ADVERTISEMENT

ಸಂಪಾದಕೀಯ: ಪೂಂಛ್‌ನಲ್ಲಿ ಉಗ್ರರ ದಾಳಿ– ಎಚ್ಚರಿಕೆಯ ಗಂಟೆ

ಸಂಪಾದಕೀಯ
Published 25 ಏಪ್ರಿಲ್ 2023, 20:31 IST
Last Updated 25 ಏಪ್ರಿಲ್ 2023, 20:31 IST
ಸಂಪಾದಕೀಯ
ಸಂಪಾದಕೀಯ   

ಜಮ್ಮುವಿನ ಪೂಂಛ್‌ನಲ್ಲಿ ಸೇನೆಯ ಟ್ರಕ್ಕೊಂದರ ಮೇಲೆ ಕಳೆದ ವಾರ ನಡೆದ ದಾಳಿಯಲ್ಲಿ ಐದು ಮಂದಿ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಉಪಟಳವು ಇಂದಿಗೂ ಬಹಳ ಗಂಭೀರವಾಗಿದೆ ಎಂಬುದನ್ನು ಇದು ನೆನಪಿಸಿಕೊಡುವಂತೆ ಇದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಕೃತ್ಯಗಳನ್ನು ನಿಯಂತ್ರಿಸಲಾಗಿದೆ ಎಂಬ ಹೇಳಿಕೆಗಳನ್ನು ನೀಡಲು ಕಾಲ ಪಕ್ವವಾಗಿಲ್ಲ ಎಂಬುದನ್ನು ಇಂತಹ ದಾಳಿಗಳು ಹೇಳುತ್ತವೆ. ಭದ್ರತೆಯು ಅತ್ಯುನ್ನತ ಮಟ್ಟದಲ್ಲಿ ಇರುವ ಗಡಿ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಈ ಪ್ರದೇಶದಲ್ಲಿ ಸೇನೆಯ ಕಡೆಯಿಂದ ಗಸ್ತು ಬಹಳ ತೀವ್ರವಾಗಿ ಇರುತ್ತದೆ. ಅಲ್ಲದೆ, ಅಲ್ಲಿನ ಪೊಲೀಸರು ಕೂಡ ಹದ್ದಿನ ಕಣ್ಣಿಟ್ಟು ಕಾಯುತ್ತಿರುತ್ತಾರೆ. ಪಾಕಿಸ್ತಾನದ ಕಡೆಯಿಂದ ನುಸುಳುಕೋರರು ಭಾರತದೊಳಕ್ಕೆ ನುಗ್ಗಲು ಯತ್ನ ನಡೆಸಿದ್ದಾರೆ ಎಂದು ಸೇನೆಯು ಹೇಳಿದೆ. ಅದರಲ್ಲೂ ಮುಖ್ಯವಾಗಿ ಪೀರ್ ಪಂಜಾಲ್ ಪರ್ವತ ಸಾಲಿನ ದಕ್ಷಿಣಕ್ಕೆ ಇಂತಹ ಯತ್ನಗಳು ನಡೆದಿವೆ ಎಂದು ಸೇನೆ ತಿಳಿಸಿದೆ. ದಾಳಿಯ ಹಿಂದೆ ಇರುವ ಉಗ್ರಗಾಮಿ ಸಂಘಟನೆ ಯಾವುದು, ಯಾವ ವ್ಯಕ್ತಿಗಳ ಕೈವಾಡ ಇಲ್ಲಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಈ ದಾಳಿಯ ಹೊಣೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ. ಭಯೋತ್ಪಾದಕರು, ಉಗ್ರಗಾಮಿಗಳ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿ ಗಸ್ತು ನಡೆಸುತ್ತಿದ್ದ ಸೇನಾ ವಾಹನವೇ ದಾಳಿಗೆ ತುತ್ತಾಗಿರುವುದು ಕಳವಳಕಾರಿ ಸಂಗತಿ.

ಜನವರಿಯಲ್ಲಿ ರಜೌರಿಯಲ್ಲಿ ಉಗ್ರಗಾಮಿಗಳು ಆರು ಮಂದಿ ನಾಗರಿಕರನ್ನು ಹತ್ಯೆ ಮಾಡಿದ್ದರು. ಸೇನಾ ಟ್ರಕ್‌ ಮೇಲೆ ನಡೆದಿರುವುದು, ಇದಾದ ನಂತರದಲ್ಲಿನ ಪ್ರಮುಖ ದಾಳಿ. ನವದೆಹಲಿಯಲ್ಲಿ ಕಳೆದ ವಾರ ನಡೆದ ಸೇನಾ ಕಮಾಂಡರ್‌ಗಳ ಸಮಾವೇಶವು ದೇಶದ ಆಂತರಿಕ ಹಾಗೂ ಗಡಿಯಲ್ಲಿನ ಭದ್ರತೆಗೆ ಸಂಬಂಧಿಸಿ ವಿಸ್ತೃತ ಚರ್ಚೆ ನಡೆಸಿತ್ತು. ಸಮಾವೇಶದಲ್ಲಿ ಮಾತನಾಡಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಕೇಂದ್ರಾಡಳಿತ ಪ್ರದೇಶದಲ್ಲಿ ಸೇನೆ ನಡೆಸುತ್ತಿರುವ ಕಾರ್ಯಾಚರಣೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಜನರನ್ನು ಪ್ರತಿನಿಧಿಸುವ ಸರ್ಕಾರ ವರ್ಷಗಳಿಂದ ಇಲ್ಲ ಎಂಬುದನ್ನು ಗಮನಿಸಬೇಕು. ಅಲ್ಲಿನ ವಿಧಾನಸಭೆಗೆ ಚುನಾವಣೆ ನಡೆಸುವ ಭರವಸೆಗಳನ್ನು ನೀಡಲಾಗಿದೆಯಾದರೂ, ಚುನಾವಣೆ ನಡೆಯುವ ಸೂಚನೆಗಳು ಇಲ್ಲ. ಅಲ್ಲಿನ ಜನರ ಆಕಾಂಕ್ಷೆಗಳಿಗೆ ಸ್ಪಂದಿಸಲು ರಾಜಕೀಯ ಪ್ರಕ್ರಿಯೆಯೆಂಬುದು ನಡೆಯುತ್ತಿಲ್ಲ. ಚುನಾಯಿತ ಸರ್ಕಾರದ ರೀತಿಯಲ್ಲಿ ಕೆಲಸ ಮಾಡಲು ಸೇನೆಗಾಗಲೀ ಪೊಲೀಸರಿಗಾಗಲೀ ಸಾಧ್ಯವಿಲ್ಲ. ಅಲ್ಲದೆ, ಹಲವು ಸಂದರ್ಭಗಳಲ್ಲಿ ಸೇನೆ ಮತ್ತು ಪೊಲೀಸರಿಗೆ ಸ್ಥಳೀಯರ ಜೊತೆ ಉತ್ತಮ ಒಡನಾಟ ಇರುವುದಿಲ್ಲ. ಅಧಿಕಾರಿಶಾಹಿಯ ಆಡಳಿತವನ್ನು ಬಹುಕಾಲ ಮುಂದುವರಿಸುವುದು ಅಲ್ಲಿನ ಜನರಲ್ಲಿ ‍ಪ್ರತ್ಯೇಕತೆಯ ಭಾವವನ್ನು ಮೂಡಿಸಬಹುದು. ಇದು ಅಲ್ಲಿ ಉಗ್ರವಾದಕ್ಕೆ ಆಸ್ಪದ ಮಾಡಿಕೊಡಬಹುದು.

ಜಿ20 ಗುಂಪಿನ ಅಧ್ಯಕ್ಷತೆಯನ್ನು ಈಗ ಭಾರತ ವಹಿಸಿಕೊಂಡಿದೆ. ಈ ಗುಂಪಿನ ಪ್ರವಾಸೋದ್ಯಮ ಕಾರ್ಯಕಾರಿ ಗುಂಪಿನ ಸಭೆಯು ಮುಂದಿನ ತಿಂಗಳು ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿಯೂ ಈಗ ನಡೆದಿರುವ ದಾಳಿಯು ಮಹತ್ವ ಪಡೆಯುತ್ತದೆ. ಶಾಂಘೈ ಸಹಕಾರ ಸಂಘಟನೆಯ (ಎಸ್‌ಸಿಒ) ವಿದೇಶಾಂಗ ಸಚಿವರ ಪರಿಷತ್ತಿನ ಗೋವಾ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಪಾಲ್ಗೊಳ್ಳುತ್ತಾರೆ ಎಂಬ ಘೋಷಣೆ ಹೊರಬಿದ್ದ ನಂತರದಲ್ಲಿ ಈ ದಾಳಿ ನಡೆದಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧದಲ್ಲಿ ಯಾವುದೇ ಬಗೆಯ ಒಳ್ಳೆಯ ಬೆಳವಣಿಗೆ ಆದಾಗಲೆಲ್ಲ ಭಯೋತ್ಪಾದಕರಿಂದ ದಾಳಿಗಳು ಈ ಹಿಂದೆಯೂ ಆಗಿವೆ. ಭಯೋತ್ಪಾದಕರಿಗೆ ಇರುವ ಗುರಿಗಳು ಹಲವು. ಅವುಗಳನ್ನು ಬದ್ಧತೆಯಿಂದ, ಚಾಣಾಕ್ಷತನದಿಂದ ಮತ್ತು ರಾಜಕಾರಣದ ಮೂಲಕ ಎದುರಿಸಬೇಕು. ಭಯೋತ್ಪಾದಕ ಚಟುವಟಿಕೆಗಳಿಗೆ ಪೂರಕವಾಗದಂತಹ ವಾತಾವರಣವನ್ನು ಸರ್ಕಾರ ಸೃಷ್ಟಿ ಮಾಡಬೇಕು. ಗಡಿ ಪ್ರದೇಶಗಳು ಮತ್ತೆ ಭಯೋತ್ಪಾದನೆಗೆ ಆಸ್ಪದ ಕೊಡುವಂತೆ ಆಗಿವೆ ಎಂಬ ಆತಂಕ ಒಂದೆಡೆ ವ್ಯಕ್ತವಾಗಿದೆ. ಗಡಿ ಮಾತ್ರವೇ ಅಲ್ಲದೆ, ಗಡಿಗೆ ಸನಿಹವಿರುವ ಪ್ರದೇಶಗಳು ಕೂಡ ಸುರಕ್ಷಿತವಾಗಿರುವಂತೆ ಮಾಡಲು ಕ್ರಮ ಕೈಗೊಳ್ಳಬೇಕು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.