ADVERTISEMENT

ಸಂಪಾದಕೀಯ: ಜನಕಲ್ಯಾಣ ಆದ್ಯತೆಯಾಗಲಿ– ಭ್ರಷ್ಟಾಚಾರ ಕೊನೆಯಾಗಲಿ

ಸಂಪಾದಕೀಯ
Published 19 ಮೇ 2023, 21:03 IST
Last Updated 19 ಮೇ 2023, 21:03 IST
   

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಯಕರು ನಿರೀಕ್ಷಿಸದ ರೀತಿಯ ಭಾರಿ ಬಹುಮತವನ್ನು ರಾಜ್ಯದ ಜನರು ನೀಡಿದ್ದಾರೆ. ಜನಾದೇಶಕ್ಕೆ ತಕ್ಕಂತೆ ಜನಪರವಾದ ಆಡಳಿತ ನೀಡುವ ಗುರುತರ ಹೊಣೆಗಾರಿಕೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ ಅವರ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಆಡಳಿತದ ಅಪಾರ ಅನುಭವ, ನೊಂದವರು, ಹಸಿದವರ ಬಗೆಗೆ ಕರುಣೆ ಹಾಗೂ ಸಂಪನ್ಮೂಲವನ್ನು ಹೇಗೆ ಖರ್ಚು ಮಾಡಬೇಕೆಂಬ ಸ್ಪಷ್ಟ ತಿಳಿವಳಿಕೆ ಇರುವ ಸಿದ್ದರಾಮಯ್ಯ ಅವರಿಗೆ ಸರ್ಕಾರವನ್ನು ನಡೆಸುವುದು ಕಷ್ಟವಾಗಲಾರದು. ಬರಲಿರುವ ಲೋಕಸಭೆ ಚುನಾವಣೆ, ಜನರ ನಿರೀಕ್ಷೆಗಳನ್ನು ಈಡೇರಿಸಲೇಬೇಕಾದ ಅನಿವಾರ್ಯ, 135 ಶಾಸಕರ ಅಪೇಕ್ಷೆಗಳನ್ನು ತಣಿಸುವುದರ ಜತೆಗೆ, ಸಂಭಾವ್ಯ ಪೈಪೋಟಿಯನ್ನು ಸಹನೀಯಗೊಳಿಸಿಕೊಂಡು ಸರ್ಕಾರವನ್ನು ಮುನ್ನಡೆಸುವುದು ಕತ್ತಿಯಂಚಿನ ನಡಿಗೆ. ಬಿಜೆಪಿ ಆಡಳಿತ ನೋಡಿ ರೋಸಿಹೋಗಿದ್ದ ಜನ ಕಾಂಗ್ರೆಸ್‌ನ ಹಸ್ತಕ್ಕೆ ಅಭಯ ನೀಡಿದ್ದಾರೆ. ಕಾಂಗ್ರೆಸ್‌ ನಾಯಕರು ಚುನಾವಣೆಗೆ ಮುನ್ನ ಘೋಷಿಸಿರುವ ಐದು ಗ್ಯಾರಂಟಿಗಳು, ಕಷ್ಟದ ಬದುಕಿನಲ್ಲೇ ದಿನ ದೂಡುತ್ತಿದ್ದ ಬಹುಸಂಖ್ಯಾತ ಬಡ, ಮಧ್ಯಮ ವರ್ಗದವರಿಗೆ, ಅದರಲ್ಲೂ ಮಹಿಳೆಯರಿಗೆ ಭವ್ಯ ಆಸರೆಯಂತೆ ಕಂಡಿವೆ. ಗ್ಯಾರಂಟಿಗಳ ಅನುಷ್ಠಾನಕ್ಕೆ ಬೇಕಾದ ಸಂಪನ್ಮೂಲ ಹೊಂದಿಸುವ ವಿವೇಚನೆ ಇಲ್ಲವೆನ್ನಲಾಗದು. ಕೇಂದ್ರದಿಂದ ಬರಬೇಕಾದ ಎಲ್ಲ ರೀತಿಯ ತೆರಿಗೆ ಪಾಲು, ಅನುದಾನಗಳು ‘ಡಬಲ್ ಎಂಜಿನ್’ ಸರ್ಕಾರ ಇದ್ದಾಗಲೇ ನ್ಯಾಯಯುತವಾಗಿ ಬಂದಿಲ್ಲ. ಇನ್ನು ಕಾಂಗ್ರೆಸ್‌ಮುಕ್ತ ಕರ್ನಾಟಕದ ಘೋಷಣೆ ಕೊಟ್ಟವರು ನ್ಯಾಯದ ಪಾಲು ಕೊಡುತ್ತಾರೆ ಎಂಬ ದೊಡ್ಡ ಮಟ್ಟದ ವಿಶ್ವಾಸವನ್ನು ಈಗ ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿಯುವವರು ಇಟ್ಟುಕೊಳ್ಳುವಂತಿಲ್ಲ. ಹೆಚ್ಚುವರಿ ಸಂಪನ್ಮೂಲ ಹೊಂದಿಸಬೇಕಾದರೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕಾಗುತ್ತದೆ. ಹೊಸ ತೆರಿಗೆ ಹೇರಲು ಅವಕಾಶವೇ ಇಲ್ಲದಿರುವಂತೆ ಕೇಂದ್ರ ಸರ್ಕಾರ ಕೈ ಕಟ್ಟಿ ಹಾಕಿರುವ ಹೊತ್ತಿನಲ್ಲಿ, ಈ ಸವಾಲು ಮೀರಿ, ಜನಪರ ಆಡಳಿತ ನೀಡುವುದು ಸಿದ್ದರಾಮಯ್ಯನವರ ಮುಂದಿರುವ ಅಗ್ನಿ ಪರೀಕ್ಷೆ.

‌ಒಂದೂವರೆ ವರ್ಷದಿಂದಲೂ ಬಿಜೆಪಿ ನೇತೃತ್ವದ ಸರ್ಕಾರವನ್ನು ಶೇ 40ರ ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ನಾಯಕರು ಜರಿದರು. ‘ಬಿಜೆಪಿ ಎಂದರೆ ಭ್ರಷ್ಟಾಚಾರ’ ಎಂದು ಬಿಂಬಿಸುವಲ್ಲಿ ಕಾಂಗ್ರೆಸ್ ಯಶಸ್ವಿಯೂ ಆಯಿತು. ಹಾಗೆಂದು, ಕಾಂಗ್ರೆಸ್‌ನಲ್ಲಿರುವವರು, ಸಚಿವರಾಗುವವರು ಭ್ರಷ್ಟಾಚಾರವನ್ನೇ ಮಾಡದವರು ಎಂದು ಹೇಳಿಕೊಳ್ಳುವಂತೇನೂ ಇಲ್ಲ. ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ ತೊಲಗಿದರಷ್ಟೇ ಆಡಳಿತ ಜನಪರವಾಗಿದೆ ಎಂಬ ವಿಶ್ವಾಸವನ್ನು ಜನರಲ್ಲಿ ಮೂಡಿಸಲು ಸಾಧ್ಯ. ಇದಾಗಬೇಕಾದರೆ ವರ್ಗಾವಣೆಯಲ್ಲಿ ಪಾರದರ್ಶಕತೆ ತರಬೇಕು. ಹಾಗಾಗಬೇಕಾದಲ್ಲಿ ಸ್ವಜನಪಕ್ಷಪಾತ, ಲಾಬಿಗಳಿಗೆ ಮಣಿಯದಿರುವ ದೃಢ ನಿಶ್ಚಯ ಬೇಕು. ಅದನ್ನು ಸರ್ಕಾರ ಮಾಡಿ ತೋರಿಸಬೇಕಿದೆ. ಜತೆಗೆ, ಲೋಕಾಯುಕ್ತಕ್ಕೆ ಎಲ್ಲ ರೀತಿಯ ಬಲವನ್ನೂ ತುಂಬಬೇಕು. ನಿರುದ್ಯೋಗಿಗಳಿಗೆ ಭತ್ಯೆ ನೀಡಲು ‘ಯುವನಿಧಿ’ಯನ್ನು ಕಾಂಗ್ರೆಸ್ ಘೋಷಿಸಿದೆ. ಇದು ತಾತ್ಕಾಲಿಕ ಪರಿಹಾರ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದು, ನೇಮಕಾತಿಯಲ್ಲಿ ಪಾರದರ್ಶಕತೆ, ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಾಗಲು ಪೂರಕ ವಾತಾವರಣ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕಿದೆ. ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಇತಿಹಾಸ ತಿರುಚುವ ಕೆಲಸ ನಡೆದಿತ್ತು ಎಂಬ ಆರೋಪ ದೊಡ್ಡದಾಗಿ ಕೇಳಿಬಂದಿತ್ತು. ಅದರ ಬಗ್ಗೆ ವ್ಯಾಪಕ ಚರ್ಚೆ, ಆಕ್ಷೇಪ ಕೂಡ ವ್ಯಕ್ತವಾಗಿ ಪ್ರತಿಭಟನೆಯ ಸ್ವರೂಪವನ್ನೂ ಪಡೆದಿತ್ತು. ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ತಪ್ಪಾಗಿದ್ದರೆ ಅದನ್ನು ಸರಿಪಡಿಸುವ ಕೆಲಸವನ್ನು ಸಕಾಲದಲ್ಲಿ ಮಾಡಬೇಕಾದ ಜರೂರು ಇದೆ.

ಕೆಲವು ಸಂಘಟನೆಗಳು ಹಚ್ಚಿದ ಮತದ್ವೇಷದ ಕಿಚ್ಚು ಅಷ್ಟು ಸುಲಭಕ್ಕೆ ಆರುವುದಿಲ್ಲ. ಈ ಕಿಚ್ಚನ್ನು ಬೆಂಕಿಯಾಗಿಸುವ ಯತ್ನಗಳು ನಡೆಯುವುದಿಲ್ಲ ಎನ್ನಲಾಗದು. ಅಮಾಯಕ ಜೀವಗಳು ಬಲಿಯಾಗದಂತೆ ಗೃಹ ಇಲಾಖೆಯನ್ನು ಸದಾ ಎಚ್ಚರದ ಸ್ಥಿತಿಯಲ್ಲಿಡುವ ಗುರುತರ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲಿರುವ ವಿಶ್ವಾಸದಷ್ಟೇ ಬಿಜೆಪಿ ವಿರುದ್ಧದ ಸಿಟ್ಟು ಕೆಲಸ ಮಾಡಿದೆ. ಜನರ ನಂಬಿಕೆಗೆ ಭಂಗ ತರದಂತೆ ಸುಲಲಿತ ಆಡಳಿತ ನೀಡುವ ಹೊಣೆ ಸಿದ್ದರಾಮಯ್ಯ– ಡಿ.ಕೆ.ಶಿವಕುಮಾರ್ ಅವರ ಮೇಲಿದೆ. ಒಮ್ಮತದ ಬದಲು ಭಿನ್ನಮತ ಶುರುವಾದರೆ ಆಡಳಿತ ಯಂತ್ರದ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಜನಾಧಿಕಾರದ ಬದಲು ಅಧಿಕಾರಿಗಳ ಆಡಳಿತ ಮೇಲುಗೈ ಸಾಧಿಸುತ್ತದೆ. ಆಡಳಿತದ ಮೇಲೆ ಹಿಡಿತ ತಪ್ಪಿ, ಆಡಳಿತ ಯಂತ್ರ ಹಳಿ ತಪ್ಪಿದರೆ ಕಷ್ಟಪಡುವವರು ಸಾಮಾನ್ಯ ಜನರೇ ವಿನಾ ರಾಜಕಾರಣಿಗಳಲ್ಲ. ಈ ಬಗ್ಗೆ ಎಚ್ಚರದಿಂದ ನಡೆದುಕೊಳ್ಳುವುದು ಕಾಂಗ್ರೆಸ್‌ ನಾಯಕರ ಜವಾಬ್ದಾರಿ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.