ADVERTISEMENT

ತನಿಖಾ ಸಂಸ್ಥೆ ಹಾಗೂ ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಮಾತು ಬೇಡ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 20:14 IST
Last Updated 31 ಜನವರಿ 2019, 20:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕಿರುವುದು ಪ್ರಜಾಪ್ರಭುತ್ವದ ಸುರಕ್ಷತೆಗೆ ಅತ್ಯಂತ ಅಗತ್ಯ. ಶಾಸಕಾಂಗದ ಸದಸ್ಯರು ಉಳಿದೆರಡೂ ಅಂಗಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವುದೇನಿದ್ದರೂ ಶಾಸನ ರಚನಾ ಕ್ರಿಯೆಯ ಮೂಲಕವೇ ಹೊರತು ತಮ್ಮ ವೈಯಕ್ತಿಕ ಪ್ರಭಾವ ಬೀರುವುದರ ಮೂಲಕವಲ್ಲ.

ಕೇಂದ್ರ ಸರ್ಕಾರದ ಸಚಿವರು ಈ ತತ್ವವನ್ನು ಮರೆಯುವುದು ಮತ್ತೆ ಮತ್ತೆ ಕಾಣಸಿಗುತ್ತದೆ. ಇತ್ತೀಚೆಗೆ ಇಬ್ಬರು ಮಂತ್ರಿಗಳು ಇದನ್ನು ಪುನರಾವರ್ತಿಸಿದರು. ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿರುವ ಖಾತೆರಹಿತ ಸಚಿವ ಅರುಣ್ ಜೇಟ್ಲಿ ಅವರು ಐಸಿಐಸಿಐ ಬ್ಯಾಂಕ್‌ನ ಮುಖ್ಯಸ್ಥೆಯಾಗಿದ್ದ ಚಂದಾ ಕೊಚ್ಚರ್ ಅವರ ಮೇಲಿನ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐಯನ್ನು ಟೀಕಿಸಿ ಟ್ವೀಟ್ ಮಾಡಿದ್ದರು.

‘ಸಿಬಿಐ, ತನಿಖಾ ದುಸ್ಸಾಹಸಕ್ಕೆ ಇಳಿಯಕೂಡದು’ ಎಂಬುದು ಟ್ವೀಟ್‌ನ ಸಾರ. ರಾಮಜನ್ಮಭೂಮಿ ವಿವಾದದ ವಿಚಾರಣೆಯ ದಿನಾಂಕಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನ ನಿಲುವನ್ನು ಟೀಕಿಸುವ ಉದ್ಧಟತನ ತೋರಿದ್ದು ಕಾನೂನು ಸಚಿವರಾಗಿರುವ ರವಿಶಂಕರ್ ಪ್ರಸಾದ್. ಈ ಇಬ್ಬರೂ ಎಳಸು ರಾಜಕಾರಣಿಗಳಲ್ಲ. ಹಾಗೆಯೇ ಶಾಸಕಾಂಗಕ್ಕೆ ಉಳಿದ ಅಂಗಗಳ ಜೊತೆ ಇರಬೇಕಾದ ಸಂಬಂಧದ ಬಗ್ಗೆ ತಿಳಿವಳಿಕೆ ಇಲ್ಲದವರೂ ಅಲ್ಲ.

ADVERTISEMENT

ಸಂವಿಧಾನದ ಆಶಯಗಳನ್ನು ಅರಿಯದವರಂತೂ ಅಲ್ಲವೇ ಅಲ್ಲ. ಇಬ್ಬರಿಗೂ ಕಾನೂನಿನ ಜ್ಞಾನವೂ ಚೆನ್ನಾಗಿದೆ. ಆದರೂ ಇವರಿಬ್ಬರು ಎಲ್ಲಾ ಶಿಷ್ಟಾಚಾರಗಳನ್ನು ಗಾಳಿಗೆ ತೂರಿ ತನಿಖಾ ಸಂಸ್ಥೆ ಮತ್ತು ನ್ಯಾಯಾಂಗದ ಕಾರ್ಯನಿರ್ವಹಣೆಯನ್ನು ಪ್ರಭಾವಿಸುವಂಥ ಮಾತುಗಳನ್ನು ಬಹಿರಂಗವಾಗಿ ಆಡಿದರು. ಇದಕ್ಕೆ ಬಂದ ಟೀಕೆಗಳಿಗೆ ಪ್ರತಿಕ್ರಿಯಿಸುವ ಅಥವಾ ಸ್ಪಷ್ಟೀಕರಿಸುವ ಕೆಲಸವನ್ನೂ ಅವರು ಈತನಕ ಮಾಡಿಲ್ಲ. ಅಂದರೆ ಇದು ಪ್ರಜ್ಞಾಪೂರ್ವಕವಾದ ಕ್ರಿಯೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂಬ ಆರೋಪವನ್ನು ಸಮರ್ಥಿಸುವಂತೆ ಈ ಮಂತ್ರಿಗಳ ವರ್ತನೆ ಇದೆ. ಈ ಬಗೆಯ ಮಾತುಗಳ ಮೂಲಕ ಈಗಿನ ಆಡಳಿತಾರೂಢರ ಸ್ವಾರ್ಥ ಸಾಧನೆಯಾಗಬಹುದು. ಆದರೆ ಇದು ಪ್ರಜಾಪ್ರಭುತ್ವದ ಮಟ್ಟಿಗೆ ಮಾರಕವಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ.

ಅರುಣ್ ಜೇಟ್ಲಿ ಮತ್ತು ರವಿಶಂಕರ್ ಪ್ರಸಾದ್ ಅವರು ಮೂಗು ತೂರಿಸಲು ಹೊರಟ ಎರಡೂ ಪ್ರಕರಣಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸುವ ಅಗತ್ಯವಿದೆ. ಐಸಿಐಸಿಐ-ವಿಡಿಯೊಕಾನ್ ಸಾಲ ಹಗರಣದ ತನಿಖೆ ನಡೆಸಲು ನೇಮಿಸಲಾಗಿದ್ದ ಬಿ.ಎನ್‌. ಶ್ರೀಕೃಷ್ಣ ಸಮಿತಿ ಕೂಡಾ ಚಂದಾ ಕೊಚ್ಚರ್ ಅವರ ತಪ್ಪುಗಳನ್ನು ತನ್ನ ವರದಿಯಲ್ಲಿ ತೋರಿಸಿಕೊಟ್ಟಿದೆ.

ಹಾಗಿರುವಾಗ, ತನಿಖೆ ನಡೆಸುತ್ತಿರುವ ಸಿಬಿಐಯನ್ನು ಗುರಿಯಾಗಿಟ್ಟುಕೊಂಡು ಜೇಟ್ಲಿ ಅವರು ಏಕೆ ಟ್ವೀಟ್ ಮಾಡಿದರು? ಆಡಳಿತಾರೂಢರಿಗೆ ಚಂದಾ ಕೊಚ್ಚರ್ ಅವರನ್ನು ರಕ್ಷಿಸುವ ಇರಾದೆ ಇದೆಯೇ ಎಂಬ ಸಂಶಯ ಯಾರಲ್ಲಾದರೂ ಮೂಡಿದರೆ ಅದು ಸಹಜವಲ್ಲವೇ? ಇನ್ನು ಬಾಬರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿಶಂಕರ್ ಪ್ರಸಾದ್ ಅವರ ಮಾತುಗಳನ್ನೂ ಇದೇ ದೃಷ್ಟಿಯಲ್ಲಿ ನೋಡಬೇಕಾಗುತ್ತದೆ.

ಬಾಬರಿ ಮಸೀದಿ ವಿವಾದವನ್ನು ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ರಹಸ್ಯವೇನೂ ಅಲ್ಲ. ಅದರ ಪ್ರಣಾಳಿಕೆಯಲ್ಲೇ ‘ರಾಮ ಮಂದಿರ ನಿರ್ಮಾಣ’ದ ಭರವಸೆಯಿದೆ. ಇದಕ್ಕೂ ಬಾಬರಿ ಮಸೀದಿಯ ಜಮೀನು ವಿವಾದದ ಮೊಕದ್ದಮೆಗೂ ಸಂಬಂಧವಿದೆ. ಕಾನೂನು ಸಚಿವ ಹುದ್ದೆಯ ಘನತೆಯನ್ನು ಮೀರಿ ರವಿಶಂಕರ್ ಪ್ರಸಾದ್ ಅವರು ಸುಪ್ರೀಂ ಕೋರ್ಟ್‌ನ ಮೇಲೆ ದಾಳಿ ನಡೆಸಿದ್ದರಲ್ಲಿ ಮತ ಗಳಿಕೆ ರಾಜಕಾರಣವಿದೆಯೇ ವಿನಾ ಪ್ರಬುದ್ಧ ರಾಜಕಾರಣಿಗೆ ಇರಬೇಕಾದ ಪ್ರಜಾಸತ್ತಾತ್ಮಕ ಮೌಲ್ಯಗಳಿಲ್ಲ.

ಈ ಬಗೆಯ ಉದ್ಧಟ ಹೇಳಿಕೆಗಳನ್ನು ಕೊಡುವುದಕ್ಕೆ ಅಗತ್ಯವಿರುವ ವಾತಾವರಣವೊಂದನ್ನು ಸೃಷ್ಟಿಸಿಕೊಳ್ಳುವಲ್ಲಿ ಈಗಿನ ಆಡಳಿತಾರೂಢ ಪಕ್ಷ ಯಶಸ್ವಿಯಾಗಿದೆ. ಸಮಾಜದಲ್ಲಿ ತೀವ್ರ ಕೋಮು ಭಾವನೆಗಳನ್ನು ಹರಡುವುದು ಮತ್ತು ಇಂತಹವುಗಳನ್ನು ವಿಶ್ಲೇಷಿಸಿ ಜನರಿಗೆ ವಿವರಿಸಬೇಕಾದ ಮಾಧ್ಯಮಗಳನ್ನು ನಿಯಂತ್ರಿಸುವುದರ ಮೂಲಕ ಇದನ್ನು ಸಾಧಿಸಲಾಗಿದೆ. ನಾಗರಿಕ ಸಮಾಜ ಈ ವಿಚಾರದಲ್ಲಿ ತಕ್ಷಣವೇ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತವಾಗದೇ ಇದ್ದರೆ ಮುಂದೆ ಸಂಭವಿಸಲಿರುವ ಅಪಾಯಗಳು ಬಹಳ ದೊಡ್ಡ ಪ್ರಮಾಣದ್ದಾಗಿರುತ್ತವೆ. ಈ ವಿಷಯಗಳನ್ನು ನ್ಯಾಯಾಂಗವೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.