ಶಿಕ್ಷಣ ಸಂಸ್ಥೆಗಳು ಹಾಗೂ ಕೋಚಿಂಗ್ ಸೆಂಟರ್‌ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗಟ್ಟಲು ಅಗತ್ಯವಾದ ಸಮರ್ಪಕ ಕಾನೂನು ಮತ್ತು ನಿಯಂತ್ರಣ ವ್ಯವಸ್ಥೆ ಇಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಮೂಲಕ, ಸ್ಪರ್ಧಾತ್ಮಕ ಶಿಕ್ಷಣದ ಹೆಸರಿನಲ್ಲಿ ವಿದ್ಯಾರ್ಥಿಗಳ ಮೇಲೆ ಅತೀವ ಒತ್ತಡ ಹೇರಲಾಗುತ್ತಿದೆ ಎಂದು ಧ್ವನಿ ಎತ್ತುತ್ತಲೇ ಇರುವ ಪ್ರಜ್ಞಾವಂತರ ಅಭಿಪ್ರಾಯಕ್ಕೆ ಬಲ ಬಂದಂತಾಗಿದೆ. ವಿದ್ಯಾರ್ಥಿಗಳನ್ನು ಆತ್ಮಹತ್ಯೆ ನಿರ್ಧಾರಕ್ಕೆ ದೂಡುವಂತಹ ಮಾನಸಿಕ ಒತ್ತಡವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ದೇಶದ ಎಲ್ಲ ಭಾಗಗಳಿಗೆ ಅನ್ವಯವಾಗುವಂತೆ ಹದಿನೈದು ಅಂಶಗಳ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸಂಬಂಧಪಟ್ಟ ಪ್ರಾಧಿಕಾರವು ಸೂಕ್ತ ಕಾನೂನು ಮತ್ತು ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವವರೆಗೂ ತಾನು ಹೊರಡಿಸಿರುವ ಮಾರ್ಗಸೂಚಿಗಳು ಜಾರಿ ಯಲ್ಲಿರಲಿವೆ ಎಂದು ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠ ಹೇಳಿದೆ. ‘ಕೋವಿಡ್–19’ರ ಸಮಯದಲ್ಲಿ ಹಾಗೂ ಆ ಬಳಿಕ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಶಿಕ್ಷಣ ಸಚಿವಾಲಯವು ‘ಮನೋದರ್ಪಣ’ ಕಾರ್ಯಕ್ರಮ ಆರಂಭಿಸಿತ್ತು. ಶಾಲಾ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಗಟ್ಟುವ ಉದ್ದೇಶದಿಂದ 2023ರಲ್ಲಿ ‘ಉಮ್ಮೀದ್’ ಕಾರ್ಯಕ್ರಮ ಜಾರಿಗೊಂಡಿತ್ತು. ಈ ಎರಡೂ ಕಾರ್ಯಕ್ರಮಗಳ ಜೊತೆಗೆ ‘ಆತ್ಮಹತ್ಯೆ ತಡೆ ರಾಷ್ಟ್ರೀಯ ಕಾರ್ಯತಂತ್ರ’ದಲ್ಲಿ ಇರುವ ಅಂಶಗಳನ್ನೂ ಪರಿಗಣಿಸಿ, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಏಕರೂಪದ ನೀತಿಯನ್ನು ಅಳವಡಿಸಿಕೊಳ್ಳುವಂತೆ ಶಿಕ್ಷಣ ಸಂಸ್ಥೆಗಳಿಗೆ ನ್ಯಾಯಪೀಠ ನಿರ್ದೇಶಿಸಿದೆ. ಪ್ರತಿವರ್ಷವೂ ಪರಿಷ್ಕಾರಗೊಳ್ಳಬೇಕಾದ ಈ ನೀತಿಯನ್ನು ಎಲ್ಲ ಶಿಕ್ಷಣ ಸಂಸ್ಥೆಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ಹಾಗೂ ಸೂಚನಾ ಫಲಕಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಕಟಿಸಬೇಕು ಎಂದೂ ಹೇಳಿದೆ. ಈ ಮಾರ್ಗಸೂಚಿಗಳ ಅನುಷ್ಠಾನಕ್ಕಾಗಿ ತೆಗೆದುಕೊಂಡಿರುವ ಕ್ರಮಗಳು ಮತ್ತು ಅದರ ಮೇಲ್ವಿಚಾರಣೆಗೆ ಮಾಡಿರುವ ವ್ಯವಸ್ಥೆಗಳಿಗೆ ಸಂಬಂಧಿಸಿದ ಪ್ರಮಾಣ ಪತ್ರವನ್ನು ತೊಂಬತ್ತು ದಿನಗಳ ಒಳಗೆ ಸಲ್ಲಿಸುವಂತೆಯೂ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನೂರು ಅಥವಾ ಅದಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳು ಕನಿಷ್ಠ ಒಬ್ಬ ಮನಃಶಾಸ್ತ್ರಜ್ಞ, ಆಪ್ತ ಸಮಾಲೋಚಕ ಅಥವಾ ಮಕ್ಕಳ ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯದ ಬಗ್ಗೆ ತಿಳಿವಳಿಕೆ ಹೊಂದಿರುವ ಸಮಾಜ ಸೇವಕನನ್ನು ಹೊಂದಿರಬೇಕು. ನೂರಕ್ಕೂ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಸಂಸ್ಥೆಗಳು ಮಾನಸಿಕ ಆರೋಗ್ಯ ವೃತ್ತಿಪರರೊಂದಿಗೆ ಸಂಪರ್ಕದಲ್ಲಿದ್ದು, ಅವರ ಸೇವೆ ಬಳಸಿಕೊಳ್ಳಬೇಕು. ಕೋಚಿಂಗ್ ಸೆಂಟರ್‌ಗಳು ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸಾಧನೆ, ಅಂಕಗಳ ಆಧಾರದಲ್ಲಿ ವಿದ್ಯಾರ್ಥಿಗಳನ್ನು ತಂಡಗಳನ್ನಾಗಿ ವಿಂಗಡಿಸಿ, ಅವಮಾನಕ್ಕೆ ಗುರಿಪಡಿಸಬಾರದು. ಲೈಂಗಿಕ ದೌರ್ಜನ್ಯ, ಕಿರುಕುಳ, ರ್‍ಯಾಗಿಂಗ್ ಮತ್ತು ಜಾತಿ, ವರ್ಗ, ಲಿಂಗ, ಅಂಗವೈಕಲ್ಯ, ಧರ್ಮ ಅಥವಾ ಜನಾಂಗೀಯತೆಯ ಆಧಾರದ ಮೇಲೆ ನಡೆಯುವ ಶೋಷಣೆ, ತಾರತಮ್ಯವನ್ನು ತಡೆಗಟ್ಟಲು ಶಿಕ್ಷಣ ಸಂಸ್ಥೆಗಳು ದೃಢವಾದ, ಗೋಪ್ಯವಾದ ಮತ್ತು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವ ಕಾರ್ಯವಿಧಾನಗಳನ್ನು ರೂಪಿಸಬೇಕು ಎನ್ನುವುದು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಸೇರಿವೆ. ಸಂಸ್ಥೆಯ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡರೆ, ಅದನ್ನು ಸಾಂಸ್ಥಿಕ ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದೂ ನ್ಯಾಯಪೀಠ ಎಚ್ಚರಿಸಿದೆ.
ಮಕ್ಕಳನ್ನು ಮಾನಸಿಕವಾಗಿ ಸಬಲಗೊಳಿಸುವುದು ಹಾಗೂ ಮನೋವಿಕಾಸದೊಂದಿಗೆ ಸದೃಢ ವ್ಯಕ್ತಿತ್ವ ರೂಪಿಸುವುದು ಶಿಕ್ಷಣದ ಪ್ರಾಥಮಿಕ ಉದ್ದೇಶವಾಗಿದೆ. ಬದುಕಿನ ದುರ್ಬರ ಗಳಿಗೆಗಳನ್ನು ಎದುರಿಸಲು ಅಗತ್ಯವಾದ ಮನೋಬಲ ಶಾಲಾ– ಕಾಲೇಜುಗಳ ಮೂಲಕ ವಿದ್ಯಾರ್ಥಿಗಳಿಗೆ ದೊರೆಯಬೇಕು. ದುರದೃಷ್ಟವಶಾತ್, ಇದಕ್ಕೆ ವಿರುದ್ಧವಾದ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ನಿರಂತರವಾಗಿ ವರದಿಯಾಗುತ್ತಿವೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳ ಜೊತೆಗೆ, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ದೊರಕಿಸಿಕೊಡುವ ಸಿಇಟಿ– ನೀಟ್ ಪರೀಕ್ಷೆಗಳು ವಿದ್ಯಾರ್ಥಿಗಳ ಮೇಲೆ ಅಪಾರ ಒತ್ತಡ ಸೃಷ್ಟಿಸಿವೆ. ಕಾಲೇಜು ಹಾಗೂ ಕೋಚಿಂಗ್ ಕೇಂದ್ರಗಳ ನಡುವಿನ ವ್ಯತ್ಯಾಸ ತೆಳುವಾಗುತ್ತಿದೆ. ಕೋಚಿಂಗ್ ಕೇಂದ್ರಗಳ ಕಾರ್ಖಾನೆ ಎಂದೇ ಪ್ರಸಿದ್ಧವಾದ ರಾಜಸ್ಥಾನದ ಕೋಟಾ, ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಯ ಕಾರಣದಿಂದ ಆಗಾಗ ಸುದ್ದಿಯಲ್ಲಿರುತ್ತದೆ. ಶೈಕ್ಷಣಿಕ ಸಂಸ್ಥೆಗಳು ಹಾಗೂ ಕೋಚಿಂಗ್ ಕೇಂದ್ರಗಳಲ್ಲಿ, ವಿದ್ಯಾರ್ಥಿಗಳ ಜೀವಕ್ಕೆ ಗಾಸಿ ಆಗಬಹುದಾದ ಒತ್ತಡದ ಪರಿಸ್ಥಿತಿ ತಿಳಿಗೊಳ್ಳಲು ಸುಪ್ರೀಂ ಕೋರ್ಟ್ ನಿರ್ದೇಶನವು ಅವಕಾಶ ಕಲ್ಪಿಸಬೇಕು. ಮಾನಸಿಕ ಆರೋಗ್ಯವು ಬದುಕುವ ಹಕ್ಕಿನ ಅಂತರ್ಗತ ಭಾಗ ಎನ್ನುವ ಸುಪ್ರೀಂ ಕೋರ್ಟ್ ಮಾತಿಗೆ ವಿದ್ಯಾಸಂಸ್ಥೆಗಳು ಕಿವಿಗೊಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.