ಕೌಟುಂಬಿಕ ಹಿಂಸಾಚಾರವನ್ನು ಹತ್ತಿಕ್ಕಲು ಇನ್ನೊಂದು ಹೆಜ್ಜೆ ಮುಂದಕ್ಕೆ ಇರಿಸಿರುವ ಸುಪ್ರೀಂ ಕೋರ್ಟ್, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಗುರುತಿಸಿ, ಅವರನ್ನು ‘ರಕ್ಷಣಾ ಅಧಿಕಾರಿ’ಗಳು ಎಂದು ಘೋಷಿಸಬೇಕು ಎನ್ನುವ ಸೂಚನೆ ನೀಡಿದೆ. ಕೌಟುಂಬಿಕ ಹಿಂಸಾಚಾರ ಪ್ರಕರಣಗಳ ಸಂತ್ರಸ್ತರಿಗೆ ರಕ್ಷಣೆ ಒದಗಿಸುವ ಹೊಣೆಯು ಈ ಅಧಿಕಾರಿಗಳ ಮೇಲೆ ಇರುತ್ತದೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ, ಕಾಯ್ದೆಯು ಮಹಿಳೆಯರಿಗೆ ನೀಡಿರುವ ಹಕ್ಕುಗಳ ಬಗ್ಗೆ ಮಾಹಿತಿ ನೀಡುವ, ಕಾಯ್ದೆಗೆ ಅನುಗುಣವಾಗಿ ವಿವಿಧ ಸೇವೆಗಳ ನಡುವೆ ಸಮನ್ವಯ ಖಾತರಿಪಡಿಸುವ ಕೆಲಸವು ಈ ಅಧಿಕಾರಿಗಳದ್ದಾಗಿರುತ್ತದೆ. ಈ ಕೆಲಸಗಳೆಲ್ಲ ಆರು ವಾರಗಳಲ್ಲಿ ಪೂರ್ಣಗೊಳ್ಳಬೇಕು ಎಂದು ಕೋರ್ಟ್ ಹೇಳಿರುವುದು ಈ ವಿಚಾರದಲ್ಲಿ ಅದು ಬಹಳ ಗಂಭೀರವಾಗಿದೆ ಎಂಬುದನ್ನು ತೋರಿಸುತ್ತಿದೆ. ಈ ಕಾಯ್ದೆಯ ಅಡಿಯಲ್ಲಿ ಉಚಿತವಾಗಿ ಕಾನೂನಿನ ನೆರವು ಪಡೆಯುವ ಹಕ್ಕು ಮಹಿಳೆಯರಿಗೆ ಇರುತ್ತದೆ ಎಂಬ ಜಾಗೃತಿ ಮೂಡಿಸುವ ಕೆಲಸ ರಾಜ್ಯ ಕಾನೂನು ಸೇವಾ ಪ್ರಾಧಿಕಾರಗಳಿಂದ ಆಗಬೇಕಿದೆ, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದಿಂದ ರಾಜ್ಯಗಳಿಗೆ ಈ ಕುರಿತ ಸೂಚನೆ ರವಾನೆ ಆಗಬೇಕಿದೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
‘ವಿ ದಿ ವಿಮೆನ್ ಆಫ್ ಇಂಡಿಯಾ’ ಎನ್ನುವ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ ಪೀಠವು ಈ ನಿರ್ದೇಶನ ನೀಡಿದೆ. ಕಾಯ್ದೆಯನ್ನು ರೂಪಿಸಿ 15 ವರ್ಷಗಳು ಕಳೆದಿದ್ದರೂ ಅದರ ಅನುಷ್ಠಾನದಲ್ಲಿ ಸಮಸ್ಯೆಗಳು ಇವೆ ಎಂದು ಈ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಮಹಿಳೆಯರನ್ನು ಗುರಿಯಾಗಿಸಿಕೊಂಡು ನಡೆಯುವ ಅಪರಾಧ ಪ್ರಕರಣಗಳಲ್ಲಿ ಕೌಟುಂಬಿಕ ದೌರ್ಜನ್ಯವು ಬಹಳ ವ್ಯಾಪಕವಾಗಿದೆ ಎಂದು ದೂರಲಾಗಿತ್ತು. ಇಂತಹ ದೌರ್ಜನ್ಯಕ್ಕೆ ಗುರಿಯಾಗುವವರಿಗೆ ಕಾನೂನಿನ ನೆರವು ಸಿಗುವಂತೆ ಆಗಬೇಕು, ಅಗತ್ಯ ಇರುವವರಿಗೆ ಆಶ್ರಯ ಕೇಂದ್ರಗಳು ಸಿಗಬೇಕು ಎಂದು ಕೋರಲಾಗಿತ್ತು. ದೇಶದ ಎಲ್ಲ ಕಡೆಗಳಲ್ಲಿಯೂ ಕೌಟುಂಬಿಕ ದೌರ್ಜನ್ಯವು ಮಹಿಳೆಯರಿಗೆ ಬಹಳ ಗಂಭೀರವಾದ ಬೆದರಿಕೆಯಾಗಿ ಉಳಿದಿದೆ. ಅಧ್ಯಯನವೊಂದರ ಪ್ರಕಾರ, 15ರಿಂದ 49 ವರ್ಷ ವಯಸ್ಸಿನ ನಡುವೆ ಇರುವ ಮಹಿಳೆಯರ ಪೈಕಿ ಶೇ 31ರಷ್ಟು ಮಂದಿ, ದೈಹಿಕ, ಭಾವನಾತ್ಮಕ ಮತ್ತು ಲೈಂಗಿಕ ಹಲ್ಲೆ ಒಳಗೊಂಡಂತೆ ಒಂದಲ್ಲ ಒಂದು ಬಗೆಯಲ್ಲಿ ಕೌಟುಂಬಿಕ ದೌರ್ಜನ್ಯ ಅನುಭವಿಸಿರುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪ್ರತಿವರ್ಷ ಸಾವಿರಾರು ದೂರುಗಳು ಬರುತ್ತವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ನೂರಾರು ಸಂಖ್ಯೆಯ ಪ್ರಕರಣಗಳನ್ನು ಮಾತ್ರ ವರದಿ ಮಾಡುತ್ತದೆ. ಆದರೆ, ದೂರುಗಳು ಹಾಗೂ ಪ್ರಕರಣಗಳ ಸಂಖ್ಯೆಯು ವಾಸ್ತವ ಸ್ಥಿತಿಯನ್ನು ಬಿಂಬಿಸುವುದಿಲ್ಲ, ಅವು ಇಡೀ ಸಮಸ್ಯೆಯ ಒಂದು ಸಣ್ಣ ಭಾಗವನ್ನಷ್ಟೇ ತೋರಿಸುತ್ತವೆ ಎಂಬುದು ತಿಳಿದಿರಬೇಕು.
ಕೌಟುಂಬಿಕ ದೌರ್ಜನ್ಯಕ್ಕೆ ಮೂಲ ಕಾರಣಗಳು ಹಲವು. ಸಾಮಾಜಿಕ, ಆರ್ಥಿಕ ಹಾಗೂ ಇತರ ಹಲವು ಅಂಶಗಳು ಈ ಬಗೆಯ ದೌರ್ಜನ್ಯಕ್ಕೆ ಕಾರಣವಾಗುತ್ತಿವೆ. ಈ ಅಂಶಗಳು ಇಂತಹ ದೌರ್ಜನ್ಯಗಳಿಗೆ ಪ್ರತಿಕ್ರಿಯೆ ಏನಿರುತ್ತದೆ ಎಂಬುದರ ಮೇಲೆಯೂ ಪ್ರಭಾವ ಬೀರುತ್ತವೆ. ಮಹಿಳೆಯರು ಕಾನೂನಿನ ನೆರವು ಪಡೆದುಕೊಳ್ಳುವಲ್ಲಿ, ಕುಟುಂಬಗಳು ಹಾಗೂ ಸಮಾಜವು ಇಂತಹ ದೌರ್ಜನ್ಯಕ್ಕೆ ಪ್ರತಿಕ್ರಿಯಿಸುವುದರಲ್ಲಿ ಈ ಅಂಶಗಳ ಪ್ರಭಾವ ಇರುತ್ತದೆ. ದೌರ್ಜನ್ಯಕ್ಕೆ ಪ್ರತಿರೋಧ ಒಡ್ಡಲು, ಕಾನೂನು ಹಾಗೂ ಇತರ ಮಾರ್ಗಗಳ ಮೂಲಕ ಅದನ್ನು ಎದುರಿಸಲು ಕೆಲವೇ ಕೆಲವು ಮಹಿಳೆಯರಿಗೆ ಮಾತ್ರ ಸಾಧ್ಯವಾಗುತ್ತಿದೆ. ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ನಡೆದಿರುವುದರಲ್ಲಿ, ಅವುಗಳು ವರದಿಯಾಗಿರುವ ವಿಚಾರದಲ್ಲಿ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸ ಇದೆ. ಆದರೆ, ತುಲನಾತ್ಮಕ ಅಂಕಿ–ಅಂಶಗಳು ಸಂಪೂರ್ಣವಾಗಿ ವಿಶ್ವಾಸಾರ್ಹ ಆಗಿಲ್ಲದಿರಬಹುದು. ಕೆಲವು ವರದಿಗಳ ಪ್ರಕಾರ ಇಂತಹ ದೌರ್ಜನ್ಯಗಳು ಕರ್ನಾಟಕದಲ್ಲಿ ಬಹಳ ಹೆಚ್ಚಿವೆ. ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನ ಮಾತ್ರವೇ ಇಂತಹ ದೌರ್ಜನ್ಯವನ್ನು ಕಡಿಮೆ ಮಾಡಲು ಇರುವ ಮಾರ್ಗೋಪಾಯ. ಇಂತಹ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ಹಾಗೂ ಇತರ ನ್ಯಾಯಾಲಯಗಳು ಈ ಹಿಂದೆಯೂ ಬಹಳ ಗಂಭೀರವಾಗಿ ಪರಿಗಣಿಸಿವೆ. ಈಗ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಗಳು, ನ್ಯಾಯಾಂಗವು ಈ ಬಗೆಯ ದೌರ್ಜನ್ಯಗಳ ವಿಚಾರದಲ್ಲಿ ಬಹಳ ಗಂಭೀರವಾಗಿದೆ ಎಂಬುದನ್ನು ತೋರಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.