ADVERTISEMENT

ಸಂಪಾದಕೀಯ | ಯಥಾಸ್ಥಿತಿಯಲ್ಲಿ ಉಳಿದ ರೆ‍ಪೊ ದರ: ಭವಿಷ್ಯದ ಕುರಿತು ಎಚ್ಚರಿಕೆಯ ನಡೆ

ಸಂಪಾದಕೀಯ
Published 3 ಅಕ್ಟೋಬರ್ 2025, 22:30 IST
Last Updated 3 ಅಕ್ಟೋಬರ್ 2025, 22:30 IST
..
..   

ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಂಡಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ‘ಹಣಕಾಸು ನೀತಿ ಸಮಿತಿ’ (ಎಂಪಿಸಿ) ಸಭೆಯ ನಿರ್ಣಯ, ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಕಾದು ನೋಡುವ ಎಚ್ಚರದ ನಡೆಯಾಗಿದೆ. ಈ ಬಾರಿಯೂ ರೆಪೊ ದರವನ್ನು ಶೇ 0.25ರಷ್ಟು ಕಡಿತಗೊಳಿಸಬಹುದು ಎಂದು ಎಸ್‌ಬಿಐ ರಿಸರ್ಚ್‌ ವರದಿ ಹೇಳಿತ್ತು. ಆದರೆ, ಯಾವುದೇ ಬದಲಾವಣೆಯಿಲ್ಲದೆ ಶೇ 5.5ರಲ್ಲಿಯೇ ರೆಪೊ ದರವನ್ನು ಉಳಿಸಿಕೊಳ್ಳಲು ‘ಎಂಪಿಸಿ’ ಸಭೆ ನಿರ್ಧರಿಸಿದೆ. ಸತತ ಎರಡು ಸಭೆಯಲ್ಲಿ ರೆಪೊ ದರ ಯಾವುದೇ ಬದಲಾವಣೆಗೆ ಒಳಗಾಗದೆ ಯಥಾಸ್ಥಿತಿಯಲ್ಲಿ ಉಳಿದಿದೆ. ದೇಶದ ಆರ್ಥಿಕತೆ ಬೆಳವಣಿಗೆಯ ಬಗ್ಗೆ ಇರುವ ಆಶಾವಾದ ಹಾಗೂ ಮುಂದಿನ ದಿನಗಳಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆ ಆಗಬಹುದೆಂಬುದನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಈ ನಿಲುವು ತಳೆದಿದೆ. ಪ್ರಸಕ್ತ ವರ್ಷದಲ್ಲಿ ಸತತ ಮೂರು ಬಾರಿ ರೆಪೊ ದರವನ್ನು ಕಡಿತಗೊಳಿಸಲಾಗಿತ್ತು. ಇದರಿಂದ ಶೇ 6.5ರಷ್ಟಿದ್ದ ರೆಪೊ ದರದಲ್ಲಿ ಶೇ 1ರಷ್ಟು ಕಡಿತವಾಗಿತ್ತು. ಪ್ರಸ್ತುತ ‘ಎಂಪಿಸಿ’ ತಳೆದಿರುವ ನಿಲುವು, ಪ್ರತಿಕೂಲ ಸಂದರ್ಭದಲ್ಲೂ ದೇಶದ ಆರ್ಥಿಕತೆ ಬೆಳವಣಿಗೆ ಬಗೆಗಿನ ಆಶಾವಾದ ಹಾಗೂ ಆತ್ಮವಿಶ್ವಾಸದ ಸಂಕೇತವಾಗಿದೆ. ಈ ಧನಾತ್ಮಕ ಸ್ಥಿತಿಗೆ, ಉತ್ತಮ ಮುಂಗಾರು ಹಾಗೂ ದಸರಾ ಕೊಡುಗೆಯ ರೂಪದಲ್ಲಿ ಘೋಷಣೆಗೊಂಡ ಜಿಎಸ್‌ಟಿ ಪರಿಷ್ಕರಣೆಯ ಪಾಲೂ ಇದೆ. ಆರ್ಥಿಕತೆ ಬೆಳವಣಿಗೆಯ ಆಶಾವಾದಕ್ಕೆ ಆರ್‌ಬಿಐನ ಲೆಕ್ಕಾಚಾರಗಳ ಜೊತೆಗೆ, ಗವರ್ನರ್‌ ಸಂಜಯ್‌ ಮಲ್ಹೋತ್ರಾ ಅವರ ಹೇಳಿಕೆಗಳೂ ಪುಷ್ಟಿ ಒದಗಿಸುವಂತಿವೆ. ಜಿಎಸ್‌ಟಿ ಪರಿಷ್ಕರಣೆಯು ಹಣದುಬ್ಬರ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ. ಜೊತೆಗೆ, ಬೇಡಿಕೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ನೆರವಾಗಲಿದೆ ಎಂಬ ಆಶಾಭಾವವನ್ನು ಅವರು ಹೊಂದಿದ್ದಾರೆ.

2025–26ನೇ ಆರ್ಥಿಕ ಸಾಲಿನ ಭಾರತದ ಆರ್ಥಿಕತೆ ಬೆಳವಣಿಗೆಯನ್ನು ಆರ್‌ಬಿಐ ಪರಿಷ್ಕರಿಸಿದ್ದು, ಶೇ 6.8ರಷ್ಟು ದಾಖಲಾಗಲಿದೆ ಎಂದು ಅಂದಾಜು ಮಾಡಿದೆ. ಇದು, ಆಗಸ್ಟ್‌ ತಿಂಗಳಲ್ಲಿ ಅಂದಾಜಿಸಿದ್ದ ಶೇ 6.5ಕ್ಕಿಂತಲೂ ಹೆಚ್ಚಿನದಾಗಿದೆ. ಇದರ ಜೊತೆಗೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 2.6ಕ್ಕೆ ತಗ್ಗಲಿದೆ ಎಂದು ಅಂದಾಜಿಸಿದೆ. ಆಗಸ್ಟ್‌ನಲ್ಲಿ ನಡೆದ ಸಭೆಯಲ್ಲಿ ಹಣದುಬ್ಬರವು ಶೇ 3.1ರಷ್ಟು ದಾಖಲಾಗಲಿದೆ ಎಂದು ಅಂದಾಜಿಸಲಾಗಿತ್ತು. ಆರ್ಥಿಕತೆ ಬೆಳವಣಿಗೆಯು ಚಲನಶೀಲ ಆಗಿದ್ದಾಗ ಹಾಗೂ ಹಣದುಬ್ಬರವು ಮಂದಗತಿಯಲ್ಲಿದ್ದಾಗ ಆರ್‌ಬಿಐಗೆ ತನ್ನ ಗುರಿ ಸಾಧಿಸಲು ಹಣಕಾಸಿನ ಸಲಕರಣೆಗಳನ್ನು ಬಳಸುವ ಪ್ರಮೇಯ ಎದುರಾಗುವುದಿಲ್ಲ. ದೇಶೀಯ ಮತ್ತು ಅಂತರರಾಷ್ಟ್ರೀಯ ವಿದ್ಯಮಾನಗಳಿಗೆ ಆರ್‌ಬಿಐ ಎಚ್ಚರಿಕೆಯಿಂದ ಪ್ರತಿಕ್ರಿಯಿಸುತ್ತಿರುವುದನ್ನೂ ರೆಪೊ ದರದ ಯಥಾಸ್ಥಿತಿ ನಿರ್ಧಾರವು ಸೂಚಿಸುವಂತಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತದ ಸುಂಕ ಸಮರ ನೀತಿ ಭಾರತದ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ. ಇದರ ಜೊತೆಗೆ, ಪ್ರಸ್ತುತ ನಡೆಯುತ್ತಿರುವ ವಿವಿಧ ದೇಶಗಳ ನಡುವಣ ಸಂಘರ್ಷಗಳು ಹಾಗೂ ವಿಶ್ವ ಹಣಕಾಸು ಮಾರುಕಟ್ಟೆಗಳಲ್ಲಿನ ಅಸ್ಥಿರತೆಯು, ಭಾರತದ ಆರ್ಥಿಕತೆ ಬೆಳವಣಿಗೆಗೆ ಗಂಭೀರ ತೊಡಕುಗಳನ್ನು ಉಂಟು ಮಾಡಬಲ್ಲದು. ಹೀಗಾಗಿ, ಹಣದುಬ್ಬರವನ್ನು ನಿಯಂತ್ರಿಸುವ ಮೂಲಕ ದೇಶದ ಆರ್ಥಿಕತೆ ಬೆಳವಣಿಗೆಯ ಸ್ಥಿರತೆಗೆ ಒತ್ತು ನೀಡುವುದು ಆರ್‌ಬಿಐನ ಪ್ರಮುಖ ಗುರಿಯಾಗಿದೆ. ಈ ದಿಸೆಯಲ್ಲಿ ತನ್ನ ‘ತಟಸ್ಥ’ ನೀತಿಯಲ್ಲೂ ‘ಎಂಪಿಸಿ’ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಆರ್‌ಬಿಐ ಗವರ್ನರ್‌ ಹೇಳಿದ್ದಾರೆ. ರೆಪೊ ದರದಲ್ಲಿ ಬದಲಾವಣೆ ಮಾಡದಿರುವ ಎಂಪಿಸಿ ನಿರ್ಧಾರವು, ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಾರ ಮತ್ತು ಸುಂಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಆಗಬಹುದಾದ ಬದಲಾವಣೆಗಳನ್ನು ಎಚ್ಚರಿಕೆಯಿಂದ ಗಮನಿಸಿ ಮುಂದಿನ ನಡೆಯನ್ನು ನಿರ್ಧರಿಸುವ ನಡವಳಿಕೆಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.