ADVERTISEMENT

ದ್ವೇಷ ಪ್ರಚೋದಕ ಕಾರ್ಯಕ್ರಮಕ್ಕೆ ನಿರ್ಬಂಧ ಮೌಲ್ಯ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ಸಮುದಾಯವೊಂದು ಹೆಚ್ಚು ಸುಶಿಕ್ಷಿತವಾಗುವುದನ್ನು ಸಂಭ್ರಮದಿಂದ ಕಾಣದೆ, ಅದನ್ನು ‘ಜಿಹಾದ್’ ಎಂದು ಬಿಂಬಿಸಲು ಯತ್ನಿಸುವುದು ಜವಾಬ್ದಾರಿಯುತ ಪತ್ರಿಕಾವೃತ್ತಿ ಅಲ್ಲ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 19:31 IST
Last Updated 18 ಸೆಪ್ಟೆಂಬರ್ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನಿರ್ದಿಷ್ಟವಾಗಿ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು, ಆ ಸಮುದಾಯದ ಬಗ್ಗೆ ಇತರ ಸಮುದಾಯಗಳಲ್ಲಿ ದ್ವೇಷ ಭಾವನೆ ಮೂಡಿಸಲು ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿಕೊಳ್ಳುವುದು ಭಾರತದ ಮಟ್ಟಿಗೆ ಹೊಸದಲ್ಲ. ವಾಟ್ಸ್‌ಆ್ಯಪ್‌ನಂತಹ ನವ ಮಾಧ್ಯಮಗಳನ್ನು ಬಳಸಿಕೊಂಡು ಕೂಡ ಇಂತಹ ಕೆಲಸ ಮಾಡಲಾಗಿದೆ. ಕೆಲವು ವ್ಯಕ್ತಿಗಳು ಇಂತಹ ಕೃತ್ಯಗಳನ್ನು ಎಸಗಿದ್ದಾರೆ. ಹಾಗೆಯೇ, ಕೆಲವು ಸಂಘಟನೆಗಳು ಕೂಡ ಈ ಬಗೆಯ ಕೃತ್ಯಗಳನ್ನು ಎಸಗಿವೆ. ವ್ಯಕ್ತಿಗಳು ಹಾಗೂ ಸಂಘಟನೆಗಳು ಎಸಗಿದ ಇಂತಹ ಕೃತ್ಯಗಳ ಪರಿಣಾಮವಾಗಿ ಸಮಾಜದ ನೆಮ್ಮದಿ ಹಾಳಾಗಿದ್ದನ್ನು ವಿವೇಕಿಗಳು ಗಮನಿಸಿರುತ್ತಾರೆ. ಅಂಥದ್ದೇ ಒಂದು ಕೃತ್ಯ, ಸುದರ್ಶನ್ ನ್ಯೂಸ್ ಎನ್ನುವ ಸುದ್ದಿ ವಾಹಿನಿಯೊಂದು, ‘ಬಿಂದಾಸ್ ಬೋಲ್’ ಷೋ ಅಡಿ ಪ್ರಸಾರ ಮಾಡಿದ ‘ಯುಪಿಎಸ್‌ಸಿ ಜಿಹಾದ್’ ಎನ್ನುವ ಕಾರ್ಯಕ್ರಮ. ಭಾರತದಲ್ಲಿ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯುವ, ಉತ್ತೀರ್ಣರಾಗುವ ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆಯಲ್ಲಿ ಈಚಿನ ವರ್ಷಗಳಲ್ಲಿ ಅಸಹಜ ಹೆಚ್ಚಳ ಕಂಡುಬಂದಿದೆ ಎಂಬುದು ಈ ವಾಹಿನಿಯ ವಾದ. ಹೆಚ್ಚಳ ಕಂಡುಬಂದಿರುವುದನ್ನು ವಾಹಿನಿಯು ‘ಜಿಹಾದ್’ ಎಂದು ಕರೆಯುವ ಮೂಲಕ ಕುಚೋದ್ಯದ ಕೆಲಸ ಮಾಡಿದೆ. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಧಿಯಲ್ಲಿ ರಕ್ಷಣೆ ಬಯಸುವ ಮಾಧ್ಯಮವೊಂದು, ಸಮುದಾಯಗಳ ವಿಚಾರದಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವ ಬದಲು, ಒಂದು ಸಮುದಾಯದ ವಿರುದ್ಧ ಇತರ ಸಮುದಾಯಗಳನ್ನು ಎತ್ತಿಕಟ್ಟಲು ಕಾರಣವಾಗಬಲ್ಲ ಕಾರ್ಯಕ್ರಮ ಪ್ರಸಾರ ಮಾಡಿದ್ದು ವಿಷಾದಕರ. ಈ ವಾಹಿನಿ ಎಸಗಿದ ಕೃತ್ಯವು ದ್ವೇಷ ಹರಡುವ ಕೆಲಸಕ್ಕೆ ಸಮಾಜದ ಮುಖ್ಯವಾಹಿನಿಯಲ್ಲಿ ಸಿಂಧುತ್ವ ತಂದುಕೊಡುವ ಯತ್ನ. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವು ಸಾಂವಿಧಾನಿಕ ನೈತಿಕತೆಯ ಚೌಕಟ್ಟನ್ನು ಮೀರುವುದಿಲ್ಲ. ಆದರೆ, ವಿನಾಕಾರಣ ದ್ವೇಷವನ್ನು ಪ್ರಚೋದಿಸುವ ಇಂತಹ ಕಾರ್ಯಕ್ರಮಗಳು ಸಾಂವಿಧಾನಿಕ ನೈತಿಕತೆಯನ್ನು ಯಾವುದೇ ಅಳುಕು, ಲಜ್ಜೆ ಇಲ್ಲದೆ ಉಪೇಕ್ಷಿಸುತ್ತವೆ. ಹಾಗಾಗಿ, ಈ ಕಾರ್ಯಕ್ರಮದ ಇನ್ನುಳಿದ ಕಂತುಗಳ ಪ್ರಸಾರಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿರುವುದನ್ನು ಈ ದೇಶದ ಮೌಲ್ಯಗಳಲ್ಲಿ, ಪರಂಪರೆಯಲ್ಲಿ ನಂಬಿಕೆ ಇರುವವರೆಲ್ಲ ಸ್ವಾಗತಿಸಬೇಕು.

ಈ ಕಾರ್ಯಕ್ರಮವು ‘ದ್ರೋಹ’ಕ್ಕೆ ಸಮ ಎಂಬ ಮಾತನ್ನು ಸುಪ್ರೀಂ ಕೋರ್ಟ್‌ ಆಡಿದೆ. ಕಾರ್ಯಕ್ರಮದ ಉದ್ದೇಶವು ಒಂದು ಸಮುದಾಯದ ಬಗ್ಗೆ ಸಮಾಜದಲ್ಲಿ ದ್ವೇಷ ಉಂಟುಮಾಡುವುದು ಎಂದು ಸರಿಯಾಗಿಯೇ ಹೇಳಿರುವ ಕೋರ್ಟ್‌, ಇಂತಹ ಕೃತ್ಯಗಳಿಗೆ ಆಸ್ಪದ ನೀಡದಿರಲು, ಸಾಂವಿಧಾನಿಕ ಮೌಲ್ಯಗಳ ರಕ್ಷಕನಾಗಿ ತಾನು ಮಧ್ಯಪ್ರವೇಶ ಮಾಡಬೇಕಾಗುತ್ತದೆ ಎಂಬುದನ್ನು ಸಾರಿದೆ. ಭಾರತದ ಸಾಂವಿಧಾನಿಕ ಕೋರ್ಟ್‌ಗಳು ಸಾಮಾನ್ಯವಾಗಿ ಅಭಿವ್ಯಕ್ತಿಯನ್ನು ಮೊಟಕುಗೊಳಿಸಲು ಮುಂದಾಗುವುದಿಲ್ಲ. ಅಭಿವ್ಯಕ್ತಿಯ ಪರವಾಗಿ ಅವು ಗಟ್ಟಿಯಾಗಿ ನಿಂತ ನಿದರ್ಶನಗಳು ಬಹಳಷ್ಟು ಇವೆ. ಆದರೆ, ಈ ಪ್ರಕರಣದಲ್ಲಿ, ಇನ್ನುಳಿದ ಕಂತುಗಳ ಪ್ರಸಾರಕ್ಕೆ ನಿರ್ಬಂಧ ವಿಧಿಸಿದ್ದನ್ನು ಗಮನಿಸಿದರೆ, ಕಾರ್ಯಕ್ರಮ ಅದೆಷ್ಟು ಅಪಾಯಕಾರಿ ಆಗಿದ್ದಿರಬಹುದು ಎಂಬುದನ್ನು ಊಹಿಸಬಹುದು. ಸುದರ್ಶನ್ ನ್ಯೂಸ್ ವಾಹಿನಿಯ ಈ ಕಾರ್ಯಕ್ರಮ ಪ್ರಸಾರದಿಂದ ಕೇಂದ್ರ ಲೋಕಸೇವಾ ಆಯೋಗವನ್ನೂ (ಯುಪಿಎಸ್‌ಸಿ) ಕೆಟ್ಟದ್ದಾಗಿ ಬಿಂಬಿಸಿದಂತಾಗಿದೆ. ಯುಪಿಎಸ್‌ಸಿ ಯಾವುದೇ ಸಮುದಾಯದ ಪರವಾಗಿ ಅಥವಾ ವಿರುದ್ಧವಾಗಿ ವರ್ತಿಸಿದ ನಿದರ್ಶನ ಇಲ್ಲ. ಯಾವುದೇ ಒಂದು ಸಮುದಾಯದವರು ಭಾರತೀಯ ಆಡಳಿತ ಸೇವೆಯ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದರೆ, ಅದಕ್ಕೆ ಆ ಸಮುದಾಯದಲ್ಲಿ ಸುಶಿಕ್ಷಿತರ ಪ್ರಮಾಣ ಹೆಚ್ಚಾಗಿರುವುದು ಕಾರಣವಾಗಬಹುದು. ಸಮುದಾಯವೊಂದು ಹೆಚ್ಚು ಸುಶಿಕ್ಷಿತವಾಗುವುದನ್ನು ಸಂಭ್ರಮದಿಂದ ಕಾಣಬೇಕು. ಅದರ ಬದಲು, ಅದನ್ನು ‘ಜಿಹಾದ್’ ಎಂದು ಬಿಂಬಿಸಲು ಯತ್ನಿಸುವುದು ಜವಾಬ್ದಾರಿಯುತ ಪತ್ರಿಕಾವೃತ್ತಿ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT