ADVERTISEMENT

ಸಂಪಾದಕೀಯ | ಬೀದಿ ನಾಯಿಗಳ ನಿಯಂತ್ರಣ; ಸಹಾನುಭೂತಿಯ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 23:39 IST
Last Updated 25 ಆಗಸ್ಟ್ 2025, 23:39 IST
<div class="paragraphs"><p>.ಸಂಪಾದಕೀಯ</p></div>

.ಸಂಪಾದಕೀಯ

   

ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಮಾರ್ಪಾಡು ಮಾಡಿರುವುದು ಸ್ವಾಗತಾರ್ಹ. ಹಿಂದಿನ ಆದೇಶವು ಅಮಾನವೀಯ, ಅವಾಸ್ತವಿಕ ಎನ್ನುವ ಟೀಕೆಗಳು ಇದ್ದವು. ಈಗ ತ್ರಿಸದಸ್ಯ ಪೀಠವು ನೀಡಿರುವ ಸೂಚನೆಗಳು ಹೆಚ್ಚು ಸುಧಾರಿತ ರೂಪದಲ್ಲಿವೆ. ಬೀದಿ ನಾಯಿಗಳಿಂದ ಆಗುತ್ತಿರುವ ಸಮಸ್ಯೆಯನ್ನು ಹೆಚ್ಚು ಸಮತೋಲನದಿಂದ ನೋಡುವ ಕೆಲಸವನ್ನು ಈ ಪೀಠವು ಮಾಡಿದೆ. ಬೀದಿ ನಾಯಿಗಳಿಂದ ಆಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದ್ದ ಈ ಮೊದಲಿನ ಆದೇಶವು, ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದ ವ್ಯಾಪ್ತಿಯಲ್ಲಿನ ಎಲ್ಲ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರ ಮಾಡಬೇಕು ಎಂದು ಹೇಳಿತ್ತು. ಈ ಸೂಚನೆಯು ಸಮಸ್ಯೆಯನ್ನು ಪರಿಹರಿಸುವಂತೆ ಇರಲಿಲ್ಲ. ಏಕೆಂದರೆ, ಬೀದಿ ನಾಯಿಗಳನ್ನು ಸ್ಥಳಾಂತರ ಮಾಡಿದ ನಂತರದಲ್ಲಿ ಅಲ್ಲಿಗೆ ಬೇರೆಡೆಯಿಂದ ಬೀದಿ ನಾಯಿಗಳು ಬಂದು ನೆಲಸುವ ಸಾಧ್ಯತೆ ಇತ್ತು. ಈಗ ಸುಪ್ರೀಂ ಕೋರ್ಟ್, ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿರುವ ಹಾಗೂ ಮಾನವೀಯವಾದ ನೆಲೆಯಲ್ಲಿ ಸೂಚನೆಗಳನ್ನು ನೀಡಿದೆ. ಬೀದಿ ನಾಯಿಗಳಿಗೆ ಲಸಿಕೆ ನೀಡಬೇಕು, ಅವುಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಬೇಕು, ನಂತರ ಆ ನಾಯಿಗಳನ್ನು ಅವುಗಳ ವಾಸಸ್ಥಾನಕ್ಕೆ ತಂದುಬಿಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ. ಆದರೆ, ರೇಬಿಸ್ ಇರುವ ಹಾಗೂ ತೀರಾ ವ್ಯಗ್ರವಾದ ವರ್ತನೆಯನ್ನು ತೋರುವ ನಾಯಿಗಳನ್ನು ವಾಪಸ್ ತಂದು ಬೀದಿಯಲ್ಲಿ ಬಿಡುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಅಂತಹ ನಾಯಿಗಳನ್ನು ಆಶ್ರಯತಾಣಗಳಲ್ಲಿಯೇ ಇರಿಸಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳಿಗೆ ಆಹಾರ ನೀಡುವುದಕ್ಕೆ ಕೋರ್ಟ್ ನಿಷೇಧ ವಿಧಿಸಿದೆ. ಈ ಕೆಲಸಕ್ಕೆ ಜಾಗ ಗೊತ್ತುಮಾಡಬೇಕು ಎಂದು ಸೂಚನೆ ನೀಡಿದೆ.

ಬೀದಿ ನಾಯಿಗಳಿಂದ ಸೃಷ್ಟಿಯಾಗುವ ಅಪಾಯಗಳನ್ನು ಹೊಸ ಆದೇಶವು ಗುರುತಿಸಿದೆ. ಅದೇ ಸಂದರ್ಭದಲ್ಲಿ ಶ್ವಾನಪ್ರಿಯರ ಕಳವಳಗಳಿಗೆ ಕಿವಿಗೊಡುವ ಕೆಲಸವನ್ನೂ ಮಾಡಿದೆ. ಪ್ರಾಣಿಗಳ ಜನನ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಗಳು ಈಗಾಗಲೇ ಜಾರಿಯಲ್ಲಿ ಇವೆ, ಅವುಗಳ ಪರಿಣಾಮಕಾರಿ ಅನುಷ್ಠಾನದ ಕೆಲಸ ಆಗಬೇಕಿದೆ. ಹೊಸ ಆದೇಶದ ವ್ಯಾಪ್ತಿಯು ದೊಡ್ಡದಿದೆ, ಅದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುತ್ತದೆ. ಸ್ಥಳೀಯ ಆಡಳಿತ ಸಂಸ್ಥೆಗಳು ಪ್ರಾಣಿಗಳ ಜನನ ನಿಯಂತ್ರಣ (ಎಬಿಸಿ) ನಿಯಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಅಗತ್ಯವಿರುವ ಸಂಪನ್ಮೂಲ ತಮ್ಮಲ್ಲಿ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಒದಗಿಸಬೇಕು ಎಂದು ಕೋರ್ಟ್ ಸೂಚಿಸಿದೆ. ತಮ್ಮ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಲಭ್ಯವಿರುವ ಆಶ್ರಯ ತಾಣಗಳು ಎಷ್ಟು, ಪಶು ಚಿಕಿತ್ಸಕರು, ನಾಯಿಗಳನ್ನು ಹಿಡಿಯುವ ಸಿಬ್ಬಂದಿ ಸಂಖ್ಯೆ, ಬೋನುಗಳು ಹಾಗೂ ಅವುಗಳನ್ನು ಹಿಡಿಯಲು ಲಭ್ಯವಿರುವ ವಾಹನಗಳ ಸಂಖ್ಯೆ ಎಷ್ಟು ಎಂಬುದನ್ನೂ ಅವು ತಿಳಿಸಬೇಕಿದೆ. ಆದರೆ, ನ್ಯಾಯಾಲಯದ ಸೂಚನೆಗಳ ಅನುಸಾರವಾಗಿ ಬೀದಿ ನಾಯಿಗಳನ್ನು ನಿಯಂತ್ರಿಸಲು ಬೇಕಿರುವ ಸಂಪನ್ಮೂಲವು ಹಲವು ಸ್ಥಳೀಯ ಆಡಳಿತ ಸಂಸ್ಥೆಗಳ ಬಳಿ ಇಲ್ಲ ಎಂಬುದು ವಾಸ್ತವ. ಬೀದಿಗಳಲ್ಲಿ ನಾಯಿಗಳನ್ನು ಹಿಡಿಯುವುದು, ಅವುಗಳಿಗೆ ಲಸಿಕೆ ನೀಡುವುದು, ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಹಾಗೂ ಅವುಗಳನ್ನು ಮತ್ತೆ ಮೂಲ ಸ್ಥಳಕ್ಕೆ ತಂದುಬಿಡಲು ಬಹಳಷ್ಟು ಶ್ರಮ ಹಾಗೂ ಹಣದ ಅಗತ್ಯ ಇರುತ್ತದೆ. ಈಗಿರುವ ನಿಯಮಗಳು ಯಾವ ಪ್ರಕ್ರಿಯೆ ಅನುಸರಿಸಬೇಕು ಎಂಬುದನ್ನು ಹೇಳುತ್ತವೆಯಾದರೂ, ಆ ನಿಯಮಗಳನ್ನು ಪಾಲಿಸುವ ಕೆಲಸ ಆಗುತ್ತಿಲ್ಲ.

ADVERTISEMENT

ದೆಹಲಿಯೊಂದರಲ್ಲೇ ಸರಿಸುಮಾರು 10 ಲಕ್ಷ ಬೀದಿ ನಾಯಿಗಳು ಇವೆ. ದೇಶದಲ್ಲಿ ಅವುಗಳ ಸಂಖ್ಯೆ ಕೋಟಿಯನ್ನು ದಾಟಬಹುದು. ಕೋರ್ಟ್‌ನ ಆದೇಶವನ್ನು ಅನುಷ್ಠಾನಕ್ಕೆ ತರಲು ನಗರ ಆಡಳಿತ ಸಂಸ್ಥೆಗಳಿಗೆ ಹೆಚ್ಚಿನ ನೆರವಿನ ಅಗತ್ಯ ಎದುರಾಗಬಹುದು. ಬೀದಿ ನಾಯಿಗಳಿಗೆ ಆಹಾರ ನೀಡಲು ಪ್ರತ್ಯೇಕವಾದ ಸ್ಥಳವನ್ನು ಗುರುತಿಸುವುದು ಹಾಗೂ ಆ ಸ್ಥಳದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು ಸುಲಭದ ಕೆಲಸವಲ್ಲ. ನಾಯಿಗಳಿಗೆ ಬೀದಿಯಲ್ಲಿ ಆಹಾರ ಕೊಡುವುದನ್ನು ಕೋರ್ಟ್‌ ನಿಷೇಧಿಸಿದೆಯಾದರೂ, ಅದು ಅನುಷ್ಠಾನಕ್ಕೆ ಬರಲು ಸಮಯ ಬೇಕಾಗುತ್ತದೆ. ‘ವ್ಯಗ್ರ ಸ್ವಭಾವದ ನಾಯಿಗಳನ್ನು’ ಹೇಗೆ ವ್ಯಾಖ್ಯಾನಿಸಲಾಗುತ್ತದೆ ಎಂಬುದು ಸ್ಪಷ್ಟವಿಲ್ಲ. ಘನ ತ್ಯಾಜ್ಯದ ಸರಿಯಾದ ನಿರ್ವಹಣೆಯು ಬೀದಿ ನಾಯಿಗಳ ಸಮಸ್ಯೆಯ ಪರಿಣಾಮಕಾರಿ ನಿರ್ವಹಣೆಗೆ ಒಂದು ಕ್ರಮವಾಗಬಹುದು. ಇದಕ್ಕೆ ಹೆಚ್ಚಿನ ಗಮನ ನೀಡಬೇಕು. ಪ್ರಾಣಿಗಳಿಂದ ಉಂಟಾಗುವ ಸಮಸ್ಯೆಯನ್ನು ಪರಿಹರಿಸುವಲ್ಲಿ ಸಹಾನುಭೂತಿಯ ಅಗತ್ಯವನ್ನು ಕೋರ್ಟ್‌ನ ಈ ಆದೇಶವು ಗುರುತಿಸಿದೆ. ಹೀಗಾಗಿ ಈ ಆದೇಶವು ಸ್ವಾಗತಾರ್ಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.