ADVERTISEMENT

ಕಾಶ್ಮೀರ: ಪತ್ರಿಕಾ ಮಂಡಳಿಯ ಧೋರಣೆ ಎಳ್ಳಷ್ಟೂ ಸರಿಯಲ್ಲ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 19:45 IST
Last Updated 30 ಆಗಸ್ಟ್ 2019, 19:45 IST
..
..   

ಜಮ್ಮು– ಕಾಶ್ಮೀರದಲ್ಲಿ ಸಂವಹನ ಸೌಲಭ್ಯಗಳ ಮೇಲೆ ವಿಧಿಸಿರುವ ನಿರ್ಬಂಧ ಇನ್ನಷ್ಟು ಕಾಲ ಮುಂದುವರಿಯುವಂತೆ ಕಾಣಿಸುತ್ತಿದೆ. ಫೋನ್‌, ಇಂಟರ್‌ನೆಟ್‌ ಸಂಪರ್ಕಗಳಿಲ್ಲದೆ ಅಲ್ಲಿನ ಮಾಧ್ಯಮಗಳು ಕೆಲಸ ಮಾಡಲಾಗದ ಸ್ಥಿತಿಯಲ್ಲಿವೆ. ಮಾಧ್ಯಮಗಳ ಮೇಲೆ ವಿಧಿಸಿರುವ ಈ ನಿರ್ಬಂಧಗಳನ್ನು ಸಮರ್ಥಿಸಲು ಸರ್ಕಾರ ಯಾವುದೇ ಸಬೂಬು ನೀಡಿದರೂ ಅದನ್ನು ಒಪ್ಪಲಾಗದು. ಒಂದೆರಡು ದಿನಗಳ ಮಟ್ಟಿಗೆ ಈ ನಿರ್ಬಂಧ ಇದ್ದಿದ್ದರೆ ಕಾನೂನು– ಶಿಸ್ತುಪಾಲನೆಯ ದೃಷ್ಟಿಯಿಂದ ಸರಿ ಎನ್ನಬಹುದಾಗಿತ್ತು. ಆದರೆ ಇಷ್ಟೊಂದು ಸುದೀರ್ಘ ಅವಧಿಗೆ ನಿರ್ಬಂಧ ಮುಂದುವರಿದಿರುವುದು ಸಮರ್ಥನೀಯವಲ್ಲ. ಜವಾಬ್ದಾರಿಯುತ ಸಂಸ್ಥೆಯಾದ ಎಡಿಟರ್ಸ್‌ ಗಿಲ್ಡ್‌, ಈ ನಿರ್ಬಂಧವನ್ನು ‘ಅಪ್ರಜಾಸತ್ತಾತ್ಮಕ’ ಎಂದು ಕಟುವಾಗಿ ಟೀಕಿಸಿದೆ. ಆದರೆ, ಮಾಧ್ಯಮಗಳ ಕತ್ತು ಹಿಸುಕುವ ಇಂತಹ ಕ್ರಮದ ವಿರುದ್ಧ ದೃಢ ನಿಲುವು ತಳೆಯಬೇಕಿದ್ದ ಭಾರತೀಯ ಪತ್ರಿಕಾ ಮಂಡಳಿ (ಪಿಸಿಐ) ಮಾತ್ರ ನಿರ್ಬಂಧದ ಪರವಾಗಿ ಹೇಳಿಕೆ ನೀಡಿ ಸರ್ಕಾರದ ನಡೆಯನ್ನು ಸಮರ್ಥಿಸಿರುವುದು ವಿಪರ್ಯಾಸದ ಸಂಗತಿ. ‘ಕಾಶ್ಮೀರ್‌ ಟೈಮ್ಸ್‌’ನ ಕಾರ್ಯನಿರ್ವಾಹಕ ಸಂಪಾದಕಿ ಅನುರಾಧಾ ಭಾಸಿನ್‌ ಅವರು ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲು ಹತ್ತಿದ್ದಾರೆ. ಮಾಧ್ಯಮಗಳ ಮೇಲೆ ನಿರ್ಬಂಧ ವಿಧಿಸಿ
ರುವುದರಿಂದ ಸಂವಿಧಾನದಲ್ಲಿ ನೀಡಲಾದ ಸಮಾನತೆಯ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಉಲ್ಲಂಘನೆಯಾಗಿದೆ, ನಿರ್ಬಂಧವನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ. ಈ ಅರ್ಜಿಯ ವಿಷಯದಲ್ಲಿ ವಾದ ಮಂಡನೆಗೆ ತನಗೂ ಅವಕಾಶ ಕೊಡಬೇಕು ಎಂದು ಕೋರಿ ಭಾರತೀಯ ಪತ್ರಿಕಾ ಮಂಡಳಿ ಕೂಡಾ ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಘನತೆಯನ್ನು ಎತ್ತಿ ಹಿಡಿಯಲು ಅನುರಾಧಾ ಭಾಸಿನ್‌ ಅವರು ನಡೆಸುತ್ತಿರುವ ಪ್ರಯತ್ನಗಳನ್ನು ಬೆಂಬಲಿಸುವುದು ಬಿಟ್ಟು, ನಿರ್ಲಜ್ಜೆಯಿಂದ ಸರ್ಕಾರದ ಪರ ವಾದ ಮಾಡುತ್ತಿರುವ ಪತ್ರಿಕಾ ಮಂಡಳಿಯ ಕ್ರಮ ತೀವ್ರ ಆಕ್ಷೇಪಾರ್ಹ. ‘ಜಮ್ಮು– ಕಾಶ್ಮೀರದಲ್ಲಿ ಮಾಧ್ಯಮದ ಮೇಲೆ ನಿರ್ಬಂಧ ವಿಧಿಸಿರುವುದು ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವದ ಹಿತದಿಂದ ಸಮರ್ಥನೀಯ’ ಎಂಬರ್ಥದಲ್ಲಿ ಪತ್ರಿಕಾ ಮಂಡಳಿ ಹೇಳಿಕೆ ನೀಡಿದೆ. ಅದೂ ಸ್ವಯಂಪ್ರೇರಿತವಾಗಿ ಈ ವಿಷಯದಲ್ಲಿ ಧಾವಂತ ಪ್ರದರ್ಶಿಸಿರುವುದು ಆಶ್ಚರ್ಯಕರ. ಮಂಡಳಿಯ ನಿಲುವು, ಅದರ ಸ್ಥಾಪನೆಯ ಉದ್ದೇಶಕ್ಕೇ ಭಂಗ ತರುವಂತಿದೆ. ‘ಪತ್ರಿಕಾ ಮಂಡಳಿಯ ಅಧ್ಯಕ್ಷರು ತಮ್ಮ ಜೊತೆಗೆ ಚರ್ಚಿಸದೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದು ನಿಯಮಗಳಿಗೆ ವಿರುದ್ಧ’ ಎಂದು ಮಂಡಳಿಯ ಕೆಲವು ಸದಸ್ಯರು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷರ ಈ ನಡವಳಿಕೆಯಿಂದ ಪತ್ರಿಕಾ ಮಂಡಳಿಯ ವಿಶ್ವಾಸಾರ್ಹತೆಗೆ ಧಕ್ಕೆ ಉಂಟಾಗಿದೆ ಎಂಬ ಆ ಸದಸ್ಯರ ಮಾತಿನಲ್ಲಿ ತಥ್ಯವಿದೆ. ಹಾಗೆ ನೋಡಿದರೆ, ಪತ್ರಿಕಾ ಮಂಡಳಿಯು ಎಲ್ಲ ಸಂದರ್ಭಗಳಲ್ಲೂ ಮಾಧ್ಯಮಗಳ ಹಿತ ಕಾಯುವ ದೊಡ್ಡ ಕೆಲಸವನ್ನೇನೂ ಮಾಡಿಲ್ಲ. ಈಗಿನ ಅದರ ವರ್ತನೆ ನೋಡಿದರೆ, ಮಾಧ್ಯಮ ಸ್ವಾತಂತ್ರ್ಯಕ್ಕೇ ಅಡ್ಡಗಾಲು ಹಾಕುತ್ತಿರುವಂತಿದೆ.

ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಸಂವಿಧಾನಬದ್ಧವಾಗಿ ಕೆಲಸ ಮಾಡಬೇಕಾದ ಹಲವಾರು ಶಾಸನಬದ್ಧ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ದುರುಪಯೋಗ ಪಡಿಸಿಕೊಳ್ಳುತ್ತಿರುವ ಆರೋಪ ಇತ್ತೀಚೆಗೆ ಜೋರಾಗಿ ಕೇಳಿಬಂದಿದೆ. ಸಿಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಈಗಾಗಲೇ ಅಸಮಾಧಾನ ವ್ಯಕ್ತವಾಗಿದೆ. ಆ ಸಾಲಿಗೆ ಈಗ ಭಾರತೀಯ ಪತ್ರಿಕಾ ಮಂಡಳಿಯೂ ಸೇರ್ಪಡೆಯಾದಂತೆ ತೋರುತ್ತಿದೆ. ಇಂತಹ ಸಂಸ್ಥೆಗಳು ಸರ್ಕಾರದ ಹಂಗಿಗೆ ಬೀಳದೆ ಮುಕ್ತವಾಗಿ ಮತ್ತು ನ್ಯಾಯಬದ್ಧವಾಗಿ ಕೆಲಸ ನಿರ್ವಹಿಸಬೇಕಾದ ಅಗತ್ಯ ಈಗ ಹಿಂದೆಂದಿಗಿಂತ ಹೆಚ್ಚಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಬೇಕಾದ ಪತ್ರಿಕಾ ಮಂಡಳಿಯಂತಹ ಸಂಸ್ಥೆಗಳು ಆಳುವವರ ಮರ್ಜಿಗೆ ಒಳಗಾದರೆ ಜನರ ಹಕ್ಕುಗಳು ಮೊಟಕುಗೊಳ್ಳುವುದರಲ್ಲಿ ಯಾವುದೇ ಸಂಶಯ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT