ADVERTISEMENT

ಕ್ರೀಡೆಯ ‘ಮೌಲ್ಯ’ ಹೆಚ್ಚಿಸಿದಪ್ರೊ ಲೀಗ್‌ ಟೂರ್ನಿಗಳು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 3:57 IST
Last Updated 21 ಅಕ್ಟೋಬರ್ 2019, 3:57 IST
   

ಅಹಮದಾಬಾದ್‌ನಲ್ಲಿ ಶನಿವಾರ ರಾತ್ರಿ ಪ್ರೊ ಕಬಡ್ಡಿ ಟೂರ್ನಿಯ ಫೈನಲ್‌ ಮುಗಿದು 24 ಗಂಟೆಗಳು ಕಳೆಯುವ ಮುನ್ನವೇ ಮತ್ತೊಂದು ವೃತ್ತಿಪರ ಲೀಗ್ ಆರಂಭವಾಗಿದೆ. ಭಾನುವಾರ ರಾತ್ರಿ ಕೊಚ್ಚಿಯಲ್ಲಿ ಉದ್ಘಾಟನೆಗೊಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯು ಫೆಬ್ರುವರಿ ಅಂತ್ಯದವರೆಗೂ ನಡೆಯಲಿದೆ. ಆರೇಳು ವರ್ಷಗಳ ಹಿಂದೆ ಕ್ರಿಕೆಟ್‌ ಭರಾಟೆಯಲ್ಲಿ ಸೊರಗಿದ್ದ ಇನ್ನಿತರ ಕ್ರೀಡೆಗಳಿಗೆ ಹೊಸ ಚೈತನ್ಯ ನೀಡಿದ್ದು ಈ ಲೀಗ್‌ ಟೂರ್ನಿಗಳು. ಐಪಿಎಲ್‌ ಮಾದರಿಯಲ್ಲಿ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್, ಟೆನಿಸ್ ಪ್ರೀಮಿಯರ್ ಲೀಗ್, ಪ್ರೊ ಕಬಡ್ಡಿ, ಐಎಸ್‌ಎಲ್‌, ಪ್ರೊ ಕುಸ್ತಿ, ಪ್ರೊ ವಾಲಿಬಾಲ್ ಲೀಗ್ ಟೂರ್ನಿಗಳು ಆರಂಭವಾದವು.

ಆದರೆ, ಕಬಡ್ಡಿ ಲೀಗ್‌ ಮತ್ತು ಐಎಸ್‌ಎಲ್‌ ಮಾತ್ರ ಹೆಚ್ಚು ಜನಪ್ರಿಯವಾದವು. ಪ್ರಾಯೋಜಕರ ಒಲವು ಹೆಚ್ಚಿದಂತೆ ದುಡ್ಡು ಕೂಡ ಕೋಟಿ ಲೆಕ್ಕದಲ್ಲಿ ಹರಿದುಬಂತು. ಪ್ರಶಸ್ತಿ, ಸಂಭಾವನೆ ರೂಪದಲ್ಲಿ ಆಟಗಾರರ ಜೇಬು ಸೇರಿತು. ಈ ಬಾರಿಯ ಪ್ರೊ ಕಬಡ್ಡಿ ಪ್ರಶಸ್ತಿ ಗೆದ್ದ ಬೆಂಗಾಲ್ ವಾರಿಯರ್ಸ್‌ ತಂಡವು ₹ 3 ಕೋಟಿ ಜೇಬಿಗಿಳಿಸಿಕೊಂಡಿದೆ. ರನ್ನರ್ಸ್ ಅಪ್ ದೆಹಲಿ ತಂಡ ₹ 1.80 ಕೋಟಿಯನ್ನು ತನ್ನದಾಗಿಸಿಕೊಂಡಿತು. ಮೂರು, ನಾಲ್ಕು ಮತ್ತು ಐದನೇ ಸ್ಥಾನ ಪಡೆದ ತಂಡಗಳೂ ಉತ್ತಮ ಮೊತ್ತ ಪಡೆದವು. 2014ರಲ್ಲಿ ಪ್ರೊ ಕಬಡ್ಡಿ ಆರಂಭವಾಗುವ ಮೊದಲೂ ಕಬಡ್ಡಿಯ ಜನಪ್ರಿಯತೆ ಕಮ್ಮಿಯೇನಿರಲಿಲ್ಲ. ಯಾವುದೇ ಊರಿನಲ್ಲಿ ರಾಜ್ಯ, ರಾಷ್ಟ್ರೀಯ ಟೂರ್ನಿಗಳು ನಡೆದರೆ ಸಾವಿರಾರು ಜನ ಸೇರುತ್ತಿದ್ದರು. ಆದರೆ ದುಡ್ಡು, ಪ್ರಚಾರ ಮತ್ತು ಆಟಗಾರರಿಗೆ ತಾರಾಮೌಲ್ಯದ ಕೊರತೆ ಇತ್ತು. ಕಬಡ್ಡಿ ಫೆಡರೇಷನ್ ಮತ್ತು ರಾಜ್ಯ ಸಂಸ್ಥೆಗಳು ತಮ್ಮ ಈ ಕ್ರೀಡೆಯ ‘ಮೌಲ್ಯ’ವನ್ನು ಅರಿತುಕೊಳ್ಳಲಿಲ್ಲ.

ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ ಮತ್ತು ಮಶಾಲ್ ಸ್ಪೋರ್ಟ್ಸ್‌ ಸಂಸ್ಥೆ ಜಂಟಿಯಾಗಿ ಪ್ರೊ ಕಬಡ್ಡಿಯನ್ನು ಆರಂಭಿಸಿದವು. ಭಾರತ ಅಮೆಚೂರ್ ಕಬಡ್ಡಿ ಫೆಡರೇಷನ್ ಕೂಡ ಕೈಜೋಡಿಸಿತು. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಕೆಲವು ದೊಡ್ಡ ಉದ್ಯಮಿಗಳ ಮಾಲೀಕತ್ವದ ತಂಡಗಳು ಕಣಕ್ಕಿಳಿದವು. ಹರಾಜು ಪ್ರಕ್ರಿಯೆಯ ಮೂಲಕ ಲಕ್ಷಗಟ್ಟಲೆ ಹಣ ಆಟಗಾರರ ಜೇಬು ಸೇರಿತು. ಪ್ರತಿದಿನ ಟಿ.ವಿ. ಪರದೆಯ ಮೇಲೆ ಕಾಣಿಸಿಕೊಂಡ ಕಬಡ್ಡಿ ಆಟಗಾರರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿಬಿದ್ದರು. ಪ್ರಾಯೋಜಕರು ಸಾಲುಗಟ್ಟಿದರು. ಐಎಸ್‌ಎಲ್ ಕೂಡ ಇದೇ ಮಾದರಿಯಲ್ಲಿ ಬೆಳೆದಿದೆ. ಸುನಿಲ್ ಚೆಟ್ರಿ, ಸಂದೇಶ್ ಜಿಂಗಾನ್, ಗುರುಪ್ರೀತ್ ಸಿಂಗ್ ಸಂಧು ಅವರು ಅಭಿಮಾನಿಗಳ ಕಣ್ಮಣಿಗಳಾಗಿದ್ದಾರೆ. ಸೌರವ್‌ ಗಂಗೂಲಿ, ವಿರಾಟ್ ಕೊಹ್ಲಿ ಅವರಂತಹ ಕ್ರಿಕೆಟ್ ದಿಗ್ಗಜರೂ ತಂಡಗಳ ಸಹಮಾಲೀಕರಾಗಿದ್ದಾರೆ. ಐಎಸ್‌ಎಲ್‌ನಲ್ಲಿ ವಿದೇಶಿ ಆಟಗಾರರೊಂದಿಗೆ ಆಡುವ ಅವಕಾಶ ಭಾರತದ ಹುಡುಗರಿಗೆ ಸಿಗುತ್ತಿದೆ.

ADVERTISEMENT

ಆದರೆ, ಈ ಲೀಗ್‌ಗಳಲ್ಲಿ ಭಾಗವಹಿಸುತ್ತಿರುವ ಕೆಲವು ತಂಡಗಳು ತಾವು ಪ್ರತಿನಿಧಿಸುವ ಪ್ರದೇಶಗಳ ಸ್ಥಳೀಯ ಆಟಗಾರರಿಗೆ ಹೆಚ್ಚು ಅವಕಾಶ ಕೊಡುತ್ತಿಲ್ಲ ಎಂಬ ದೂರಿದೆ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಐಪಿಎಲ್), ಬೆಂಗಳೂರು ಬುಲ್ಸ್‌ (ಕಬಡ್ಡಿ), ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡಗಳಲ್ಲಿ ಸ್ಥಳೀಯರಿಗೆ ಅವಕಾಶ ಸಿಗುತ್ತಿಲ್ಲ ಎಂಬ ಕೊರಗು ಇದೆ. ಹೋದ ವರ್ಷ ಬುಲ್ಸ್‌ ತಂಡದ ಮಾರ್ಗದರ್ಶಕರಾಗಿದ್ದ ಕನ್ನಡಿಗ ಬಿ.ಸಿ. ರಮೇಶ್ ಈ ಬಾರಿ ಬೆಂಗಾಲ್ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಿದರು.

ಅದೇ ತಂಡದಲ್ಲಿಆಡಿದ ಸುಕೇಶ್ ಹೆಗ್ಡೆ ಮತ್ತು ಜೀವಕುಮಾರ್ ಕರ್ನಾಟಕದವರೇ. ನಮ್ಮಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ. ಒಲಿಂಪಿಯನ್ ಫುಟ್‌ಬಾಲ್‌ ಆಟಗಾರರನ್ನು ಕೊಟ್ಟ ಹೆಗ್ಗಳಿಕೆ ಬೆಂಗಳೂರಿಗೆ ಇದೆ. ಈಗಲೂ ಇಲ್ಲಿ ಉತ್ತಮ ಆಟಗಾರರು ಸಿಗುತ್ತಾರೆ. ಅವರನ್ನು ಗುರುತಿಸಿ ಅವಕಾಶ ಕೊಡುವ ಕೆಲಸ ಆಗಬೇಕು. ಸ್ಥಳೀಯ ಅಭಿಮಾನಿ ಸಮೂಹದೊಂದಿಗೆ ಭಾವನಾತ್ಮಕ ನಂಟು ಗಟ್ಟಿಗೊಳ್ಳಲು ಇದು ಮುಖ್ಯ. ಇವೆಲ್ಲದರ ಜೊತೆಗೆ ಟೂರ್ನಿಗಳಿಗೆ ಕಳಂಕ ಸೋಕದಂತೆ ನೋಡಿಕೊಳ್ಳುವ ಅಗತ್ಯವೂ ಇದೆ. ಕ್ರಿಕೆಟ್‌ನಲ್ಲಿ ಕಾಡುತ್ತಿರುವ ಬೆಟ್ಟಿಂಗ್, ಫಿಕ್ಸಿಂಗ್‌ ಹಗರಣಗಳು ಇಲ್ಲಿ ಕಾಲಿಡದಂತೆ ನೋಡಿಕೊಳ್ಳುವ
ಸವಾಲು ಆಯೋಜಕರ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.