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕೆಲಸ ಮಾಡಿಲ್ಲ. ಈ ಬಗೆಯ ಅಮಾನವೀಯ ಕೆಲಸಗಳಲ್ಲಿ ತೊಡಗಿಸಿಕೊಂಡವರು ಸಮಾಜದಲ್ಲಿ ಅತ್ಯಂತ ಹಿಂದುಳಿದವರು, ಬಹುತೇಕರು ಪರಿಶಿಷ್ಟ ಜಾತಿಗಳಿಗೆ ಸೇರಿದವರು. ದೇಶದ ಶೇಕಡ 40ರಷ್ಟು ಜಿಲ್ಲೆಗಳಲ್ಲಿ ಈ ಪದ್ಧತಿಯು ಆಚರಣೆಯಲ್ಲಿದೆ, 2019ರ ನಂತರದಲ್ಲಿ ಒಳಚರಂಡಿಗಳಲ್ಲಿ ಇಳಿದು ಕೆಲಸ ಮಾಡುವಾಗ ವಿಷಕಾರಿ ಅನಿಲವನ್ನು ಸೇವಿಸಿ ಅಥವಾ ಇತರ ಬಗೆಯ ಅಪಘಾತಗಳ ಕಾರಣದಿಂದಾಗಿ ಪ್ರತಿವರ್ಷ ಕನಿಷ್ಠ 75 ಮಂದಿ ಮೃತಪಟ್ಟಿದ್ದಾರೆ. ಒಳಚರಂಡಿಗೆ ಇಳಿದು ಸ್ವಚ್ಛಗೊಳಿಸುವ ಪದ್ಧತಿ ಹಾಗೂ ಅಪಾಯಕಾರಿ ಬಗೆಯಲ್ಲಿ ಸ್ವಚ್ಛಗೊಳಿಸುವ ಕೆಲಸಗಳನ್ನು ಕಾನೂನಿನ ಅಡಿಯಲ್ಲಿ ಪ್ರತ್ಯೇಕವಾಗಿ ವಿವರಿಸಲಾಗಿದೆ. ಈ ವಿವರಣೆಯನ್ನು ಆಧಾರವಾಗಿ ಇರಿಸಿಕೊಂಡು ರಾಜ್ಯಗಳು ತಮ್ಮಲ್ಲಿ ಇಂತಹ ಪದ್ಧತಿಯೇ ಇಲ್ಲ ಎಂದು ಹೇಳುತ್ತಿವೆ. ಯಂತ್ರಗಳ ಬಳಕೆಗೆ ಹಾಗೂ ಕಾರ್ಮಿಕರ ರಕ್ಷಣೆಗೆ ಅಗತ್ಯ ಸಾಧನಗಳ ಬಳಕೆಗೆ ಕೋರ್ಟ್ ಆದೇಶ ನೀಡಿದೆಯಾದರೂ ಅದರ ಪಾಲನೆ ಆಗುತ್ತಿಲ್ಲ. ಒಳಚರಂಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಮೃತಪಟ್ಟ ಕಾರ್ಮಿಕರ ಹತ್ತಿರದ ಸಂಬಂಧಿಕರಿಗೆ ಪರಿಹಾರ ರೂಪದಲ್ಲಿ ₹30 ಲಕ್ಷ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ. ಆದರೆ ಈ ಆದೇಶದ ಪಾಲನೆ ಸರಿಯಾಗಿ ಆಗಿಲ್ಲ.

ಕರ್ನಾಟಕದಲ್ಲಿ ಸರಿಸುಮಾರು 7,500 ಮಂದಿ ಇಂತಹ ಕೆಲಸ ಮಾಡುತ್ತಿದ್ದಾರೆ, ಈ ಪೈಕಿ 1,600 ಮಂದಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವ್ಯಾಪ್ತಿಯಲ್ಲೇ ಇದ್ದಾರೆ. ಆದರೆ, ಬೆಂಗಳೂರಿನಲ್ಲಿ ಇರುವ ಇಂತಹ ಕಾರ್ಮಿಕರ ಸಂಖ್ಯೆಯು 25 ಸಾವಿರ ಆಗಿರಬಹುದು ಎಂಬ ಅಂದಾಜು ಕೂಡ ಇದೆ. ಈ ಕಾರ್ಮಿಕರ ಸಾವು ರಾಜ್ಯದಲ್ಲಿ ಅತಿಹೆಚ್ಚು ವರದಿಯಾಗಿರುವುದು ಬೆಂಗಳೂರಿನಲ್ಲಿ. ಕೆಲವು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಈ ಕೆಲಸಗಳಲ್ಲಿ ತೊಡಗಿರುವವರಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲಾಗುತ್ತದೆ ಎಂಬ ಭರವಸೆಗಳು ಸರಿಯಾಗಿ ಈಡೇರಿಲ್ಲ. ದೇಶದಲ್ಲಿ ಈ ಪದ್ಧತಿಯು ವ್ಯಾಪಕವಾಗಿದೆ ಎಂಬುದು ನಾಚಿಕೆಗೇಡಿನ ಸಂಗತಿ. ಈಗ ಇದನ್ನು ಕೊನೆಗಾಣಿಸಲು ಕೋರ್ಟ್‌ ಮುಂದಡಿ ಇರಿಸಿರುವ ಕಾರಣ, ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾವಣೆಗಳು ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು. ಇಂತಹ ಗಂಭೀರ ಸಮಸ್ಯೆಯ ವಿಚಾರದಲ್ಲಿ ನ್ಯಾಯಾಲಯಗಳ ಆದೇಶಕ್ಕಾಗಿಯೇ ಕಾಯುವ ಬದಲು ಸ್ವಯಂಪ್ರೇರಿತವಾಗಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕಾದ ಹೊಣೆಗಾರಿಕೆ ಸರ್ಕಾರಗಳ ಮೇಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.