ADVERTISEMENT

ಸಂಪಾದಕೀಯ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಮುಕ್ತ, ನಿಷ್ಪಕ್ಷಪಾತ ತನಿಖೆ ನಡೆಯಲಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 19:31 IST
Last Updated 1 ಸೆಪ್ಟೆಂಬರ್ 2022, 19:31 IST
   

ಚಿತ್ರದುರ್ಗದ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಲೈಂಗಿಕ ದೌರ್ಜನ್ಯದ ಪ್ರಕರಣವು ಧರ್ಮ ಮತ್ತು ಅಧಿಕಾರ ಕೇಂದ್ರಗಳ ದುರ್ಬಳಕೆ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು, ಹೆಣ್ಣುಮಕ್ಕಳ ಸುರಕ್ಷತೆಯು ಮರೀಚಿಕೆ ಯಾಗಿಯೇ ಉಳಿದಿರುವುದನ್ನು ಮತ್ತೆ ಮತ್ತೆ ಸಾಬೀತುಪಡಿಸುತ್ತಿವೆ. ಧಾರ್ಮಿಕ ಸಂಸ್ಥೆಯ ಆವರಣದಲ್ಲಿ, ಅದರಲ್ಲೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನುವ ಆರೋಪ ಮತ್ತಷ್ಟು ಆತಂಕ ಹುಟ್ಟಿಸುವಂತಹದ್ದು.

ಸ್ವಾಮೀಜಿ ಹಾಗೂ ವಸತಿ ನಿಲಯದ ವಾರ್ಡನ್‌ ಸೇರಿದಂತೆ ಒಟ್ಟು ಐವರ ಮೇಲೆ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ’ (ಪೋಕ್ಸೊ) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಚಿತ್ರದುರ್ಗದ ವಸತಿ ನಿಲಯದ ಇಬ್ಬರು ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ಒಬ್ಬ ವಿದ್ಯಾರ್ಥಿನಿಯ ಮೇಲೆ ಮೂರೂವರೆ ವರ್ಷಗಳಿಂದ ಹಾಗೂ ಮತ್ತೊಬ್ಬ ಬಾಲಕಿಯ ಮೇಲೆ ಒಂದೂವರೆ ವರ್ಷದಿಂದ ಲೈಂಗಿಕ ದೌರ್ಜನ್ಯ ಎಸಗುತ್ತ ಬರಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣವನ್ನು ಜಾಮೀನುರಹಿತ ಅಪರಾಧ ಎಂದು ಪರಿಗಣಿಸಲಾಗಿದೆ.

ಕಾನೂನುಕ್ರಮ ವಿಳಂಬವಾದಷ್ಟೂ ಸಾಕ್ಷ್ಯನಾಶದ ಅವಕಾಶಗಳು ಇರುವುದರಿಂದ, ಅತ್ಯಾಚಾರದಂಥ ಆರೋ‍ಪಗಳ ಸಂದರ್ಭದಲ್ಲಿ ಆರೋಪಿಗಳ ವಿರುದ್ಧ ತಕ್ಷಣದ ಕಾನೂನುಕ್ರಮ ಜರುಗಿಸುವುದು ಅಗತ್ಯ. ಆದರೆ, ಮುರುಘಾ ಶರಣರ ವಿಷಯದಲ್ಲಿ ಅನುಸರಿಸಿದ ವಿಳಂಬಧೋರಣೆಯು ಪೊಲೀಸ್‌ ಇಲಾಖೆಯ ನಡವಳಿಕೆಯ ಬಗ್ಗೆ ಹಲವು ‍ಪ್ರಶ್ನೆಗಳಿಗೆ ಆಸ್ಪದ ಕಲ್ಪಿಸುವಂತಿತ್ತು. ಮುರುಘಾ ಶರಣರು ಸರಣಿ ಸಭೆಗಳನ್ನು ನಡೆಸಲು ಹಾಗೂ ಕಿತ್ತೂರಿನವರೆಗೆ ಪ್ರಯಾಣಿಸಲು ಅವಕಾಶ ದೊರೆತ ಘಟನೆಗಳು ಕೂಡ ಸರ್ಕಾರವು ಆರೋಪಿಗಳ ಬಗ್ಗೆ ಮೆದುಧೋರಣೆ ಹೊಂದಿತ್ತು ಎಂಬುದಕ್ಕೆ ಉದಾಹರಣೆಗಳಂತಿವೆ. ಪೋಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾದ ಆರು ದಿನಗಳ ಬಳಿಕ ಮುರುಘಾ ಶರಣರನ್ನು ಗುರುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಮಕ್ಕಳ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ, ವಸತಿನಿಲಯಗಳಲ್ಲಿ ನೆಲೆಸಿರುವ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರನ್ನು ಆತಂಕಕ್ಕೆ ದೂಡುವ ವಿದ್ಯಮಾನ. ಹಾಸ್ಟೆಲ್‌ಗಳಲ್ಲಿ ನೆಲೆಸಿರುವ ಮಕ್ಕಳು ಮತ್ತು ಅವರ ಪೋಷಕರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡಬೇಕಾದುದು ಸರ್ಕಾರದ ಕರ್ತವ್ಯ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಕ್ಷಣ ಇಲಾಖೆಯು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಕ್ಷಣ ಸ್ಪಂದಿಸಬೇಕಾಗಿತ್ತು. ಆದರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾಗಲೀ ಶಿಕ್ಷಣ ಸಚಿವರಾಗಲೀ ಘಟನೆ ತಮಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ.

ADVERTISEMENT

ಅಮಾಯಕ ಮಕ್ಕಳು ಹಾಗೂ ಪೋಷಕರಿಗೆ ಧೈರ್ಯ ತುಂಬಬೇಕಾದ ಕೆಲಸವನ್ನು ಮಾಡಬೇಕಾದವರು ಸುಮ್ಮನಿರುವುದು, ಶಿಕ್ಷಣಕ್ಕಾಗಿ ಮನೆಯಿಂದ ಹೊರಗಿರುವ ಬಾಲಕಿಯರು ಮತ್ತು ಅವರ ಪಾಲಕರ ಧೈರ್ಯವನ್ನು ಉಡುಗಿ ಸುವಂತಿದೆ. ಪ್ರಭಾವಿ ಮಠದ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮೆದುಧೋರಣೆ ಅನುಸರಿಸುತ್ತಿದೆ ಎಂದು ಮಹಿಳಾ ಮತ್ತು ದಲಿತ ಸಂಘಟನೆಗಳು ಬಹಿರಂಗವಾಗಿಯೇ ಆರೋಪಿಸಿದ್ದವು. ಆ ಆರೋಪಕ್ಕೆ ಪುಷ್ಟಿ ನೀಡುವಂತೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ವಾಮೀಜಿ ವಿರುದ್ಧದ ದೂರಿನ ಹಿಂದೆ ಪಿತೂರಿ ಇರುವ ಶಂಕೆ ವ್ಯಕ್ತಪಡಿಸಿದ್ದರು. ತನಿಖೆ ನಡೆಸಬೇಕಾದ ಇಲಾಖೆಯ ಉಸ್ತುವಾರಿ ಹೊಣೆ ಹೊತ್ತವರೇ ಆರೋಪಿ ಬಗ್ಗೆ ಸಹಾನುಭೂತಿ ಸೂಚಿಸುವಂತಾದರೆ, ನಿಷ್ಪಕ್ಷಪಾತ ವಿಚಾರಣೆ ನಡೆಯುತ್ತದೆಂದು ನಿರೀಕ್ಷಿಸುವುದು ಹೇಗೆ?

ಅಧಿಕಾರ ಸ್ಥಾನದಲ್ಲಿ ಇರುವವರು ವೈಯಕ್ತಿಕ ಒಲವುಗಳನ್ನು ನಿಯಂತ್ರಿಸಿಕೊಂಡು, ಕಾನೂನನ್ನು ಪಾಲಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ರಾಜ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಇಡೀ ದೇಶ ಕುತೂಹಲದಿಂದ ಗಮನಿಸುತ್ತಿದೆ.ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು, ತನಿಖೆಯ ವಿವರಗಳನ್ನು ನೀಡುವಂತೆ ಜಿಲ್ಲಾಧಿಕಾರಿಗೆ ನೋಟಿಸ್‌ ನೀಡಿದೆ. ಪ್ರಸ್ತುತ ನಡೆಯುತ್ತಿರುವ ವಿದ್ಯಮಾನಗಳು ಕಾನೂನಿನ ಘನತೆಯನ್ನಷ್ಟೇ ಒರೆಗೆ ಹಚ್ಚುತ್ತಿಲ್ಲ; ಕಾನೂನಿನ ಸಮ್ಮುಖದಲ್ಲಿ ಬಲಿಷ್ಠರು ಮತ್ತು ಅಸಹಾಯಕರೆಂಬ ಭೇದವಿಲ್ಲ ಎನ್ನುವ ಮಾತನ್ನೂ ಪ್ರಾಯೋಗಿಕ ಪರೀಕ್ಷೆಗೊಳಪಡಿಸುತ್ತಿವೆ.

ಮುರುಘಾ ಶರಣರ ವಿರುದ್ಧದ ಆರೋಪವನ್ನು ವ್ಯಕ್ತಿಗತ ನೆಲೆಯಲ್ಲಿ ನೋಡಬೇಕೇ ವಿನಾ ಸಾಮುದಾಯಿಕ ಅಥವಾ ಧಾರ್ಮಿಕ ನೆಲೆಗಟ್ಟಿನಲ್ಲಿ ನೋಡಬಾರದು. ವಿಚಾರಣೆಗೆ ಒಳಪಡಬೇಕಾದುದು ಆರೋಪಿಯೇ ಹೊರತು, ಸಮುದಾಯ ಅಥವಾ ಧಾರ್ಮಿಕ ಸಂಸ್ಥೆಯಲ್ಲ ಎನ್ನುವ ತಿಳಿವಳಿಕೆಯು ಅನಗತ್ಯ ಗೊಂದಲಗಳನ್ನು ನಿವಾರಿಸಬಲ್ಲದು. ಪ್ರಸಕ್ತ ಪ್ರಕರಣದಲ್ಲಿ, ಸ್ವಾಮೀಜಿ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಸತ್ಯ ಸಂಗತಿ ಅನಾವರಣಗೊಳ್ಳುವುದು ಮುಖ್ಯವಾದಷ್ಟೇ, ಈ ದೇಶದ ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವ ಸಂದೇಶ ಹೊರಹೊಮ್ಮುವುದೂ ಮುಖ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.