
‘ಡಿಜಿಟಲ್ ವೈಯಕ್ತಿಕ ದತ್ತಾಂಶ ಸುರಕ್ಷತಾ ಕಾಯ್ದೆ– 2025’ (ಡಿಪಿಡಿಪಿ) ಕುರಿತ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸುವುದರೊಂದಿಗೆ, ಆ ಕಾಯ್ದೆ ಜಾರಿಗೊಳ್ಳಲು ವೇದಿಕೆ ಸಿದ್ಧವಾಗಿದೆ. ಆದರೆ, ಕಾಯ್ದೆಗೆ ಸಂಬಂಧಿಸಿದಂತೆ ಎತ್ತಿದ್ದ ಪ್ರಶ್ನೆಗಳಿಗೆ ಈಗಲೂ ಉತ್ತರಗಳು ದೊರೆತಿಲ್ಲ. ವರ್ತಮಾನದ ಜಗತ್ತಿನಲ್ಲಿ ಖಾಸಗೀತನವು ಅತ್ಯಂತ ಮುಖ್ಯವಾಗಿದ್ದು, ಅದರ ಉಲ್ಲಂಘನೆಯು ಜೀವನದ ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ. 2023ರಲ್ಲಿ ಸಂಸತ್ತಿನ ಅನುಮೋದನೆ ಪಡೆಯುವ ಮೊದಲಿನ ‘ಡಿಪಿಡಿಪಿ’ ಕರಡು ಮತ್ತು ನಂತರದ ಕಾಯ್ದೆಯ ಹಲವು ಆಯಾಮಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿವೆ. ಖಾಸಗೀತನ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾತನಾಡುವ ಹಕ್ಕಿನ ಮೇಲೆ ಕಾಯ್ದೆ ಬೀರಬಹುದಾದ ಪರಿಣಾಮಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹಾಗೂ ಟೀಕೆಗಳು ಎದುರಾಗಿವೆ. ಮೂಲಭೂತ ಹಕ್ಕುಗಳ ಮೇಲೆ ಕಾಯ್ದೆ ಬೀರಬಹುದಾದ ಪರಿಣಾಮದ ಬಗ್ಗೆಯೂ ಚರ್ಚೆಗಳು ನಡೆದಿವೆ.
‘ಡಿಪಿಡಿಪಿ’ ಕಾಯ್ದೆಯ ಘೋಷಿತ ಉದ್ದೇಶವು ವ್ಯಕ್ತಿಯ ಖಾಸಗಿ ದತ್ತಾಂಶವನ್ನು ರಕ್ಷಿಸುವುದಾಗಿದೆ. ಆದರೆ, ಹಿಂಪಡೆಯಲಾಗದ ಒಪ್ಪಿಗೆ, ಉಲ್ಲಂಘನೆಯ ಮಾಹಿತಿ ಮತ್ತು ದತ್ತಾಂಶ ಅಳಿಸಿಹಾಕುವ ಹಕ್ಕುಗಳು ಇತ್ಯಾದಿ ಪ್ರಮುಖ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ನಿಯಮಗಳು ತಕ್ಷಣದಿಂದೇನೂ ಜಾರಿಗೆ ಬರುವುದಿಲ್ಲ. 18 ತಿಂಗಳ ಬಳಿಕ ಜಾರಿಗೆ ಬರಲಿವೆ. ಕಾಯ್ದೆಯ ಕೆಲವು ಪ್ರಮುಖ ನಿಬಂಧನೆಗಳ ಜಾರಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಕಾಲಾವಧಿಯನ್ನೂ ಗೊತ್ತುಪಡಿಸಲಾಗಿಲ್ಲ. ಮಾಹಿತಿ ಹಕ್ಕಿನ (ಆರ್‌ಟಿಐ) ಮೇಲೆ ಈ ಕಾಯ್ದೆ ಬೀರಬಹುದಾದ ನಕಾರಾತ್ಮಕ ಪರಿಣಾಮಗಳ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ಈ ಕಾನೂನಿನಡಿ ವೈಯಕ್ತಿಕ ಎಂದು ಪರಿಗಣಿಸಲಾದ ಮಾಹಿತಿಯನ್ನು, ಅದು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದಾದರೂ, ಬಹಿರಂಗಪಡಿಸುವ ಅಗತ್ಯವಿಲ್ಲ. ‘ಆರ್‌ಟಿಐ’ ಅನ್ವಯ ಪಡೆಯಬಹುದಾದ ಮಾಹಿತಿಯನ್ನು ನಿರಾಕರಿಸಲು ನೀಡಿರುವ ಈ ಸವಲತ್ತು, ಈಗಾಗಲೇ ದುರ್ಬಲಗೊಂಡಿರುವ ಮಾಹಿತಿ ಹಕ್ಕು ಕಾಯ್ದೆಯನ್ನು ಮತ್ತಷ್ಟು ಬಲಹೀನಗೊಳಿಸುತ್ತದೆ. ರಾಷ್ಟ್ರೀಯ ಭದ್ರತೆಯಂತಹ ವಿಷಯಗಳನ್ನು ಬಳಸಿಕೊಂಡು ವೈಯಕ್ತಿಕ ದತ್ತಾಂಶಗಳನ್ನು ನೀಡುವಂತೆ ಒತ್ತಾಯಿಸಲು ಸರ್ಕಾರಕ್ಕೆ ಅಪರಿಮಿತ ಅಧಿಕಾರವೂ ಕಾಯ್ದೆಯಿಂದ ದೊರೆಯಲಿದೆ. ಇದರಿಂದಾಗಿ, ಮಾಹಿತಿಯ ಮೇಲೆ ಹಾಗೂ ಮಾಹಿತಿಗೆ ಸಂಬಂಧಿಸಿದ ಜನರ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರಕ್ಕೆ ಅನುಕೂಲವಾಗಲಿದೆ ಹಾಗೂ ಸಾರ್ವಜನಿಕರನ್ನು ಕಣ್ಗಾವಲಿಗೆ ಒಳಪಡಿಸಲು ಅವಕಾಶ ಆಗಲಿದೆ.
ಪ್ರಜಾಪ್ರಭುತ್ವ ಹೊಂದಿರುವ ದೇಶಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಪತ್ರಕರ್ತರು ದತ್ತಾಂಶಗಳನ್ನು ಸಂಗ್ರಹಿಸಲು ಅನುಕೂಲವಾಗುವಂತೆ ನಿಯಮಗಳಲ್ಲಿ ಸಡಿಲಿಕೆ ಇರುತ್ತದೆ. ಈ ವಿನಾಯಿತಿ ‘ಡಿಪಿಡಿಪಿ’ ಕರಡಿನ ಮೊದಲ ಆವೃತ್ತಿಯಲ್ಲಿ ಇತ್ತು ಹಾಗೂ ನಂತರದಲ್ಲಿ ಅದನ್ನು ತೆಗೆದುಹಾಕಲಾಯಿತು. ಇದರಿಂದಾಗಿ, ಅಕ್ರಮ ಎಸಗಿದ ವ್ಯಕ್ತಿಗಳನ್ನು ಗುರ್ತಿಸುವುದು ಹಾಗೂ ಅವರ ಹೆಸರುಗಳನ್ನು ಬಹಿರಂಗಪಡಿಸುವುದು ಗೋಪ್ಯತೆಯ ಉಲ್ಲಂಘನೆ ಆಗುವುದರಿಂದ ಪತ್ರಕರ್ತರು ವಸ್ತುನಿಷ್ಠವಾಗಿ ಕಾರ್ಯನಿರ್ವಹಿಸುವುದು ಕಾನೂನುಬಾಹಿರ ಎನ್ನುವಂತಾಗುತ್ತದೆ; ಪ್ರಕರಣಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಬಗ್ಗೆ ವರದಿ ಮಾಡಲು ಅನುಮತಿ ಪಡೆಯಬೇಕಾಗುತ್ತದೆ. ಕಾನೂನನ್ನು ಉಲ್ಲಂಘಿಸುವವರಿಗೆ ₹ 250 ಕೋಟಿಯವರೆಗೆ ದಂಡ ವಿಧಿಸಬಹುದಾಗಿದೆ. ಕಾನೂನಿನ ಪ್ರಸ್ತುತ ಸ್ವರೂಪ ನಾಗರಿಕರ ಮೇಲೆ ನಿಯಂತ್ರಣ ಸಾಧಿಸಲು ಸರ್ಕಾರಕ್ಕೆ ಅಪರಿಮಿತ ಅಧಿಕಾರ ದೊರಕಿಸಿಕೊಡುವಂತಿದೆ. ಸರ್ಕಾರದ ಪ್ರಾಧಿಕಾರವೊಂದು, ಸಾರ್ವಜನಿಕರ ದತ್ತಾಂಶವನ್ನು ಬಳಸಿಕೊಂಡ ನಂತರ ಅದನ್ನು ಅಳಿಸಿಹಾಕುವ ಹೊಣೆಗಾರಿಕೆಯನ್ನು ಕಾಯ್ದೆ ಕಡ್ಡಾಯಗೊಳಿಸಿಲ್ಲ. ಇದರಿಂದ ವೈಯಕ್ತಿಕ ದತ್ತಾಂಶಗಳನ್ನು ಅನಿರ್ದಿಷ್ಟ ಅವಧಿಯವರೆಗೆ ಸರ್ಕಾರದ ಏಜೆನ್ಸಿಗಳು ಇರಿಸಿಕೊಳ್ಳಬಹುದಾಗಿದೆ; ಮಾಹಿತಿ ದುರುಪಯೋಗದ ಸಾಧ್ಯತೆಯನ್ನು ಮುಕ್ತಗೊಳಿಸಿದಂತಾಗಿದೆ. ನಾಗರಿಕರ ವೈಯಕ್ತಿಕ ದತ್ತಾಂಶದ ರಕ್ಷಣೆಯ ಹೊಣೆಯಿಂದ ತಪ್ಪಿಸಿಕೊಳ್ಳಲು ಸರ್ಕಾರಕ್ಕೆ ಅವಕಾಶ ಕಲ್ಪಿಸುವುದು, ಬೇಲಿಯೇ ಹೊಲ ಮೇಯುವ ಮಾತಿಗೆ ಅನುಗುಣವಾಗಿದೆ ಹಾಗೂ ಮಾಹಿತಿ ರಕ್ಷಣೆಯ ಮೂಲಕ ನಾಗರಿಕರನ್ನು ಸಬಲರನ್ನಾಗಿಸುವ ತತ್ತ್ವಕ್ಕೆ ವಿರುದ್ಧವಾಗಿದೆ.