ADVERTISEMENT

ಸಂಪಾದಕೀಯ: ಒಳಮೀಸಲು ಚಾರಿತ್ರಿಕ ನಿರ್ಣಯ– ಜಾರಿಗೊಳಿಸುವ ಬದ್ಧತೆ ಅಗತ್ಯ

ಸಂಪಾದಕೀಯ
Published 20 ಆಗಸ್ಟ್ 2025, 23:30 IST
Last Updated 20 ಆಗಸ್ಟ್ 2025, 23:30 IST
<div class="paragraphs"><p>ಸಂಪಾದಕೀಯ: ಒಳಮೀಸಲು ಚಾರಿತ್ರಿಕ ನಿರ್ಣಯ– ಜಾರಿಗೊಳಿಸುವ ಬದ್ಧತೆ ಅಗತ್ಯ</p></div>

ಸಂಪಾದಕೀಯ: ಒಳಮೀಸಲು ಚಾರಿತ್ರಿಕ ನಿರ್ಣಯ– ಜಾರಿಗೊಳಿಸುವ ಬದ್ಧತೆ ಅಗತ್ಯ

   

ಒಳಮೀಸಲು ಜಾರಿಗೊಳಿಸುವ ಚಾರಿತ್ರಿಕ ನಿರ್ಣಯವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಆದರೆ, ಜನಪದರಿಗೆ ನ್ಯಾಯ ದೊರಕಿಸಿಕೊಡುವ ಕೆಲಸವಿನ್ನೂ ಅಪೂರ್ಣವಾಗಿ ಉಳಿದಿದೆ.

-------

ADVERTISEMENT

ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕಲ್ಪಿಸಬೇಕು ಎಂಬ ಮೂರು ದಶಕಗಳಿಗೂ ಹೆಚ್ಚಿನ ಸುದೀರ್ಘ ಹೋರಾಟ ಕೊನೆಗೂ ಫಲಿಸಿದೆ. ಈ ಚಾರಿತ್ರಿಕ ತೀರ್ಮಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೈಗೊಂಡಿದೆ. ರಾಜ್ಯದಲ್ಲಿ ಗುರುತಿಸಲಾಗಿರುವ 101 ಪರಿಶಿಷ್ಟ ಜಾತಿಗಳಿಗೆ ಲಭ್ಯ ಇರುವ ಶೇ 17ರಷ್ಟು ಮೀಸಲಾತಿಯನ್ನು ಎಡಗೈ ಸಂಬಂಧಿತ ಜಾತಿಗಳಿಗೆ ಪ್ರವರ್ಗ ‘ಎ’ ಅಡಿ ಶೇ 6, ಬಲಗೈ ಜಾತಿಗಳಿಗೆ ಪ್ರವರ್ಗ ‘ಬಿ’ ಅಡಿ ಶೇ 6 ಹಾಗೂ ಅಲೆಮಾರಿಗಳೂ ಸೇರಿದಂತೆ ಸ್ಪೃಶ್ಯ ಜಾತಿಗಳಿಗೆ ಶೇ 5ರಷ್ಟು ಪ್ರಮಾಣವನ್ನು ಉಪ ವರ್ಗೀಕರಣ ಮಾಡುವ ನಿರ್ಧಾರವನ್ನು ಮಂಗಳವಾರ ಇದಕ್ಕಾಗಿಯೇ ನಡೆದ ಸಚಿವ ಸಂಪುಟದ ವಿಶೇಷ ಸಭೆ ಕೈಗೊಂಡಿತ್ತು. ಮಹತ್ವದ ತೀರ್ಮಾನದ ವಿವರ ನೀಡಿರುವ ಮುಖ್ಯಮಂತ್ರಿ, ‘ಒಳ ಮೀಸಲಾತಿಯ ಆದೇಶ ಹೊರಡಿಸಿದ ಕೂಡಲೇ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲು, ಒಂದು ಬಾರಿಗೆ ವಯೋಮಿತಿ ಸಡಿಲಿಸಲು ತೀರ್ಮಾನಿಸಿದ್ದೇವೆ’ ಎಂದಿದ್ದಾರೆ. ತೆಲಂಗಾಣದ ಬಳಿಕ ದೇಶದಲ್ಲೇ ಒಳಮೀಸಲಾತಿ ಜಾರಿಯ ದಿಟ್ಟ ನಿರ್ಧಾರವನ್ನು ಕೈಗೊಂಡ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ಪರಿಶಿಷ್ಟ ಜಾತಿಯ ಮೀಸಲಾತಿಯ ಫಲವನ್ನು ಕೆಲವೇ ಜಾತಿಗಳು ದಕ್ಕಿಸಿಕೊಂಡಿದ್ದು, ಮೀಸಲಾತಿಯೆಂಬ ಚಿಮ್ಮುಹಲಗೆಯನ್ನು ಬಳಸಿಕೊಂಡು ಜೀವನಮಟ್ಟ ಸುಧಾರಿಸಿಕೊಳ್ಳುವ ಅವಕಾಶ, ಅಂಚಿನಲ್ಲಿರುವ ಜಾತಿಗಳಿಗೆ ಸಿಕ್ಕಿರಲಿಲ್ಲ ಎಂಬ ಕೂಗಿತ್ತು. ವಿವಿಧ ಸಂಘಟನೆಗಳು ಒಳಮೀಸಲಾತಿಯ ಬೇಡಿಕೆ ಮುಂದಿಟ್ಟುಕೊಂಡು ಹೋರಾಟವನ್ನು ನಡೆಸುತ್ತಲೇ ಬಂದಿದ್ದವು. ಒಳ ಮೀಸಲಾತಿ ವಿಷಯವು ಚುನಾವಣೆಯ ಹೊತ್ತಿನ ಭರವಸೆಯಾಗಿಯೇ ಉಳಿದುಬಂದಿತ್ತು. 2023ರ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿದ ಕಾಂಗ್ರೆಸ್‌ ಪಕ್ಷ, ಚಿತ್ರದುರ್ಗದಲ್ಲಿ ನಡೆದ ಸಮಾವೇಶದಲ್ಲಿ, ಪಕ್ಷ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿ ಮಾಡುವುದಾಗಿ ಘೋಷಿಸಿತ್ತು. ಅದನ್ನು ತನ್ನ ಪ್ರಣಾಳಿಕೆಯಲ್ಲೂ ಪ್ರತಿಪಾದಿಸಿತ್ತು.

ಒಳಮೀಸಲಾತಿಗೆ ಸಂಬಂಧಿಸಿ, ನಿವೃತ್ತ ನ್ಯಾಯಮೂರ್ತಿ ಎಚ್.ಎನ್‌. ನಾಗಮೋಹನದಾಸ್ ಆಯೋಗವನ್ನು 2024ರ ನವೆಂಬರ್‌ 12ರಂದು ಸರ್ಕಾರ ರಚಿಸಿತು. ಸಮೀಕ್ಷೆ ನಡೆಸಿದ ಆಯೋಗ 2025ರ ಆಗಸ್ಟ್ 1ರಂದು ತನ್ನ ವರದಿ ಸಲ್ಲಿಸಿತು. 101 ಮೂಲ ಜಾತಿಗಳನ್ನು ಐದು ಗುಂಪುಗಳಾಗಿ ವರ್ಗೀಕರಿಸಿದ ಆಯೋಗ, ಪ್ರವರ್ಗ ‘ಎ’ಗೆ ಶೇ 1 (59 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಜಾತಿಗಳು), ಪ್ರವರ್ಗ ‘ಬಿ’ಗೆ ಶೇ 6 (18 ಎಡಗೈ ಜಾತಿಗಳು), ಪ್ರವರ್ಗ ‘ಸಿ’ಗೆ ಶೇ 5 (17 ಬಲಗೈ ಜಾತಿಗಳು), ಪ್ರವರ್ಗ ‘ಡಿ’ಗೆ ಶೇ 4 (ಭೋವಿ, ಲಂಬಾಣಿ, ಕೊರಮ, ಕೊರಚ), ಪ್ರವರ್ಗ ‘ಇ’ಗೆ ಶೇ 1ರಂತೆ (3 ಜಾತಿಗಳು) ಹಂಚಿಕೆ ಮಾಡಿತ್ತು. ಸಚಿವ ಸಂಪುಟ ಸಭೆಯಲ್ಲಿ ಆಯೋಗದ ವರದಿಯನ್ನು ಮಂಡಿಸಿದ ಬಳಿಕ, ಅದರ ಮಾಹಿತಿಯು ಬಹಿರಂಗವಾಯಿತು. ವರದಿಯೇ ಅವೈಜ್ಞಾನಿಕವಾಗಿದೆ ಎಂದ ಬಲಗೈ ಸಂಬಂಧಿತ ಜಾತಿ ಸಂಘಟನೆಗಳು, ಪರಿಷ್ಕರಿಸದೇ ಜಾರಿ ಮಾಡಕೂಡದು ಎಂದು ಹೋರಾಟದ ಹಾದಿ ಹಿಡಿದವು. ವರದಿ ಜಾರಿಗೊಳಿಸಲೇಬೇಕು ಎಂದು ಎಡಗೈ ಸಂಬಂಧಿತ ಜಾತಿಯವರು ಪಟ್ಟು ಹಿಡಿದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ, ಐದು ಪ್ರವರ್ಗಗಳಾಗಿ ಉಪವರ್ಗೀಕರಣ ಮಾಡುವ ಆಯೋಗದ ಶಿಫಾರಸನ್ನು ಪರಿಷ್ಕರಿಸಿದ ಸರ್ಕಾರ, ಮೂರು ಪ್ರವರ್ಗಗಳಾಗಿ ವಿಂಗಡಣೆ ಮಾಡುವ ನಿರ್ಧಾರ ಕೈಗೊಂಡಿದೆ. ಅಲೆಮಾರಿ ಸಮುದಾಯಗಳಿಗೆ ಶಿಫಾರಸು ಮಾಡಿದ್ದ ಪ್ರವರ್ಗ ‘ಎ’ ಅಡಿ ಇದ್ದ ಶೇ 1ರಷ್ಟನ್ನು ಪ್ರವರ್ಗ ‘ಸಿ’ ಅಡಿ ತಂದು ಸ್ಪೃಶ್ಯ ಪಟ್ಟಿಗೆ ವರ್ಗಾಯಿಸಲಾಗಿದೆ.‌ ಆದಿ ದ್ರಾವಿಡ, ಆದಿ ಕರ್ನಾಟಕ, ಆದಿ ಆಂಧ್ರ ಜಾತಿಗಳಿಗೆ ಪ್ರವರ್ಗ ‘ಇ’ ಅಡಿ ಶಿಫಾರಸು ಮಾಡಿದ್ದ ಶೇ 1ರಷ್ಟು ಮೀಸಲಾತಿಯನ್ನು ಬಲಗೈ ಸಂಬಂಧಿತ ಜಾತಿಗಳಿಗೆ ಮರು ಹಂಚಿಕೆ ಮಾಡಿ ಶೇ 6ಕ್ಕೆ ಹೆಚ್ಚಿಸಲಾಗಿದೆ. ತಾಂತ್ರಿಕ ಕಾರಣಗಳಿಗಾಗಿ ಕೆಲವು ಜಾತಿಗಳನ್ನು ಉಪ ವರ್ಗೀಕರಣ ಮಾಡಿ, ಮೂರೇ ಪ್ರವರ್ಗದಡಿ ಒಳಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ನಾಗಮೋಹನದಾಸ್ ಆಯೋಗ ಅತಿ ಹಿಂದುಳಿದವರೆಂದು ಗುರುತಿಸಲಾಗಿದ್ದ ಅಲೆಮಾರಿ, ಅರೆ ಅಲೆಮಾರಿ ಸಮುದಾಯದವರನ್ನು ಭೋವಿ, ಲಂಬಾಣಿ ಜಾತಿಯವರು ಇರುವ ಪ್ರವರ್ಗ ‘ಸಿ’ಗೆ ಸೇರ್ಪಡೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ತಮಗೆ ನ್ಯಾಯ ಸಿಕ್ಕಿಲ್ಲ ಎಂದು ಅಲೆಮಾರಿಗಳು ಹೋರಾಟ ಮುಂದುವರಿಸಿದ್ದಾರೆ. ನಿಜವಾಗಿಯೂ ತಬ್ಬಲಿಗಳಾಗಿರುವ ಈ ಸಮುದಾಯವನ್ನು ಗುರುತಿಸಿರುವ ವಿಧಾನ ಸಮರ್ಥನೀಯವಲ್ಲ. ತಳಸ್ತರದ ನೋವು ಆಲಿಸಿ ನ್ಯಾಯ ಕೊಡಿಸುವ ಕೆಲಸವನ್ನು ಸರ್ಕಾರ ಆದ್ಯತೆ ಮೇರೆಗೆ ಮಾಡಬೇಕಿದೆ. ಒಳಮೀಸಲಾತಿ ಜಾರಿಯ ನಿರ್ಧಾರ ಪ್ರಕಟಿಸಿರುವ ಮುಖ್ಯಮಂತ್ರಿಯವರು, ‘ಪರಿಶಿಷ್ಟ ಜಾತಿಗಳಲ್ಲಿನ ಚಲನಶೀಲತೆ ಹಾಗೂ ಲಭ್ಯವಾಗುವ ದತ್ತಾಂಶಗಳನ್ನು ಪರಿಶೀಲಿಸಿ ವರದಿ ನೀಡಲು ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗ ರಚಿಸುವುದಾಗಿ ಹೇಳಿದ್ದಾರೆ. ಸರ್ಕಾರದ ತೀರ್ಮಾನದಲ್ಲಿ ಮಾರ್ಪಾಡುಗಳ ಅಗತ್ಯ ಕಂಡುಬಂದರೆ ರಾಷ್ಟ್ರೀಯ ಜನಗಣತಿಯಲ್ಲಿನ ಅಂಕಿ-ಅಂಶಗಳನ್ನು ಆಧರಿಸಿ ಬದಲಾವಣೆಗೆ ಒಳಪಡಿಸುವ ಷರತ್ತಿಗೆ ಬದ್ಧವಾಗಿದೆ’ ಎಂದೂ ಹೇಳಿದ್ದಾರೆ. ಶಿಫಾರಸು ಜಾರಿಯಿಂದ ತಮಗೆ ಘೋರ ಅನ್ಯಾಯವಾಗಿದೆ ಎಂಬ ಭಾವಿಸಿರುವ ಜನಪದರಿಗೆ ಶಾಶ್ವತ ಆಯೋಗ ಹಾಗೂ ರಾಷ್ಟ್ರೀಯ ಜನಗಣತಿಯ ದತ್ತಾಂಶಗಳ ಮೂಲಕ ನ್ಯಾಯ ಕೊಡಿಸುವ ಕೆಲಸ ಆಗಬೇಕಿದೆ. ಆಗಷ್ಟೆ, ಸಾಮಾಜಿಕ ನ್ಯಾಯ ನೈಜವಾಗಿ ಸಾಕಾರಗೊಂಡಂತೆ ಆಗುತ್ತದೆ. ಶಿಕ್ಷಣ, ಉದ್ಯೋಗ ಮತ್ತಿತರ ಸೌಲಭ್ಯ ಕಲ್ಪಿಸುವ ಮೂಲಕ ಉಪವರ್ಗೀಕರಣದ ಲಾಭ ಆಯಾ ಸಮುದಾಯಗಳಿಗೆ ದಕ್ಕುವಂತೆ ನೋಡಿಕೊಳ್ಳಬೇಕಾದ ಹೊಣೆಯೂ ಸರ್ಕಾರದ ಮೇಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.