ADVERTISEMENT

ಸಂಪಾದಕೀಯ | ವಕ್ಫ್‌ ಮಸೂದೆ: ಸಲಹೆ,ಸೂಚನೆ ಗಣನೆಗೆ ತೆಗೆದುಕೊಳ್ಳದಿರುವುದು ಸರಿಯಲ್ಲ

ಈ ತಿದ್ದುಪಡಿ ಮಸೂದೆಯ ಸಾಂವಿಧಾನಿಕ ಸಿಂಧುತ್ವವು ನ್ಯಾಯಾಲಯದಲ್ಲಿ ಪರಿಶೀಲನೆಗೆ ಒಳಪಡುವ ಸಾಧ್ಯತೆ ಇದೆ

ಸಂಪಾದಕೀಯ
Published 4 ಏಪ್ರಿಲ್ 2025, 23:31 IST
Last Updated 4 ಏಪ್ರಿಲ್ 2025, 23:31 IST
   

ಎರಡು ದಿನಗಳ ಚರ್ಚೆಯ ಬಳಿಕ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಸಂಸತ್ತು ಅಂಗೀಕರಿಸಿದೆ. ಸಾಮಾನ್ಯವಾಗಿ ಅಧಿವೇಶನವು ಗದ್ದಲ, ಕೋಲಾಹಲದಲ್ಲಿಯೇ ಮುಗಿದುಹೋಗುತ್ತದೆ. ಆದರೆ, ಈ ಬಾರಿ ಅವು ಯಾವುವೂ ಇಲ್ಲದೆ ಚರ್ಚೆ ನಡೆದಿದೆ. ವಾಕ್ಸಮರ, ಆರೋಪ–ಪ್ರತ್ಯಾರೋಪಗಳು ಇದ್ದವು. ಆದರೆ, ಮಾಹಿತಿಪೂರ್ಣ ಚರ್ಚೆಯು ಸಂಸದೀಯ ಸಂವಾದದ ಮಾನದಂಡಕ್ಕೆ ಅನುಗುಣವಾಗಿಯೇ ನಡೆದಿದೆ. ಈ ಮಸೂದೆಗೆ ರಾಷ್ಟ್ರಪತಿಯವರು ಸಹಿ ಮಾಡಿ ಕಾಯ್ದೆಯಾದ ಬಳಿಕವೂ ಈ ಕುರಿತು ಚರ್ಚೆ ಮುಂದುವರಿಯಲಿದೆ. ಮಸೂದೆ ಮಂಡಿಸಿದ ಸರ್ಕಾರವು ಈಗ ಇರುವ ವಕ್ಫ್‌ ಕಾಯ್ದೆಯ ಸುಧಾರಣೆಗೆ ಇಂತಹ ಮಸೂದೆ ಅತ್ಯಗತ್ಯ ಎಂದು ಪ್ರತಿಪಾದಿಸಿದೆ. ಪಾರದರ್ಶಕತೆ, ವಕ್ಫ್‌ ಅಸ್ತಿಗಳ ಉತ್ತಮ ನಿರ್ವಹಣೆಗೆ ಕಾಯ್ದೆ ಬೇಕಾಗಿದೆ ಎಂದು ಹೇಳಿದೆ. ಆದರೆ, ವಿರೋಧ ಪಕ್ಷಗಳೆಲ್ಲವೂ ಮಸೂದೆಯನ್ನು ಒಮ್ಮತದಿಂದ ವಿರೋಧಿಸಿವೆ. ಇದು, ಅಲ್ಪಸಂಖ್ಯಾತರ ಹಕ್ಕುಗಳ ಉಲ್ಲಂಘನೆ ಮತ್ತು ಧಾರ್ಮಿಕ ಸ್ವಾತಂತ್ರ್ಯದ ದಮನ ಎಂದು ವಾದಿಸಿವೆ. 1995ರ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರುವುದು ಈ ಮಸೂದೆಯ ಉದ್ದೇಶ. ವಕ್ಫ್‌ ಮಂಡಳಿಯಲ್ಲಿ ಸದಸ್ಯರು ಯಾರಾಗಿರಬೇಕು, ವಕ್ಫ್‌ ಆಸ್ತಿ ಎಂದು ಬದಲಾವಣೆಗೆ ಇರುವ ಮಾನದಂಡ ಮತ್ತು ವಕ್ಫ್‌ ಆಸ್ತಿ ಎಂದು ಘೋಷಿಸುವ ಮಂಡಳಿಯ ಅಧಿಕಾರಕ್ಕೆ ಸಂಬಂಧಿಸಿದ ವಿಚಾರಗಳು ಮುಖ್ಯ ತಿದ್ದುಪಡಿಗಳಾಗಿವೆ. 

ಮಸೂದೆಯಲ್ಲಿ ಇರುವ ಕೆಲವು ಅಂಶಗಳು ವಿವಾದಾತ್ಮಕವಾಗಿವೆ. ವಕ್ಫ್‌ನ ಹಲವು ಆಸ್ತಿಗಳು ಒತ್ತುವರಿಯಾಗಿವೆ, ಹಲವು ಆಸ್ತಿಗಳು ವ್ಯಾಜ್ಯದಲ್ಲಿವೆ. ಹೀಗಾಗಿ, ವಕ್ಫ್‌ ವ್ಯವಸ್ಥೆಯ ಸುಧಾರಣೆಯ ಅಗತ್ಯ ಇದೆ. ಹಲವು ಆಸ್ತಿಗಳ ಸ್ಥಿತಿಯ ಕುರಿತು ಗೊಂದಲ ಇದೆ. ಒಂಬತ್ತು ಲಕ್ಷ ಎಕರೆಗೂ ಹೆಚ್ಚಿನ ಆಸ್ತಿ ಇದ್ದು ಅವುಗಳ ಉತ್ತಮ ನಿರ್ವಹಣೆ ಅಗತ್ಯವಾಗಿದೆ. ಆದರೆ, ಸುಧಾರಣೆ ಅಂದರೆ ನಿಯಂತ್ರಣಕ್ಕೆ ತೆಗೆದುಕೊಳ್ಳುವುದು ಎಂದಲ್ಲ. ಮುಸ್ಲಿಂ ಸಮುದಾಯದಲ್ಲಿ ಶಂಕೆ ಇದೆ ಮತ್ತು ವಕ್ಫ್‌ ಆಸ್ತಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳು ವುದೇ ಮಸೂದೆಯ ಉದ್ದೇಶ ಎಂದು ವಿರೋಧ ಪಕ್ಷಗಳು ಆರೋಪ ಮಾಡಿವೆ. ಇಸ್ಲಾಂ ಧರ್ಮವನ್ನು ಕನಿಷ್ಠ ಐದು ವರ್ಷ ಅನುಸರಿಸಿದ ವ್ಯಕ್ತಿ ಮಾತ್ರ ವಕ್ಫ್‌ಗೆ ದಾನ ನೀಡಬಹುದು ಮತ್ತು ವಕ್ಫ್‌ ಮಂಡಳಿಯಲ್ಲಿ ಮುಸ್ಲಿಮೇತರರ ಸೇ‍ರ್ಪಡೆ ಅವಕಾಶದ ಕುರಿತು ಗಂಭೀರ ಕಳವಳ ವ್ಯಕ್ತವಾಗಿದೆ. ವಕ್ಫ್‌ಗೆ ಮುಸ್ಲಿಮೇತರರೂ ಹಿಂದೆ ದಾನ ಮಾಡಿದ್ದಾರೆ. ವ್ಯಕ್ತಿಯೊಬ್ಬರು ಇಸ್ಲಾಂ ಧರ್ಮವನ್ನು ಅನುಸರಿಸುತ್ತಿದ್ದಾರೆ ಎಂಬ ಪ್ರಮಾಣಪತ್ರ ನೀಡುವುದಕ್ಕೆ ಹೇಗೆ ಸಾಧ್ಯ? ಅಂತಹ ಪ್ರಮಾಣಪತ್ರ ನೀಡುವ ಪ್ರಾಧಿಕಾರ ಯಾವುದು? ಇತರ ಸಮುದಾಯಗಳಿಗೆ ಸೇರಿದ ಸಂಸ್ಥೆಗಳ ಸದಸ್ಯತ್ವವನ್ನು ಆ ಸಮುದಾಯಗಳಿಗೇ ಮೀಸಲಿಡಲಾಗಿದೆ. ವಕ್ಫ್‌ ಆಸ್ತಿಯ ಮೇಲೆ ಸರ್ಕಾರವು ನಿಯಂತ್ರಣ ಹೇರುವುದಕ್ಕೆ  ಮಸೂದೆಯಲ್ಲಿ ಇರುವ ಕೆಲವು ಅಂಶಗಳು ಅವಕಾಶ ಕೊಡುತ್ತವೆ. ಮಸೂದೆಯು ಈಗಿನ ಸ್ವರೂಪದಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ. ಏಕೆಂದರೆ, ವಕ್ಫ್‌ ವ್ಯವಸ್ಥೆಯು ಧಾರ್ಮಿಕ ನಂಬಿಕೆ ಮತ್ತು ಅಲ್ಪಸಂಖ್ಯಾತ ಸಮುದಾಯದ ಆಚರಣೆಗಳಿಗೆ ಸಂಬಂಧಿಸಿದ್ದಾಗಿದೆ. 

ಈ ಮಸೂದೆ ಮತ್ತು ಅದರಲ್ಲಿ ಪ್ರಸ್ತಾಪಿಸಿರುವ ತಿದ್ದುಪಡಿಗಳು ಮುಸ್ಲಿಂ ಸಮುದಾಯದ ಹಿತಾಸಕ್ತಿ
ಯನ್ನು ಕಾಪಾಡುವ ಉದ್ದೇಶ ಹೊಂದಿವೆ ಎಂದು ಸರ್ಕಾರ ಹೇಳಿದೆ. ಆದರೆ, ಮಸೂದೆ ರೂಪಿಸುವಾಗ ಸಮುದಾಯದ ಜೊತೆಗೆ ಸಮಾಲೋಚನೆ ನಡೆಸಿಲ್ಲ. ಜಂಟಿ ಸಂಸದೀಯ ಸಮಿತಿಯು ನಡೆಸಿದ ಸಮಾಲೋಚನೆ ಮತ್ತು ಪರಿಶೀಲನೆ ಕೂಡ ವಿವಾದಕ್ಕೆ ಒಳಗಾಗಿತ್ತು. ವಿರೋಧ ಪಕ್ಷಗಳ ಸದಸ್ಯರು ನೀಡಿದ ಯಾವುದೇ ಶಿಫಾರಸು ಸೇರ್ಪಡೆ ಆಗಿಲ್ಲ. ಅಲ್ಪಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಗಳು ಮತ್ತು ಪಕ್ಷಗಳು ಮಸೂದೆಯಲ್ಲಿ ಇರುವ ಹಲವು ಅಂಶಗಳನ್ನು ವಿರೋಧಿಸಿವೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಕಿರುಕುಳ ನೀಡಿ ದುರ್ಬಲಗೊಳಿಸುವ ರಾಜಕೀಯ ಕ್ರಮ ಎಂಬ ಟೀಕೆಯೂ ಇದೆ. ಮಸೂದೆಯ ಸಾಂವಿಧಾನಿಕ ಸಿಂಧುತ್ವವು ನ್ಯಾಯಾಲಯದಲ್ಲಿ ಪರಿಶೀಲನೆಗೆ ಒಳಪಡುವ ಸಾಧ್ಯತೆ ಇದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.