ADVERTISEMENT

ಸಂಪಾದಕೀಯ | ಕೊರೊನಾ ಸೋಲಿಸಿದ ಕ್ರೀಡೆ ಇತರರಿಗೂ ಸ್ಫೂರ್ತಿಯಾಗಲಿ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 3:20 IST
Last Updated 18 ಜುಲೈ 2020, 3:20 IST
.
.   

ಇಡೀ ಜಗತ್ತು ಈಗ ಕೊರೊನಾ ಬಿಕ್ಕಟ್ಟಿನಿಂದ ಬಿಡುಗಡೆ ಹೊಂದುವ ಹಾದಿಯ ಹುಡುಕಾಟದಲ್ಲಿದೆ. ಇಂತಹ ಸನ್ನಿವೇಶದಲ್ಲಿ ಇಂಗ್ಲೆಂಡ್‌ ಹಾಗೂ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ತಂಡಗಳು ಟೆಸ್ಟ್‌ ಪಂದ್ಯ ಆಡುವಂತಹ ದಿಟ್ಟತನವನ್ನು ಪ್ರದರ್ಶಿಸುವ ಮೂಲಕ ಜಗತ್ತಿಗೆ ಹಾಯ್‌ ಎನಿಸುವಂತಹ ಸುದ್ದಿಯನ್ನು ನೀಡಿವೆ. ಇಷ್ಟಕ್ಕೂ ಕ್ರೀಡೆ ಎಂದರೆ ಸ್ಫೂರ್ತಿಯ ಚಿಲುಮೆ ತಾನೇ? ಸಾವು, ನೋವಿನ ವರ್ತಮಾನಗಳಿಂದ ರೋಸಿಹೋಗಿದ್ದ ಮನಸ್ಸುಗಳಿಗೆ ಈ ಕ್ರಿಕೆಟ್‌ ಟೆಸ್ಟ್‌ ಸರಣಿ ನವೋತ್ಸಾಹ ತುಂಬುತ್ತಿರುವುದು ಸುಳ್ಳಲ್ಲ. ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿರುವ ರೋಸ್ ಬೌಲ್‌ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯ ಆ ಮಟ್ಟಿಗೆ ಐತಿಹಾಸಿಕವಾದುದೇ.ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದರೂ ನಿಜವಾಗಿ ಜಯಶಾಲಿ ಆಗಿರುವುದು ಕ್ರೀಡೆ.

ಇಂಗ್ಲೆಂಡ್‌ನಲ್ಲಿ ಈ ಸರಣಿ ನಡೆಯುತ್ತಿರುವ ಸಂದರ್ಭವಾದರೂ ಎಂತಹದ್ದು? ಸೋಂಕಿನಿಂದ ಆ ದೇಶದಲ್ಲಿ 45 ಸಾವಿರಕ್ಕೂ ಹೆಚ್ಚು ಜನ ಅಸುನೀಗಿದ್ದಾರೆ. ಇಡೀ ಯುರೋಪ್‌ ಸೇರಿದಂತೆ ಜಗತ್ತಿನ ಎಲ್ಲ ದೇಶಗಳ ಅರ್ಥವ್ಯವಸ್ಥೆ ಮುಗ್ಗರಿಸಿದೆ. ಈ ಪರಿಸ್ಥಿತಿಯಲ್ಲಿ ಇಂಥದ್ದೊಂದು ಸರಣಿಯನ್ನು ಆಯೋಜಿಸುವುದು ಸುಲಭದ್ದಾಗಿರಲಿಲ್ಲ. ಆದರೆ, ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್ ಮತ್ತು ಇಂಗ್ಲೆಂಡ್ ಹಾಗೂ ವೇಲ್ಸ್‌ ಕ್ರಿಕೆಟ್ ಸಂಸ್ಥೆ ತೋರಿದ ಸಾಹಸ ಮೆಚ್ಚತಕ್ಕದ್ದು. ಜೀವ ಸುರಕ್ಷಾ ವಾತಾವರಣ ನಿಯಮಗಳನ್ನು ರೂಪಿಸಿ, ಕ್ರೀಡಾಸ್ಫೂರ್ತಿಯಿಂದ ಅವುಗಳು ಪಂದ್ಯಗಳನ್ನು ಸಂಘಟಿಸಿದವು. ವಿಂಡೀಸ್ ತಂಡವನ್ನು ಒಂದು ತಿಂಗಳ ಮೊದಲೇ ಇಂಗ್ಲೆಂಡ್‌ಗೆ ವಿಶೇಷ ವಿಮಾನದ ಮೂಲಕ ಕರೆತರಲಾಯಿತು.

ಕ್ರೀಡಾಂಗಣದ ಪಕ್ಕದ ಹೋಟೆಲ್‌ನಲ್ಲಿ ತಂಗುವ ವ್ಯವಸ್ಥೆ ಮಾಡಿ, ಪ್ರತೀ ಆಟಗಾರನಿಗೆ ಪ್ರತ್ಯೇಕವಾಸ ಮಾಡಿಸಲಾಯಿತು. ಸರಣಿಗೆ ಒಂದು ವಾರ ಬಾಕಿಯಿದ್ದಾಗ ಉಭಯ ತಂಡಗಳ ಆಟಗಾರರಿಗೆ ತಲಾ ಎರಡು ಸುತ್ತಿನ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಯಿತು. ಪ್ರತೀ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಮಗುವಿಗೆ ಜನ್ಮ ನೀಡಿದ ಪತ್ನಿಯನ್ನು ಕಾಣಲು ಹೋಗಿದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ನಿಯಮದ ಪ್ರಕಾರ ಕ್ವಾರಂಟೈನ್‌ಗೆ ಒಳಗಾದರು. ಹೀಗಾಗಿ ಅವರಿಗೆ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಪಂದ್ಯಗಳನ್ನು ಪ್ರೇಕ್ಷಕರು ಕ್ರೀಡಾಂಗಣದಲ್ಲಿ ನೋಡಲಾಗುತ್ತಿಲ್ಲ, ನಿಜ. ಆದರೆ, ಟಿ.ವಿ. ಮುಂದೆ ಲಕ್ಷಾಂತರ ಜನ ಪಂದ್ಯದ ನೇರಪ್ರಸಾರವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ADVERTISEMENT

ನೇರಪ್ರಸಾರದ ಜತೆಗಿನ ಆರ್ಥಿಕ ವಹಿವಾಟುಗಳು ಸಹ ಗರಿಗೆದರಿವೆ. ಮುಂದಿನ ವಾರದಿಂದ ನಡೆಯಲಿರುವ ದೇಶಿ ಕ್ರಿಕೆಟ್‌ ಪಂದ್ಯಗಳ ವೀಕ್ಷಣೆಗಾಗಿ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬರಲು ಅನುಮತಿ ನೀಡುವುದಾಗಿ ಅಲ್ಲಿನ ಕ್ರಿಕೆಟ್‌ ಸಂಸ್ಥೆ ಹೇಳಿದೆ.

ಕೊರೊನಾ ಕಾಲದ ಈ ಪಂದ್ಯಗಳಿಗಾಗಿಯೇ ವಿಶೇಷ ನಿಯಮಗಳನ್ನು ರೂಪಿಸಲಾಗಿದೆ. ಚೆಂಡಿಗೆ ಎಂಜಲು ಬಳಕೆ ನಿಷೇಧ, ಸಂಭ್ರಮಾಚರಣೆಗೆ ಕಡಿವಾಣ, ವೈಯಕ್ತಿಕ ಅಂತರ ಕಾಪಾಡುವಿಕೆ ಮತ್ತು ಸ್ಯಾನಿಟೈಸರ್‌ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಆಗಸ್ಟ್‌ನಲ್ಲಿ ಪಾಕಿಸ್ತಾನ ತಂಡವು ಇಂಗ್ಲೆಂಡ್‌ನಲ್ಲಿ ಮೂರು ಟೆಸ್ಟ್‌‌ ಮತ್ತು ಮೂರು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ. ಪಾಕ್ ತಂಡವು ಈಗಾಗಲೇ ಇಂಗ್ಲೆಂಡ್‌ಗೆ ತೆರಳಿದೆ.

ಹೋದ ತಿಂಗಳು ಪ್ರೀಮಿಯರ್ ಲೀಗ್ ಫುಟ್‌ಬಾಲ್ ಟೂರ್ನಿಯ ಪಂದ್ಯಗಳನ್ನು ಇಂಗ್ಲೆಂಡ್ ಯಶಸ್ವಿಯಾಗಿ ನಡೆಸಿತ್ತು. ಈಗ ಕ್ರಿಕೆಟ್‌ನಲ್ಲಿಯೂ ಯಶಸ್ಸಿನ ಹೆಜ್ಜೆ ಇಡುತ್ತಿದೆ. ಮುಂದಿನ ತಿಂಗಳು ಅಮೆರಿಕದಲ್ಲಿ ಕೆಂಟಕಿ ಓಪನ್ ಟೆನಿಸ್ ಮತ್ತು ಅದರ ನಂತರ ಅಮೆರಿಕ ಓಪನ್ ಟೆನಿಸ್ ಟೂರ್ನಿಗಳು ನಡೆಯಲಿವೆ. ಆದರೆ, ಭಾರತದಲ್ಲಿ ಪ್ರತಿದಿನವೂ ಸೋಂಕಿತರ ಸಂಖ್ಯೆಯು ಹೆಚ್ಚುತ್ತಿರುವುದರಿಂದ ಕ್ರೀಡಾ ಚಟುವಟಿಕೆಗಳು ಗರಿಗೆದರಿಲ್ಲ.

ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಟೂರ್ನಿ ರದ್ದಾಗುವುದನ್ನು ಬಿಸಿಸಿಐ ಕಾಯುತ್ತಿದೆ. ಆ ಅವಧಿಯನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಯೋಜನೆಗೆ ಬಳಸಿಕೊಳ್ಳಲು ಅದು ಉದ್ದೇಶಿಸಿದೆ. ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ನಡೆಯಬೇಕಿದ್ದ ಏಷ್ಯಾ ಕಪ್ ಟಿ20 ಟೂರ್ನಿ ರದ್ದು ಮಾಡಲು ತನ್ನ ಪ್ರಭಾವವನ್ನು ಬಿಸಿಸಿಐ ಬಳಸಿರುವುದು ಗುಟ್ಟೇನಲ್ಲ. ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳಲು ಡಿಸೆಂಬರ್‌ನಲ್ಲಿ ತೆರಳಲಿದೆ. ಇಂಗ್ಲೆಂಡ್ ತೋರಿದ ಸಂಘಟನಾ ಸ್ಫೂರ್ತಿ ಎಲ್ಲ ಕ್ರೀಡಾ ಒಕ್ಕೂಟಗಳಿಗೂ ಮಾದರಿಯಾಗಿದೆ. ಜಗತ್ತಿನಾದ್ಯಂತ ಕೊರೊನಾ ಸೋಲಬೇಕಾದರೆ ಇಂತಹ ಕ್ರೀಡಾ ಚಟುವಟಿಕೆಗಳು ಗೆಲುವಿನ ಮುನ್ನುಡಿ ಬರೆಯಬೇಕು.

Podcast: ಇದನ್ನು ಕೇಳಲು ಇಲ್ಲಿ ಕ್ಲಿಕ್‌ ಮಾಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.