ADVERTISEMENT

ಆರೋಗ್ಯ ಕಾರ್ಯಕರ್ತರ ಸುರಕ್ಷೆಗೆ ಇರಲಿ ಆದ್ಯತೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 20:00 IST
Last Updated 3 ಏಪ್ರಿಲ್ 2020, 20:00 IST
   

ಕೊರೊನಾ–2 ವೈರಾಣು ವಿರುದ್ಧದ ಸಮರದಲ್ಲಿ ತಮ್ಮ ಜೀವಕ್ಕಿರುವ ಅಪಾಯವನ್ನೂ ಲೆಕ್ಕಿಸದೆ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಇದೀಗ ನಾನಾ ರೀತಿಯ ಸಂಕಷ್ಟಗಳು ಎದುರಾಗಿವೆ. ಒಂದೆಡೆ, ವೈರಾಣುವಿನಿಂದ ಸ್ವಯಂರಕ್ಷಣೆಗಾಗಿ ಅವರೆಲ್ಲರಿಗೂ ಅಗತ್ಯ ಪ್ರಮಾಣದಷ್ಟು ಸುರಕ್ಷಾ ಸಾಧನಗಳ ಕಿಟ್‌ಗಳನ್ನು ಪೂರೈಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.

ಇನ್ನೊಂದೆಡೆ, ಸಮೀಕ್ಷೆಗೆ ಹೋದ ಸಂದರ್ಭದಲ್ಲಿ ಜನರಿಂದಲೇ ಅವರು ಹಲ್ಲೆಗೊಳಗಾದ ಪ್ರಸಂಗಗಳೂ ಜರುಗಿವೆ. ಮಧ್ಯಪ್ರದೇಶ, ದೆಹಲಿ, ಕರ್ನಾಟಕ, ತೆಲಂಗಾಣ ಮೊದಲಾದ ರಾಜ್ಯಗಳಲ್ಲಿ ನಡೆದಿರುವ ಇಂತಹ ಘಟನೆಗಳು, ‘ಜನರ ನೆರವಿಗೆ ಮುಂದಾಗಿದ್ದು ಅಪರಾಧವಾಯಿತೇ’ ಎಂಬ ಪ್ರಶ್ನೆಯನ್ನು ಕೇಳುವಂತೆ ಮಾಡಿವೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ತಪಾಸಣೆಗೆ ಹೋಗಿದ್ದ ಆರೋಗ್ಯ ಕಾರ್ಯಕರ್ತರ ಮೇಲೆ ಕಲ್ಲು ತೂರಲಾಗಿದೆ. ದೆಹಲಿಯಲ್ಲಿ ಕಡ್ಡಾಯ ಗೃಹವಾಸದಲ್ಲಿದ್ದವರ ಆರೈಕೆಗೆ ಹೋಗಿದ್ದ ನರ್ಸ್‌ಗಳ ಮೇಲೆ ಉಗುಳಲಾಗಿದೆ.

ಬೆಂಗಳೂರಿನಲ್ಲಿ ಸಮೀಕ್ಷೆಗೆ ತೆರಳಿದ್ದ ಆಶಾ ಕಾರ್ಯಕರ್ತೆಯರನ್ನು ಓಡಿಸಲಾಗಿದೆ. ತೆಲಂಗಾಣದಲ್ಲಿ ಸೋಂಕುಪೀಡಿತನೊಬ್ಬ ಅಸುನೀಗಿದ್ದರಿಂದ ಆತನ ಕುಟುಂಬದವರ ಸಿಟ್ಟು ವೈದ್ಯರ ಮೇಲೆ ತಿರುಗಿದೆ. ಕೊರೊನಾ ಪಿಡುಗು ಅತ್ಯಂತ ವೇಗವಾಗಿ ಪಸರಿಸುತ್ತಿರುವ ಈ ಸಂದರ್ಭದಲ್ಲಿ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಮೇಲೆ ಭಾರಿ ಒತ್ತಡ ಇದೆ. ಸೋಂಕು ಹರಡುವುದನ್ನು ತಡೆಯುವುದು ಈಗ ಅತಿ ಜರೂರಿನ ಕೆಲಸ.

ADVERTISEMENT

ಜನ ಕೈಜೋಡಿಸದಿದ್ದರೆ ಈ ಹೋರಾಟದಲ್ಲಿ ಯಶಸ್ಸು ಸಾಧ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ, ಮನುಷ್ಯತ್ವವನ್ನೇ ಮರೆತು, ಆರೋಗ್ಯ ಕಾರ್ಯಕರ್ತರ ಮೇಲೆ ಜನರು ಕಲ್ಲು ತೂರಿರುವುದು, ಹಲ್ಲೆ ನಡೆಸಿರುವುದು ಅಕ್ಷಮ್ಯ. ಇಂತಹ ಕೃತ್ಯಗಳು ಆರೋಗ್ಯ ಸಿಬ್ಬಂದಿಯ ನೈತಿಕ ಸ್ಥೈರ್ಯವನ್ನು ಕುಂದಿಸುತ್ತವೆ. ಜನರ ವರ್ತನೆಯಿಂದ ಭೀತಿಗೊಂಡಿರುವ ವೈದ್ಯಕೀಯ ಸಂಘಟನೆಗಳು ಸೂಕ್ತ ಭದ್ರತಾ ವ್ಯವಸ್ಥೆಗಾಗಿ ಮೊರೆಯಿಟ್ಟಿವೆ. ಇಂತಹ ಸ್ಥಿತಿ, ನಾಗರಿಕ ಸಮಾಜಕ್ಕೆ ಶೋಭೆ ತರುವುದಿಲ್ಲ.

ಕೋವಿಡ್‌–19ರ ಪ್ರಭಾವವನ್ನು ತಗ್ಗಿಸಲು ಹಗಲಿರುಳು ಶ್ರಮಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಮುಂದಿರುವುದು ಸಮಸ್ಯೆ ಹಾಗೂ ಸವಾಲುಗಳ ಹಾದಿ. ಅದರಲ್ಲೂ ನೇರವಾಗಿ ರೋಗಿಗಳ ಆರೈಕೆ ಮಾಡುವ ನರ್ಸ್‌ಗಳು ಹಾಗೂ ಯಾರಿಗೆ ಸೋಂಕು ಇದೆ ಎಂಬುದರ ಅರಿವೇ ಇಲ್ಲದೆ ಜನರೊಂದಿಗೆ ಬೆರೆಯುವ ಆಶಾ ಕಾರ್ಯಕರ್ತೆಯರಿಗೆ ಅಪಾಯ ಹೆಚ್ಚು. ಅಂತಹ ಆರೋಗ್ಯ ಸೇನಾನಿಗಳಿಗೆ ಮುಖಗವಸು, ಕೈಗವಸು ಹಾಗೂ ಸ್ಯಾನಿಟೈಸರ್‌ಗಳನ್ನು ಅಗತ್ಯ ಪ್ರಮಾಣದಲ್ಲಿ ಪೂರೈಕೆ ಮಾಡದಿರುವುದು ಬಹುದೊಡ್ಡ ಪ್ರಮಾದ. ಅದರಲ್ಲೂ ಸೋಂಕುಪೀಡಿತರನ್ನು ಪತ್ತೆಹಚ್ಚುವಲ್ಲಿ ನಿರತರಾದ ಆಶಾ ಕಾರ್ಯಕರ್ತೆಯರು, ಕರವಸ್ತ್ರಗಳನ್ನೇ ಮುಖಗವಸುಗಳಂತೆ ಬಳಸುವ ಪ್ರಮೇಯ ಒದಗಿರುವುದು, ಅವರನ್ನು ಆರೋಗ್ಯ ಇಲಾಖೆಯು ಹೇಗೆ ನಿರ್ಲಕ್ಷಿಸಿದೆ ಎಂಬುದಕ್ಕೆ ದ್ಯೋತಕ.

ಸೋಂಕು ಹರಡುವ ಭೀತಿಯ ಈ ಸಂದರ್ಭದಲ್ಲಿ ಕರ್ತವ್ಯಕ್ಕೆ ತೆರಳುತ್ತಿರುವ ಆರೋಗ್ಯ ಸಿಬ್ಬಂದಿಗೆ ಸಾಮಾಜಿಕ ಬಹಿಷ್ಕಾರ ಹಾಕುತ್ತಿರುವಂತಹ, ಮನೆ ಖಾಲಿ ಮಾಡುವಂತೆ ಮಾಲೀಕರು ಒತ್ತಡ ಹೇರುತ್ತಿರುವಂತಹ ಪ್ರಕರಣಗಳೂ ವರದಿಯಾಗಿವೆ. ಅಲ್ಲದೆ, ಸೋಂಕಿನ ಭಯದಿಂದಾಗಿ ಕೆಲಸಕ್ಕೆ ಹಾಜರಾಗುವುದಕ್ಕೆ ಕುಟುಂಬದ ಸದಸ್ಯರೇ ತಡೆಯೊಡ್ಡುತ್ತಿರುವ ಪ್ರಸಂಗಗಳೂ ನಡೆದಿವೆ.

ಈ ಯಾವುದನ್ನೂ ಲೆಕ್ಕಿಸದೆ ಕರ್ತವ್ಯಪ್ರಜ್ಞೆಗೆ ಓಗೊಟ್ಟವರನ್ನು ಅಷ್ಟೇ ಪ್ರೀತಿಯಿಂದ ಕಾಣಬೇಕಿರುವುದು ಸಮಾಜದ ಬಹುಮುಖ್ಯ ಹೊಣೆ. ‘ಸಮೀಕ್ಷೆ ನಡೆಸಲು ಬಂದವರೇನೂ ನಮ್ಮ ವೈರಿಗಳಲ್ಲ. ಸೋಂಕಿತರನ್ನು ಪತ್ತೆಹಚ್ಚಿ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಬಂದವರು ಅವರು’ ಎಂಬುದನ್ನು ಅರ್ಥ ಮಾಡಿಕೊಂಡು, ಅವರಿಗೆ ಅಗತ್ಯ ಸಹಕಾರ ನೀಡುವ ಕೆಲಸವನ್ನು ಜನ ಮಾಡಬೇಕು.

ಈ ಸಂಕಷ್ಟದ ಸನ್ನಿವೇಶದಲ್ಲಿ, ಆರೋಗ್ಯ ಸಿಬ್ಬಂದಿಯನ್ನು ವೈರಾಣುವಿನಿಂದ ಮಾತ್ರವಲ್ಲ, ಉದ್ರಿಕ್ತರಿಂದಲೂ ರಕ್ಷಿಸಿಕೊಳ್ಳುವುದು ಆದ್ಯ ಕರ್ತವ್ಯ ಎಂಬುದನ್ನು ಸರ್ಕಾರ ಅರಿತುಕೊಳ್ಳಬೇಕು. ಸೋಂಕು ಹರಡುವಿಕೆಯನ್ನು ತಡೆಗಟ್ಟುವಲ್ಲಿ ಈ ಮುಂಚೂಣಿ ಸೇನಾನಿಗಳ ಪಾತ್ರವೇ ಹಿರಿದಾಗಿದೆ ಎಂಬುದನ್ನೂ ನೆನಪಿಡಬೇಕು. ಅವರಿಗೆ ಸುರಕ್ಷಾ ಸಾಧನಗಳ ಕಿಟ್‌ಗಳನ್ನು ಅಗತ್ಯ ಪ್ರಮಾಣದಲ್ಲಿ ಪೂರೈಸುವುದರ ಜತೆಗೆ ಸಮೀಕ್ಷೆಗೆ ಹೋದಾಗ ಸೂಕ್ತ ಭದ್ರತೆಯನ್ನೂ ಒದಗಿಸಬೇಕು. ಹಾಗೆಯೇ ಸಮಾಜದ ಸ್ವಾಸ್ಥ್ಯ ಹದಗೆಡಿಸುತ್ತಿರುವ ಕಿಡಿಗೇಡಿಗಳಿಗೆ ಬುದ್ಧಿಯನ್ನೂ ಕಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.